TUMAKURU:SHAKTHIPEETA FOUNDATION
‘ಪ್ರಪಂಚ ಬದಲಾಗಿದೆ’ ಎನ್ನುತ್ತೇವೆ, ಆದರೇ ಜನರ ಭಾವನೆಗಳು, ಒಳಮರ್ಮ, ಕೆಲಸ ಆಗಬೇಕಾದಾಗ ಆಡುವ ನಾಟಕ, ನಂತರ ಅವರ ನಿರ್ಧಾರಗಳು ನಿಜಕ್ಕೂ ಆಶ್ಚರ್ಯ ತರುತ್ತದೆ. ದ್ವೇಷ, ಅಸೂಯೇ, ಎಷ್ಟು ದಿವಸ ಈ ಬದುಕು. ಬದುಕಲು ಇಷ್ಟೆಲ್ಲಾ ಅವತಾರ ಬೇಕಾ ಎನಿಸುತ್ತಿದೆ.
‘ಮೌನ’ ಎಲ್ಲದಕ್ಕೂ ಉತ್ತರ ಎನ್ನುವ ಅನುಭವಿಗಳ ಮಾತು ಅರ್ಥಪೂರ್ಣವಾಗಿದೆ. ನಾವು ಮಕ್ಕಳಿಗೆ ಎಲ್ಲವನ್ನೂ ಹೇಳುತ್ತೇವೆ, ಆದರೇ ‘ಮಾನವೀಯತೆ’ ಕಲಿಸುವುದನ್ನು ಮರೆಯುತ್ತೇವೆ. ಆ ಕೊರತೆ ಇಂದು ಈ ವ್ಯವಸ್ಥೆಗೆ ಕಾರಣವಾಗಿರಬಹುದು.
‘ನಂಬಿಕೆ’ ಎನ್ನುವ ಪದದ ಅರ್ಥ, ತನ್ನ ತನವನ್ನು ಕಳೆದುಕೊಂಡಿದೆ. ಎಲ್ಲದಕ್ಕೂ ನನ್ನ ‘ಹಣೆಬರಹ’ ಎಂಬ ಮಾತು ಮಾತ್ರ ಎಲ್ಲರಿಗೂ ಅನ್ವಯ. ‘ನೆಮ್ಮದಿ’ ಎಂಬ ಪದದ ಹುಡುಕಾಟ ಎಲ್ಲರನ್ನೂ ಕಾಡುತ್ತಿದೆ.
ನನಗೆ ಆತ್ಮೀಯವಾಗಿರುವ ನಿವೃತ್ತ ಅಧಿಕಾರಿಯವರ ಮನೆಗೆ ಭೇಟಿ ನೀಡಿದ್ದೆ. ಅವರ ಕುಟುಂಬ, ಅವರ ಒಡನಾಟ, ವ್ಯವಹಾರ, ಬಹುತೇಕ ಎಲ್ಲವೂ ನನಗೆ ಗೊತ್ತು. ಆದರೇ ಈಗ ಅವರ ಜೀವನದ ಪಯಣ ಬಹಳ ‘ದುರಂತ’ ಎನಿಸಿತು.
ಮನೆಯಲ್ಲಿ ಇರುವ 9 ಜನರನ್ನು ನಾನು ಪ್ರತ್ಯೇಕವಾಗಿ ಮಾತನಾಡಿಸಿದೆ, ಆ ಕುಟುಂಬದ ಒಂದು ವ್ಯವಹಾರ ಜಟಿಲವಾಗಿತ್ತು. ಖಡಕ್ ಆಗಿ ಹೇಳುತ್ತಿದ್ದ ನನಗೆ, ಏಕೋ ಮೌನವಾಗಿ ಎಲ್ಲರಿಗೂ ಕೈಮುಗಿದು, ‘ಶಕ್ತಿದೇವತೆ’ ಯೇ ನಿಮ್ಮನ್ನು ಬದಲಾಯಿಸಬಹುದು ಎಂದು ಹೇಳಿ, ಒಂದಿಷ್ಟು ಜೀವನದ ಹರಟೆ/ ಉಪದೇಶ ಮಾಡಿ, ‘ಚಾಡಿ’ ಮಾತಿನ ಹಾಸ್ಯಚಟಾಕಿ ಹಾರಿಸಿ ಸುಮ್ಮನೆ ಬಂದೆ.
ಒಂದು ವಾರದೊಳಗೆ ಮತ್ತೆ ಕರೆ ಬಂದಾಗ, ಏನಪ್ಪಾ ಇದು ‘ಗ್ರಹಚಾರ’ ಎಂದು ಕೊರಗಿ ಕೊಂಡೆ, ಒಲ್ಲದ ಮನಸ್ಸಿನಿಂದಲೇ ಅವರ ಮನೆಗೆ ಹೋದೆ. ಅಂದು ನೆಲದ ಮೇಲೆ 10 ಜನರೂ ಕುಳಿತು ಊಟಮಾಡಿದ ರೀತಿ ನೋಡಿದರೇ ಏನೋ ‘ಬದಲಾವಣೆ’ ಆಗಿರಬಹುದು ಎಂದು ಕೊಂಡೆ.
ಒಬ್ಬರನ್ನು ಒಬ್ಬರೂ ಅರ್ಥಮಾಡಿಕೊಂಡಿದ್ದರು, ಜೊತೆಗೆ ‘ಜೀವನದ ನಾಟಕ’ ದ ಅರಿವು ಅವರೆಲ್ಲರಿಗೂ ಆಗಿತ್ತು. ಅವರ ಸಮಸ್ಯೆ ಹಿಮದಂತೆ ಕರಗಿ ಹೋಗಿತ್ತು. ಅವರ ಮಾತು ಕೇಳಿ ಎಲ್ಲರಿಗೂ ಕೈಮುಗಿದು ಹೊರಟಾಗ, ನನಗೆ ಆದ ಅನುಭವ ನಿಜಕ್ಕೂ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.
ಮುಕ್ತ ಮನಸ್ಸಿನಿಂದ, ಯಾವುದೇ ನಾಟಕವಿಲ್ಲದ ಮಾತುಗಳಿಗೆ ‘ಇನ್ನೂ ಬೆಲೆ’ ಇದೆ ಎನಿಸಿತು. ನೊಂದ ಮನಸ್ಸುಗಳಿಗೆ, ‘ಜೀವನದ ಪಾಠ’ ಮಾಡುವ ಜನರಿಗೆ ಕೊರತೆ ಇದೆ ಎನಿಸಿತು. ನನ್ನ ‘ಜೀವನ ಸಾರ್ಥಕ’ ಎನಿಸಿತು.
ನಾನು ಹೇಳಿದ್ದ ‘ಯಾವ ಹುತ್ತದಲ್ಲಿ ಯಾವ ಹಾವೋ ?’ ನೀವು ಈ ಪ್ರಪಂಚದಲ್ಲಿ ‘ಎಷ್ಟು ದಿವಸ ಬದುಕುತ್ತೀರಿ’, ನಿಮ್ಮ ‘ಇಷ್ಟದ ದೇವರ ಮುಂದೆ ಕುಳಿತು ಆತ್ಮಾವಲೋಕನ’ ಮಾಡಿಕೊಳ್ಳಿ, ಅವರ ಮನಸ್ಸಿನ ಬದಲಾವಣೆಗೆ ಮೈಲಿಗಲ್ಲಾಗಿದೆ. ಜೈ ಮಾತಾಜಿ.
– ಅಗೋಚರ ಶಕ್ತಿ