22nd May 2024
Share

TUMAKURU:SHAKTHI PEETA FOUNDATION

ತುಮಕೂರು ಜಿಲ್ಲೆಯಲ್ಲಿ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಗೆ ಒಂದು ಜಲಕಾಳಗ ಆರಂಭವಾಗುವ ಲಕ್ಷಣಗಳು ಬಹುತೇಕ ಖಚಿತ. ಪಾರದರ್ಶಕತೆ ಬರೀ ಭಾಷಣಕ್ಕೆ ಸೀಮೀತವಾಗಬಾರದು. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಹೇಳಿಕೆಗೆ ಸೀಮೀತವಾಗಬಾರದು.

ಚುನಾಯಿತ ಜನಪ್ರತಿನಿಧಿಗಳಿಗೆ ಏನೇ ಕಷ್ಟವಾಗಲಿ ನಾವು ಮಾಡಿಯೇ ತೀರಬೇಕು ಎಂಬ ಹಠ ಮತ್ತು ಛಲ ಎರಡು ಇರಬೇಕು. ಅಧಿಕಾರಿಗಳು ಸರ್ಕಾರಗಳ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ನು ಓದಿ ಮನನ ಮಾಡಿಕೊಂಡು ಎಷ್ಟೇ ಕಷ್ಟವಾಗಲಿ ನಾವು ಒಂದು ಸಮಗ್ರ ಯೋಜನೆಯನ್ನು ಮಾಡಲೇ ಬೇಕು ಎಂಬ ಬದ್ಧತೆ ಹೊಂದಿರಬೇಕು.

ತುಮಕೂರು ಜಿಲ್ಲೆಯ ಚುನಾಯಿತ ಜನ ಪ್ರತಿನಿಧಿಗಳಲ್ಲಿ ನೀರಾವರಿ ವಿಚಾರದಲ್ಲಿ ಗುಂಪುಗಾರಿಕೆ, ಒಣ ಪ್ರತಿಷ್ಟೆ ಅತಿರೇಕ ತಲುಪಿದೆ. ಎಲ್ಲವನ್ನೂ ಮಾಡಿದ್ದೇವೆ ಎಂಬ ಫೋಸು ಕೊಡುವ ನಾಯಕರು ಕಡೇ ಪಕ್ಷ ಪ್ರತಿಯೊಂದು ಗ್ರಾಮದ ಜಲಸಂಪನ್ಮೂಲ ಮಾಹಿತಿ ಹೇಳುವ, ತೋರಿಸುವ ಧೈರ್ಯ ಯಾರಿಗೂ ಇಲ್ಲ. ಇದು ಸಾರ್ವಜನಿಕರ ಛಾಲೇಂಜ್.

ಕೇಂದ್ರ ಸರ್ಕಾರದ ಮಹತ್ತರವಾದ ಹಲವಾರು ಯೋಜನೆಗಳ ಹಣ ಮಾತ್ರ ವ್ಯಯವಾಗುತ್ತಿದೆ. ಆದರೇ ನಿಖರವಾದ ಮಾಹಿತಿಗೆ ಕೊರತೆಯಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳು ಕಡತದಲ್ಲಿ ಮಾತ್ರ ಜಾರಿಯಾಗುತ್ತಿವೆ. ಸತ್ಯಾಂಶ ನೋಡಿದರೇ ಎಷ್ಟು ಪಾಪ ಮಾಡುತ್ತಿದ್ದಾರೆ ಎಂಬ ನೋವು ಇದೆ.

ನಾನು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಗೂಡಿ ನೀರಾವರಿ ಬಗ್ಗೆ ಅಧ್ಯಯನ ಮಾಡಿರುವ ಹಿನ್ನಲೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಮಾಡುವ ಜಲಪಾಪ’ ನೋಡಿ ಮೈಯ್ಯಲ್ಲಾ ಬೆಂಕಿಯಾಗುತ್ತಿದೆ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆದು ತುಮಕೂರು ಜಿಲ್ಲೆಯನ್ನು ಸಮಗ್ರ ನೀರಾವರಿ ಯೋಜನೆಗೆ ಆಯ್ಕೆ ಮಾಡಿಕೊಳ್ಳಿ ಎಂದಿದ್ದಾರೆ.

ಸ್ವತಃ ಮುಖ್ಯ ಮಂತ್ರಿಯವರೇ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಮತ್ತು ರಾಜ್ಯದ ನದಿ ಜೋಡಣೆಗೆ ಡಿಪಿಆರ್ ಮಾಡಲು ಆದೇಶ ನೀಡಿದ್ದಾರೆ. ತುಮಕೂರು ಜಿಲ್ಲೆಯವರೇ ಆದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವಲಾಯದ ಸದಸ್ಯರಾಗಿ ಶ್ರೀ ಜಿ.ಎಸ್.ಬಸವರಾಜ್ ರವರು ಇದ್ದಾರೆ. ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯ ಸಚಿವರಾಗಿ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ  ಶ್ರೀ ಜೆ.ಸಿ.ಮಾಧುಸ್ವಾಮಿರವರು ಇದ್ದಾರೆ.

ತುಮಕೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿ ಜಲ ಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರು ಇದ್ದಾರೆ. ಜಲ ಸಂಪನ್ಮೂಲ ಕಾರ್ಯದರ್ಶಿಯಾಗಿ ತುಮಕೂರು ಜಿಲ್ಲೆಯವರೇ ಆದ ಶ್ರೀ ಲಕ್ಷ್ಮಣ ರಾವ್ ಪೇಶ್ವೇ ರವರು ಇದ್ದಾರೆ. ತುಮಕೂರು ಜಿಲ್ಲೆಯವರೇ ಆದ ಶ್ರೀ ಎಲ್.ಕೆ.ಅತೀಕ್ ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿಯವರಾಗಿದ್ದಾರೆ. ತುಮಕೂರು ಜಿಲ್ಲೆಯವರೇ ಆದ ಶ್ರೀ ಮೃತ್ಯುಂಜಯ ಸ್ವಾಮಿರವರು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಆಗಿದ್ದಾರೆ.

‘ಇವರೆಲ್ಲಾ ಇದ್ದರೂ, ಮಾನ್ಯ ಮುಖ್ಯ ಮಂತ್ರಿಯವರ ಆದೇಶ ಇದ್ದರೂ, ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ಧಿ ಯೋಜನೆ ರೂಪಿಸದಿದ್ದರೇ ಸಾಮಾನ್ಯ ಜನ ಏನು ಮಾಡಬೇಕು? ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಬೇಡವೇ? ಚುನಾಯಿತ ಜನಪ್ರತಿನಿಧಿಗಳು ಅವರ ಕ್ಷೇತ್ರ, ಅವರ ಜಾತಿ, ಅವರ ಸಂಬಂಧಿಗಳು ಇರುವ ಕಡೆ ಮಾತ್ರ ನದಿ ನೀರು ಯೋಜನೆ ರೂಪಿಸಿದರೇ ಉಳಿದವರ ಪಾಡೇನು?’

ಚುನಾಯಿತ ಜನ ಪ್ರತಿ ನಿಧಿಗಳೇ ಮತ್ತು ಅಧಿಕಾರಿಗಳೇ ಗಮನವಿರಲಿ, ಶ್ರೀ ನರೇಂದ್ರ ಮೋದಿಯವರು ಅಟಲ್ ಭೂಜಲ್ ಯೋಜನೆ ಜಾರಿಗೊಳಿಸಿರುವುದು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಾರಿಗೊಳಿಸಿರುವುದು ಮತ್ತು ರಾಜ್ಯ ಸರ್ಕಾರ ಜಲಾಮೃತ ಯೋಜನೆ ಜಾರಿಗೊಳಿಸಿರುವುದು ಬರಿ ಮಣ್ಣು ಕೆರೆಯಲು ಅಲ್ಲ. ಪ್ರತಿ ಗ್ರಾಮದ, ಪ್ರತಿ ಸರ್ವೇ ನಂಬರಿನ ವಾಟರ್ ಆಡಿಟ್- ವಾಟರ್ ಬಡ್ಜೆಟ್- ವಾಟರ್ ಸ್ಟ್ರಾಟಜಿ’ ಮಾಡಿ ನಂತರ ಅಗತ್ಯವಿರುವ ಕಡೆ ಯೋಜನೆ ರೂಪಿಸಿ ಎಂದು.

ಜನ ಸುಮ್ಮನಿದ್ದಾರೆ ಎಂದು ತಿಳಿಯ ಬೇಡಿ, ಪಕ್ಷಾತೀತವಾಗಿ ಬೀದಿ ಗೀಳಿಯುವ ಕಾಲ ದೂರವಿಲ್ಲ. ಪಾರದರ್ಶಕತೆಯಿಂದ ಯೋಜನೆ ರೂಪಿಸಿ, ಅಗತ್ಯವಿರುವ ನದಿ ನೀರಿನ ಡಿಮ್ಯಾಂಡ್ ಸರ್ವೆ ಮಾಡಿಸಿ, ನೀರಿನ ಸಮಾನ ಹಂಚಿಕೆಗೆ ಸೂತ್ರ ಸಿದ್ಧಪಡಿಸಿ.

ಮನೆ ಮನೆಗೂ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ. ಕರಾಬುಹಳ್ಳಗಳ ಒತ್ತುವರಿ ತೆರವು ಗೊಳಿಸಿ ಅಭಿವೃದ್ಧಿ ಪಡಿಸಿ.ಕೆರೆ-ಕಟ್ಟೆಗಳ ಒತ್ತುವರಿ ತೆಗೆಸಿ. ನರೇಗಾ ಹಣ ಕೊಳೆಯುತ್ತಿದೆ. ಮೊದಲು ಪ್ರತಿ ಗ್ರಾಮವಾರು, ಗ್ರಮಪಂಚಾಯಿತಿ ವಾರು ಏನು ಮಾಡ ಬೇಕು, ಏನು ಮಾಡಿದ್ದೇವೆ, ಎಷ್ಟು ಯೋಜನೆಗಳು ಸಫಲವಾಗಿವೆ, ಎಷ್ಟು ಯೋಜನೆಗಳು ವಿಫಲವಾಗಿವೆ ಎಂಬ ಮಾಹಿತಿ ಹೇಳುವ, ನಕ್ಷೆಯಲ್ಲಿ ತೋರಿಸುವ ಕೆಲಸ ಮಾಡಿ.

ನಾವಂತೂ ಊಟ ತಿಂಡಿ ತಿಂದು ಬರಲು ದಿಶಾ ಸಮಿತಿ ಸದಸ್ಯರಾಗಿಲ್ಲ. ನಾವು ಕೇಳುವ ಮಾಹಿತಿ ನೀಡಿ, ನೀಡಲು ಏಕೆ ಸಾದ್ಯಾವಿಲ್ಲ ಎಂಬ ಬಗ್ಗೆ ಲಿಖಿತವಾಗಿ ಉತ್ತರವನ್ನು ಸಂಸದರ ವೆಬ್ ಸೈಟ್ ನಲ್ಲಿ ದಾಖಲು ಮಾಡಿ. ಇದೂವರೆಗೂ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿರುವ ಅಂಶಗಳ ಬಗ್ಗೆ ಮತ್ತೊಮ್ಮೆ ಒದಿಕೊಳ್ಳಿ. ಮೋದಿಯವರ ಯೋಜನೆಗಳ ಗೈಡ್ ಲೈನ್ಸ್ ನಿಮ್ಮ ಬಳಿ ಇರಲಿ.ನಮಗೂ ತಾಳ್ಮೆ ಇದೆ ಅಲ್ಲವೇ?

 ‘ತುಮಕೂರು ಜಿಲ್ಲೆಯ ಜನತೆ ಪರವಾಗಿ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಮತ್ತೊಮ್ಮೆ ಮನವಿ’