21st November 2024
Share

ಮುಂದುವರೆದ ಭಾಗ

  ಶ್ರೀ ಕೆ.ಹೆಚ್,ಮುನಿಯಪ್ಪವರಿಗೆ ಮಾಜಿ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು ಪತ್ರ ಬರೆದ ನಂತರ ಬಿ.ಹೆಚ್ ರಸ್ತೆ ಅಗಲೀಕರಣಕ್ಕೆ ಹೊಸ ತಿರುವು ಪಡೆಯಿತು.

  ಮುಖ್ಯ ಇಂಜಿನಿಯರ್ ಶ್ರೀ ಓಂಕಾರಸ್ವಾಮಿಯವರ ಬಳಿ ಸಮಾಲೋಚನೆ ನಡೆಸಿದಾಗ ನಾನು ಸಹ ತುಮಕೂರಿನಲ್ಲಿ ಓದಿದ್ದು ಬಿ.ಹೆಚ್ ರಸ್ತೆ ಅಭಿವೃದ್ಧಿ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೂ. ಇಇ ಶ್ರೀ ಶಂಕರೇಗೌಡರವರು, ಕೇಂದ್ರ ಸರ್ಕಾರದ ಶ್ರೀ ಗಂಗಣ್ಣನವರು  ಹೀಗೆ ಒಂದು ತಂಡವೇ ತುಮಕೂರು ನಗರದ 0 ಕೀಮೀ ನಿಂದ 6 ಕೀಮೀ ರವರೆಗೆ ನಾಲ್ಕು ಪಥದ ರಸ್ತೆ ಅಭಿವೃದ್ಧಿ ಮಾಡಲು ಸಹಕರಿಸಿದರು.

   ಆ ವರ್ಷದ ಮುಂಗಡ ಪತ್ರದಲ್ಲಿ ಬಿ.ಹೆಚ್.ರಸ್ತೆ 0 ಕೀಮೀ ನಿಂದ 22 ಕೀಮಿ ಗುಬ್ಬಿವರೆಗೆ ಒಂದು ಕೀಮೀ ಅಗಲದ ರಸ್ತೆ ವಿಸ್ತರಿಸಲು ಸುಮಾರು 10 ಕೋಟಿ ಹಣ ಇಟ್ಟಿದ್ದು ಒಂದು ವರದಾನವಾಯಿತು. ಅದೇ ಹಣದಲ್ಲಿ ತುಮಕೂರು ನಗರದ 0 ಕೀಮೀ ನಿಂದ 6 ಕೀಮೀ ರವರೆಗೆ ನಾಲ್ಕು ಪಥದ ರಸ್ತೆ ಮತ್ತು 6 ಕೀಮೀ ನಿಂದ 22 ಕೀಮೀ ಗುಬ್ಬಿವರೆಗೆ ಒಂದು ಮೀಟರ್ ವಿಸ್ತರಣೆ ಸೇರಿ ಸುಮಾರು ರೂ 30 ಕೋಟಿವರೆಗೂ ಅನುದಾನ ಪಡೆಯಲು ಅನೂಕೂಲವಾಯಿತು.

  ಶ್ರೀ ಜಿ.ಎಸ್.ಬಸವರಾಜ್‌ರವರು ಅನುದಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಿಜಕ್ಕೂ ಅಧಿಕಾರಿಗಳ ತಂಡ ಸಮರೋಪಾದಿಯಲ್ಲಿ ಡಿಪಿಆರ್ ಮಾಡಿ, ಹಲವಾರು ಭಾರಿ ಬದಲಾಯಿಸಿ ಕಡತದ ಅನುಸರಣೆ ಮಾಡಿದರು.

  ಒಬ್ಬರು ಇಂಜಿನಿಯರ್ ನನಗೆ ಮೊದಲೇ ಹೇಳಿದ್ದರು ನೀವೂ ಗಲಾಟೆ ಮಾಡಿ ನಮ್ಮಿಂದ ಕೆಲಸ ಮಾಡಿಸುತ್ತೀರಿ, ಹಣ ಬಂದಾಗ ಲಾಭಿ ಮಾಡಿ ಬೇರೆ ಇಂಜಿನಿಯರ್ ಬರುತ್ತಾರೆ ನೋಡಿ ಎಂದಿದ್ದರು ನಿಜಕ್ಕೂ ಅದು ಸತ್ಯವಾಯಿತು. ಮತ್ತೆ ಕೆಲಸವನ್ನು ಭಾಗ ಮಾಡಿಸಿ ಇಬ್ಬರಿಗೂ ಹಂಚಿದ ಘಟನೆಯೂ ನಡೆಯಿತು.

 ಎನ್.ಹೆಚ್.ನವರು ರಸ್ತೆ ಅಭಿವೃದ್ಧಿ ಮಾಡುತ್ತೇವೆ, ಒತ್ತುವರಿ ತೆರವು ಮತ್ತು ಅಗಲೀಕರಣ ನಮ್ಮ ಕೆಲಸವಲ್ಲ ನಗರ ಸಭೆಯವರು ಮಾಡಬೇಕು ಎಂದಾಗ ಶುರುವಾಯಿತು ಒಂದು ರಣ ರಂಗ. ರಸ್ತೆ ಅಳತೆ ಮಾಡುವವರು ಯಾರು, ಒತ್ತುವರಿ ತೆರವು ಮಾಡುವವರು ಯಾರು? ಎಂಬ ಪ್ರಶ್ನೆ ಆರಂಭವಾಯುತು.

  ಜಿಲ್ಲಾಧಿಕಾರಿಯಾಗಿದ್ದ ಶ್ರೀ ಡಾ.ಸಿ.ಸೋಮಶೇಖರ್‌ರವರು ಆರಂಭದಲ್ಲಿ ಅಭಿವೃದ್ಧಿ ಅಂದರೆ ಕಟ್ಟಡ ಒಡೆಯುವುದೇ ಎಂಬ ಧೋರಣೆ ವ್ಯಕ್ತಪಡಿಸಿದರು ನಂತರ ರಸ್ತೆ ಅಭಿವೃದ್ಧಿ ಆಗಲೇ ಬೇಕು ಎಂದು ಶ್ರಮಿಸಿದರು.

  ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಎಸ್.ಸುರೇಶ್ ಕುಮಾರ್ ರವರು ಮತ್ತು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಶ್ರೀ ಎ.ಆರ್.ಮಂಜುನಾಥ್ ರವರು ಏನಾದರೂ ಮಾಡಿ ಈ ರಸ್ತೆ ಅಗಲೀಕರಣ ಮಾಡಬೇಕು ಎಂಬ ನಿಲುವಿಗೆ ಬಂದರು.

   ಶ್ರೀ ಎಸ್.ಸುರೇಶ್ ಕುಮಾರ್‌ರವರು ಈ ರಸ್ತೆ ತೆರವು ಮಾಡಿಸಲು ತುಮಕೂರು ನಗರಸಭೆಗೆ/ ಪಾಲಿಕೆಗೆ ಶ್ರೀ ಮತಿ ತುಳಸಿ ಮದ್ದಿನೇನಿ ಎಂಬ ಐಎಎಸ್ ಅಧಿಕಾರಿಯನ್ನು ಆಯುಕ್ತರಾಗಿ ನೇಮಿಸಿದರು ಎಂದರೆ ತಪ್ಪಾಗಲಾರದು ಈ ಐಎಎಸ್ ಎಂಬ ಹುದ್ದೆ ರಸ್ತೆ ಅಗಲೀಕರಣಕ್ಕೆ ಒಂದು ಅಸ್ತ್ರ ಆಯಿತು. ಮಾಧ್ಯಮಗಳಲ್ಲಿ ಕೆಲವರು ದುರ್ಗೇಯ ಅವತಾರ ಎಂದು ಹೇಳಿಕೆ ನೀಡುವ ಮಟ್ಟಕ್ಕೆ ಹೋಗಿತ್ತು.

  ಮದ್ದಿನೇನಿಯವರ ಜೊತೆಗೆ ತುಮಕೂರು ನಗರಾಭಿವೃದ್ಧಿ ಪ್ರಾದಿಕಾರದ ಆಯುಕ್ತರಾಗಿದ್ದ ಶ್ರೀ ಆದರ್ಶಕುಮಾರ್ ರವರು, ಇಂಜಿನಿಯರ್ ಶ್ರೀ ಡಿ.ಎಸ್.ಹರೀಶ್ ರವರು ಹೀಗೆ ಅಧಿಕಾರಿಗಳ ಒಂದು ತಂಡವೇ ಯುದ್ದಕ್ಕೆ ಸಿದ್ಧವಾದಂತೆ ಒತ್ತುವರಿ ತೆರವಿಗೆ  ಹಗಲಿರಳು ಶ್ರಮಿಸಿದರು, ಎಲ್ಲರ ಹೆಸರು ಹೇಳುವುದು ಕಷ್ಟದ ಕೆಲಸವಾದರೂ ಸಹ ಎಲ್ಲರನ್ನು ಜನತೆ ನಾಗರೀಕ ಸನ್ಮಾನ ಮಾಡಬೇಕಿತ್ತು.

 ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ತುಮಕೂರು ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ಶ್ರೀ ಎಸ್.ನಾಗಣ್ಣನವರು ಮತ್ತು ಶ್ರೀ ಆರ್.ಎಸ್.ಅಯ್ಯರ್ ರವರು ಪ್ರತಿ ದಿನ ನಿರಂತರವಾಗಿ ಜನ ಜಾಗೃತಿ ಮಾಡತೊಡಗಿದೆವು. ನಾವು ನಾಳೆ ಪತ್ರಿಕೆಯಲ್ಲಿ ಯಾವ ವಿಚಾರ ಬರೆಯ ಬೇಕು, ಯಾವ ವರ್ಗದವರ ಸಭೆ ಮಾಡಬೇಕು ಎಂಬ ಬಗ್ಗೆ ಪ್ರತಿದಿನ ವಿಷನ್ ಗ್ರೂಪ್ ತರಹ ಕಾರ್ಯ ನಿರ್ವಹಿಸಿದೆವು. ಅಧಿಕಾರಿಗಳ ತಂಡವು ಕಾಲ ಕಾಲಕ್ಕೆ ಮಾಹಿತಿ ನೀಡುವ ಮೂಲಕ ಸಹಕರಿಸಿತು.

   ಮಾಧ್ಯಮಗಳಲ್ಲಿಯೂ ಪರ- ವಿರೋಧದ ಗುಂಪುಗಳು ಹುಟ್ಟಿಕೊಂಡವು, ರಸ್ತೆ ಅಭಿವೃದ್ಧಿ ಆಗಬೇಕು ಎಲ್ಲರ ಸಹಕಾರ ಇತ್ತು. ಆದರೇ ಹೋರಾಟ ಮಾಡುವವರ ಬಗ್ಗೆ ವಿರೋಧ ವ್ಯಕ್ತವಾದವು. ಬಹಳಷ್ಟು ಜನ ಬಾಯಿಗೆ ಬಂದ ಹಾಗೆಯೂ ಮಾತನಾಡಿದರು. ಎಲ್ಲವನ್ನೂ ಸಹಿಸಿಕೊಳ್ಳಲೇ ಬೇಕಾಯಿತು.

  ನಗರದ ಘಟಾನುಘಟಿಗಳ ಒಂದು ತಂಡ ಅಗಲೀಕರಣದ ವಿರುದ್ದ ನಿಂತರೂ ಬಹುಷಃ 13 ಕಟ್ಟಡಗಳ ಮಾಲೀಕರು ಮಾತ್ರ ನ್ಯಾಯಾಲಯಕ್ಕೆ ಹೋದರು. ಉಳಿದವರೆಲ್ಲರೂ ಒಂದು ರೀತಿ ಸ್ವಯಂ ಆಗಿ ತೆರವುಗೊಳಿಸಿ ಕೊಂಡಿದ್ದು ಒಂದು ದಾಖಲೆ. ಅವರೆಲ್ಲರಿಗೂ ನಾಗರೀಕ ಸನ್ಮಾನ ಮಾಡಬೇಕಿತ್ತು.

  ಮೊದಲೇ ನ್ಯಾಯಾಲಯದಲ್ಲಿ ಕೆಲವು ಹೋರಾಟಗಾರರು ರಸ್ತೆ ಅಗಲೀಕರಣ ಸಂಬಂಧ ಹಾಕಿದ್ದ ಮೊಕದ್ದಮೆಗಳು ಒತ್ತುವರಿ ತೆರವಿಗೆ ಅನೂಕೂಲವಾದವು. ನೂರಾರು ಜನತೆ ತಮ್ಮ ಮನೆಯ ಕೆಲಸ ಎಂಬಂತೆ ಶ್ರಮಿಸಿದರು/ಸಹಕರಿಸಿದರು. ಶ್ರೀ ಶಾಮಣ್ಣ, ಶ್ರೀಧರ್ ಬಾಬು, ಶ್ರೀ ನಾರಾಯಣಚಾರ್, ಶ್ರೀ ಶಿವಕುಮಾರ್ ಹೀಗೆ ಹಲವಾರು ಹೋರಾಟಗಾರರು ದಾಖಲೆ ಹಿಂದೆ ಬಿದ್ದರು. ಆನೇಕ ಹೋರಾಟಗಾರರು ದಾಖಲೆ ಪಡೆಯುವಲ್ಲಿ ಅವರದೇ ಹೋರಾಟ ಮಾಡಿದರು.

  ಹೋರಾಟಗಾರರು ಸಂಗ್ರಹಿಸಿದ್ದ ದಾಖಲೆಗಳು ಮತ್ತು ಅಧಿಕಾರಿಗಳ ತಂಡ ಸಂಗ್ರಹಿಸಿದ ದಾಖಲೆಗಳು, ಅವರು ನ್ಯಾಯಾಲಯದಲ್ಲಿ ಮಂಡಿಸಿದ ವಿಷಯಗಳು ನಿಜಕ್ಕೂ ಉತ್ತಮವಾಗಿದ್ದವು. ಅವುಗಳಲ್ಲಿನ ಪ್ರಮುಖ ಅಂಶಗಳನ್ನು, ಅನುಭವಗಳನ್ನು ಸಂಗ್ರಹಿಸುವುದು, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬಿಹೆಚ್ ರಸ್ತೆ ಅಭಿವೃದ್ಧಿಗೆ ಶ್ರಮಿಸಿದವರೆಲ್ಲರ ಮಾಹಿತಿ ಪಡೆದು ದಾಖಾಲಾತಿ ಮಾಡುವುದು ಅಗತ್ಯವಾಗಿದೆ.

  ಆಗಿನ ಶಾಸಕರಾದ ಶ್ರೀ ಸೊಗಡು ಶಿವಣ್ಣನವರ ಮತ್ತು ಸಂಸದರಾಗಿದ್ದ ಶ್ರೀ ಎಸ್. ಮಲ್ಲಿಕಾರ್ಜುನಯ್ಯನವರ ಶ್ರಮದ ಬಗ್ಗೆ ಮಾಹಿತಿಯಿಲ್ಲ. ಹೀಗೆಯೇ ಹಲವಾರು ಜನತೆ ಶ್ರಮಿಸದ್ದರೂ ನನಗೆ ಮಾಹಿತಿಯಿಲ್ಲ ಸಂಗ್ರಹಿಸುವ ಕಾರ್ಯ ನಡೆಯ ಬೇಕಿದೆ.

ಶ್ರೀ ಜಿ.ಕೆ ಶ್ರೀನಿವಾಸ್ ಸೇರಿದಂತೆ ಬಿಹೆಚ್ ರಸ್ತೆಯ ಅಂಗಡಿ ಮಾಲೀಕರು ನೂರಾರು ಜನ ಜನಜಾಗೃತಿ ಮಾಡಿದರು. ಶ್ರೀ ದೀಪು ಮತ್ತು ಅವರ ಯುವ ತಂಡ ಪ್ರತಿಭಟನೆಯಲ್ಲಿ ಭಾಗಿಯಾದರು. ವಿವಿಧ ಜಾತಿ ಸಂಘಟನೆಗಳು, ನಾಗರೀಕ ಸಮಿತಿಗಳ ಸಹಕಾರ ಮರೆಯುವಂತಿಲ್ಲ.

  ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್‌ರವರು ಸೇರಿದಂತೆ ಎಲ್ಲ ಅಧಿಕಾರಿಗಳ ತಂಡ ನ್ಯಾಯಲಯಕ್ಕೆ ಸೂಕ್ತ ದಾಖಲೆ ಒದಗಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿತು. ನ್ಯಾಯಾಲಯದ ಆದೇಶವಾಗಿ ಸುಮಾರು  ವರ್ಷವಾದರು ಉಳಿದ ಭಾಗದ ಒತ್ತುವರಿ ತೆರವು ಯಾರು ಮಾಡ ಬೇಕು. ಈ ಅದೇಶ ಯಾವ ರೀತಿ ಆಗಿದೆ ಎಂಬುದೇ ನಿಗೂಢವಾಗಿದೆ.

  ಸಮೀಕ್ಷೆ ಮಾಡಿ ರಸ್ತೆಯ ಅಗಲದ ಸಂಪೂರ್ಣ ಮಾಹಿತಿಯನ್ನು ನಕ್ಷೆ ಸಹಿತ ವಿವರ ಸಂಗ್ರಹ ಮಾಡಿದ ಸರ್ವೆಯರ್ ಮತ್ತು ಇಂಜಿನಿಯರ್‌ಗಳ ತಂಡ ಮಹತ್ತರವಾದ ಕಡತ ಸಿದ್ಧಗೊಳಿಸಿದೆ. ಈಗ ಅದನ್ನು ತೆರವುಗೊಳಿಸುವುದು ಯಾವ ಇಲಾಖೆಯ ಕೆಲಸ ಎಂದು ಒಬ್ಬರ ಕಡೆ ಇನ್ನೊಬ್ಬರು ಕೈ ತೋರಿಸುವ ಕೆಲಸ ನಡೆದಿದೆ.  

  ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಅನುದಾನ ಖರ್ಚು ಮಾಡುವ ಮುನ್ನ ನ್ಯಾಯಾಲಯದ ಆದೇಶದ ಬಗ್ಗೆ ಚರ್ಚಿಸಿ, ಉಳಿದ ಒತ್ತುವರಿ ತೆರವು ಮಾಡಬೇಕು ಎಂಬ ಸಾಮಾನ್ಯ ಜ್ಞಾನವಾದರೂ ಅಧಿಕಾರಿಗಳಿಗೆ ಇರಬೇಡವೇ?

  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂನಲ್ಲಿ ವಿಷಯ ಚರ್ಚೆಗೆ ಬಂದಾಗ ನ್ಯಾಯಾಲಯದ ಆದೇಶದ ಬಗ್ಗೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನೆ ಬಚ್ಚಿಟ್ಟಿದ್ದು ಬೆಳಕಿಗೆ ಬಂತು. ಜಿಲ್ಲಾಧಿಕಾರಿಗಳಾದ ಶ್ರೀ ಡಾ. ರಾಕೇಶ್ ಕುಮಾರ್ ರವರು ಈ ಬಗ್ಗೆ ದಾಖಲೆ ತಂದು  ತೋರಿಸಿ ಎಂದು ಖಡಕ್ ಆಗಿ ತಿಳಿಸಿದರು.

  ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿಯಲ್ಲಿಯೂ ಚರ್ಚೆಗೆ ಬಂದಾಗ ನಕ್ಷೆ ಸಹಿತ ಮಾಹಿತಿ ನೀಡಲು ಸಂಸದರು ಮತ್ತು ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಅಧಿಕಾರಿಗಳಿಗೆ ಸೂಚಿಸಿದರು.

   ಈವರೆಗೂ ಚರ್ಚೆ ನಡೆದಿರುವ ಮಾಹಿತಿಯಿಲ್ಲ ಸುಪ್ರಿಂ ಕೋರ್ಟ್ ಅದೇಶದ ಬಗ್ಗೆ ವಿವಿಧ ಕಟ್ಟಡಗಳ ತೆರವಿಗೆ ನಡೆಯುವ ಸಭೆಗೂ ಮುಂಚೆ ಬಿ.ಹೆಚ್ ರಸ್ತೆ ನ್ಯಾಯಾಲಯದ ಕಡತದ ಬಗ್ಗೆ ನಗರದ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಸೂಕ್ತವಾಗಿದೆ.

   ಪ್ರಸ್ತುತ 0 ಕೀಮೀನಿಂದ 12 ನೇ ಕೀಮೀ ವರೆಗೂ ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿ ಆಗಲೇ ಬೇಕು

– ಮುಂದುವರೆಯಲಿದೆ