22nd December 2024
Share

TUMAKURU:SHAKTHIPEETA FOUNDATION

ಕೊರೊನಾ 3 ನೇ ಅಲೆಯ ಆಟಗಳನ್ನು ನೋಡಿಕೊಂಡು ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರು, ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು, ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಕೇಂದ್ರದ ಜಲಶಕ್ತಿ ಯೋಜನೆಗಳಿಗೆ ಸಂಭಂಧಿಸಿದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಸಚಿವರನ್ನು ಆಹ್ವಾನಿಸಿ, ರಾಜ್ಯ ಮಟ್ಟದ ಜಲಶಕ್ತಿ ಅಭಿಯಾನದ ಬೃಹತ್ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತಿಳಿಸಿದ್ದಾರೆ.

 ದಿನಾಂಕ:10.08.2021 ರಂದು ದೆಹಲಿಯಲ್ಲಿ  ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರ ಅಧ್ಯಕ್ಷತೆಯಲ್ಲಿ ನಡೆದ ಜಲಶಕ್ತಿ ಸಚಿವಾಲಯದ ಸಭೆಯಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ವಿವರವಾಗಿ ಸಮಿತಿಯ ಸದಸ್ಯರಾದ ಶ್ರೀ. ಜಿ.ಎಸ್.ಬಸವರಾಜ್ ರವರು ಚರ್ಚೆ ನಡೆಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಕರ್ನಾಟಕ ರಾಜ್ಯದ ಅಂತರ್ಜಲ ಅಭಿವೃದ್ಧಿಗೆ ಒಂದು ವಿಶೇಷವಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಈ ಬಗ್ಗೆ ಬಸವರಾಜ್ ರವರು ಮತ್ತು ಮಾಧುಸ್ವಾಮಿಯವರು ದೆಹಲಿಯಲ್ಲಿ ಶ್ರೀ ಬಸವರಾಜ್ ರವರ ಮನೆಯಲ್ಲಿ ಸಮಾಲೋಚನೆ ನಡೆಸಿದ್ದಾರೆ.

ದಿನಾಂಕ:12.08.2021 ರಂದು ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರೊಂದಿಗೆ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಿದರು. ನಂತರ ಮಾನ್ಯ ಮುಖ್ಯ ಮಂತ್ರಿಯವರ ಆಪ್ತಕಾರ್ಯದರ್ಶಿಯವರಾದ ಶ್ರೀ ಅನಿಲ್ ಕುಮಾರ್ ರವರೊಂದಿಗೂ ಚರ್ಚಿಸಿದರು.

 ದೆಹಲಿಯಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳ ಕಡತಗಳನ್ನು ರಾಜ್ಯದ ಇಬ್ಬರು ಜಲಶಕ್ತಿ ಸಚಿವಾಲಯದ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಹಾವೇರಿ ಲೋಕಸಭಾ ಸದಸ್ಯರಾದ ಶ್ರೀ ಶಿವಕುಮಾರ್ ಉದಾಸಿರವರು ಅನುಸರಣೆ ಮಾಡಲು ಮುಂದಾಗಿದ್ದಾರೆ.

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಅವರ ಮನೆಯಲ್ಲಿ ದಿನಾಂಕ:12.08.2021 ರಂದು ಹೇಮಾವತಿ ನಾಲಾ ಆಧುನೀಕರಣದ ಯೋಜನೆಯ ಶಂಕುಸ್ಥಾಪನೆ ಮತ್ತು ಜಲಶಕ್ತಿ ಅಭಿಯಾನ ನಡೆಸುವ ಬಗ್ಗೆಯೂ ವಿಚಾರ ವಿನಿಮಯ ಮಾಡಿಕೊಂಡರು.

 ವಿರೋಧ ಪಕ್ಷದ ನಾಯಕರಾಗಿದ್ದಾಗ ಹೇಮಾವತಿ ನಾಲಾ ಮೇಲೆ ಸಂಚರಿಸಿದ ನಂತರ ಮುಖ್ಯ ಮಂತ್ರಿಯವರಾದ ಮೇಲೆ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ರದ್ಧು ಪಡಿಸಿ, ನಂತರ ಕೊರೊನಾ ಹಿನ್ನಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಅವರ ಅಧಿಕಾರದ ಅವಧಿಯಲ್ಲಿಯೇ ಚಾಲನೆ ನೀಡುವ ಮೂಲಕ ತನ್ನ ಮಾತನ್ನು ಉಳಿಸಿಕೊಂಡು ತುಮಕೂರು ಜಿಲ್ಲೆಯ ಜನರ ಋಣ ತೀರಿಸಿದ್ದಾರೆ ಎಂದರೆ ತಪ್ಪಾಗಲಾರದು. ಈ ಹಿನ್ನಲೆಯಲ್ಲಿ ಅವರನ್ನು ಸಹ ಸಮಾವೇಶಕ್ಕೆ ಆಹ್ವಾನಿಸಿ ನಾಗರೀಕ ಸನ್ಮಾನ ಮಾಡಲು ಚಿಂತನೆ ನಡೆಸಿದ್ದಾರೆ.

 ಸೋಮವಾರ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರೊಂದಿಗೆ ಚರ್ಚಿಸಿದ ನಂತರ, ಜಿಲ್ಲೆಯ ಸಚಿವರು ಶಾಸಕರೊಂದಿಗೆ ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಸಮಾವೇಶದ ರೂಪುರೇಷೆ ನಿರ್ಧರಿಸಲು ಚಿಂತನೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಹಳವಾಗಿ ಸದ್ಧು ಮಾಡಿದ್ದ, ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ರದ್ದು ಪಡಿಸುವುದಾಗಿ ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಚುನಾವಾಣಾ ಉಸ್ತುವಾರಿಯಾಗಿದ್ದ ಶ್ರೀ ವಿ.ಸೋಮಣ್ಣನವರು, ಆಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಹಾಲಿ ಅಧ್ಯಕ್ಷರಾಗಿರುವ ಶ್ರೀ ಸುರೇಶ್ ಗೌಡರವರು ಸೇರಿದಂತೆ ಎಲ್ಲಾ ನಾಯಕರು ಘೋಷಣೆ ಮಾಡಿದ್ದರು. ಗೃಹ ಸಚಿವರಾಗಿದ್ದ ಶ್ರೀ ಬಸವರಾಜ್ ಬೊಮ್ಮಾಯಿಯವರು ಸಹ ಈ ಯೋಜನೆ ಮಂಜೂರಾತಿಗೆ ಸಹಕರಿಸಿದ್ದರು.

ಇಂದು ಎಲ್ಲರೂ ಸಹ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಎಕ್ಸ್ ಪ್ರೆಸ್ ಕೆನಾಲ್ ನಿಂದ ಭವಿಷ್ಯದಲ್ಲಿ ಆಗುತ್ತಿದ್ದ ಅನಾಹುತಕ್ಕೆ ಕಡಿವಾಣ ಹಾಕಿದ್ದಾರೆ. ಸಮಾವೇಶದಲ್ಲಿ ರಾಜ್ಯಕ್ಕೆ ಮತ್ತು ತುಮಕೂರು ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಬೃಹತ್ ಕೊಡುಗೆ ಸಿಗುವ ಆಶಾ ಭಾವನೆಯಿದೆ.

ಪಕ್ಷಾತೀತವಾಗಿ ರಾಜ್ಯ ಮಟ್ಟದ ಸರ್ವಪಕ್ಷಗಳ ನಾಯಕರು ಸಹ ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಒಗ್ಗಟ್ಟಾಗುವ ಆಶಾಭಾವನೆ ಚಿಗರು ಹೊಡೆದಿದೆ.  ಸ್ವತಃ ಮುಖ್ಯ ಮಂತ್ರಿಯವರೇ ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಲು ಚಿಂತನೆ ನಡೆಸಿದ ಹಾಗೆ ಕಾಣುತ್ತಿದೆ.