ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಪ್ರಮುಖವಾದ ಚಿಂತನೆ, 2022 ರೊಳಗೆ ನವಭಾತರದ ಕನಸು. ನೀತಿ ಆಯೋಗ 2018 ರಲ್ಲಿ ಒಂದು ಅಜೆಂಡಾವನ್ನು ಪ್ರಕಟಿಸಿ ಈ ಮಾರ್ಗದರ್ಶನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಿದಲ್ಲಿ ಗುರಿ ತಲುಪಬಹುದು ಎಂಬ ರೋಡ್ ಮ್ಯಾಪ್‌ನ್ನು ಪ್ರಕಟಿಸಿದೆ.
ಮಾನ್ಯ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಅಭಿವೃದ್ಧಿ ಟೀಮ್ ಮಾದರಿಯಲ್ಲಿಯೇ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಭಿವೃದ್ಧಿ ಟೀಮ್ ಸದ್ದು ಗದ್ದವಿಲ್ಲದೆ ಕೆಲಸ ಆರಂಭಿಸಿದೆಯಂತೆ.
ಬರುವ ಮುಂಗಡ ಪತ್ರದಲ್ಲಿ ಪ್ರಮುಖವಾಗಿ ನೀತಿ ಆಯೋಗದ ಅಜೆಂಡಾದಲ್ಲಿರುವ ಅಂಶಗಳನ್ನು ಜಾರಿಗೊಳಿಸಲು ಅಧ್ಯಯನ ಆರಂಭಿಸಲಾಗಿದೆಯಂತೆ. ಪ್ರಧಾನ ಕಾರ್ಯದರ್ಶಿ, ಪ್ಲಾನಿಂಗ್, ಪ್ರೋಗ್ರಾಮ್ ಮಾನಿಟರಿಂಗ್ ಮತ್ತು ಅಂಕಿ ಅಂಶಗಳ ಇಲಾಖೆ. ಕರ್ನಾಟಕ ಸರ್ಕಾರ. ಎಂ.ಎಸ್.ಬಿಲ್ಡಿಂಗ್ ಬೆಂಗಳೂರು. ಇವರೊಂದಿಗೆ ಆ ಟೀಮ್‌ನ ಪ್ರತಿನಿಧಿಯೊಬ್ಬರೂ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಇಲಾಖಾವಾರು ಇರುವ ನಿಗಮ, ಮಂಡಳಿಗಳು ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಹಾಗೂ ಇಲಾಖಾವಾರು ಇರುವ ನಿಗಮ, ಮಂಡಳಿಗಳವಾರು ಅಜೆಂಡಾದಲ್ಲಿರುವ ಯಾವ ಯೋಜನೆಗಳನ್ನು ಜಾರಿಗೊಳಿಸಬಹುದು ಎಂಬ ವರದಿ ಸಿದ್ಧಪಡಿಸಲು ಸುಧೀರ್ಘ ಚರ್ಚೆ ನಡೆದಿದೆಯಂತೆ.
ಪ್ರತಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಪಾಲೆಷ್ಟು, ರಾಜ್ಯ ಸರ್ಕಾರದ ಪಾಲೆಷ್ಟು ಹಾಕ ಬೇಕು, ಹೊಸದಾಗಿ ಯಾವ ಯೋಜನೆಗಳನ್ನು ಎಲ್ಲಿ ರೂಪಿಸ ಬೇಕು, ಯಾವ ಇಲಾಖೆ ಮೂಲಕ ಯೋಜನೆ ಕೈಗೊಳ್ಳಬೇಕು ಎಂಬ ಬಗ್ಗೆ ಒಂದು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ, ರಾಜ್ಯದ ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರವಾರು ಕನಿಷ್ಟ ಪಕ್ಷ ಒಂದು ಪ್ರಮುಖ ಯೋಜನೆಯನ್ನು ಜಾರಿಗೊಳಿಸಲು ಆಯ್ಕೆ ಮಾಡಿ ಚುನಾಯಿತ ಜನಪ್ರತಿನಿಧಿಗಳಿಗೆ 2022 ರೊಳಗೆ ನಿರ್ಧಿಷ್ಟ ಯೋಜನೆ ಜಾರಿಗೊಳಿಸಲು ಗುರಿ ನಿಗದಿ ಮಾಡುವ ಅಲೋಚನೆ ನಡೆದಿದೆ.
ಈ ಅಜೆಂಡಾದ ಜೊತೆಗೆ ರಾಜ್ಯ ಸರ್ಕಾರಗಳು ರೂಪಿಸಿರುವ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯ ಮಂತ್ರಿಗಳಾಗಿದ್ದಾಗ ರೂಪಿಸಿದ್ದ 2020 ವಿಷನ್ ಡಾಕ್ಯುಮೆಂಟ್, ಮಾನ್ಯ ಶ್ರೀ ಸಿದ್ಧರಾಮಯ್ಯನವರ ಮುಖ್ಯ ಮಂತ್ರಿಗಳಾಗಿದ್ದಾಗ ಸರ್ಕಾರ ರೂಪಿಸಿರುವ 2025 ವಿಷನ್ ಡಾಕ್ಯುಮೆಂಟ್, ಅಬೈಡ್ ಸಿದ್ಧಪಡಿಸಿರುವ ಪ್ಲಾನ್ ಬೆಂಗಳೂರು 2020, ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ರೂಪಿಸಿರುವ 2025 ರ ವಿಷನ್ ಡಾಕ್ಯುಮೆಂಟ್ ಹೀಗೆ ಹಲವಾರು ಯೋಜನೆಗಳ ಬಗ್ಗೆಯೂ ಅಧ್ಯಯನ ಆರಂಭವಾಗಿದೆ.
ಬಿಜೆಪಿ ಪಕ್ಷವೂ ಸೇರಿದಂತೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಅಂಶಗಳು, ಇಲಾಖಾವಾರು ವಿವಿಧ ಪರಿಣಿತ ತಜ್ಞರುಗಳ ಸಮಿತಿಗಳು ಸಿದ್ಧಡಿಸಿರುವ ವರದಿಗಳು ಉದಾ: ಡಾ.ಡಿ.ಎಂ. ನಂಜುಂಡಪ್ಪ ವರದಿ, ಡಾ.ಸ್ವಾಮಿನಾಥನ್ ವರದಿ, ಔರಾದ್ಕರ್ ವರದಿ, ಜಿ.ಎಸ್.ಪರಮಶಿವಯ್ಯ ವರದಿ, ಕೆ.ಸಿ.ರೆಡ್ಡಿ ವರದಿ, ಬಿ.ಸಿ.ಅಂಗಡಿ ವರದಿ, ತ್ಯಾಗರಾಜ್ ವರದಿ ಹೀಗೆ ಧೂಳು ತಿನ್ನುತ್ತಿರುವ ಪ್ರತಿ ಇಲಾಖಾವಾರು ಎಲ್ಲಾ ವರದಿಗಳ ಅಂಶಗಳಿಗೂ ಆಧ್ಯತೆ ನೀಡಲು ಚಿಂತನೆ ನಡೆದಿದೆ.
ವಿಶ್ವ ಮಟ್ಟದ ಚಿಂತನೆಯಲ್ಲಿರುವ ಸಸ್ಟೆನಬಲ್ ಡೆವಲಪ್ ಗೋಲ್, ಪ್ಯಾರೀಸ್ ಒಪ್ಪಂದ ಹೀಗೆ ಹತ್ತಾರು ಯೋಜನೆಗಳ ಕ್ರೋಡೀಕೃತ ಮಾಹಿತಿ ಒಂದೇ ಕಡೇ ಇಲಾಖಾವಾರು ಬರಲಿದೆ. ರಾಜ್ಯಾಧ್ಯಾಂತ ವಿವಿಧ ಸಂಘ ಸಂಸ್ಥೆಗಳು ಪ್ರಕಟಿಸಿರುವ ಯುವ ಬಡ್ಜೆಟ್, ರೈತರ ಬಡ್ಜೆಟ್, ಮಹಿಳಾ ಬಡ್ಜೆಟ್, ಕೊಳಗೇರಿ ಬಡ್ಜೆಟ್, ಕೈಗಾರಿಕಾ ಬಡ್ಜೆಟ್ ಹೀಗೆ ಎಲ್ಲಾ ವರ್ಗದ ವಿವಿಧ ಯೋಜನೆಗಳ ಅಂಶಗಳನ್ನು ಸಂಗ್ರಹ ಮಾಡಲು ಮುಂದಾಗಿದೆ.
ಕೇಂದ್ರ ಸರ್ಕಾರದ ನೀತಿ ಅಯೋಗದ ಚಿಂತನೆಗೆ ರಾಜ್ಯ ಸರ್ಕಾರದ ಪ್ಲಾನಿಂಗ್, ಪ್ರೋಗ್ರಾಮ್ ಮಾನಿಟರಿಂಗ್ ಮತ್ತು ಅಂಕಿ ಅಂಶಗಳ ಇಲಾಖೆ ಒಂದು ಚಾಲೆಂಜ್ ಅಗಿ ರೂಪುರೇಷೆ ಸಿದ್ಧಪಡಿಸಬೇಕಿದೆ. ಈ ರೀತಿ ಹೊಸ ವಿನೂತನವಾದ ಎಲ್ಲಾ ವರ್ಗದ ಜನತೆಯ ಮನದಾಳದ ಯೋಜನೆಗಳ ಮುಂಗಡಪತ್ರ ಮಂಡಿಸುವ ಇರಾದೆ ಮಾನ್ಯಮುಖ್ಯ ಮಂತ್ರಿಗಳದ್ದಾಗಿದೆ.