15th September 2024
Share

ಶಕ್ತಿಪೀಠ ಫೌಂಡೇಷನ್ ಸ್ಥಾಪನೆಗೆ ಭಾರತ ದೇಶದ, ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ. ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿ ಗ್ರಾಮದೇವತೆಯಾದ ಶ್ರೀ ಗಂಗಮಲ್ಲಮ್ಮ ದೇವಿ ಆರಾಧನೆಯೇ ನನಗೆ ಪ್ರೇರಣೆಯಾಗಿದೆ.

 ಆಂದ್ರ ಪ್ರದೇಶದಿಂದ ಬಂದು ನಮ್ಮೂರಿನಲ್ಲಿ ತಾಯಿ ನೆಲಸಿದ್ದಾಳೆ ಎಂಬ ಇತಿಹಾಸವಿದೆ, ಇದು  ಕುಂಚಿಟಿಗರ ಜಾತಿಯ ಗಾಳೇರು ಬೆಡಗುರವರ ಮನೆ ದೇವರು, ಕರ್ನಾಟಕ ಮತ್ತು ಆಂದ್ರ ಎರಡು ರಾಜ್ಯಗಳ ಭಕ್ತರಿದ್ದಾರೆ. ನಮ್ಮೂರಿನಲ್ಲಿ ನೆಲಸಿರುವ ಗ್ರಾಮದೇವತೆಯೂ ಹೌದು. 

  ನಮ್ಮ ತಂದೆ ದಿ.ಕೆ.ಎಸ್.ರಾಮಲಿಂಗಯ್ಯನವರು ಮತ್ತು ತಾಯಿ ಶ್ರೀಮತಿ ಪಾರ್ವತಮ್ಮನವರ ಆರೋಗ್ಯ ಸರಿಯಿಲ್ಲದಿದ್ದಾಗ ಅದಲಗೆರೆ ಶಾಲೆಯಲ್ಲಿ ಹಿಂದಿ ಮಾಸ್ಟರ್ ಆಗಿದ್ದ ಶ್ರೀ ಹನುಂತಪ್ಪನವರ ಸಲಹೆಯಂತೆ ಶ್ರೀ ದೇವಿ ಪುರಾಣ ಪುಸ್ತಕ ಓದಲು ಆರಂಭಿಸಿದೆ, ಆ ಪುಸ್ತಕದಲ್ಲಿ ದೇವಿಗೆ ಅರಿಕೆ ಮಾಡಿದ ಯಾವುದೇ ಕೆಲಸ ಗ್ಯಾರಂಟಿ ಆಗಲಿದೆ ಎಂಬ ವಿಚಾರ ಮನವರಿಕೆಯಾಯಿತು.

ಹಠ:- ದಿನಾಂಕ:01.08.1988 ರಂದು ಕುಂದರನಹಳ್ಳಿ ಗ್ರಾಮದಲ್ಲಿರುವ ಶ್ರೀ ಗಂಗಮಲ್ಲಮ್ಮ ದೇವಾಲಯದಲ್ಲಿ ಅರಿಕೆ ಮಾಡಿ ನಮ್ಮೂರಿಗೆ ಹೊಂದಿಕೊಂಡಿರುವ ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್‌ನಲ್ಲಿರುವ ಸುಮಾರು 930 ಎಕರೆ ಸರ್ಕಾರಿ ಜಮೀನಿನಲ್ಲಿ ಯಾವುದಾದರೊಂದು ಬೃಹತ್ ಕೈಗಾರಿಕೆ ಆರಂಭಿಸಲು ಶಕ್ತಿಕೊಡು ತಾಯಿ ದೇವಾಲಯ ನಿರ್ಮಿಸುತ್ತೇವೆ ಎಂದು ಪ್ರಾರ್ಥಿಸಿದೆ.

  ದಿನಾಂಕ: 01.08.1988 ರಿಂದ ಒಂದು ದಿವಸವೂ ಬಿಡದೇ, ಒಂದು ಪುಟವನ್ನಾದರೂ ಶ್ರೀ ದೇವಿ ಪುಸ್ತಕ ಓದುವ ನಾನು, ಅಕಾಸ್ಮಾತ್ ಒಂದು ದಿವಸ ಓದುವುದನ್ನು ಮರೆತರೆ ಇಡೀ ಪುಸ್ತಕವನ್ನೆ ಆ ದಿವಸ ಓದುವ ಶಿಕ್ಷೆಯನ್ನು ಸ್ವಯಂ ಹಾಕಿಕೊಂಡಿದ್ದೇನೆ.

  ಅಂದಿನಿಂದ ಇಲ್ಲಿಯವರೆಗೂ ನಿರಂತರ ಹೋರಾಟದ ಫಲವಾಗಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್ (ಎಚ್.ಎ.ಎಲ್) ವತಿಯಿಂದ ಸುಮಾರು ರೂ 6300 ಕೋಟಿ ವೆಚ್ಚದಲ್ಲಿ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಮಂಜೂರಾಗಿದೆ. ದಿನಾಂಕ: 03.01.2016 ರಂದು ಭಾರತ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಅಡಿಗಲ್ಲು ಹಾಕಿದ್ದಾರೆ. ತುಮಕೂರು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಕೊಡುಗೆ ಅಪಾರ, ಅಧಿಕಾರ ಇರಲಿ, ಇಲ್ಲದಿರಲಿ ಸುಮಾರು 31 ವರ್ಷದ ಈ ಹೋರಾಟದಲ್ಲಿ ಅವರೇ ಮುಂಚೂಣೆ ನಾಯಕತ್ವ. ಅಲ್ಲದೇ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ಜಮೀನು ಉಳುಮೆ ಮಾಡುತ್ತಿದ್ದ ರೈತರು ಸೇರಿದಂತೆ ದೇಶದ ನೂರಾರು ಜನರ ಸಹಕಾರ ಅವಿಸ್ಮರಣೀಯ. ಇದೊಂದು ಹಠದ ಮಾರ್ಗವಾಗಿತ್ತು.