22nd December 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಕೆರೆಗಳನ್ನು ನುಂಗಿ ನೀರು ಕುಡಿದಿರುವ ಬಗ್ಗೆ ಸದನಗಳಲ್ಲಿ ಉತ್ತಮ ಚರ್ಚೆ ಆಗುತ್ತಿದೆ. ಅಂಕಿ ಅಂಶಗಳ ಪ್ರಕಾರ ಕೆರೆ ಕಳ್ಳರು, ಕರಾಬು ಹಳ್ಳಗಳ ಕಳ್ಳರ ಬಗ್ಗೆ ಉತ್ತಮ ಚರ್ಚೆ ಆರಂಭವಾಗಿದೆ.

ಮುಖ್ಯ ಮಂತ್ರಿಯವರು ಈ ಬಗ್ಗೆ ಸಮಗ್ರ ತನಿಖೆ ಮಾಡಿಸುವ ಘೋಷಣೆ ಮಾಡಿದ್ದಾರೆ. ಕೆಲವು ಶಾಸಕರು ಕೇವಲ ಬೆಂಗಳೂರಿನ ಕೆರೆ-ಕರಾಬುಹಳ್ಳಗಳ ಕಳ್ಳರ ತನಿಖೆ ಜೊತೆಗೆ ರಾಜ್ಯದ ಎಲ್ಲಾ ಗ್ರಾಮಗಳ ಕೆರೆ-ಕರಾಬು ಹಳ್ಳಗಳ ಕಳ್ಳರ ಬಗ್ಗೆಯೂ ತನಿಖೆ ನಡೆಯಲಿ ಎಂದಿದ್ದಾರೆ.

ಈ ವರ್ಷವಂತೂ ಕೆರೆ-ಕರಾಬುಹಳ್ಳಗಳ ಕಳ್ಳರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೋಟಿ ಗಟ್ಟಲೆ ಹಾಳಾಗಿದೆ. ಮಾಧ್ಯಮಗಳಲ್ಲಿ ಬೆಂಗಳೂರಿನ ಬಗ್ಗೆ ಮಾತ್ರ ಚರ್ಚೆ ಆಗುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಹಿಡಿಶಾಪ ಹಾಕುತ್ತಿದ್ದಾರೆ.

ನ್ಯಾಯಾಲಯಗಳ ಆದೇಶ, ಎನ್.ಜಿ.ಟಿ ಆದೇಶಗಳು ಕೇವಲ ಕಡತಗಳಲ್ಲಿ ಮಾತ್ರ ಜಾರಿಯಾಗುತ್ತಿವೆ.ನೈಜತೆಯೇ ಬೇರೆ ಆಗಿದೆ. ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಕೆರೆ-ಕರಾಬುಕಳ್ಳರ ತನಿಖೆ ಜೊತೆಗೆ, ಕಳ್ಳರ ವೈಯಕ್ತಿಕ ಹಣದಿಂದಲೇ ತೆರವುಗೊಳಿಸಲು ಬಿಲ್ ಪಾಸ್ ಮಾಡುವುದು ಸೂಕ್ತವಾಗಿದೆ.

ಇನ್ನೂ ಮುಂದಾದರೂ ಕೆರೆ-ಕರಾಬುಹಳ್ಳಗಳ ಕಳ್ಳರಿಗೆ ಗಲ್ಲು ಶಿಕ್ಷೆ ಘೋಷಣೆ ಮಾಡಿದರು, ತಪ್ಪೇನಿಲ್ಲ. ಒತ್ತುವರಿದಾರರು, ಕಳ್ಳರ ಜೊತೆಗೆ, ಅದನ್ನು ನೋಡಿಕೊಂಡು ಸುಮ್ಮನೆ ಕುಳಿತಿರುವ ಅಧಿಕಾರಿಗಳಿಗೂ ಗಲ್ಲು ಶಿಕ್ಷೆ ಘೋಷಣೆ ಅಗತ್ಯವಾಗಿದೆ.

ಸರ್ಕಾರ ಮನಸ್ಸು ಮಾಡಿದರೆ, ಕೆರೆ-ಕರಾಬುಹಳ್ಳಗಳ ಕಳ್ಳರನ್ನು ಹಿಡಿಯುವುದು ಬಹಳ ಸುಲಭ, ಪೂರ್ವಿಕರು ಗ್ರಾಮನಕ್ಷೆಗಳಲ್ಲಿ ಪಕ್ಕಾ ಕೆರೆ-ಕಟ್ಟೆ-ಕರಾಬುಗಳ ಬಗ್ಗೆ ದಾಖಲೆ ಮಾಡಿದ್ದಾರೆ.ಗೂಗಲ್ ದೊರೆ ಎಲ್ಲರ ಬಣ್ಣವನ್ನು ಕ್ಷಣ ಮಾತ್ರದಲ್ಲಿ ಬಯಲು ಮಾಡಲಿದ್ದಾನೆ. ಆದರೇ ಸರ್ಕಾರಕ್ಕೆ  ಬದ್ಧತೆ ಬೇಕಷ್ಟೆ.

ಒಂದು ವೇಳೆ ಬೊಮ್ಮಾಯಿರವರು ಸದನದಲ್ಲಿ ಘೋಷಣೆ ಮಾಡಿದಂತೆ ತನಿಖೆ ಮಾಡಿಸಿದರೆ, ಒತ್ತುವರಿ ತೆರವುಗೊಳಿಸಿದರೆ, ಇದೊಂದು ಐತಿಹಾಸಿಕ ನಿರ್ಧಾರವಾಗಲಿದೆ. ಅವರ ಜೀವನದ ಸಾರ್ಥಕತೆ ಆಗಲಿದೆ. ಪರಿಸರಕ್ಕೆ ನೀಡಿದ ಬೃಹತ್ ಕೊಡುಗೆ ಆಗಲಿದೆ.