25th April 2024
Share

ಬಹುಷಃ ಜನವರಿ ಮೂರನೇ ತಾರೀಖಿಗೂ ಗುಬ್ಬಿ ಹೆಚ್.ಎ.ಎಲ್ ಗೂ ಏನಾದರೂ ಸಂಬಂಧವಿದೆಯಾ ?

2016 ರ ಜನವರಿ ಮೂರನೇ ತಾರೀಖು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಜಿಯವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ಗೆ ಆಗಮಿಸಿ ಸುಮಾರು ರೂ 6300 ಕೋಟಿ ವೆಚ್ಚದ ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕದ ಶಂಕು ಸ್ಥಾಪನೆ ಮಾಡಿದ್ದು ಇತಿಹಾಸ.

ಅಂದು ಮೋದಿಜಿ 2018  ರೊಳಗೆ ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕ ಆರಂಭವಾಗಿ ಸ್ಥಳೀಯ ರೈತರ ಮಕ್ಕಳಿಗೆ ಉದ್ಯೋಗ ದೊರೆಯಲಿದೆ ಎಂದು ಬಹಿರಂಗವಾಗಿ ಪ್ರಕಟಿಸಿದ್ದರು. ರೈತರ ಮಕ್ಕಳಲ್ಲಿ ಮಂದಹಾಸ ತುಂಬಿ ಕರತಾಡನ ಮುಗಿಲು ಮುಟ್ಟಿತ್ತು. ಶಬರಿ ರಾಮನಿಗೆ ಕಾಯುವ ರೀತಿಯಲ್ಲಿ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ.

ಅವರ ಹೇಳಿಕೆ ಪ್ರಕಾರ 2018 ರಲ್ಲಿ ಒಂದು ಹೊಸ ಹೆಲಿಕ್ಯಾಪ್ಟರ್ ಜೋಡಣೆ ಮಾಡಿ ಹಾರಿಸಲಾಗಿದೆ ಎಂದು ಹೆಚ್.ಎ.ಎಲ್ ರೆಕಾರ್ಡ್‌ನಲ್ಲಿ ದಾಖಲಿಸಿದ್ದಾರೆ.

ಪ್ರಸ್ತುತ ಹೆಲಿಕ್ಯಾಪ್ಟರ್ ಘಟಕ ಉತ್ಪಾದನೆ ಮಾಡಲು ಮದುವೆ ಹೆಣ್ಣು ಸಿಂಗಾರಗೊಂಡಂತೆ ಸಿದ್ಧವಾಗಿದೆ. ಮದುವೆ ಮಾಡಲು ಗಂಡು ಹೇಗೆ ಮುಖ್ಯವೋ ಹೆಲಿಕ್ಯಾಪ್ಟರ್ ಘಟಕ ಆರಂಭಿಸಲು ಕೇಂದ್ರ ಸರ್ಕಾರ ವರ್ಕ್ ಆರ್ಡರ್ ನೀಡುವುದು ಅಷ್ಟೇ ಮುಖ್ಯ. ಉಳಿದ ಕಾಮಗಾರಿಗಳು ಇನ್ನೂ ಮೂರು ವರ್ಷದವರೆಗೂ ನಡೆಯಲಿವೆ.

ದೆಹಲಿಯ ಮೂಲದ ಉನ್ನತ ಅಧಿಕಾರಿಗಳು ಬಹಳ ನೀರಿಕ್ಷೆಯಲ್ಲಿದ್ದಾರೆ ಬಹುಷಃ 2020 ರ ಜನವರಿ ಮೂರನೇ ತಾರೀಖು ತುಮಕೂರಿಗೆ ಮೋದಿಜಿ ಕಾರ್ಯಕ್ರಮವಿದೆ   ಹೆಚ್.ಎ.ಎಲ್ ಗೆ ಯುದ್ಧ ಹೆಲಿಕ್ಯಾಪ್ಟರ್ ತಯಾರಿಸಲು ಆದೇಶ ನೀಡಲಿದ್ದಾರೆ. ದೇಶ-ವಿದೇಶ ಯಾವುದೇ ಆಗಲಿ ನಮಗೆ ವರ್ಕ್ ಆರ್ಡರ್ ಬೇಕು ಎಂಬ ತವಕದಲ್ಲಿದ್ದಾರೆ. ವರ್ಕ್ ಆರ್ಡರ್ ನೀಡಿದ ತಕ್ಷಣವೇ ನಾವು ಲೋಕಾರ್ಪಣೆ ಮಾಡಲು ಸಿದ್ಧ ಎಂಬ ಗುಸು ಗುಸು ಮಾತಿದೆ.

ಆದರೇ ಬೆಂಗಳೂರಿನ ಮತ್ತು ಗುಬ್ಬಿಯ ಬಿದರೆಹಳ್ಳಕಾವಲ್ ಹೆಚ್.ಎ.ಎಲ್ ಘಟಕದವರು ಯಾವುದೇ ವಿಚಾರವನ್ನು ಬಾಯಿ ಬಿಡುತ್ತಿಲ್ಲ, ಇದು ಡಿಫೆನ್ಸ್ ನಾವು ಏನು ಹೇಳಲು ಬರುವುದಿಲ್ಲಾ, ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಉತ್ತರ ಸದಾ ದೊರೆಯಲಿದೆ.