9th October 2024
Share

 ತುಮಕೂರು ನಿಮ್ಜ್ ಮಂಜೂರಾಗುವ ಹಂತದಲ್ಲಿ ಜಿಲ್ಲೆಗೆ ಪವರ್ ಗ್ರಿಡ್ ಬರುವ ಅವಕಾಶ ಒದಗಿ ಬಂದಿದ್ದು ಇತಿಹಾಸ. ನೇಷನ್ -1  ಗ್ರಿಡ್ -1  ಎಂಬ ಘೋಷಣೆಯೊಂದಿಗೆ ದೇಶದಲ್ಲಿ ಎಲ್ಲಾ ಭಾಗದಲ್ಲಿ ಪೂರ್ಣಗೊಂಡು ಕೊನೆಯ ಕೊಂಡಿ ತುಮಕೂರು ಸಂಪರ್ಕ ಎಂಬ ಮಾಹಿತಿಯನ್ನು ನಮ್ಮ ಜಿಲ್ಲೆಯವರೇ ಆದ ಮುಖ್ಯ ಇಂಜಿನಿಯರ್ ಒಬ್ಬರು ನನ್ನ ಬಳಿ ಬಂದು ಹೇಳಿದರು.

 ಈ ಘಟಕ ಮಂಜೂರಾಗಿದ್ದು ಮಧುಗಿರಿಗೆ, ಅಲ್ಲಿಯೇ ಆಗ ಬೇಕಿತ್ತು, ಅಲ್ಲಿ ಖಾಲಿ ಭೂಮಿಯಲ್ಲಿ ಯೋಜನೆ ಆಗಿದ್ದರೆ ರೈತರಿಗೆ ಇಷ್ಟೊಂದು ಸಮಸ್ಯೆ ಅಗುತ್ತಿರಲಿಲ್ಲ. ಆದರೂ ರೈತರಿಗೆ ನೀಡುವ ಪರಿಹಾರ ನೋಡಿದರೆ, ರೈತರಿಗೆ ಸರ್ಕಾರಗಳು ಮಾಡುವ ದ್ರೋಹವೇ ಸರಿ. ವಿದ್ಯುತ್ ಮಾರಾಟದ ವಸ್ತು ಇದು ಲಾಭದಾಯಕ ವ್ಯವಹಾರ, ರೈತರಿಗೆ ಏಕೆ ಅನ್ಯಾಯ ಮಾಡಬೇಕು ಎಂಬ ಹೋರಾಟ ನ್ಯಾಯೋಚಿತವಾಗಿದೆ.

ಇದು ತುಮಕೂರಿನ ನಿಮ್ಜ್ ವ್ಯಾಪ್ತಿಯಲ್ಲಿಯೇ ಆಗಬೇಕು ಎಂದು ನಾನು ಮತ್ತು ನಮ್ಮ ಸ್ನೇಹಿತರೊಬ್ಬರೂ ಸೇರಿ ಆಗಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಗಮನ ಸೆಳೆದೆವು. ಜಮೀನು ಮಂಜೂರು ಮಾಡಿಸಲು ಹತ್ತಾರು ಭಾರಿ ಕೆ.ಐ.ಡಿ.ಬಿ ಗೆ ಸುತ್ತಾಡಿದೆವು. 

ದೇಶದ ಯಾವುದೇ ಮೂಲೆಯ ವಿದ್ಯುತ್ ಗ್ರಿಡ್ ಮೂಲಕ ಬರಲಿದೆ. ಇದರಿಂದ ರೈತರಿಗೆ ಮತ್ತು ಕೈಗಾರಿಕೆಗಳಿಗೆ ಅನೂಕೂಲವಾಗಲಿದೆ ಇಲ್ಲೆ ಘಟಕ ಆಗಲಿ ಎಂಬ ಮಹಾದಾಸೆ ನಮ್ಮದಾಗಿತ್ತು. ಬಹುಷ:  ಸಂಸದರು ಮತ್ತು ನಮ್ಮ ತಂಡ ಶ್ರಮಿಸಿದ ಎಲ್ಲಾ ಯೋಜನೆಗಳಲ್ಲಿ ಇದು ಹೆಚ್ಚು ರೈತರಿಗೆ ಅನಾನುಕೂಲ ಮಾಡಿದೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲೇಬೇಕು.

   ಘಟಕ ಆರಂಭವಾಗಿ ಲೈನ್‌ಗಳನ್ನು ಎಳೆಯುವಾಗ ನಮಗೆ ಅಲ್ಲಿನ ರೈತರು ಗ್ರಹಾಚಾರ ಬಿಡಿಸಿದರು. ಬಹುಷಃ ನಮಗೂ ಇದರ ಅರಿವು ಇರಲಿಲ್ಲ. ಸಮಯ ಮಿಂಚಿಹೋಗಿತ್ತು. ಜನರ ಶಾಪ ?

 ನಂತರ ಹೆಚ್ಚಿಗೆ ಪರಿಹಾರ ಕೊಡಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಲು ಯೋಚನೆ ಮಾಡಿ ಕೇಂದ್ರ ಸರ್ಕಾರದೊಂದಿಗೆ ಶ್ರೀ ಜಿ.ಎಸ್.ಬಸವರಾಜ್‌ರವರು ಪತ್ರ ಬರೆಯುವ ಮೂಲಕ ಚಾಲನೆ ನೀಡಿದರು. ರಾಜ್ಯ ಸರ್ಕಾರದ ಗಮನ ಸೆಳೆದು ರಾಜ್ಯ ಸರ್ಕಾರದಿಂದಲೂ ಕೇಂದ್ರ ಸರ್ಕಾರಕ್ಕೆ ಪತ್ರ ವ್ಯವಹರಿಸಲಾಯಿತು.

   ಇನ್ನೂ ಪ್ರಯೋಜನ ಆಗಿಲ್ಲ, ಕಳೆದ ಲೋಕಸಭಾ ಚುನಾವಣೆ ವೇಳೆ ಆ ಭಾಗದ ರೈತರು ಶ್ರೀ ಜಿ.ಎಸ್.ಬಸವರಾಜ್‌ರವರ ಬಳಿ ಬಂದು ಆಗಿದ್ದು ಆಗಿ ಹೋಗಿದೆ. ಈಗ ಭೂಮಿಗೆ ಪರಿಹಾರ ಕೊಡಿಸಿ ಎಂಬ ಮನವಿ ಮಾಡಿದ್ದರು.

   ಬಸವರಾಜ್‌ರವರು ಚುನಾವಣೆಯಲ್ಲಿ ಗೆದ್ದ ನಂತರ  ದಿನಾಂಕ:10.06.2019  ರಂದೇ ಕೇಂದ್ರ ಸರ್ಕಾರದ ವಿದ್ಯುತ್ ಸಚಿವರಿಗೆ ಪತ್ರ ಬರೆದು ಹೆಚ್ಚಿಗೆ ಪರಿಹಾರ ನೀಡಲು ಮನವಿ ಮಾಡಿದ್ದರು.  ನಗರ ಪ್ರದೇಶಗಳಲ್ಲಿ ಭೂಮಿಗೆ ಹೆಚ್ಚಿಗೆ ಪರಿಹಾರ ನೀಡಲು ಅಡಿಷನಲ್ ಸೆಕ್ರೆಟರಿರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ ವರದಿ ಪಡೆಯಲಾಗಿದೆ ಎಂಬ ಉತ್ತರ ಬಂದಿದೆ. ಪುನಃ ಸಂಸದರು ಇನ್ನೊಂದು ಪತ್ರ ಬರೆದಿದ್ದಾರೆ.

  ಪ್ರಸ್ತುತ ರೈತರು ಮತ್ತು ಪರಿಣಿತ ತಜ್ಞರು ಸಮಾಲೋಚನೆ ಸಭೆ ಸೇರಿ 1885  ರ ಟೆಲಿಗ್ರಾಫಿಕ್ ಆಕ್ಟ್, 2003 ಎಲೆಕ್ಟ್ರಿಕ್ ಆಕ್ಟ್ ಮತ್ತು ಸಮಿತಿಯ ವರದಿಯ ಅಂಶಗಳು ಏನು ಹೇಳುತ್ತಿವೆ, ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಒಂದು ನಿರ್ಣಯ ಮಾಡಿ  ಪ್ರಧಾನಿ ಮತ್ತು ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳ ಗಮನ ಸೆಳೆಯುವುದು ಅಗತ್ಯವಾಗಿದೆ.