ನಾನೇನು ಕಮ್ಮಿನಾ ಪ್ರಧಾನಿಯವರೇ ನೀವೂ ಜಿಲ್ಲೆಗೊಂದು ಉತ್ಪನ್ನ ಎಂದರೆ? ನಾನು ವಿಧಾನಸಭಾ ಕ್ಷೇತ್ರಕ್ಕೊಂದು ಉತ್ಪನ್ನ ಓಕೇನಾ?
ಕೇಂದ್ರ ಸರ್ಕಾರ 2020-21 ನೇ ಸಾಲಿನ ಮುಂಗಡ ಪತ್ರದಲ್ಲಿ PRODUCT-1 DISTRICT-1 ಯೋಜನೆ ಮಂಡಿಸಿದ 24 ಘಂಟೆಯೊಳಗೆ ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳ ಸುಮಾರು 204 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೆಚ್ಚಿಗೆ ಬೆಳೆಯುತ್ತಿರುವ ರೈತರ ಉತ್ಪನ್ನಗಳ ಪಟ್ಟಿಯನ್ನು ಸಂಗ್ರಹಿಸುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯದ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‌ರವರು, ಮಾನ್ಯ ಮುಖ್ಯ ಮಂತ್ರಿಗಳ ಸೂಚನೆ ಮೇರೆಗೆ ಕರ್ನಾಟಕ ರಾಜ್ಯದ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ವತಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ನಮ್ಮ ಸಂಸ್ಥೆ ವಿಧಾನಸಭಾ ಕ್ಷೇತ್ರಕ್ಕೊಂದು ಉತ್ಪನ್ನದ ಕ್ಲಸ್ಟರ್ ಆರಂಭಿಸಲು ಒತ್ತಾಯಿಸುತ್ತಾ ಬಂದಿತ್ತು.
ಕೇಂದ್ರ ಸರ್ಕಾರ ಈ ಯೋಜನೆಗೆ ಇಂಬುಕೊಡುವಂತೆ ಯೋಜನೆ ಪ್ರಕಟಿಸಿದ್ದು ಎಲ್ಲರೂ ಚುರುಕಾಗಲು ಪ್ರೇರಣೆಯಾಗಿದೆ. ಆ ಪಟ್ಟಿಯನ್ನು ಅಧ್ಯಯನ ಮಾಡಿದ ಪ್ರಕಾರ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ವಿಧವಾದ ಬೆಳೆಯನ್ನು ಹೆಚ್ಚಾಗಿ ಬೆಳೆಯುವ ಮಾಹಿತಿ ಲಭ್ಯವಾಗಿದೆ. ಮೊದಲ ಮತ್ತು ಎರಡನೇ ಅತಿ ಹೆಚ್ಚು ಬೆಳೆ ಮಾಹಿತಿ ಸಂಗ್ರಹ ಉತ್ತಮವಾಗಿದೆ.
ರಾಜ್ಯದ 6022 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚಿಗೆ ಬೆಳೆ ಬೆಳೆಯುವ ಮಾಹಿತಿಯನ್ನು ಸಂಗ್ರಹಿಸಿ, ನಂತರ ಆಧ್ಯಯನ ಮಾಡಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಉತ್ಪನ್ನ ಆಯ್ಕೆ ಮಾಡಲು ರಾಜ್ಯದ ಎಲ್ಲಾ ಚುನಾಯಿತ ಜನ ಪ್ರನಿಧಿಗಳಾದ 225 ವಿಧಾನಸಭಾ ಸದಸ್ಯರು, 75 ಜನ ವಿಧಾನ ಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು 12 ರಾಜ್ಯಸಭಾ ಸದಸ್ಯರು ಮತ್ತು ಇಬ್ಬರೂ ದೆಹಲಿ ಪ್ರತಿನಿಧಿ ಸೇರಿದಂತೆ 342 ಉತ್ಪನ್ನಗಳನ್ನು ಆಯ್ಕೆ ಮಾಡಿ ಕ್ಲಸ್ಟರ್ ಮಾಡಲು ಸುಮಾರು 50 ಎಕರೆ ಸರ್ಕಾರಿ ಭೂಮಿ ಗುರುತಿಸಿ ಪತ್ರ ಸಲ್ಲಿಸಲು ಚುನಾಯಿತ ಜನಪ್ರತಿನಿಧಿಗಳಿಗೆ ಮಾನ್ಯ ಮುಖ್ಯ ಮಂತ್ರಿಗಳಿಂದ ಪತ್ರ ಬರೆಸುವ ಮೂಲಕ ಚಾಲನೆ ನೀಡುವುದು ಸೂಕ್ತವಾಗಿದೆ.
ರಾಜ್ಯದ 30 ಜಿಲ್ಲೆಗಳ ದಿಶಾ ಸಮಿತಿಗೂ ಪತ್ರ ಬರೆದು ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸುವುದು ಅಗತ್ಯವಾಗಿದೆ. ಮಾನ್ಯ ಮುಖ್ಯ ಮಂತ್ರಿಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇಂತಹದ್ದೆ ಉತ್ಪನ್ನದ ಕ್ಲಸ್ಟರ್ ಸ್ಥಾಪನೆ ಮಾಡುತ್ತೇವೆ ಎಂದು 2020-21 ನೇ ಸಾಲಿನ ಮುಂಗಡ ಪತ್ರದಲ್ಲಿ ಪ್ರಕಟಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಲಿ ಎಂಬುದು ಜನತೆಯ ಆಶಯ.
ಇದು ನಿಜವಾದ 2022 ರ ರೈತರ ಆದಾಯ ದುಪ್ಪಟ್ಟು ಮಾಡುವ ಮತ್ತು ರೈತರ ಉತ್ಪನ್ನಗಳಿಗೆ ವೈಜ್ಙಾನಿಕ ಬೆಲೆ, ಮೌಲ್ಯವರ್ಧಿತ ಬೆಲೆ ನೀಡಲು ಪ್ರಾಮಾಣಿಕ ಪ್ರಯತ್ನವಾಗಲಿದೆ.