ಕರ್ನಾಟಕ ಹೆರಿಟೇಜ್ ಹಬ್ ಆರಂಭಿಸಬೇಕು ಎಂಬ ಪರಿಕಲ್ಪನೆಯಿಂದ ಆಗಿನ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಅಧ್ಯಕ್ಷತೆಯಲ್ಲಿ ದಿನಾಂಕ:21.06.2016 ರಂದು ಕರ್ನಾಟಕ ಹೆರಿಟೇಜ್ ಹಬ್ ಎಂಬ ಸೊಸೈಟಿಯನ್ನು ಹುಟ್ಟು ಹಾಕಿದರು.
ಯೋಜನೆಗೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾರನಗೆರೆ ಮತ್ತು ಉಜ್ಜನಕುಂಟೆ ಗ್ರಾಮಗಳಲ್ಲಿ 811 ಎಕರೆ 14 ಗುಂಟೆ ಜಮೀನು ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾಮದಲ್ಲಿ 108 ಎಕರೆ 06 ಗುಂಟೆ ಜಮೀನು ಸೇರಿದಂತೆ 919 ಎಕರೆ 20 ಗುಂಟೆ ಜಮೀನು ನಿಗದಿ ಮಾಡಲಾಗಿತ್ತು.
ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಕನಸಿನ ಈ ಯೋಜನೆಗೆ ಶಿರಾ ತಾಲ್ಲೂಕಿನ ಶಾಸಕರಾದ ಶ್ರೀ ಬಿ.ಸತ್ಯನಾರಾಯಣರವರು ಮತ್ತು ಹಿರಿಯೂರು ತಾಲ್ಲೂಕಿನ ಶಾಸಕರಾದ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ರವರು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಾರಾಯಣಸ್ವಾಮಿಯವರು ಚಾಲನೆ ನೀಡುವರೇ ಎಂಬುದು ರಹಸ್ಯವಾಗಿದೆ.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ದೊರಕಿಲ್ಲ, ಅವರಿಗೆ ಯಾವುದಾದರೂ ನಿಗಮ ಮಂಡಳಿ ನೀಡುವ ಸಾಧ್ಯಾತೆಗಳಿವೆ ಎಂಬ ಮಾತು ಹರಿದಾಡುತ್ತಿದೆ. ಕರ್ನಾಟಕ ಹೆರಿಟೆಜ್ ಹಬ್ ಗೆ ಮಂಗಳೂರಿನ ಪಿಲಿಕುಳ ಮಾದರಿಯಲ್ಲಿ ಒಂದು ನಿಗಮ ಮಾಡಿ ಪೂರ್ಣಿಮಾಶ್ರೀನಿವಾಸ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಲ್ಲಿ ಮುಂದಿನ 3 ವರ್ಷದಲ್ಲಿ ಇಡೀ ವಿಶ್ವ ಹಿರಿಯೂರಿನತ್ತ ನೋಡುವಂತೆ ಮಾಡಬಹುದಾಗಿದೆ.
ಈ ಯೋಜನೆ ಮಹತ್ವದ ಬಗ್ಗೆ ಮಂಗಳೂರಿನ ಮಾಜಿ ಶಾಸಕರಾದ ಶ್ರೀ ಲೋಬೋ ಮತ್ತು ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರೊಂದಿಗೆ ಸಮಾಲೋಚನೆ ನಡೆಸುವುದು ಉತ್ತಮವಾಗಿದೆ. ಜೊತೆಗೆ ಪಾಂಡಿಚೇರಿಯ ಆರೋವೆಲ್ಲಿಗೆ ಪ್ರವಾಸ ಮಾಡಿ ಅಧ್ಯಯನ ಮಾಡುವುದು ಅಗತ್ಯವಾಗಿದೆ.
ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮುಂದಿನ ದಿಶಾ ಸಮಿತಿಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲು ಮುಂದಾಗಿದ್ದಾರೆ. ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯ ಸರ್ಕಾರದ ಪ್ರವಾಸೋಧ್ಯೋಮ ಸಚಿವರಾದ ಶ್ರೀ ಸಿ.ಟಿ.ರವಿಯವರೊಂದಿಗೂ ಮತ್ತು ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಭರತ್‌ಲಾಲ್ ಮೀನಾರವರೊಂದಿಗೂ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ಸಮಾಲೋಚನೆ ನಡೆಸಬೇಕಿದೆ. ಈ ಜಮೀನು ಬೆಂಗಳೂರು- ಮುಂಬೈ ಎಕನಾಮಿಕ್ ಕಾರಿಡಾರ್ ಹಾಗೂ ಚನ್ಯೈ – ಬೆಂಗಳೂರು – ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ನಲ್ಲಿ ಬರುವುದರಿಂದ ಹಾಗೂ ವಾಣಿವಿಲಾಸ ಡ್ಯಾಂ ವ್ಯಾಪ್ತಿಯನ್ನು ಈಗಾಗಲೇ ಪ್ರವಾಸೋಧ್ಯೋಮ ಇಲಾಖೆ ಗುರುತಿಸಿರುವುದರಿಂದ ಇದೊಂದು ಉತ್ತಮ ಯೋಜನೆಯಾಗಲಿದೆ.