22nd November 2024
Share

ಪ್ರಜಾಪತಿ ದಕ್ಷಬ್ರಹ್ಮ ಯಜ್ಞ ಮಾಡುವಾಗ ಮಗಳು ಸತಿ ಹಾಗೂ ಅಕೆಯ ಪತಿ ಈಶ್ವರನನ್ನು ಆಹ್ವಾನಿಸಲಿಲ್ಲ. ಕರೆಯದೇ ಇದ್ದರೂ ತನ್ನ ತಂದೆಯ ಮನೆಗೆ ಬಂದ ಸತಿಯನ್ನು ಎಲ್ಲರ ಮುಂದೆ ದಕ್ಷನು ಅವಮಾನ ಮಾಡಿದ. ಇದರಿಂದ ನೊಂದ ಸತಿ ಯಜ್ಞ ಕುಂಡಕ್ಕೆ ಬಿದ್ದಳು. ಈ ಪುಣ್ಯ ಸ್ಥಳ ಭಾರತ ದೇಶದ ಉತ್ತರಖಂಡಾ ರಾಜ್ಯದ ಹರಿದ್ವಾರ ಜಿಲ್ಲೆಯ ಕಂಕಲ್‌ನಲ್ಲಿದೆ. ಸುಟ್ಟ ಸತಿಯ ದೇಹವನ್ನು ಹೊತ್ತು ಈಶ್ವರನು ಇಹ ಪರಗಳ ಪರಿವೆಯಿಲ್ಲದೆ ಸಂಚರಿಸುವಾಗ  ಹೆದರಿದ ದೇವತೆಗಳು ಮಹಾವಿಷ್ಣುವಿನ ಮೊರೆಹೋದರು.

  ಆಗ ವಿಷ್ಣುವು ಸುದರ್ಶನ ಚಕ್ರದಿಂದ ಸತಿ ದೇಹವನ್ನು ಛಿದ್ರ-ಛಿದ್ರ ಮಾಡಿದ. ಇದರಿಂದ ಸತಿ ದೇಹದ ಭಾಗಗಳು ಚಿದ್ರ, ಚಿದ್ರವಾಗಿ ರಕ್ತದ ಕಣಗಳು ಸೇರಿದಂತೆ ಸುಮಾರು 6400 ಭಾಗಗಳಾಗಿ ವಿಶ್ವದ್ಯಾಂತ ಬಿದ್ದಿದ್ದು, ಅದರಲ್ಲಿ 108 ಕ್ಷೇತ್ರಗಳು ಪ್ರಾಮುಖ್ಯತೆ ಪಡೆದಿವೆ ಎಂಬ ಇತಿಹಾಸವಿದೆ, ಈ  ಸ್ಥಳಗಳೇ ಶಕ್ತಿಪೀಠಗಳಾಗಿವೆ ಎಂಬುದು ಐತಿಹ್ಯ,  108 ಶಕ್ತಿಪೀಠಗಳಲ್ಲಿ, 4 ಆದಿ ಶಕ್ತಿಪೀಠ, 9 ನವದುರ್ಗೆಯರು, 18 ಮಹಾಶಕ್ತಿಪೀಠ, 51 ಅಕ್ಷರ ಪೀಠಗಳು, ಮತ್ತು ಇತರೆ 57 ಉಪ ಪೀಠಗಳು ಎಂಬುದು ನಂಬಿಕೆ. ಕೆಲವರು 72 ಶಕ್ತಿಪೀಠಗಳಿವೆ ಎಂತಲೂ, ಕೆಲವರು 51 ಶಕ್ತಿಪೀಠಗಳಿವೆ ಎಂತಲೂ ದಾಖಲಿಸಿದ್ದಾರೆ. ಈ ಬಗ್ಗೆ ವಿವರವಾದ ಅಧ್ಯಯನ ಮಾಹಿತಿಗಳ ಸಂಗ್ರಹ ಆರಂಭವಾಗಿದೆ.

 ಭಾರತ ದೇಶದಲ್ಲಿ-41 ಅಕ್ಷರ ಪೀಠಗಳು, ಬಾಂಗ್ಲಾದೇಶದಲ್ಲಿ-4, ನೇಪಾಳದಲ್ಲಿ-3, ಪಾಕಿಸ್ತಾನದಲ್ಲಿ-1, ಶ್ರೀಲಂಕಾದಲ್ಲಿ-1 ಮತ್ತು ಟಿಬಿಟ್‌ನಲ್ಲಿ -1 ಸೇರಿದಂತೆ ಒಟ್ಟು 51 ಅಕ್ಷರ ಪೀಠಗಳು ಮತ್ತು ಉಳಿದ 57 ಶಕ್ತಿ ಪೀಠಗಳು ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿವೆ  ಅವುಗಳ ಸ್ಥಳ ಮತ್ತು ಎಲ್ಲಾ ಮಾಹಿತಿಗಳ ಸಂಗ್ರಹ ಕಾರ್ಯ ಹಾಗೂ ಅಧ್ಯಯನ ಆರಂಭಿಸಲಾಗಿದೆ.

ಭೂಮಿಯ ಮೇಲೆ  ಭಾರತದ ನಕ್ಷೆ ರಚಿಸಿ ಯಾವ ಸ್ಥಳದಲ್ಲಿ   ಶಕ್ತಿಪೀಠಗಳು ಇವೆಯೋ ಆ ಸ್ಥಳಗಳ ಪ್ರಕಾರ ಶಕ್ತಿ ದೇವತೆ ಶರೀರದ ಭಾಗದ ಪ್ರಾತ್ಯಕ್ಷಿಕೆ ಪ್ರತಿಷ್ಠಾಪಿಸುವುದು ಅಥವಾ ಸತಿಯ ದೇಹದ ಭಾಗಗಳ ಬಿದ್ಧ ಆಧಾರದ ಮೇಲೆ ಕೂದಲಿನಿಂದ ಆರಂಭಿಸಿ ಪಾದದವರೆಗೆ ಅಂಗಾಂಗಳ ಪ್ರಕಾರ ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸುವುದು ಎಂಬ ಚಿಂತೆ ನನ್ನನ್ನು ಕಾಡಿತು. ಕೊನೆಗೆ ಭಾರತ ನಕ್ಷೆಯಲ್ಲಿ ಸ್ಥಾಪಿಸಲು ತಾಯಿ ಆಶೀರ್ವದಿಸಿದ್ದಾರೆ. 

   ಭಾರತ ದೇಶದ, ಕರ್ನಾಟಕ ರಾಜ್ಯದ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಜವಗೊಂಡನಹಳ್ಳಿ(ಜೆಜಿ ಹಳ್ಳಿ)  ಹೋಬಳಿ, ಬಗ್ಗನಡು ಕಾವಲ್‌ನಲ್ಲಿ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್ ಆರಂಭಿಸಲು ಪೂರಕ ಚಟುವಟಿಕೆ ಆರಂಭವಾಗಿದೆ.

  ಒಟ್ಟು 12 ಎಕರೆ 15 ಗುಂಟೆ ಜಮೀನಿನ ಲೇ ಔಟ್ ಪ್ರಗತಿಯಲ್ಲಿದೆ. ಸುಮಾರು ಒಂದು ಎಕರೆಯಲ್ಲಿ ಭಾರತ ನಕ್ಷೆಯನ್ನು ಜಮೀನಿನ ಮೇಲೆ ಗುರುತು ಹಾಕಲಾಗಿದೆ. ಮೊಟ್ಟಮೊದಲಿಗೆ ಈ ಜಮೀನಿನಲ್ಲಿ ಜಲಸಂಗ್ರಹಾಗಾರ ನಿರ್ಮಿಸಿ ನೀರು ಸಂಗ್ರಹಮಾಡಲಾಗಿದೆ. ಇದೇ ಮೊದಲ ಗಂಗಾಮಾತೆ ದೇವಾಲಯವಾಗಿದೆ. ಇದು ಸಹ ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಗಳ ಪ್ರಾತ್ಯಕ್ಷಿಕೆಯಾಗಲಿದೆ.