22nd December 2024
Share

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ನಿನ್ನೆ ಸಂಜೆ 6 ಗಂಟೆಗೆ ದೆಹಲಿಯಿಂದ ಫೋನ್ ಮಾಡಿದರು. NATIONAL WATER DEVELOPMENT AGENCY DIRECTOR GENERAL  BHOPAL SING  ಸಿಕ್ಕಿದ್ದರಪ್ಪ ಮಾತಾಡಿ ಬಂದೆ.

   ಮುಂಡೆ ಮಕ್ಕಳು ಇನ್ನೂ ಹಳೇ ಕಟ್ಟಡದಲ್ಲಿಯೇ ಇದ್ದಾರೆ, ಎರಡನೇ ಮಹಡಿಗೆ ಹತ್ತಬೇಕು, ಲಿಪ್ಟ್ ಬೇರೆ ಇಲ್ಲ, ಹಳೇ ಕಟ್ಟಡ ನಾಲ್ಕು ಮಹಡಿ ಹತ್ತಿದಂಗೆ ಆಯ್ತು. ಆದರೂ ಸಮಾಧಾನ ಆಯಿತು ಅಂದರು,

  ನಾನು ಬಲವಾಗಿ ವಿರೋಧಿಸಿದೆ ನೋಡಿ ಸಾರ್ ನೀವೂ ಹತ್ತಬಾರದಿತ್ತು, ಕೆಳಗಡೆ ಅವರನ್ನೆ ಕರೆಸಿಕೊಂಡು ಕಾರಲ್ಲಿ ಮಾತನಾಡಿ ಬರಬೇಕಿತ್ತು ಸಾರ್ ಎಂದೆ.

 ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಬರೆದ ಎರಡು ಪತ್ರಗಳನ್ನು ಮತ್ತು ನಾನು ಪ್ರಧಾನ ಮಂತ್ರಿಗಳಿಗೆ, ಜಲಶಕ್ತಿ ಸಚಿವರಿಗೆ ಮತ್ತು ಅವರಿಗೆ ಬರೆದಿದ್ದ ಎಲ್ಲಾ ಪತ್ರಗಳ ಅಧ್ಯಯನ ಮಾಡಿದ್ದೇವೆ ಸಾರ್ ಈಗ ರಾಜ್ಯ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ. ನಿಮ್ಮ ಸಲಹೆ ಮೇರೆಗೆ ಒಂದು ಸಭೆಯನ್ನು ಕರೆಯಲು ಚಿಂತನೆ ನಡೆಸಲಾಗಿದೆ ಎಂಬ ಸಮಾಧಾನಕರ ಚರ್ಚೆಯಾಯಿತು ಎಂದರು.

  ನಂಟು ಹೋಗದೆ ಹೋಯಿತು, ಗಂಟು ಕೇಳದೆ ಹೋಯಿತು ಗಾದೆಗೆ ಇನ್ನೊಂದು ಸೇರಿಸಬೇಕಪ್ಪಾ ಬರೆದ ಪತ್ರ ಫಾಲೋ ಮಾಡಿದೆ ಇದ್ದರೆ ಗೋವಿಂದ ಕಣಯ್ಯಾ ಎಂಬ ಮಾತು ನಿಜಕ್ಕೂ ಅರ್ಥಗರ್ಭಿತವಾಗಿತ್ತು.

 ಅವರಿಗೆ ಒಂದು ಖುಷಿಯಾದ ವಿಚಾರ ಅಂದ್ರೆ ಕೇಂದ್ರ ಸರ್ಕಾರ ರೂಪಿಸಿರುವ ನದಿ ಜೋಡಣೆ ಯೋಜನೆಯಿಂದಾಗಲಿ, ರಾಜ್ಯದ ನದಿ ಜೋಡಣೆ ಯೋಜನೆಯಿಂದಾಗಲಿ, ರಾಜ್ಯದಲ್ಲಿ ಬಳಸಬಹುದಾದ 1246  ಟಿ.ಎಂ.ಸಿ ಅಡಿ ನೀರಿನಲ್ಲಾಗಲಿ, ಮಳೆ ನೀರಿನ ಜೊತೆಗೆ ನದಿ ನೀರಿನಿಂದ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಗೆ ಒಂದು ಹೊಸ ತಿರುವು ಪಡೆದಂತಾಗಿದೆ. ಆ ಕೆಲಸ ನಾನು ಮಾಡ್ತಾ ಇದ್ದೀನಿ ಎಂಬುದಾಗಿತ್ತು.

  ನೋಡಿ ಈ ವಿಚಾರ ನಾನು ಯಾಕೆ ಪ್ರಸ್ತಾಪ ಮಾಡ್ತಾ ಇದ್ದೀನಿ ಅಂದ್ರೆ, ವಿರೋಧ ಪಕ್ಷಗಳ ಕೆಲಸ ಏನು? ಅವರಿಗೆ ಸರ್ಕಾರ ಎಲ್ಲಾ ವ್ಯವಸ್ಥೆ ಏಕೆ ಮಾಡಿದೆ. ಈ ವಿಚಾರಗಳ ಕಡತದ ಅನುಸರಣೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸ ಬೇಕಲ್ಲವೇ?

ರೈತರ ಬಗ್ಗೆ ಕಣ್ಣೀರು ಸುರಿಸುವ ನಾಯಕರಿಗೆ ಈ ರೀತಿ ಕಡತದ ಬೆನ್ನು ಹತ್ತಲು ಏನಾಗಿದೆ ಎಂಬ ನೋವು ಜನರಿಗಿಲ್ಲವೇ?

  ನಾನು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರ ಆಪ್ತ ಕಾರ್ಯದರ್ಶಿಯವರಾದ ಶ್ರೀ ವೆಂಕಟೇಶ್ ರವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್.ಆರ್.ಪಾಟೀಲ್ ಕಚೇರಿಗೆ ಭೇಟಿ ನೀಡಿ ಅವರ ಆಪ್ತಶಾಖೆಯ ಶ್ರೀ ದೀಪಕ್ ಅವರೊಂದಿಗೂ ಚರ್ಚಿಸಿದ್ದೇನೆ. ಕೆರೆಗಳಿಗೆ ನದಿ ನೀರಿನ ವಿಚಾರದಲ್ಲಿ ಚುರುಕಾಗಿ ಎಂಬುದು ನನ್ನ ಮನವಿ ಕಾದು ನೋಡೋಣ?

 ತುಮಕೂರು ಜಿಲ್ಲೆಯ ದಿಶಾ ಸಮಿತಿ ರಾಜ್ಯದ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸಲು ಅವಿರತ ಪ್ರಯತ್ನ ಮಾಡುತ್ತಿದೆ. ಉಳಿದ 29  ಜಿಲ್ಲೆಯ ದಿಶಾ ಸಮಿತಿಗಳು ಈ ವಿಚಾರದ ಬಗ್ಗೆ ಏನು ಮಾಡಿವೆ, ದಾಖಲೆ ಸಹಿತ ಬಹಿರಂಗ ಗೊಳಿಸ ಬೇಕಲ್ಲವೇ?

  ಲೋಕಸಭಾ ಸದಸ್ಯರುಗಳೇ ಮೌನ ಮುರಿದು ಬೀದಿಗಿಳಿದರೆ ಮಾತ್ರ 2022 ರ ವೇಳೆಗೆ ರೈತರ ಆದಾಯ ದುಪ್ಪಟ್ಟು, ರೈತರಿಗೆ ನೀರು ಕೊಡದೇ ಇದ್ದರೆ, ಬರೀ ಬಾಷಣದಲ್ಲಿಯೇ ಉಳಿಯಲಿದೆ. ಸುಮ್ಮನಿದ್ದರೆ ನಾವೂ ನಿಮ್ಮನ್ನೂ ಸುಮ್ಮನೆ ಬಿಡಲ್ಲ, 30 ಜಿಲ್ಲೆಯ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಇ ಪೇಪರ್ ಕಳುಹಿಸುವ ಮೂಲಕ ಜನಪ್ರತಿನಿಧಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮೌನವಾಗಿ ಆರಂಭವಾಗಿದೆ.

ಇನ್ನೂ ಸ್ವಲ್ಪ ದಿವಸ ಅವಕಾಶ ಕೊಡುವುದು ಪ್ರಜಾ ಪ್ರಭುತ್ವದ ಹಾದಿ.