28th March 2024
Share

   ತುಮಕೂರು ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ಧಾರಿ 206  ಒಂದು ಹಳ್ಳಿ ರಸ್ತೆಗಿಂತ ತೀರ ಹದಗೆಟ್ಟಿತ್ತು, ರಸ್ತೆ ಅಗಲ ಮಾಡುತ್ತೇವೆ ಎಂದು ರಸ್ತೆ ಬದಿ ಇದ್ದ ಮರಗಳನ್ನು ಕಡಿದು ಹಾಳು ಮಾಡಿ ಎರಡು ವರ್ಷವಾಗಿತ್ತು.

  ಒಂದು ದಿವಸ ನಾನು ಮತ್ತು ಶ್ರೀ ಆರ್.ಎಸ್.ಅಯ್ಯರ್ ಹೋಯ್ಸಳ ಹೋಟೆಲ್‌ನಲ್ಲಿ ಟೀ ಕುಡಿಯುತ್ತಾ ಕುಳಿತಿದ್ದೆವು. ಆ ಜಾಗ ನಮ್ಮ ಅಭಿವೃದ್ಧಿ ಹರಟೆಯ ತಾಣವೂ ಆಗಿತ್ತು. ನಮ್ಮ ಅಂದಿನ ಚರ್ಚೆ ರಾಷ್ಟ್ರೀಯ ಹೆದ್ಧಾರಿ 206 ಕಡೆ ತಿರುಗಿತು.

   ಇಂಜಿನಿಯರ್‌ಗೆ ಫೋನ್ ಮಾಡಿ ಕೇಳಿದೆ ಕಚೇರಿಯಲ್ಲಿ ಇರುವುದಾಗಿ ಹೇಳಿದರು. ಈಗ ಎನ್.ಹೆಚ್.ನಲ್ಲಿ ಎಇಇ ಆಗಿರುವ ಶ್ರೀ ಚಿದಾನಂದ್‌ರವರು ಆಗ ಅಲ್ಲಿಯೇ ಎಇ ಆಗಿದ್ದರು.

  ಇಬ್ಬರು ಕಚೇರಿಗೆ ಹೋಗಿ ವಿಚಾರಿಸಿದಾಗ ರೂ 3 ಕೋಟಿ ವೆಚ್ಚದ ಪರಿಕಲ್ಪನೆ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಎರಡು ವರ್ಷವಾಗಿದೆ ಮಂಜೂರಾಗಿಲ್ಲ ಎಂಬ ವಾಸ್ತವ ತಿಳಿಯಿತು. ಮತ್ತೆ ಮರಗಳನ್ನು ಏಕೆ ಮಾರಣ ಹೋಮ ಮಾಡಿದಿರಿ ಎಂಬ ಪ್ರಶ್ನೆಗೆ ಮೌನ ಅವರ ಉತ್ತರವಾಗಿತ್ತು.

  ರಸ್ತೆಯ ಅಗಲದ ಬಗ್ಗೆ ವಿಚಾರಿಸಿದಾಗ ಒತ್ತುವರಿ ತೆರವು ಗೊಳಿಸುವರು ಯಾರು ಎಂಬುದೇ ನಿಗೂಢ ಎಂಬ ಅರಿವು ಆಯಿತು. ನಾನು ಬೆಂಗಳೂರಿಗೆ ಹೋಗಿ ಎನ್.ಹೆಚ್ ಇ.ಇ ಬಳಿ ಹೋಗಿ ಮಾತನಾಡಿದೆ. ಅವರು ಈ ರಸ್ತೆ ಮಾಡಿಸಲು ನಿಮ್ಮ ಕೈಲಿ ಆಗಲ್ಲ ಎಂದರು. ನಾನು ಖಾರವಾಗಿಯೇ ಏಕೆ ಎಂದೆ ಸತ್ಯ ಹೇಳಿದರೆ ನಿಮಗೆ ಕೋಪ ಬರಬಹುದು ಎಂದರು.

 ಇಲ್ಲ ಹೇಳಿ ಸಾರ್ ಎಂದಾಗ ಅಲ್ಲಿಯೇ ಕುಳಿತಿದ್ದ ಒಬ್ಬರು ಸಾರ್ ರಸ್ತೆ ಅಗಲ ಮಾಡಲು ಮಾಜಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ವಿರೋಧ ಇದೆ ಎಂದು ಖಡಕ್ ಆಗಿ ತಿಳಿಸಿದರು. ನಾನು ಮಾತನಾಡದೆ ಎದ್ದು ಬಂದೆ.

  ಜಿಎಸ್‌ಬಿ ರವರು ಗುಬ್ಬಿ ದೇವಾಲಯ ಕಟ್ಟಡ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನಾನು ಬಹುಷಃ ಮೂರು ದಿವಸ ಬಿಡದ ಹಾಗೆ ಅವರ ಜೊತೆ ಗುಬ್ಬಿ ದೇವಾಲಯದ ಬಳಿ ಹೋಗಿ ಬಿ.ಹೆಚ್. ರಸ್ತೆ ಕನಿಷ್ಟ 80 ಅಡಿ ಅಗಲ ಆಗಬೇಕು. ಕೇಂದ್ರದಲ್ಲಿ ನಿಮ್ಮ ಸ್ನೇಹಿತರಾದ ಶ್ರೀ ಕೆ.ಹೆಚ್.ಮುನಿಯಪ್ಪನವರು ಇದ್ದಾರೆ. ತಾವು ಹೇಳಿದರೆ ರಸ್ತೆ ಮಾಡ ಬಹುದು ಎಂದು ಮಾತು ಆರಂಭಿಸಿದೆ.

 ಅವರ ಉದ್ದೇಶ ರಸ್ತೆ ಅಗಲ ಮಾಡಿದರೆ ನೂರಾರು ಕಟ್ಟಡಗಳು ಹಾಳಾಗುತ್ತವೆ, ರಿಂಗ್ ರಸ್ತೆಯನ್ನೇ ಬಿಹೆಚ್ ರಸ್ತೆ ಮಾಡಿಸಿ ಅಭಿವೃದ್ಧಿ ಪಡಿಸೋಣ ಎಂಬುದಾಗಿತ್ತು. 

  ನಾನು, ಅಯ್ಯರ್ ಮತ್ತು ಹನುಂತಪುರದ ಶ್ರೀ ಶಿವಕುಮಾರ್ ಅದೇ ಹೊಯ್ಸಳ ಹೋಟೆಲ್‌ನಲ್ಲಿ ಕುಳಿತು ಮಾತನಾಡಿದೆವು, ಶಿವಕುಮಾರ್ ಫೋರಂ ವಿಸರ್ಜನೆ ಮಾಡಿ ಇಲ್ಲವೇ ಜಿಎಸ್‌ಬಿ ರಸ್ತೆ ಅಭಿವೃದ್ಧಿಗೆ ವಿರೋಧ ಎಂದು ಪ್ರೆಸ್ ಮೀಟ್ ಮಾಡಬೇಕು ಎಂಬ ಪಟ್ಟು ಹಾಕಿದರು.

  ನಾನು ಈ ವಿಷಯವನ್ನು ಒಂದು ದಿವಸ ಈಗಿನ ಸಚಿವರಾದ ಶ್ರೀ ವಿ.ಸೋಮಣ್ಣನವರ ಬಳಿ ಪ್ರಸ್ತಾಪ ಮಾಡಿದೆ. ಅವರು ಅಣ್ಣನಿಗೆ ನಾನು ಹೇಳುತ್ತೇನೆ ಬಿಡು ಎಂದರು. ಸ್ವಲ್ಪ ದಿನವಾದ ಮೇಲೆ ಶ್ರೀ ವಿ.ಸೋಮಣ್ಣನವರಿಂದ ಫೋನ್ ಬಂತು, ನಾನು ಮತ್ತು ಶ್ರೀ ಕೆ.ಹೆಚ್.ಮುನಿಯಪ್ಪನವರು ಚಿತ್ರದುರ್ಗಕ್ಕೆ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪುಣ್ಯ ತಿಥಿಗೆ ಹೋಗುತ್ತಿದ್ದೇವೆ. ರಾತ್ರಿ ಅಣ್ಣನ ಮನೆಗೆ ಊಟಕ್ಕೆ ಬರುತ್ತೇವೆ ಅಣ್ಣನ ಒಂದು ಪತ್ರ ರೆಡಿ ಮಾಡಿಸು ಎಂದರು.

  ನಾನು ಅಯ್ಯರ್‌ಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರು ಈಗ ನಾನು ಶ್ರೀ ಗೌ.ತಿ.ರಂಗನಾಥ್ ರವರ ಅಕ್ಷರ ಮುದ್ರಣಕ್ಕೆ ಹೋಗುತ್ತಿದ್ದೇನೆ ನೀವು ಬನ್ನಿ ಎಂದರು. ನಾನು ಬಸವರಾಜ್‌ರವರ  ಲೆಟರ್ ಹೆಡ್ ಸಹಿತ ಹೊರಟೆ.

  ಇಂಗ್ಲಿಷ್‌ನಲ್ಲಿ ಲೆಟರ್ ಮಾಡಿಸ ಬೇಕು ಯಾರಿಂದ ಮಾಡಿಸೋಣ ಎಂದು ಚರ್ಚೆ ಅರಂಭಿಸಿದಾಗ ನಮ್ಮ ಮಾಧ್ಯಮ ಸ್ನೇಹಿತರಾದ ಶ್ರೀ ಮುನೀರ್‌ರವರ ಮಗನಾದ ಶ್ರೀ ಅಮೀರ್‌ರವರ  ಫೋನ್ ಬಂತು. ಸಾರ್ ದೆಹಲಿಯಿಂದ ಬಂದಿದ್ದೇನೆ ಎಲ್ಲಿದ್ದೀರಾ ಬೇಟಿಯಾಗೊಣ ಎಂದರು.

   ಅಕ್ಷರ ಮುದ್ರಣಕ್ಕೆ ಕರೆದೆವು ಅವರು ಬಂದರು, ನಂತರ ಅವರಿಂದಲೇ ಪತ್ರವನ್ನು ಟೈಪ್ ಮಾಡಿಸಲಾಯಿತು, ಸಂಜೆ 6 ಗಂಟೆಗೆ  ಜಿಎಸ್‌ಬಿ ಮನೆಗೆ ತೆರಳಿದಾಗ ಬಾರಯ್ಯ ಸೋಮಣ್ಣನವರು ಬರುತ್ತಾರೆ ನಾನು ಯಾರಿಗೂ ಹೇಳಿರಲಿಲ್ಲ ಎಂದರು.

  ಸಾರ್ ಸೋಮಣ್ಣನವರೇ ಫೋನ್ ಮಾಡಿದ್ದರು, ಮುನಿಯಪ್ಪನವರಿಗೆ ಹೇಳಿ ಬಿ.ಹೆಚ್.ರಸ್ತೆ ಮಾಡಿಸೋಣ ಅಂತ ಅದಕ್ಕೆ ನಿಮ್ಮ ಪತ್ರ ಟೈಪ್ ಮಾಡಿಸಿಕೊಂಡು ಬಂದಿದ್ದೇನೆ ಎಂದು ಅವರಿಗೆ ಪತ್ರ ನೀಡಿದೆ. ಅವರು ಎಲ್ಲಾ ಸರಿಯಾಗಿದೆ ಎಂದು ಈ ಪತ್ರದಲ್ಲಿ ಅವರೇ ಕೈಯಲ್ಲಿ ಬರೆದು ಒಂದು ವಾಕ್ಯ ಸೇರಿಸಿದರು.

  ಮಾತನಾಡುತ್ತಾ ಕುಳಿತೆವು ಸೋಮಣ್ಣನವರು ಮತ್ತು ಮುನಿಯಪ್ಪನವರು ರಾತ್ರಿ 11  ಗಂಟೆಗೆ ಬಂದರು. ಊಟ ಆದ ಮೇಲೆ ಸೋಮಣ್ಣನವರೇ ವಿಷಯ ಆರಂಭಿಸಿದರು, ಎಂಪಿಯವರು ಪತ್ರ ನೀಡಿದರು. ಮುನಿಯಪ್ಪನವರು ನೀವೂ ಹೇಳಿದ ಮೇಲೆ ಮಾಡ್ತಿನಿ ಅಣ್ಣ ಎಂದರು.

  ಸೋಮಣ್ಣನವರು ಈ ಫೋರಂನವರು ಬರಿ ಗಲಾಟೆ ಕಣಣ್ಣೋ, ಈ ಕೆಲಸ ಮಾಡ್ಲೇ ಬೇಕು ಎಂದು ದ್ವನಿಗೂಡಿಸಿದರು. ಅಂದು ಬರೆದ ಪತ್ರ ಇದು.

 – ಮುಂದುವರೆಯಿಲಿದೆ.