TUMAKURU: SHAKTHIPEETA FOUNDATION
ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕು, ಜೆಜಿ ಹಳ್ಳಿ ಹೋಬಳಿ ಕೆ.ಆರ್.ಹಳ್ಳಿ ಗ್ರಾಮ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬಗ್ಗನಡು ಕಾವಲ್‌ನಲ್ಲಿ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮೂಲಕ ’ಜಲಭಾರತ, ಗ್ರೀನ್ ಕಾರಿಡಾರ್ ಮತ್ತು ವಾಟರ್ ಮ್ಯೂಸಿಯಂ’ ಸ್ಥಾಪಿಸಲು ಅಂತರ್ಜಲ ಅಭಿವೃದ್ಧಿ ಯೋಜನೆಗಳ ಜಾರಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪ್ರಸ್ತಾಪಿಸಿದ್ದ ’ಜಲಭಾರತ, ವಾಟರ್ ಮ್ಯೂಸಿಯಂ, ಗ್ರೀನ್ ಕಾರಿಡಾರ್ ಮತ್ತು ವಾಟರ್ ಯೂನಿವರ್ಸಿಟಿ’ ಯೋಜನೆಗಳನ್ನು ಒಟ್ಟಿಗೆ ಸೇರಿಸಿ ಒಂದು ಹೆಸರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಸಲಹೆ ನೀಡಿದ ಹಿನ್ನೆಲೆಯಲ್ಲಿ ’ಜಲಶಕ್ತಿ ಡೇಟಾ ಪಾರ್ಕ್’ ಹೆಸರನ್ನು ಇಡಲು ಸಲಹೆ ನೀಡಲಾಗಿದೆ.
ದೇಶದ ಒಂದೊಂದು ಹನಿ ನೀರಿನ ಡಿಜಿಟಲ್ ಡೇಟಾ ಒಂದೇ ಕಡೆ ಬರಲಿದೆ, ಮಾದರಿಯಾಗಿ ’ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ’ ಯನ್ನು ಇತಿಹಾಸ ಸಹಿತ ಜಿಐಎಸ್ ಲೇಯರ್ ಸಿದ್ಧಪಡಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ.
ಕೇಂದ್ರ ಸರ್ಕಾರ ಒಂದು ನಿರ್ಧಿಷ್ಠ ಯೋಜನೆ ಜಾರಿಗೆ ಒಂದು ಎಸ್‌ಪಿವಿ (ಸ್ಪೆಷಲ್ ಪರ್‌ರ್ಪಸ್ ವೆಹಿಕಲ್) ರಚಿಸಿಕೊಂಡು, ಆಯಾ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಲು ನಿಯಮ ರೂಪಿಸಿರುವುದರಿಂದ ಹಾಗೂ 2020-21 ನೇ ಸಾಲಿನಲ್ಲಿ ಪಿಪಿಪಿ ಮಾದರಿಯಲ್ಲಿ ಡೇಟಾ ಪಾರ್ಕ್ ಸ್ಥಾಪಿಸುವ ಅಂಶವನ್ನು ಘೋಶಿಸಿರುವುದರಿಂದ ’ಜಲಶಕ್ತಿ ಡೇಟಾ ಪಾರ್ಕ್’ ಯೋಜನೆಗೆ ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಾಗಿದೆ. ಆದ್ದರಿಂದ ಈ ಕೆಳಕಂಡ ಐದು ಹಂತದಲ್ಲಿ ಸರ್ಕಾರ ಯೋಜನೆ ಜಾರಿಗೆ ಅಗತ್ಯ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ.
ಐದು ಹಂತದಲ್ಲಿ ಯೋಜನೆ
1.ಪಾವಗಡ ಸೋಲಾರ್ ಮಾದರಿಯಲ್ಲಿ ರೈತರ ಜಮೀನಿನನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಸ್ಥಾಪಿಸಲು ಉದ್ದೇಶಿಸಿರುವ ’ಜಲಶಕ್ತಿ ಡೇಟಾ ಪಾರ್ಕ್’ ನ ಸುಮಾರು 3೦ ಎಕರೆ ಜಮೀನಿನ ಸುತ್ತ-ಮುತ್ತ ಜಲಸಂಗ್ರಹಾಗಾರಗಳ ಕಾಮಗಾರಿ ಕೈಗೊಳ್ಳಲು, ಕರಾಬುಹಳ್ಳದ ಅಭಿವೃದ್ಧಿ ಕಾಮಗಾರಿ ಮತ್ತು ಭೂಮಿಯ ಮೇಲೆ ಭಾರತದ ನಕ್ಷೆ ನಿರ್ಮಾಣ ಮಾಡಿ, ದೇಶದ ಪ್ರಮುಖ ನದಿಗಳು ಹುಟ್ಟಿ ಹರಿದು ಸಮುದ್ರ ಸೇರುವ ಪ್ರಾತ್ಯಕ್ಷಿಕೆ ಅನುಷ್ಠಾನ.
2. ’ಜಲಶಕ್ತಿ ಡೇಟಾ ಪಾರ್ಕ್’ ನಲ್ಲಿ ಅಥವಾ ಹೊಂದಿಕೊಂಡಿರುವ ನಿಗಮದ ಜಮೀನಿನನಲ್ಲಿ ಗ್ರಂಥಾಲಯ ನಿರ್ಮಾಣ, ಸಭಾಂಗಣ ಮತ್ತು ಅತಿಥಿ ಗ್ರಹ ನಿರ್ಮಾಣ.
3. ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕು ರಾಷ್ಟ್ರೀಯ ಹೆದ್ಧಾರಿ 48 ರಿಂದ ವಾಣಿವಿಲಾಸ ಡ್ಯಾಂವರೆಗೆ ವೇದಾವತಿ ನದಿ, ವಾಣಿವಿಲಾಸ ಸಾಗರದ ಎಡದಂಡೆ ಕಾಲುವೆ ಮತ್ತು ಬಲದಂಡೆ ಕಾಲುವೆಗಳ ಅಕ್ಕ-ಪಕ್ಕ ಇರುವ ಸರ್ಕಾರಿ ಜಮೀನನ್ನು ಗುರುತಿಸಲು ’ಸಲಹಾ ಸಂಸ್ಥೆ’ಯನ್ನು ನೇಮಿಸುವುದು, (ನಮ್ಮ ಸಂಸ್ಥೆ ಈಗಾಗಲೇ ಜಿಐಎಸ್ ತಜ್ಞ ಶ್ರೀ ಬಸವರಾಜ್ ಸುರಣಗಿಯವರ ಮೂಲಕ ಸುಮಾರು 90 ಎಕರೆ ನಿಗಮದ ಜಮೀನನ್ನು ಗುರುತಿಸಿ ನಕ್ಷೆ ಸಹಿತ ನೀಡಲಾಗಿದೆ). ಈ ಮೂರು ಕಾಲುವೆ ಮತ್ತು ಹಳ್ಳಗಳ ಜಮೀನಿನ ಪಕ್ಕ ವಿವಿಧ ಜಾತಿಯ ಗಿಡಗಳನ್ನು ಹಾಕಿ ಐದು ವರ್ಷಗಳ ಕಾಲ ನಿರ್ವಹಣೆ ಮಾಡುವುದು ಅಗತ್ಯವಾಗಿದೆ.
4. ರಾಜ್ಯ ಸರ್ಕಾರ ಈಗಾಗಲೇ ನೀರಾವರಿ ಇಲಾಖೆ ಜಮೀನಿನನ್ನು ಪ್ರವಾಸೋಧ್ಯಮ ಅಭಿವೃದ್ಧಿಗಾಗಿ ಬಳಸಲು ಯೋಜನೆ ರೂಪಿಸಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ನೀತಿ ಆಯೋಗದ ಸಲಹೆ ಮೇರೆಗೆ ಈ ಮೂರು ಕಾಲುವೆ ಮತ್ತು ಹಳ್ಳಗಳ ಪಕ್ಕವಿರುವ ನಿಗಮದ/ಸರ್ಕಾರದ ಜಮೀನಿನಲ್ಲಿ ಅಂತರಾಷ್ಟ್ರೀಯ ಮಟ್ಟದ ’ಅಗ್ರೋ ಟೂರಿಸಂ/ ಉತ್ಪನ್ನವಾರು ಕ್ಲಸ್ಟರ್’ ನಿರ್ಮಾಣ ಮಾಡಲು ಮತ್ತು ಅಗತ್ಯವಿದ್ದಲ್ಲಿ ರೈತರ ಜಮೀನು ಗುತ್ತಿಗೆ ಪಡೆದು ಅಥವಾ ರೈತರ ಮೂಲಕ ಬೆಳೆ ಬೆಳೆಯುವ ವಿಶೇಷ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ರೂಪುರೇಷೆ ಸಿದ್ಧಪಡಿಸಲು ’ಸಲಹಾ ಸಂಸ್ಥೆ’ ಯನ್ನು ನೇಮಿಸುವುದು ಅಗತ್ಯವಾಗಿದೆ.
5. ’ಸರ್ಕಾರದ ಅಥವಾ ಪಿಪಿಪಿ’ ಮಾದರಿಯಲ್ಲಿ ’ವಾಟರ್ ಯೂನಿವರ್ಸಿಟಿ’ ಸ್ಥಾಪಿಸಲು ’ಸ್ಪೆಷಲ್ ಆಫೀಸರ್’ ನೇಮಕ ಮಾಡುವುದು ಅಥವಾ ’ತಾಂತ್ರಿಕ ಸಮಿತಿ’ ರಚಿಸುವುದು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಯೋಜನೆ ಅನುಷ್ಠಾನಕ್ಕೆ ಮುಂದಾಗುವ ಎಸ್‌ಪಿವಿ ಜೊತೆ ಎಂಓಯು ಮಾಡಿಕೊಂಡು ರೂಪುರೇಷೆ ನಿರ್ಧರಿಸುವುದು ಅಗತ್ಯವಾಗಿದೆ.
ಈ ಐದು ಹಂತದ ಯೋಜನೆಗಳ ಜಾರಿಗೆ ಮತ್ತು ರಾಜ್ಯಸರ್ಕಾರ/ ನಿಗಮಕ್ಕೆ ಆದಾಯ ಬರುವ ವಿನೂತನ ಯೋಜನೆಗಾಗಿ ಶ್ರಮಿಸಲು ನಮ್ಮ ಸಂಸ್ಥೆ ವಿಶೇಷ ಆಸಕ್ತಿ ವಹಿಸುತ್ತಿದೆ.