22nd December 2024
Share

TUMAKURU:SHAKTHIPEETA FOUNDATION

  ಕೇಂದ್ರ ಸರ್ಕಾರ ಸಂವಿಧಾನಭದ್ಧವಾಗಿ ರಚಿಸಿರುವ ರಾಜ್ಯ ಮಟ್ಟದ ದಿಶಾ ಸಮಿತಿಗೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಅಧ್ಯಕ್ಷರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಉಪಾಧ್ಯಾಕ್ಷರು ಮತ್ತು ಸಮಿತಿಯ ಸದಸ್ಯರಾಗಿ ಕೇಂದ್ರ ಸರ್ಕಾರ ಸಂಸದರುಗಳಾದ ಶ್ರೀ ಅನಂತ ಕುಮಾರ್ ಹೆಗ್ಗಡೆರವರು, ಶ್ರೀ ರಮೇಶ್ ಜಿಗಜಿಣಗಿಯವರು, ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಡಿ.ಕೆ.ಸುರೇಶ್‍ರವರು, ಶ್ರೀಮತಿ ಸುಮಲತಾರವರು, ಶ್ರೀ ಪ್ರಜ್ವಲ್‍ರೇವಣ್ಣನವರು ಮತ್ತು ರಾಜ್ಯಸಭಾ ಸದಸ್ಯರುಗಳಾದ ಶ್ರೀ ಆಸ್ಕರ್ ಪರ್ನಾಂಡೀಸ್‍ರವರು, ಶ್ರೀ ರಾಜೀವ್ ಚಂದ್ರಶೇಖರ್‍ರವರನ್ನು ನೇಮಕ ಮಾಡಿದೆ.

ಮಾನ್ಯ ಮುಖ್ಯ ಮಂತ್ರಿಯವರು ರಾಜ್ಯ ಮಟ್ಟದ ದಿಶಾ ಸಮಿತಿಗೆ ಶಾಸಕರುಗಳಾದ ಶ್ರೀ ಲಾಲಜಿ ಮೆಂಡನ್ ರವರು, ಶ್ರೀ ಮತಿ ಸೌಮ್ಯರೆಡ್ಡಿರವರು, ಶ್ರೀ ನಿರಂಜನ್ ಕುಮಾರ್ ರವರು, ಶ್ರೀ ಶಂಕರ್ ಬಿ.ಪಾಟೀಲ್ ಮುನೆಕೊಪ್ಪರವರು, ಶ್ರೀ ಬಸವರಾಜ್ ಮತ್ತಿಮಡುರವರನ್ನು ನೇಮಕ ಮಾಡಿದ್ದಾರೆ. ದಿ.ಸತ್ಯನಾರಾಯಣ್ ರವರನ್ನು ನೇಮಕ ಮಾಡಿದ್ದರೂ ಅವರು ಮೃತಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಶ್ರೀ ಶಿವಯ್ಯ ಸ್ವಾಮಿರವರು, ಶ್ರೀ ಸುರೇಶ್‍ಕುಮಾರ್‍ರವರು, ಶ್ರೀ ರೇವಣ್ಣನವರನ್ನು ನೇಮಕ ಮಾಡಿದೆ, ಮಾನ್ಯ ಮುಖ್ಯ ಮಂತ್ರಿಯವರು  ಕುಂದರನಹಳ್ಳಿ ರಮೇಶ್ ರವರನ್ನು ನೇಮಕ ಮಾಡಿದ್ದಾರೆ.

ಸದಸ್ಯ ಕಾರ್ಯದರ್ಶಿಯಾಗಿ ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿಶಾಲಿನಿ ರಜನೀಶ್‍ರವರನ್ನು ನೇಮಕ ಮಾಡಿದ್ದಾರೆ, ಉಳಿದಂತೆ ಎಲ್ಲಾ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.

 ಕೇಂದ್ರ ಸರ್ಕಾರದಿಂದ  ಮಂಜೂರಾಗಿರುವ  ಅನುದಾನದ ಸದ್ಭಳಕೆ, ದುರುಪಯೋಗ ತಡೆಗಟ್ಟುವುದು, ಕಾಲಮಿತಿಯೊಳಗೆ ಖರ್ಚು ಮಾಡುವುದು ಮತ್ತು ಹೊಸ ಯೋಜನೆಗಳ ಮಂಜೂರಾತಿಗೆ ಶ್ರಮಿಸುವುದು ರಾಜ್ಯ ಮಟ್ಟದ ದಿಶಾ ಸಮಿತಿಯ ವ್ಯಾಪ್ತಿಗೆ ಬರುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಕೊರೊನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡಿದೆ, ರಾಜ್ಯದ ಸಂಸದರು ಬಿಲಸೇರಿದ್ದಾರೆ ಎಂಬ ವಿಚಾರಗಳು ಚರ್ಚೆಯಲ್ಲಿದ್ದರೂ, ಈ ಸಮಿತಿ ಸುಮ್ಮನೆ ಇದ್ದರೇ ಉತ್ತರ ಹೇಳುವರು ಯಾರು?

ಈ ಸಮಿತಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಚುನಾಯಿತ ಜನಪ್ರತಿನಿಧಿಗಳು, ಪರಿಣಿತರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇರುತ್ತಾರೆ. ಒಂದು ತರಹ ಇದು ಕೇಂದ್ರ ಸರ್ಕಾರ ನೇಮಿಸಿರುವ ಸರ್ವಪಕ್ಷಗಳ ಸಮಿತಿಯಂತಿದೆ.

ಮೌನವಾಗಿದ್ದರೇ ಈ ಸಮಿತಿ ರಚಿಸಿರುವ ಪ್ರಧಾನ ಮಂತ್ರಿಯವರಿಗೆ  ಅಪಮಾನ ಮಾಡಿದಂತಾಗುತ್ತದೆ. ಜೊತೆಗೆ ರಾಜ್ಯದ ಜನತೆಗೂ ಪಾರದರ್ಶಕವಾಗಿ ತಿಳಿಸದಂತಾಗುತ್ತದೆ. ಆದ್ದರಿಂದ ಸತ್ಯವನ್ನು ಜನತೆ ಮುಂದೆ ಇಡಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಅಗತ್ಯವಾಗಿದೆ.

ಹಾಗೆಯೇ ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ಹಿರಿಯ ಸಂಸದರು ಅಥವಾ ಜಿಲ್ಲೆಯ ಹೆಚ್ಚಿನ ಭಾಗ ಪ್ರತಿನಿಧಿಸುವ ಸಂಸದರು ಆಧ್ಯಕ್ಷರಾಗಿದ್ದರೆ, ರಾಜ್ಯಸಭಾ ಸದಸ್ಯರು ಹಾಗೂ ಜಿಲ್ಲೆಯ ಇತರೆ ಸಂಸದರು ಉಪಾಧ್ಯಾಕ್ಷರಾಗಿರುತ್ತಾರೆ. ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಎಲ್ಲಾ ಹಂತದ ಸ್ಥಳೀಯ ಸಂಸ್ಥೆಗಳ ನಿರ್ಧಿಷ್ಠ ಚುನಾಯಿತ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.

ಇಲ್ಲಿ ಕೇಂದ್ರ ಸರ್ಕಾರದಿಂದ ಯಾವ ಜಿಲ್ಲೆಗೆ ಎಷ್ಟು ಅನುದಾನ ಬಂದಿದೆ ಎಂಬ ಚರ್ಚೆ ಮಾಡಿದಲ್ಲಿ, ಇಡೀ ರಾಜ್ಯದ ಚಿತ್ರಣ ದೊರೆಯುತ್ತದೆ. ಈ ಸಭೆ ಮಾಡದೇ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಸಂಸದರು ಬಿಲ ಸೇರಿದ್ದಾರೆ ಎಂದು ಪದೆ, ಪದೇ ಹೇಳುವುದು ಎಷ್ಟು ಸರಿ. ನನಗೆ ಸಭೆ ಮಾಡಲು ಅನುಮತಿ ಕೊಡಿ ಎಂದು ಕೇಳುವುದರ ಜೊತೆಗೆ, ಈ ಸಭೆಗಳಲ್ಲಿ ಏಕೆ ಚರ್ಚೆಯಾಗುತ್ತಿಲ್ಲ ಎಂದು ಕೇಳುವುದು ಅವರ ಕರ್ತವ್ಯವಲ್ಲವೇ ಎಂದು ಜನರು ಮಾತನಾಡುತ್ತಿದ್ದಾರೆ.

ಎಲ್ಲಾ ಪಕ್ಷದ ಸಂಸದರು, ಶಾಸಕರು ಇದ್ದರೂ ಜನತೆಗೆ ಸತ್ಯ ತಿಳಿಸಲು ಏಕೆ ಸಾಧ್ಯವಾಗಿಲ್ಲ. ಎಲ್ಲಾ ಪಕ್ಷದವರು ಬಿಲ ಸೇರಿದ್ದಾರೆಯೇ ಎಂದು ಹೇಳಿದರೆ ತಪ್ಪೇನು ಎಂದು ಸಾರ್ವಜನಿಕರು ಚರ್ಚೆ ಮಾಡುತ್ತಿದ್ದಾರೆ. ಉತ್ತರಿಸುವರು ಯಾರು?

ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ದಿಶಾ ಸಮಿತಿಗಳು  ಪಾದರಸದಂತೆ ಕಾರ್ಯನಿರ್ವಹಿಸಬೇಕು. ನಮ್ಮ ಸಂಸ್ಥೆ ಮೊದಲು ಇಲ್ಲಿಂದ ಜಾಗೃತಿ ಮೂಡಿಸುವ ಮೂಲಕ ಕಾರ್ಯಾರಂಭ ಮಾಡಲಿದೆ.