TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮದ ನೀರಿನ ಆಡಿಟ್, ನೀರಿನ ಬಡ್ಜೆಟ್ ಮತ್ತು ನೀರಿನ ಸ್ಟ್ರಾಟಜಿಯನ್ನು ಆಯಾ ಗ್ರಾಮಗಳ ಗ್ರಾಮ ಸಭೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚರ್ಚಿಸಿ ಸಭೆ ನಡವಳಿಕೆ ಮಾಡಿ, ಕಚೇರಿ ಮುಂದೆ ನಕ್ಷೆ ಸಹಿತ ಮಾಹಿತಿ ಪ್ರಕಟಿಸುವವರೆಗೂ ಕೇಂದ್ರ ಜಲಶಕ್ತಿ ಸಮಿತಿ ಸದಸ್ಯರು, ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರು ಹಾಗೂ ತುಮಕೂರು ಲೋಕಸಭಾ ಸದಸ್ಯರು ಆದ ಶ್ರೀ ಜಿ.ಎಸ್.ಬಸವರಾಜ್ ಬಿಡುವುದಿಲ್ಲ ಎಂಬ ಶಪಥ ಮಾಡಿದ್ದಾರೆ.
ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದ ಮೇರೆಗೆ ತುಮಕೂರು ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಆಯ್ಕೆ ಮಾಡುವಂತೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಈಗಾಗಲೇ ಪತ್ರ ಬರೆದಿದ್ದಾರೆ.
ಕಳೆದ ಎರಡು ವರ್ಷದಿಂದಲೂ ಸತತವಾಗಿ ದಿಶಾ ಸಮಿತಿ ಸಭೆಗಳಲ್ಲಿ ನಿರಂತರವಾಗಿ ಚರ್ಚೆ ನಡೆಯುತ್ತಿದ್ದರೂ, ಬಹುತೇಕ ಯೋಜನೆಗಳು ಕೇಂದ್ರ ಸರ್ಕಾರದ್ದಾಗಿದ್ದರೂ ಮೀನ ಮೇಷ ಎಣಿಸುವ ಅಧಿಕಾರಿಗಳಿಂದ ಜಿಐಎಸ್ ಆಧಾರಿತ ನೀರಿನ ಮೂಲಗಳ ಮಾಹಿತಿ ಪಡೆಯಲು ಸಾದ್ಯಾವಾಗಿಲ್ಲ. ಮಾಹಿತಿ ಇಲ್ಲದೆ ಸಭೆಗೆ ಬರುವ ಅಧಿಕಾರಿಗಳಿಗೆ ಯಾವ ರೀತಿ ಹೇಳಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ. ಹಿಂದಿನ ಸಭೆಯಲ್ಲಿ ಸಂಸದರು ಯಾವ ಮಾಹಿತಿ ಸಂಗ್ರಹಿಸ ಬೇಕು ಎಂಬ ಬಗ್ಗೆ ಪಾಠ ಮಾಡಿದ್ದಾರೆ. ಒಂದು ತಿಂಗಳ ಗಡುವನ್ನು ನೀಡಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮದ ‘ವಿಲೇಜ್ ಆಕ್ಷನ್ ಪ್ಲಾನ್’ ಮಾಡಬೇಕಿದೆ. ಈ ಪ್ಲಾನ್ ಮಾಡಲು ಪಾನಿ ಸಮಿತಿ ಅಥವಾ ಮನೆ ಮನೆಗೆ ಗಂಗೆ ಸಮಿತಿ ಗಳನ್ನು ರಚಿಸ ಬೇಕಿದೆ. ಇದು ಒಂದು ಜಲಶಕ್ತಿ ಅಂದೋಲನದ ರೀತಿ ನಡೆಯಬೇಕಿದೆ. ಕಾಟಚಾರಕ್ಕೆ ಮಾಡುವುದಾದರೆ ಏನು ಪ್ರಯೋಜನ?
ತುಮಕೂರು ಜಿಲ್ಲೆಯಲ್ಲಿ ವಿಶೇಷವಾಗಿ ಕೆಳಕಂಡ ಯೋಜನೆಗಳ ಪರಿಪೂರ್ಣ ಮಾಹಿತಿ ಸಂಗ್ರಹಿಸಿ ದೇಶಕ್ಕೆ ಮಾದರಿಯಾಗಲೇ ಬೇಕು.
- ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ.
- ಜಲಗ್ರಾಮ ಕ್ಯಾಲೆಂಡರ್ ಯೋಜನೆ.
- ಅಟಲ್ ಭೂಜಲ್ ಯೋಜನೆ.
- ಜಲಾಮೃತ ಯೋಜನೆ.
- ಜಲಜೀವನ್ ಮಿಷನ್ ಗ್ರಾಮೀಣ ಯೋಜನೆ.
- ಜಲಜೀವನ್ ಮಿಷನ್ ನಗರ ಯೋಜನೆ.
- ತುಮಕೂರು ಜಿಲ್ಲೆಯ ನೀರಿನ ಲೆಕ್ಕದ ‘ಜಲಗ್ರಂಥ’
- ರಾಜ್ಯದ ನದಿ ಜೋಡಣೆಯಿಂದ ತುಮಕೂರು ಜಿಲ್ಲೆಗೆ ಅಗತ್ಯವಿರುವ ನೀರು.
- ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ತುಮಕೂರು ಜಿಲ್ಲೆಗೆ ನೀರಿನ ಅಲೋಕೇಷನ್.
- ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ನೀರಿನ ಲೆಕ್ಕ.
- ನದಿಗಳ ಪ್ರವಾಹದ ನೀರಿನಿಂದ ತುಮಕೂರು ಜಿಲ್ಲೆಗೆ ದೊರೆಯುವ ನದಿ ನೀರಿನ ಯೋಜನೆ.
- ವಿವಿಧ ಯೋಜನೆಗಳಡಿಯಲ್ಲಿ ಇದೂವರೆಗೂ ಕೈಗೊಂಡಿರುವ ನೀರಿನ ವಿವಿಧ ಮೂಲಗಳ ಮಾಹಿತಿ.
ಹೀಗೆ ಹಲವಾರು ಜಲಶಕ್ತಿ ಅಭಿಯಾನ ಯೋಜನೆಗೆ ಒತ್ತು ನೀಡಿರುವುದರಿಂದ ಹಾಗೂ ಕೇಂದ್ರ ಸರ್ಕಾರದಿಂದ ಈ ಯೋಜನೆಗಳಿಗೆ ಅತಿ ಹೆಚ್ಚು ಅನುದಾನ ಪಡೆಯಲು ಉದ್ದೇಶಿರುವುದರಿಂದ ಜಿಲ್ಲಾ ಮಟ್ಟದ ದಿಶಾ ಸಮಿತಿ ಕಠಿಣ ನಿರ್ಧಾರ ಕೈಗೊಳ್ಳಲೇ ಬೇಕು.
ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ವರದಿ ತಯಾರಿಸಿದ ಮೊದಲ ಜಿಲ್ಲೆ ತುಮಕೂರು ಆಗಲೇ ಬೇಕಿದೆ. ಈ ಹಿನ್ನಲೆಯಲ್ಲಿ ದಿನಾಂಕ:13.07.2021 ರಂದು ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ವಿಶೇಷ ದಿಶಾ ಸಮಿತಿ ಸಭೆಯನ್ನು ಬಸವರಾಜ್ ರವರು ನಡೆಸಲಿದ್ದಾರೆ.