15th September 2024
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯದ 224  ವಿಧಾನಸಭಾ ಕ್ಷೇತ್ರಗಳಲ್ಲಿನ ನೀರಾವರಿ ಅಧ್ಯಯನ ಮಾಡಲು ಒಬ್ಬೊಬ್ಬ ಇಂಜಿನಿಯರ್ ಒಂದೊಂದು ವಿಧಾನಸಭಾ ಕ್ಷೇತ್ರದ ಜವಾಬ್ಧಾರಿ ಪಡೆದು ಕರಾರುವಕ್ಕಾದ ಡಿಜಿಟಲ್ ಮಾಹಿತಿಗಳನ್ನು ಸಂಗ್ರಹಿಸಿ ನಕ್ಷೆ ಸಹಿತ ನೀಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳಿಗೆ ಸಲಹೆ ನೀಡಿದರು.

ಅವರು ದಿನಾಂಕ:23.06.2020 ರಂದು ತುಮಕೂರು ವಿಶ್ವವಿದ್ಯಾನಿಲಯದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ೪ ನೇ ತಾಂತ್ರಿಕ ಸಮಿತಿಯ ಸಭೆ ಬೆಂಗಳೂರಿನ ಕಾವೇರಿ ನೀರಾವರಿ ನಿಗಮದಲ್ಲಿ ನಡೆಯುವ ಮುನ್ನ ನಿಗಮದ ಮಹಿಳಾ ಇಂಜಿನಿಯರ್‌ಗಳೊಂದಿಗೆ ಸಮಾಲೋಚನೆ ನಡೆಸಿದರು.

 ಈ ಆವರಣದಲ್ಲಿರುವ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಡಿಯಲ್ಲಿ ಸ್ಥಾಪನೆಯಾಗಿರುವ ಜಿಯೋಮೆಟಿಕ್ ಸಂಸ್ಥೆಯು ಈ ಕೆಲಸ ಮಾಡಬೇಕು. ಅವರ ಜೊತೆಗೆ ಒಬ್ಬೊಬ್ಬರು ಒಂದೊಂದು ವಿಧಾನಸಭಾ ಕ್ಷೇತ್ರದ ಜವಾಬ್ಧಾರಿ ಪಡೆದು ಆಯಾ ವ್ಯಾಪ್ತಿಯ ವಿವಿಧ ಇಲಾಖೆ ಅಧಿಕಾರಿಗಳು, ಇಂಜಿನಿಯರ್‌ಗಳು, ಚುನಾಯಿತ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ರೈತರು ಹೀಗೆ ಆಸಕ್ತರೆಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಹಾಲಿ ಇರುವ ಮತ್ತು ಅಗತ್ಯವಿರುವ  ಯೋಜನೆಗಳ ಬಗ್ಗೆ ಅಧ್ಯಯನ ವರದಿ ತಯಾರಿಸುವುದು ಅಗತ್ಯವಾಗಿದೆ ಎಂದರು.

 ಭಾಗವಹಿಸಿದ್ದ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳು ಇದು ಬಹಳ ಉತ್ತಮ ಸಲಹೆ, ನಾವು ನಮ್ಮ ಕೆಲಸದ ಜೊತೆಗೆ ದಿನದ 24 ಗಂಟೆಯಲ್ಲಿ ಒಂದು ಗಂಟೆ ಈ ಕೆಲಸವನ್ನು ಮಾಡಲು ಉತ್ಸುಕರಾಗಿದ್ದೇವೆ, ಸರ್ಕಾರದಿಂದ ಆದೇಶ ಬಂದಲ್ಲಿ ಅನೂಕೂಲವಾಗಲಿದೆ ಎಂಬ ಅಭಿಪ್ರಾಯ ಪಟ್ಟರು.

 ಮಾನ್ಯ ಜಲಸಂಪನ್ಮೂಲ ಸಚಿವರು ಮತ್ತು ಮುಖ್ಯಮಂತ್ರಿಗಳ ಬಳಿ ಸಮಾಲೋಚನೆ ನಡೆಸಿ ಒಂದು ಆದೇಶ ಹೊರಡಿಸಲು ಶ್ರಮಿಸಲಾಗುವುದು, ನೇಮಿಸಿದ ಇಂಜಿನಿಯರ್ ಯಾವುದೇ ಕಡೇ ವರ್ಗವಾದರೂ ಅವರೇ ಈ ಕೆಲಸವನ್ನು ಮಾಡುವುದು ಸೂಕ್ತವಾಗಿದೆ, ಇದರಿಂದ ಯಾವುದೇ ಯೋಜನೆಗಳು ಜಾರಿಯಾದರೂ ಅವರ ಗಮನಕ್ಕೆ ಬರುವುದರಿಂದ ಅಧ್ಯಯನ ಮತ್ತು ಅನುಷ್ಠಾನ ಮಾಡಲು ಅನೂಕೂಲವಾಗಲಿದೆ.

 ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಡಿ ಇಂಥಹ ಆಸಕ್ತ ಇಂಜಿನಿಯರ್ ಆಯ್ಕೆ ಮಾಡಿಕೊಂಡು ವರ್ಕ್ಸ್ ಪ್ರಮ್ ಹೋಮ್ ಮಾದರಿಯಲ್ಲಿ ಅಧ್ಯಯನ ಮಾಡುವವರಿಗೆ ವಿಶೇಷ ಭತ್ಯೆ ನೀಡಲೂ ಬಹುದಾಗಿದೆ, ಇದೊಂದು ಅಧ್ಯಯನ ಮಾಡುವ ಆಸಕ್ತರ ಟೀಮ್ ಆಗಲಿದೆ ಎಂದು ಬಸವರಾಜ್‌ರವರು ಸಲಹೆ ನೀಡಿದರು.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ತಾಂತ್ರಿಕ ಸಮಿತಿಯ ನಿರ್ದೇಶಕರು ಆದ ಶ್ರೀ ಜೈಪ್ರಕಾಶ್‌ರವರು ಮಾತನಾಡಿ ಸಾರ್ ಮಾನ್ಯ ಜಲಸಂಪನ್ಮೂಲ ಸಚಿವರು ಮತ್ತು ಮುಖ್ಯಮಂತ್ರಿಗಳ ಪತ್ರ ಬಂದ ನಂತರ ಈ ಬಗ್ಗೆ  ಮುಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದರು.

 ರಾಜ್ಯದ ಆಸಕ್ತ ಇಂಜಿನಿಯರ್ ತಂಡ ಕಟ್ಟುವ ಮೂಲಕ ರಾಜ್ಯದ ಸಮಗ್ರ ನೀರಾವರಿ ಅಧ್ಯಯನ ಮಾಡುವ  ಸಲಹೆ ಬಹಳ ಒಳ್ಳೆಯದು, ಆಸಕ್ತರೆಲ್ಲರಿಗೂ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಒಂದು ಪ್ಲಾಟ್ ಫಾರಂ ಆಗಲಿದೆ, ಪೀಠದ ದ್ಯೇಯೋದ್ಧೇಶಗಳು ಇದೇ ಆಗಿದೆ.

  ಆಯಾ ವಿಧಾನಸಭಾ ಕ್ಷೇತ್ರದ ಇಂಜಿನಿಯರ್‌ಗಳು ಎಲ್ಲಿ ಯಾವುದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ನಮ್ಮ ತಾಲ್ಲೂಕು ಎಂಬ ಅಭಿಮಾನದಿಂದ ಅವರುಗಳು ಸಲಹೆ ನೀಡಿಲಿದ್ದಾರೆ ಎಂಬ ಅಭಿಪ್ರಾಯ ಪಟ್ಟರು.

 ಈ ಸಂದರ್ಭದಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ತಾಂತ್ರಿಕ ಸಮಿತಿಯ ಕಾರ್ಯದರ್ಶಿ ಶ್ರೀ ಹರೀಶ್ ಮತ್ತು ಶ್ರೀ ಚನ್ನವೀರಸ್ವಾಮಿ ಉಪಸ್ಥಿತರಿದ್ದರು.