ಮಾತೆಗೆ ಅರಿಕೆ ಮಾಡಿದಂತೆ ಕುಂದರನಹಳ್ಳಿಯಲ್ಲಿ ಶ್ರೀ ಗಂಗಮಲ್ಲಮ್ಮ ದೇವಾಲಯ ನಿರ್ಮಾಣ ಆರಂಭಿಸಿದಾಗ ನನಗೆ ಅರಿವೆ ಇಲ್ಲದಂತೆ ಶಕ್ತಿಪೀಠಗಳ ಪ್ರತಿಮೆಗಳ ಸ್ಥಾಪನೆಯ ವಿಷಯ ಬಂತು, ಸತ್ಯ ಹೇಳಬೇಕೆಂದರೆ ಆವರೆಗೂ ನನಗೆ ಶಕ್ತಿಪೀಠಗಳ ಮಹತ್ವವೇ ತಿಳಿದಿರಲಿಲ್ಲ, ನಾನು ಹಲವಾರು ಶಕ್ತಿಪೀಠಗಳಿಗೆ ಭೇಟಿ ನೀಡಿದ್ದರೂ ಇತಿಹಾಸವೇ ಅರಿವಿರಲಿಲ್ಲ.
ದೇವಾಲಯ ನಿರ್ಮಾಣ ಆರಂಭವಾಗಿ ಎಲ್ಲಾ ಸುಸೂತ್ರವಾಗಿ ನಡೆಯುತ್ತಿದ್ದರೂ ಇಲ್ಲಿ ಸ್ಥಾಪಿಸಲು ದೇವಿ ಏಕೋ ಏನೋ ಅವಕಾಶ ನೀಡಲಿಲ್ಲ ಅಡಚಣೆಯಾಯಿತು. ಹತ್ತಿರವಿದ್ದವರೇ ದೂರವಾದರೂ ನನಗೆ ಆಗ ಅರಿವಾಯಿತು ದೇವಿಗೆ ಬೇರೆ ಕಡೆ ಶಕ್ತಿಪೀಠ ಸ್ಥಾಪನೆಗೆ ಮನಸ್ಸು ಇರಬೇಕು. ಯಾರು ಏನು ಮಾತಾನಾಡಿದರೂ ಪ್ರತಿ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ.
ಬೇರೆ ಕಡೆ ಜಮೀನು ಹುಡುಕಾಟ:- ನಾನು ಹಲವಾರು ಸ್ಥಳಗಳಲ್ಲಿ ಯಾವುದಾದರೊಂದು ಒಂದು ಕ್ಯಾಂಪಸ್ ನಿರ್ಮಿಸಲು ಸ್ಥಳ ಹುಡುಕಾಟ ಆರಂಭಿಸಿದೆ, ತುಮಕೂರು, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಸುಮಾರು ನೂರಾರು ಕಡೆ 2500 ಎಕರೆ ಜಮೀನುಗಳಿಗೆ ಭೇಟಿ ನೀಡಲಾಯಿತು. ಚನ್ನೈ- ಬೆಂಗಳೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಹಾಗೂ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಘೋಷಣೆಯಾದಾಗಿನಿಂದ ಈ ಕಾರಿಡಾರ್ ಅಕ್ಕ-ಪಕ್ಕ ಒಂದು ಯೋಜನೆ ಆರಂಭಿಸ ಬೇಕು ಎನ್ನುವ ಹಂಬಲದೊಂದಿಗೆ ಕೊನೆಗೂ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಜವಗೊಂಡನಹಳ್ಳಿ(ಜೆಜಿ ಹಳ್ಳಿ) ಹೋಬಳಿ, ಬಗ್ಗನಡು ಕಾವಲ್‌ನಲ್ಲಿ ನಾನು ಮತ್ತು ನನ್ನ ಸ್ನೇಹಿತ ಜೊತೆಯಾಗಿ ದಿನಾಂಕ:26.11.2014 ರಂದು 12 ಎಕರೆ 15 ಗುಂಟೆ ಜಮೀನನ್ನು ಕ್ರಯಮಾಡಿಕೊಳ್ಳಲು ಕರಾರು ಮಾಡಿಕೊಳ್ಳಲಾಗಿತ್ತು.
ಈ ಜಮೀನಿನಲ್ಲಿ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್ ಆರಂಭಿಸಲು ಚಿಂತನೆ ನಡೆಸಲಾಯಿತು. ಆದರೆ ನನ್ನ ಸ್ನೇಹಿತ ನನಗೆ ಸಂಪೂರ್ಣ ಸಹಕಾರ ನೀಡಲಿಲ್ಲ. ಆತ ಒಂದು ರೆಸಾರ್ಟ್ ಮಾಡುವ ಚಿಂತನೆಯಲ್ಲಿದ್ದರು. ದಿನಾಂಕ:18.03.2018 ರಂದು ಯುಗಾದಿಯ ದಿವಸ ಜಮೀನಿನ ಮಧ್ಯೆಭಾಗ ಗುರುತಿಸಿ ಸರಳವಾಗಿ ಭೂಮಿ ಪೂಜೆ ಮಾಡಿದೆವು. ದಿನಾಂಕ: 08.02.2019 ರಂದು ವೃತ್ತದ ಮತ್ತು ಭಾರತ ನಕ್ಷೆಯ ಮಧ್ಯೆಭಾಗ ಗುರುತಿಸಿ ಸರಳವಾಗಿ ಭೂಮಿ ಪೂಜೆ ಮಾಡಿದೆವು. ಮಾತೆಯ ಅನುಗ್ರಹದಂತೆ ನನ್ನ ಸ್ನೇಹಿತನ ಜಮೀನನ್ನು ಸಹ ನಾವೇ ಕ್ರಯ ಮಾಡಿ ಕೊಂಡೆವು.
ಸ್ಥಳ ಇತಿಹಾಸ :- ಹಿಂದಿಯಲ್ಲಿ ಬಾಗ್ ಎಂದರೆ ಹುಲಿ. ಹುಲಿ ದೇವಿಯ ವಾಹನ, ಬಾಗ್ ಎನ್ನುವುದು ಬಗ್ಗನಡು ಕಾವಲ್ ಆಗಿರಬಹುದೇ ಎಂದು ಊಹೆ ಮಾಡಿದೆ, ಇದು ಹುಲಿಯ ಕಾವಲ್ ಶಕ್ತಿಪೀಠಕ್ಕೂ ಈ ಸ್ಥಳಕ್ಕೂ ಏನೋ ಸಂಬಂಧವಿರಬೇಕು. ಇಲ್ಲಿ ನಮ್ಮ ಜಮೀನಿನಲ್ಲಿಈಗಾಗಲೇ ಶ್ರೀ ಚೌಡೇಶ್ವರಿ ದೇವಾಲಯವಿದೆ. ಸ್ವಲ್ಪದೂರದಲ್ಲಿ ಯಾರೋ ಎಲ್ಲಿಂದಲೋ ಬಂದು ಶ್ರೀ ಶಿವಲಿಂಗ ಸ್ಥಾಪಿಸಿದ್ದಾರೆ. ಅದ್ದೂರಿಯಾಗಿ ವೈಭವವಾಗಿ ನಡೆಯುತ್ತಿದ್ದು ಈಗ ಪಾಳು ಬಿದ್ದಿದೆ ಎಂಬ ವಿಷಯವನ್ನು ಸಂಗ್ರಹಿಸಿದೆ. ನಮ್ಮ ಜಮೀನಿನಿಂದ ಸ್ವಲ್ಪ ದೂರದಲ್ಲಿ ಒಂದು ಆಶ್ರಮವಿದೆ, ಅಲ್ಲಿ ದೇವಿ ಆರಾಧನೆ ನಡೆಯುತ್ತಿದೆ, ವಿಶೇಷವೆಂದರೆ ಮುಸ್ಲಿಂ ಭಕ್ತನ ಒಂದು ಗದ್ದುಗೆ ಇರುವುದು ವಿಶಿಷ್ಠ. ಅಲ್ಲದೇ ವಾಣಿವಿಲಾಸ ಕಾಲುವೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಇಂದು ಶ್ರೀ ವೀರಭದ್ರನ ವಿಗ್ರಹ ದೊರೆತಿದೆ ಎಂದು ಅಲ್ಲಿನ ಜನರು ನನಗೆ ತಿಳಿಸಿದರು.