ಕರ್ನಾಟಕ ರಾಜ್ಯ ಸರ್ಕಾರ ಇದೂವರೆಗೂ 6 ಗ್ಯಾರಂಟಿಗಳ ಅನುಷ್ಠಾನದ ಸದ್ಧು ಮಾಡುತ್ತಿದೆ. ಈಗ ‘7 ನೇ ಗ್ಯಾರಂಟಿ’ ಯಾಗಿ, ‘ನೀರಾವರಿ ಮತ್ತು ಕೃಷಿ’ ಯೋಜನೆಗಳನ್ನು, ಮಾನ್ಯ ಉಪಮುಖ್ಯಮಂತ್ರಿಯವರು, ಜಲಸಂಪನ್ಮೂಲ ಸಚಿವರು ಹಾಗೂ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಘೋಷಣೆ ಮಾಡಿದ್ದಾರೆ.
ವಿಶೇಷ ಎಂದರೆ ಕೇಂದ್ರ ಸರ್ಕಾರವೂ ಕೈಜೊಡಿಸಬೇಕು ಎಂದಿದ್ದಾರೆ. ಅದೇ ಸಮಾರಂಭದಲ್ಲಿ ಹಾಜರಿದ್ದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು, ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಖಚಿತ ನಿರ್ಧಾರ ಪ್ರಕಟಿಸಿದ್ದಾರೆ.
‘ಇದೊಂದು ಐತಿಹಾಸಿಕ ನಿರ್ಧಾರ’ ಎಂದರೆ ತಪ್ಪಾಗಲಾರದು. ಈ ಗ್ಯಾರಂಟಿ ಯೋಜನೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಾಗುವ ರೀತಿ ಮಾತನಾಡಿದ್ದಾರೆ. ಈಗ ಕೇಂದ್ರ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿರುವ ಎನ್.ಡಿ.ಎ ಸರ್ಕಾರದಲ್ಲಿ ಭಾಗಿಯಾಗಿರುವ, ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯ ಬೆರೆಸದೆ ತಮ್ಮ ತಮ್ಮ ಪಕ್ಷದ ಸ್ಪಷ್ಠ ಅಭಿಪ್ರಾಯಗಳನ್ನು ಘೋಷಣೆ ಮಾಡುವುದು ಸೂಕ್ತವಾಗಿದೆ.
ಈ ಎರಡು ಯೋಜನೆಗಳ ಬಗ್ಗೆ ಸರ್ಕಾರಗಳೊಂದಿಗೆ ನಿರಂತರವಾಗಿ ಶ್ರಮಿಸುತ್ತಿರುವ ನಮ್ಮಂತಹವರಿಗೆ ನಿಜಕ್ಕೂ ಖುಷಿಯಾಗಿದೆ. ಮುಂದಿನ ಆಯವ್ಯಯದಲ್ಲಿ ಮಂಡಿಸಿ, ಯೋಜನೆಯ ಬಗ್ಗೆ ವಿಶೇಷ ಅಧಿವೇಶನ ನಡೆಸಿ, ರೂಪುರೇಷೆಗಳನ್ನು ಸಿದ್ಧಪಡಿಸುವುದು ಅಗತ್ಯವಾಗಿದೆ.
ಈ ಯೋಜನೆ ‘ನಂಬರ್ ಒನ್ ಕರ್ನಾಟಕ @ 2047 ಮತ್ತು ವಿಕಸಿತ ಭಾರತ @ 2047’ ಯೋಜನೆಗೆ ಪೂರಕವಾಗಲಿದೆ. ಜನರ ಜೀವನಾಡಿಯಾಗಲಿದೆ.
