16th September 2024
Share

  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನೀರಿನ ವಿಷಯದಲ್ಲಿ ಸಾಮಾಜಿಕ ನ್ಯಾಯ ಒದಗಿಸಲೇ ಬೇಕು ಎಂಬ ದೃಢ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆ-ಕಟ್ಟೆಗಳಿಗೆ ಮಳೆ ನೀರು-ನದಿ ನೀರು-ಪುನರ್ ಬಳಕೆ ನೀರಿನಿಂದ ತುಂಬಿಸಲು ಯೋಜನೆ ರೂಪಿಸುವುದು ನನ್ನ ಆಧ್ಯ ಕರ್ತವ್ಯ ಎಂಬ ನಿಲುವು ತಾಳುವ ಮೂಲಕ ಮಹತ್ತರವಾದ ಸಭೆ ಕರೆಯಲು ಆದೇಶಿಸಿದ್ದಾರೆ.

  ಪ್ರಸ್ತುತ ಮುಖ್ಯ ಮಂತ್ರಿ, ಜಲ ಸಂಪನ್ಮೂಲ ಸಚಿವ ಮತ್ತು ನಗರಾಭಿವೃದ್ಧಿ ಸಚಿವರು ಆಗಿದ್ದಾರೆ. ಅವರ ನೆಚ್ಚಿನ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿರವರ ಮತ್ತು ಹಾಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸೇರಿದಂತೆ ಇಬ್ಬರು ದಿಗ್ಗಜರ ಕನಸಿನ ರಾಜ್ಯದ ನದಿ ಜೋಡಣೆ, ಕೆರೆ ಜೋಡಣೆ, ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡುವ ಮೂಲಕ ದಾಖಲೆ ಬರೆಯಲು ಸಜ್ಜಾಗುತ್ತಿದ್ದಾರೆ.

ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2022 ರೊಳಗೆ ಮನೆ ಮನೆಗೆ ನಲ್ಲಿ ನೀರು ಮತ್ತು ರಾಜ್ಯ ಸರ್ಕಾರದ ಜಲಧಾರೆ ಯೋಜನೆ ಶೇ 100 ಜಾರಿಗೊಳಿಸಿದ ಕೀರ್ತಿ ಪಡೆಯಲೇ ಬೇಕು ಎಂದು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಧಾನಿಯವರ ಬಳಿ ಬೇಷ್ ಗಿರಿಗಾಗಿ ತಪಸ್ಸು ಮಾಡುತ್ತಿದ್ದಾರೆ.

  ಮಾನ್ಯ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿಯವರು ರಾಜ್ಯದ ಸಣ್ಣ ನೀರಾವರಿ ಸಚಿವರಾಗಿದ್ದು ನನ್ನ ಕಾಲದಲ್ಲಿ ರಾಜ್ಯದ ಎಲ್ಲಾ ಕೆರೆಗಳಿಗೆ ನದಿ ನೀರಿನ ಅಲೋಕೇಷನ್ ಮಾಡಲೇ ಬೇಕು ಎಂಬ ಛಲ ಹೊಂದಿದ್ದಾರೆ. ಪ್ರಾಯೋಗಿಕವಾಗಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮೌನ ಕ್ರಾಂತಿ ಮೂಡಿಸುವತ್ತ ದಾಪುಗಾಲು ಹಾಕುತ್ತಿದ್ದಾರೆ.

  ಮಾನ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಕಳೆದ ಚುನಾವಣೆಯಲ್ಲಿ ಶ್ರೀ ಗಂಗಾಮಾತೆಯ ಆಶೀರ್ವಾದವೇ ನನಗೆ ಜಯ ತಂದಿರುವುದು. ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳಿಗೆ ನದಿ ನೀರು ತುಂಬಿಸುವ ಜೊತೆಗೆ ಇಡೀ ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳಿಗೆ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಎಂಬ ಘೋಷಣೆಯೊಂದಿಗೆ  ನದಿ ನೀರಿನಿಂದ ತುಂಬಿಸಲು ಹಗಲಿರಳು ಅವಿರತವಾಗಿ ಶ್ರಮಿಸುತ್ತಿದ್ದಾರೆ.

 ಅವರಿಗೆ ಸಂಸದರ ಜೊತೆಗೆ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಸಮಿತಿಯ ಸದಸ್ಯತ್ವ ಆನೆ ಬಲ ತಂದಿದೆ. ಈಗ ಅವರು ಪರಿಣಿತರ ತಂಡ, ಅಧಿಕಾರಿಗಳ ತಂಡದ ವಿಶ್ವಾಸವನ್ನು ಗಳಿಸಿ ಕೆರೆಗಳಿಗೆ ನದಿ ನೀರು ತುಂಬಿಸಲು ಏನು ಮಾಡಬೇಕು ಎಂಬ ವರದಿ ತಯಾರಿಸಿ ಮಾನ್ಯ ಮುಖ್ಯ ಮಂತ್ರಿಗಳ ಮುಂದೆ ಇಡಲು ಸಭೆ ಕರೆಯಲು ಮನವಿ ಮಾಡಿದ್ದಾರೆ. ಈಗಾಗಲೇ  ಸಭೆ ಕರೆಯಲು ಮಾನ್ಯ ಮುಖ್ಯಮಂತ್ರಿಯವರು ಆದೇಶಿಸಿದ್ದಾರೆ.

  ಜೊತೆಗೆ ಮಾನ್ಯ ಪ್ರಧಾನಿಯವರು, ಮಾನ್ಯ ಜಲಶಕ್ತಿ ಸಚಿವರು, ಎನ್‌ಡಬ್ಲ್ಯುಡಿಎ ಡೈರೆಕ್ಟರ್ ಜನರಲ್ ಮತ್ತು ಸಿಡಬ್ಲ್ಯುಸಿ ಚೇರ್‌ಮನ್ ಹಾಗೂ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ಎರಡನೇ ಹಂತದಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರು, ಶ್ರೀ ಡಿ.ವಿ.ಸದಾನಂದಗೌಡರವರು, ಶ್ರೀ ಪ್ರಹ್ಲಾದ್ ಜೋಷಿರವರು ಮತ್ತು ಶ್ರೀ ಸುರೇಶ್ ಅಂಗಡಿಯವರ ಗಮನ ಸೆಳೆಯವ ಮೂಲಕ 28  ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರೆಲ್ಲರೂ ಒಂದೇ ದ್ವನಿಯಾಗಲು ಪಕ್ಷಾತೀತವಾಗಿ ಪ್ರಯತ್ನ ಮಾಡಲು ಚಿಂತನೆ ನಡೆಸಿದ್ದಾರೆ.

ಮೊದಲು ಶ್ರೀ ಬಿ.ಎಸ್. ಯಡಿಯೂರಪ್ಪನವರ ಘೋಷಣೆಗಾಗಿ ಕಾಯುತ್ತಿದ್ದಾರೆ. ಎಲ್ಲರ ಚಿತ್ತ ಕೆರೆ-ಕಟ್ಟೆಗಳಿಗೆ ನದಿ ನೀರಿನತ್ತ ಸಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜನತಾದಳ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ದೊರೆಯುವ ಆಶಾಭಾವನೆಯಿದೆ.

ಕಡತದ ಅನುಸರಣೆ ಶಕ್ತಿಪೀಠ ಪೌಂಡೇಷನ್ ಗುರಿ.