21st November 2024
Share

ತುಮಕೂರು ಜಿಲ್ಲೆಗೆ ಮೆಟ್ರೋ ಮತ್ತು ಏರ್ ಪೋರ್ಟ್ಗಳಿಗೆ ಬಹಳ ವರ್ಷಗಳಿಂದ ಬೇಡಿಕೆ ಇತ್ತು, ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಅನೂಕೂಲವಾಗಲಿದೆ. ರಾಜ್ಯ ಸರ್ಕಾರ ಬಗ್ಗೆ ತನ್ನ ಆಯವ್ಯಯದಲ್ಲಿ ಮಂಡಿಸಿದರೆ ಕನಸು ನನಸಾಗುವ ಕಾಲ ಬಂದಿದೆ.

  ಕೇಂದ್ರ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವ ತಾಕತ್ತು, ಯಾವ ರಾಜ್ಯಗಳಿಗೆ ಇದೆಯೋ ಆ ರಾಜ್ಯ ಹೆಚ್ಚಿನ ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲ್ವೇ ಕಾರಿಡಾರ್, ಮೆಟ್ರೋ, ವಿಮಾನ,  ಯೋಜನೆಗಳನ್ನು ಪಡೆಯಲು ವಿಫುಲ ಆವಕಾಶವಿರುವ ಆಯವ್ಯಯ ಇದಾಗಿದೆ.

 2047 ಕ್ಕೆ ಭಾರತ ವಿಶ್ವಗುರು ಆಗಬೇಕಾದರೆ, ರಾಜ್ಯಗಳ ಪಾತ್ರ ಮಹತ್ತರವಾಗಿದೆ. ಮೋದಿಯವರು 2024-25 ರ ಆಯವ್ಯಯದಲ್ಲಿ ರಾಜ್ಯಗಳ ಪ್ರಸ್ತಾವನೆಗಳಿಗೆ ವಿಶೇಷ ಒತ್ತು ನೀಡಿದ್ದಾರೆ. ನನ್ನ ಅನುಭವದ ಪ್ರಕಾರ ಇದು ಒಳ್ಳೆಯ ಬೆಳವಣಿಗೆ.

ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಆಯವ್ಯಯದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ವಿಶೇಷ ಒತ್ತು ನೀಡುತ್ತಿದ್ದಾರೆ ಎಂಬ ಸುದ್ದಿ ಇದೆ. ಕೇಂದ್ರದ ಆಯವ್ಯಯ ಒಂದು  ಬ್ಲಾಂಕ್ ಚೆಕ್ ರೀತಿ ಇದೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಮೀಸಲಿಟ್ಟರೆ ಮಾತ್ರ,  ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ಸಿದ್ಧವಾಗಿದೆ.

ಸಂಶೋಧನೆಗೆ ಮತ್ತು ಪ್ರವಾಸೋದ್ಯಮಕ್ಕೆ  ವಿಶೇಷವಾಗಿ ಒತ್ತು ನೀಡಿರುವುದರಿಂದ ಉದ್ಯೋಗ ಸೃಷ್ಠಿಯಾಗಲಿದೆ. ಬ್ರ್ಯಾಂಡ್ ಕರ್ನಾಟಕ ಮಾಡಲು ಮುನ್ನುಡಿ ಬರೆಯ ಬಹುದು. ಕರ್ನಾಟಕ ರಾಜ್ಯವಂತೂ ಪ್ರವಸೋಧ್ಯಮಗಳ ತವರು ಆಗಿದ್ದರೂ, ಈವರೆಗೂ ಯಾವುದೇ ಸರ್ಕಾರ ವಿಶೇಷ ಒತ್ತು ಕೊಟ್ಟಿಲ್ಲ ಎಂಬ ಆಪವಾದ ಇದೆ. ಈಗ ಆ ಕೊರತೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರ  ಶ್ರಮಿಸಿದರೆ ಮಾತ್ರ ಪ್ರಯೋಜನವಾಗಲಿದೆ.

ಪ್ರದಾನಿ ಶ್ರೀ ನರೇಂದ್ರಮೋದಿಯವರ ಅವಧಿಯಲ್ಲಿ ಪಿಎಂ ಸ್ವನಿಧಿ ಯೋಜನೆಯಿಂದ ಬೀದಿ ಬದಿ ವ್ಯಾಪಾರಿಗಳಿಂದ ಆರಂಭಿಸಿ, ಕಾರ್ಪೋರೇಟರ್ ಗಳವರೆಗೂ ಏನೇನು, ಎಷ್ಟೆಷು ಅಭಿವೃದ್ಧಿ ಮಾಡಲಾಗಿದೆ ಎಂಬ ಅಂಕಿ ಅಂಶ ಸಹಿತ  10 ವರ್ಷಗಳ ಸಾಧನೆಯ ಬಗ್ಗೆ ದೇಶದ ಜನತೆ ಮುಂದೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ್ದಾರೆ. ಇದು ಚುನಾವಣಾ ಆಯವ್ಯಯವಲ್ಲ, ಅಭಿವೃದ್ಧಿಯ ದೂರದೃಷ್ಠಿ ಆಗಿದೆ ಎಂದು ಪ್ರತಿಪಾದಿಸಿದ್ದಾರೆ. 

1947 ರಿಂದ 76 ವರ್ಷಗಳ ಪ್ರತಿ ವರ್ಷದ ಅಭಿವೃದ್ಧಿ ಯೋಜನೆಗಳ ಮಾಹಿತಿ, ಆದಾಯದ ಮಾಹಿತಿ, ಸಾಲದ ಮಾಹಿತಿ, ಪ್ರತಿ ವರ್ಷದ ಸಾಲದ ಮೇಲಿನ ಬಡ್ಡಿ ಮಾಹಿತಿ, ಪ್ರತಿ ವರ್ಷ ಸಾಲ ತೀರಿಸಿರುವ ಮಾಹಿತಿ, ಆಯವ್ಯಯದ ಮಾಹಿತಿಗಳ ವಿಶ್ಲೇಷಣೆ  ಮಾಡಿದ್ದರೆ ಬಹಳ ಚೆನ್ನಾಗಿತ್ತು.

ಟೀಕೆಗಾಗಿ ಟೀಕೆ ಮಾಡುವವರು, ವಿರೋಧಕ್ಕಾಗಿ ವಿರೋಧ ಮಾಡುವ ವಿರೋಧ ಪಕ್ಷಗಳಾದರೂ ಈ ಮಾಹಿತಿಯನ್ನು ಜನತೆಯ ಮುಂದೆ ಇಟ್ಟರೆ ಒಳ್ಳೆಯದು.

ದೇಶದಲ್ಲಿ ಬಡತನವಿದ್ದ  25 ಕೋಟಿ ಜನ ಶ್ರಿಮಂತರ ಪಟ್ಟಿಗೆ ಸೇರ್ಪಡೆ ಆಗಿರುವುದು ಸಾಮಾನ್ಯದ ಸಂಗತಿಯಲ್ಲ. ಇದು ಬಹಳ ವರ್ಷಗಳ ಸಾಧನೆಯ ಫಲವಾಗಿದೆ. ಆದರೇ ಇನ್ನೂ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಜನರಲ್ಲಿ ಎಷ್ಟು ಜನ ಶ್ರಿಮಂತರಿದ್ದಾರೆ ಎಂದು ತಪಾಸಣೆ ಮಾಡುವುದು ಅಗತ್ಯವಾಗಿದೆ.

ಈ ವರ್ಷ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಬೇಕಾದರೆ, ಈ ಆಯವ್ಯಯದಲ್ಲಿನ ಯೋಜನೆಗಳಿಗೆ ವಿಶೇಷ ಒತ್ತು ನೀಡುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮುಂದಿದೆ.