21st December 2024
Share

ಮಾಜಿ ಪ್ರಧಾನಿಯವರಾದ ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರವರು ಮತ್ತು ಮಾಜಿ ಮುಖ್ಯ ಮಂತ್ರಿಯವರಾದ ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಅವರ ಅಧಿಕಾರದ ಅವಧಿಯಲ್ಲಿ ರಾಜ್ಯದ ಎಲ್ಲಾ 38608  ಕೆರೆಗಳಿಗೆ ನದಿ ನೀರು ತುಂಬಿಸಿ ರೈತರ ಪಾಲಿಗೆ ಗಂಗಾಮಾತೆ ನೀಡಿದ ದೇವರುಗಳಾಗುತ್ತಾರೆಂದು ಜನತೆ ಕನಸು ಕಾಣುತ್ತಿದ್ದರು.

ಶ್ರೀ ಹೆಚ್.ಡಿ.ದೇವೇಗೌಡರವರು ತುಮಕೂರಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ  ಬಹಿರಂಗವಾಗಿ ಘೋಷಣೆ ಮಾಡಿದ್ದರು ಕೆರೆಗಳಿಗೆ ನದಿ ನೀರು ನೀಡಿಯೇ ತಿರುತ್ತೇವೆ ಎಂದು ವಿಧಿಬರಹ ಬೇರೆಯೇ ಆಗಿತ್ತು.

ನಾನು ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಶ್ರೀ ದೇವೆಗೌಡರವರ ಮನೆಗೆ ಹೋಗಿ ಮಾತನಾಡಿದಾಗ ಅವರು ಖಡಕ್ ಆಗಿ ತಿಳಿಸಿದ್ದರು ನನ್ನ ಮಗ ರೇವಣ್ಣ ನೀರಾವರಿ ಮಂತ್ರಿಯಾಗುತ್ತಾನೆ, ಆವಾಗ ನೀವು ಹೇಳಿದ ಹಾಗೆ ಕೆರೆಗಳಿಗೆ ನದಿ ನೀರು ತುಂಬಿಸುತ್ತೇನೆ, ಸ್ವಲ್ಪ ಅವಕಾಶ ನೀಡಿ ಪರಮಶಿವಯ್ಯನವರೇ  ಎಂದಿದ್ದರು.

ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಚಿಕ್ಕಬಳ್ಳಾಪುರದಲ್ಲಿ ನೀರಾವರಿ ಹೋರಾಟಗಾರ ಶ್ರೀ ಆಂಜನೇಯರೆಡ್ಡಿಯವರು ನಡೆಸಿದ್ದ ನೀರಾವರಿ ಸಭೆಯಲ್ಲಿ ನಾನು ಬರೆದ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಪುಸ್ತಕದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ವರದಿ ಬಗ್ಗೆ ಶ್ರೀ ದೇವೆಗೌಡರು ಜಾಣ ಮೌನ ವಹಿಸಿದ್ದಾರೆ ಎಂದು ಬರೆದ ಹಿನ್ನೆಲೆಯಲ್ಲಿ ಬಹುಷಃ 10 ನಿಮಿಷ ಮಾತನಾಡಿ ಈ ಪುಸ್ತಕದ ಲೇಖಕರಿಗೆ ತಮ್ಮ ಕುಂಟುಂಬದ ಬಗ್ಗೆ ಮಾಹಿತಿ ಇಲ್ಲ ಎಂದು ಕಾಣುತ್ತಿದೆ. ನಾವು ನೀರಾವರಿ ವಿಚಾರದಲ್ಲಿ ಜಾಣ ಮೌನರಾಗಿಲ್ಲ ನಮ್ಮದೇ ಆದ ಒಂದು ಯೋಜನೆಯಿದೆ, ಆ ಪ್ರಕಾರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ಮಾಡುತ್ತೇವೆ ಎಂದು ಘೋಶಿಸಿದ್ದರು.

ದೇವರು ಅವರಿಗೆ ಅವಕಾಶ ನೀಡಿದರು ಯೋಜನೆ ಜಾರಿಯವರಿಗೆ ಅವಕಾಶ ನೀಡಲಿಲ್ಲ, ಸ್ವಾಮಿ ಪ್ರಸ್ತುತ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು  ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರ ಸಹಕಾರದಿಂದ ಕೆರೆಗಳಿಗೆ ನದಿ ನೀರು ತುಂಬಿಸುವ ಬೃಹತ್ ಯೋಜನೆಗೆ ಚಾಲನೆ ನೀಡಲು ಮುಂದಾಗಿದ್ದಾರೆ.

ತಾವು ಮತ್ತು ತಮ್ಮ ಪಕ್ಷದ ಎಲ್ಲಾ ನಾಯಕರು ಕುಳಿತು ಚರ್ಚಿಸಿ ಯೋಜನೆಯ ಬಗ್ಗೆ ಪರಾಮರ್ಶಿಸಿ ಉತ್ತಮ ಸಲಹೆ ನೀಡಿ, ದಯವಿಟ್ಟು ರೈತರ ನೀರಿನ ವಿಚಾರದಲ್ಲಿ ರಾಜಕೀಯ ಬೇಡ ಎಂದು ಜನತೆಯ ಪರವಾಗಿ ತಮ್ಮಲ್ಲಿ ಬಹಿರಂಗ ಮನವಿ.

ಪರಿಣಿತ ತಜ್ಞರೊಂದಿಗೆ ತಮ್ಮ ಮನೆಗೆ ಬಂದು ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಲು ಶಕ್ತಿಪೀಠ ಫೌಂಡೇಷನ್ ಬಯಸಿದೆ ಎಂದು ತಮಗೆ ಈ ಮೂಲಕ ಮನವಿ ಮಾಡುತ್ತೇನೆ.

ರಾಜಕೀಯ ಮೇಲಾಟ ಏನೇ ಇರಲಿ ನೀರಾವರಿ ವಿಚಾರದಲ್ಲಿ ದೇವೆಗೌಡರ ಸಲಹೆ ಬೇಕೆ ಬೇಕು ಎಂಬುದು ನಮ್ಮ ಆಸೆ, ಬಿಎಸ್‌ವೈರವರು ಸಹ ಎಲ್ಲಾ ಮಾಜಿ ಮುಖ್ಯ ಮಂತ್ರಿಗಳ ಸಲಹೆ ಪಡೆಯುವುದು ಸೂಕ್ತವಾಗಿದೆ.