21st November 2024
Share

ಅಭಿವೃದ್ಧಿ ಕಾಮಗಾರಿಗಳ ಪ್ರತಿಯೊಂದು ಮಾಹಿತಿಗಳನ್ನು ಜಿಐಎಸ್ ಆಧಾರಿತ ಡಿಜಿಟಲ್ ಮಾಡುವ ಮೂಲಕ ತುಮಕೂರು ಸ್ಮಾರ್ಟ್ ಸಿಟಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ದಿಟ್ಟ ನಿರ್ಧಾರ ಈ ಪ್ರಶಂಸೆಗೆ ಪ್ರೇರಣೆಯಾಗಲಿದೆ.
ದಿಶಾ ಸಮಿತಿ ನಿರ್ಣಯದ ಮೇರೆಗೆ ತುಮಕೂರು ಜಿಲ್ಲಾಧಿಕಾರಿಗಳಾದ ಡಾ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಹಾಗೂ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶುಭಕಲ್ಯಾಣ್ ಚಾಲೇಂಜ್ ಆಗಿ ತೆಗೆದು ಕೊಂಡು ಎಲ್ಲಾ ಇಲಾಖೆಗಳು ಜಿಐಎಸ್ ಆಧಾರಿತ ಇತಿಹಾಸ ಸಹಿತ ಲೇಯರ್‌ಗಳನ್ನು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮರೋಪಾದಿಯಲ್ಲಿ ಯೋಜನೆ ಜಾರಿಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.
ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಗೆ ಕರ್ನಾಟಕ ರಾಜ್ಯದ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‌ನ ರಾಜ್ಯಮಟ್ಟದ ನಿರ್ಧೇಶಕರಾದ ಶ್ರೀ ಪ್ರಭುರವರನ್ನೇ ಆಹ್ವಾನಿಸಿ ಲೇಯರ್‌ಗಳ ಬಗ್ಗೆ ವಿಶೇಷ ಮಾಹಿತಿ ನೀಡಿಸಲಾಗಿದೆ. ಒಂದು ಹಳ್ಳಿಯ ಅಂಗನವಾಡಿಯಿಂದ ಆರಂಭಿಸಿ ದೇಶದ ಗಮನ ಸೆಳೆದಿರುವ ಇಸ್ರೋ ಘಟಕದ ಯೋಜನೆಯೂ ಸೇರಿದಂತೆ ಎಲ್ಲಾ ಮಾಹಿತಿಗಳು ಡಿಜಿಟಲ್ ರೂಪದಲ್ಲಿ ಸಿದ್ಧಗೊಳ್ಳುವ ಕಾರ್ಯ ಭರದಿಂದ ಸಾಗಿದೆ.
ಈಗಾಗಲೇ ಹಲವಾರು ಇಲಾಖೆಗಳಡಿಯಲ್ಲಿ ಹಲವಾರು ಮಾಹಿತಿಗಳನ್ನು ಡಿಜಿಟಲ್ ಮಾಡಲಾಗಿದೆ, ಹಲವಾರು ಆಪ್‌ಗಳನ್ನು ಮಾಡುವ ಮೂಲಕ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಆದರೇ ಜಿಲ್ಲೆಯ ಎಲ್ಲಾ ಇಲಾಖೆಗಳ ಮಾಹಿತಿ ಒಂದೇ ಕಡೆ ಲಭ್ಯವಿರುವುದಿಲ್ಲಾ. ಇಲಾಖೆಗಳ ಸಮನ್ವಯತೆ ಕೊರತೆ ನೀಗಿಸುವುದೇ ದಿಶಾ ಸಮಿತಿಯ ಮೂಲ ಉದ್ದೇಶ, ಒಂದೇ ಕಡೇ ಎಲ್ಲಾ ಅಭಿವೃದ್ಧಿ ಮಾಹಿತಿಗಳ ಸಂಗ್ರಹಣೆಯೂ ಆಗಲಿದೆ. ಡಿಜಿಟಲ್ ಮಾಹಿತಿ ಮಾಡದೇ ಇರುವ ಇಲಾಖೆಗಳು ಆಯಾ ಇಲಾಖೆಯ ಅನುದಾನದಿಂದ ಜಿಐಎಸ್ ಲೇಯರ್ ಸಿದ್ಧಪಡಿಸಲು ಸುತ್ತೋಲೆ ಹೊರಡಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ಶಾಲಿನಿರಜನೀಶ್‌ರವರು ಮುಂದಾಗಿದ್ದಾರೆ.
ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾದ ಮೂಲ ಉದ್ದೇಶವೂ ಇದೇ ಆಗಿದೆ. ಕೇಂದ್ರ ಸರ್ಕಾರದ ಗೃಹ ಸಚಿವರಾದ ಶ್ರೀ ಅಮಿತ್ ಷಾ ರವರು ಇತ್ತೀಚೆಗೆ ಒಂದು ಪತ್ರಿಕಾ ಹೇಳಿಕೆಯನ್ನು ನೀಡಿ ದೇಶದ ಎಲ್ಲಾ ಅಭಿವೃದ್ಧಿ ಮಾಹಿತಿಗಳು ಡಿಜಿಟಲ್ ಆಗಬೇಕು, ಅವುಗಳನ್ನು ಆನ್ ಲೈನ್ ಮೂಲಕ ಸಾರ್ವಜನಿಕರಿಗೂ ಸುಲಭವಾಗಿ ದೊರೆಯಬೇಕು, ಇದರಿಂದ ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಕೇಳುವ ಎಲ್ಲಾ ಮಾಹಿತಿಗಳು ಆನ್‌ಲೈನ್ ಮೂಲಕ ದೊರೆಯುವ ಕಾರಣ ಬಹಳಷ್ಟು ಅನೂಕೂಲವಾಗಲಿದೆ ಎಂದಿದ್ದರು.
ಈ ಹೇಳಿಕೆ ಸಂಸದರಿಗೆ ಪ್ರೇರಣೆಯಾಗಿ ತುಮಕೂರು ಸ್ಮಾರ್ಟ್ ಸಿಟಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಿಜಿಟಲ್ ರಿವ್ಯೂ ಆಗಲೇಬೇಕು, ಯಾವುದೇ ಯೋಜನೆಯ ಪ್ರತಿಯೊಂದು ಮಾಹಿತಿಯೂ ಕೇಳಿದ ತಕ್ಷಣ, ಡಿಜಿಟಲ್ ರೂಪದಲ್ಲಿ ನಕ್ಷೆಸಹಿತ ದೊರೆಯಬೇಕು. ತಾಜಾ ಮಾಹಿತಿ ಅಫ್ ಡೇಟ್ ಆಗಬೇಕು, ಯೋಜನೆಯ ಇತಿಹಾಸದಿಂದ ಆರಂಭಿಸಿ ಮೊದಲು ಹೇಗಿತ್ತು, ಈಗ ಯಾವ ಹಂತದಲ್ಲಿದೆ, ಯೋಜನೆ ಪೂರ್ಣಗೊಂಡ ನಂತರ ಹೇಗೆ ಇರಲಿದೆ ಎಂಬ ಮೂರು ಹಂತದ ಭಾವಚಿತ್ರಗಳ ಸಹಿತ. ಯೋಜನೆಗೆ ಈಗಾಗಲೇ ಶೇಕಡವಾರು ಎಷ್ಟು ಹಣ ಬಿಡುಗಡೆಯಾಗಿದೆ, ಶೇಕಡವಾರು ಎಷ್ಟು ಕಾಮಗಾರಿ ಆಗಿದೆ ಎಂಬ ಮಾಹಿತಿಯೂ ಅಫ್‌ಡೇಟ್ ಅಗುತ್ತಿರಬೇಕು.
ಯೋಜನೆಯ ಪ್ರಗತಿ ಪರಿಶೀಲನೆ ಮಾಡುವಾಗ ದಿಶಾ ಸಮಿತಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಸಭಾ ಸದಸ್ಯರು, ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ, ತುಮಕೂರು ಸ್ಮಾರ್ಟ್ ಸಿಟಿ ಕಂಪನಿ, ನಗರಾಭಿವೃದ್ಧಿ ಸಚಿವರು ಹೀಗೆ ಯಾವುದೇ ಪ್ರಗತಿಪರಿಶೀಲನೆಯಲ್ಲಿ ಸೂಚಿಸಿದ ವಿವರ, ಕಾಮಗಾರಿ ಸ್ಥಳ ವೀಕ್ಷಣೆ ಮಾಡಿದಾಗ ನೀಡಿದ ಸೂಚನೆಗಳು. ಪರ-ವಿರೋಧದ ಮಾಧ್ಯಮ ವರದಿಗಳು, ನಿರ್ಧಿಷ್ಟ ಯೋಜನೆಯ ಬಗ್ಗೆ ದೂರುಗಳು, ಇತ್ಯಾದಿ ಸೇರಿದಂತೆ ಪ್ರತಿಯೊಂದು ಮಾಹಿತಿಯೂ ಕ್ಲಿಕ್ ಮಾಡಿದ ತಕ್ಷಣ ದೊರೆಯಲೇ ಬೇಕು ಎಂದು ಅಕ್ಷರಶಃ ಪಟ್ಟು ಹಿಡಿದಿದ್ದರು.
ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಸ್ಮಾರ್ಟ್ ಎಂದರೇನು ಮೊದಲು ಇದಾಗಬೇಕು ಎಂದು ಸೂಚಿಸಿದ್ದರು. ಪ್ರಗತಿ ಪರಿಶೀಲನೆ ಮಾಡುವಾಗ ಇದು ಆ ಅಧಿಕಾರಿ ನೋಡುತ್ತಾರೆ ಅವರು ಇಂದು ಬಂದಿಲ್ಲ ಎಂದು ಹೇಳಿದರೆ ಆ ವಿಷಯದ ಬಗ್ಗೆ ಚರ್ಚೆಯೇ ಆಗಲ್ಲ, ಯಾರು ಬರಲಿ, ಬಿಡಲಿ ಮಾಹಿತಿ ಪರದೇಯೇ ಮೇಲೆ ಮಾಹಿತಿ ಬರಲಿ, ನಾವೂ ಸೂಚಿಸಿದ ರೀತಿ ಮುಂದುವರೆಯಬಹುದು ಎಂದು ಡಿಜಿಟಲ್ ಪಾಠ ಮಾಡಿದ್ದರು.
ದಿಶಾ ಸಮಿತಿಯ ನಾಮನಿರ್ಧೇಶನ ಸದಸ್ಯರುಗಳು ಸಹ ಸಂಸದರ ನಿಲುವಿಗೆ ಸಹಮತ ವ್ಯಕ್ತಪಡಿಸಿದಾಗ ಇಡೀ ಅಧಿಕಾರಿಗಳ ತಂಡ ಚಕಿತರಾಗಿದ್ದರು. ಇದು ಹೇಗೆ ಸಾಧ್ಯಾ ಎಂದು ಗುಸು ಗುಸು ಮಾತನಾಡಿದ್ದು ಇತಿಹಾಸ. ಆದರೇ ಡಿಜಿಟಲ್ ಮೂಲ ಹುಡುಕಲು ಹೊರಟಾಗ ನಿಜವಾಗಲೂ ಆಶ್ಚರ್ಯಕರ ಮಾಹಿತಿ ಸಂಸದರಿಗೆ ದೊರೆಯಿತು. ತುಮಕೂರು ಸ್ಮಾರ್ಟ್ ಸಿಟಿ ಈಗಾಗಲೇ ಬೆಂಗಳೂರು ಮೂಲದ ಐಸಿಎಸ್‌ಟಿ ಸಂಸ್ಥೆಯೊಂದಿಗೆ ಎಂಓಯು ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂತು.
ಇಂದು ಮುಂದು ನೋಡದೆ ಸಂಸದರು ಬೆಂಗಳೂರಿನಲ್ಲಿರುವ ಆ ಸಂಸ್ಥೆಗೆ ಭೇಟಿ ನೀಡಲು ಮುಂದಾದರು ಮಾಹಿತಿ ತಿಳಿದ ಶ್ರೀಮತಿ ಶಾಲಿನಿರಜನೀಶ್ ರವರು ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಹ ಭೇಟಿ ನೀಡಿ ಸಂಸದರಿಗೆ ಸಹಕರಿಸಲು ಸೂಚಿಸಿದರು. ಈ ವಯಸ್ಸಿನಲ್ಲಿಯೂ ಸಂಸದರು ಕಂಪ್ಯೂಟರ್ ಮುಂದೆ ಕುಳಿತು ಪರದೇ ಮೇಲೆ ನೋಡಿ ಇದೇ ರೀತಿ ಇರಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿ ಸಾಕಷ್ಟು ಬದಲಾವಣೆ ಮಾಡಿಸಿದರು.
ಇದೂವರೆಗೂ ಕನಿಷ್ಟ ಮಾಹಿತಿ ಅಫ್ ಲೋಡ್ ಮಾಡದೇ ಇರುವ ಅಧಿಕಾರಿಗಳ ಗಮನ ಸೆಳೆದರು, ಅಧಿಕಾರಿಗಳಿಗೆ ಬಿಸಿಮುಟ್ಟಿಸಿ ಮುಂದಿನ ಸಭೆ ವೇಳೆಗೆ ಪ್ರತಿಯೊಂದು ಯೋಜನೆಗಳ ಮಾಹಿತಿ ಅಫ್ ಲೋಡ್ ಆಗಲೇ ಬೇಕು, ಇಲ್ಲವಾದಲ್ಲಿ ಯೋಜನೆ ನೋಡಿಕೊಳ್ಳುತ್ತಿರುವ ಇಂಜಿನಿಯರ್ ಮೇಲೆ ಕ್ರಮಕೈಗೊಳ್ಳುವಂತೆ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಸೂಚಿಸಿದರು.
ನಂತರ ಮಾಹಿತಿ ತಿಳಿದ ಶ್ರೀಮತಿ ಶಾಲಿನಿರಜನೀಶ್‌ರವರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದರು. ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ನಿರಂತರವಾಗಿ ಅನುಸರಣೆ ಮಾಡುವ ಮೂಲಕ ಪ್ರಸ್ತುತ ಸುಮಾರು 110 ರಿಂದ 120 ಕಾಮಗಾರಿಗಳ ಎಲ್ಲಾ ತಾಜಾ ಡೇಟಾ ಡಿಜಿಟಲ್ ಆಗುವ ಮೂಲಕ ಬಹುಷಃ ದೇಶದಲ್ಲಿಯೇ ಪ್ರಥಮವಾಗಿ ಡಿಜಿಟಲ್ ರಿವ್ಯೂ ಮಾಡುವ ಹಂತ ತಲುಪಿದೆ. ಪ್ರಸ್ತುತ ಕೇವಲ ಫೈನ್ ಟ್ಯೂನ್ ಮಾಡುವ ಕೆಲಸ ಮಾತ್ರ ಬಾಕಿಯಿದೆ.
ಎರಡನೇ ಹಂತದಲ್ಲಿ ತುಮಕೂರು ನಗರದಲ್ಲಿ ಯಾವುದೇ ಇಲಾಖೆ ಯಾವುದೇ ಯೋಜನೆ ಕೈಗೊಂಡರು ಮಾಹಿತಿಗಳನ್ನು ಡಿಜಿಟಲ್ ಅಫ್ ಲೋಡ್ ಮಾಡಲು ಸೂಚನೆ ನೀಡಲಾಗಿದೆ. ಮೂರನೇ ಹಂತದಲ್ಲಿ ತುಮಕೂರು ಜಿಲ್ಲೆಯ ಯಾವುದೇ ಮೂಲೆಯ ಹಳ್ಳಿಯಲ್ಲಿ ಕೈಗೊಂಡ ಪ್ರತಿಯೊಂದು ಯೋಜನೆಯ ಮಾಹಿತಿಯನ್ನು ಡಿಜಿಟಲ್ ಅಫ್ ಲೋಡ್ ಮಾಡುವ ಮೂಲಕ ದೇಶದ ಮೊದಲ ಡಿಜಿಟಲ್ ಜಿಲ್ಲೆಯಾಗಿ ತುಮಕೂರು ಜಿಲ್ಲೆ ಗಮನ ಸೆಳೆಯಲಿದೆ. ದಿಶಾ ಸಮಿತಿ ದಿಟ್ಟ ನಿರ್ಧಾರ ಕೆಲವೇ ದಿವಸಗಳಲ್ಲಿ ಫಲನೀಡಲಿದೆ.