20th December 2024
Share

TUMAKURU:SHAKTHIPEETA FOUNDATION

ತುಮಕೂರು ಗ್ರಾಮಾಂತರ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಯೋಜನೆ ಬಗ್ಗೆ ಒಂದು ಒಳ್ಳೆಯ ಚರ್ಚೆ ಆರಂಭವಾಗಿದೆ. ಇದನ್ನು ರಾಜಕೀಯ ಗೊಳಿಸಬಾರದು.

ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ವಾಸ್ತವವಾಗಿ ಸತ್ಯ ನುಡಿದಿದ್ದಾರೆ, ಅವರು ಹೇಳಿರುವುದು ಶೇ 100 ರಷ್ಟು ಸತ್ಯ.

ತುಮಕೂರು ಗ್ರಾಮಾಂತರ ಶಾಸಕರಾದ ಶ್ರೀ ಗೌರಿಶಂಕರ್ ರವರು ಸತ್ಯ ಹೇಳಿದ್ದಾರೆ, ಆದರೇ ಅವರಿಗೂ ಪೂರ್ಣವಾದ ಮತ್ತು ನಿಖರವಾದ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು.

ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡರವರು ಯೋಜನೆ ಮಾಡಿಸಿರುವುದು ನಿಜಕ್ಕೂ ಅಭಿನಂದನೀಯ, ಯೋಜನೆ ಏಕೆ ವೈಪಲ್ಯ  ಆಗಿದೆ ಎಂಬ ಮಾಹಿತಿ ಅವರ ಬಳಿ ಇಲ್ಲ.

ಆದರೇ ನಮ್ಮ ಶ್ರೀ ಬಿ.ಎಸ್.ಯಡಿಯೂರಪ್ಪನವರು, ನಮ್ಮ ಶ್ರೀ ಬಸವರಾಜ್ ಬೊಮ್ಮಾಯಿರವರು ಮಾಡಿರುವ ಯೋಜನೆಯನ್ನು ನಮ್ಮದೇ ಪಕ್ಷದ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಅವೈಜ್ಞಾನಿಕ ಎಂದಿರುವುದು ಸರಿಯೇ ಎಂದು  ಭಾವನಾತ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ.

ಇಲ್ಲಿ ರಾಜಕೀಯದ ಅಗತ್ಯ ಇಲ್ಲ.  ಯೋಜನೆಯ ಸತ್ಯಾಸತ್ಯತೆ ಅರಿಯಬೇಕು, ಅವಲೋಕನ ಮಾಡಬೇಕು. ಇದನ್ನು ಇದೂವರೆಗೂ ಯಾರು ಮಾಡಿಲ್ಲ. ಮಾಡುವ ಮುನ್ಸೂಚನೆಯೂ ಇಲ್ಲ.

ನೋಡಿ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಈ ಬಗ್ಗೆ ವ್ಯಾಪಕವಾದ ಚರ್ಚೆಯನ್ನು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಮಾಡಿದ್ದಾರೆ. ಬಸವರಾಜ್ ರವರು ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿದ ಮಾತು ತುಮಕೂರು ಜಿಲ್ಲೆಯಲ್ಲಿ ಇರುವ ಬಹುಗ್ರಾಮ ಯೋಜನೆಗಳ ನಿಖರವಾದ ಮಾಹಿತಿ ನೀಡಿ. ಯಾವ ವರ್ಷ ಎಷ್ಟು ಪ್ರಮಾಣದ ನೀರು ತುಂಬಿದೆ, ಎಷ್ಟು ಮನೆಗಳಿಗೆ ಎಷ್ಟು ದಿವಸ ನೀರು ನೀಡಲಾಗಿದೆ.

 ಯೋಜನೆ ವಿಫಲ ಆಗಿದ್ದರೇ ಯಾವ ಕಾರಣಕ್ಕೇ ಆಗಿದೆ. ಯೋಜನೆ ಸಫಲ ಆಗಿದ್ದರೇ ಏನು ಕಾರಣ ಸ್ಪಷ್ಟ ವರದಿಯನ್ನು ಹೇಮಾವತಿ ಮತ್ತು ಗ್ರಾಮೀಣಾಭಿವೃದ್ಧಿ ಇಂಜಿನಿಯರ್ ಒಟ್ಟಾಗಿ ಅಧ್ಯಯನ ಮಾಡಿ ವರದಿ ನೀಡಿ ಎಂದು ಸಭೆ ನಡವಳಿಕೆ ಮಾಡಿದ್ದಾರೆ. ಈ ವರದಿಯನ್ನು ಇನ್ನೂ ನೀಡಿಲ್ಲ. ಯಾರಿಗೆ ನಾಚಿಕೆ ಆಗಬೇಕು ನೀವೇ ಹೇಳಿ?

ಪ್ರತಿ ಯೋಜನೆಗೆ ಬಿಲ್ ಮಾಡಿಸಿಕೊಂಡು ಪರ್ಸೆಂಟೇಜ್ ಹಂಚಿಕೊಂಡ ನಂತರ, ಇಡೀ ದೇಶದಲ್ಲಿ ಯಾವ ಯೋಜನೆಯ ಬಗ್ಗೆಯೂ ಯಾರು ಮಾತನಾಡುವುದಿಲ್ಲ, ಯಾವುದೇ ಸಭೆಯಲ್ಲಿ ರಿವ್ಯೂ ಮಾಡುವುದಿಲ್ಲಾ. ಇದೂವರೆಗೂ ದಾಖಲೆ ನೀಡಿಲ್ಲ. ಇದಕ್ಕೆ ಯಾರು ಹೋಣೆ? ಯೋಜನೆ ಮಾಡಿ ಎಷ್ಟು ವರ್ಷ ಆಗಿದೆ. 

ಕೆರೆಗಳಿಗೆ ನದಿ ನೀರಿನಿಂದ ಶೇ 100 ರಷ್ಟು ಕೆರೆ ತುಂಬಿಸುವ ಪೈಪ್ ಲೈನ್ ಹಾಕುವ ಯೋಜನೆ ಆಗಬೇಕು. ಈಗ ಶೇ 30 ರಿಂದ 50 ರಷ್ಟು ರಿಂದ ಅಲೋಕೇಷನ್ ದೊರೆಯುವಷ್ಟು ನೀರು ಹಂಚಿಕೆ ಮಾಡಬೇಕು. ನಂತರ ಇದೇ ಯೋಜನೆಯಲ್ಲಿ ಉಳಿದ ಅಗತ್ಯವಿರುವ ನದಿ ನೀರು ಅಲೋಕೇಷನ್ ಆದ ನಂತರ ಹರಿಯಲು ಸಾದ್ಯಾವಾಗುವಂತೆ  ಪೈಪ್ ಲೈನ್ ವ್ಯವಸ್ಥೆ ಮಾಡಬೇಕು.

ಇದಕ್ಕೆ ತಾಂತ್ರಿಕ ಸಮಿತಿ ಒಪ್ಪುವುದಿಲ್ಲ, ಜನ ಸಂಖ್ಯೆವಾರು 55 ಲೀಟರ್ ಲೆಕ್ಕ ಹಾಕಿ ಕೊಂಡು ಕೆರೆಗಳಿಗೆ ನೀರು ನೀಡಿದರೆ ಕೆರೆಗಳಲ್ಲಿರುವ ಗುಂಡಿಗಳು ತುಂಬುವುದಿಲ್ಲ. ಮುಂದೆ ಇದೇ ಪೈಪ್ ಲೈನ್ ನಲ್ಲಿ ಹೆಚ್ಚಿಗೆ ನೀರು ಹರಿಸಲು ಸಾಧ್ಯಾವಿಲ್ಲ.

ಈಗ ಆಗಿರುವುದು ಇದೇ ಸ್ವಾಮಿ. ಇದಕ್ಕೇ ಏನು ಮಾಡಬಹುದು ಎಂಬ ವಾಸ್ತವ ಸತ್ಯದ ಬಗ್ಗೆ ಚರ್ಚೆ ಮಾಡಿ.ಪಕ್ಕಾ ಡೇಟಾ ಸಂಗ್ರಹ ಮಾಡಿ, ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿ.

ಶ್ರೀ ಜೆ.ಸಿ.ಮಾಧುಸ್ವಾಮಿಯರು ಪ್ರತಿ ಸಭೆಯಲ್ಲೂ ಅಧಿಕಾರಿಗಳಿಗೆ ಚಾಟಿ ಬೀಸುತ್ತಿದ್ದಾರೆ, ಯಾರು ನಿಖರವಾದ ಪಕ್ಕಾ ಮಾಹಿತಿ ಇಟ್ಟು ಕೊಂಡಿಲ್ಲ, ಇಟ್ಟು ಕೊಳ್ಳುವುದೂ ಇಲ್ಲ. ರಾಜ್ಯ ಸರ್ಕಾರದ ಕಾನೂನು ಸಚಿವರಾಗಿದ್ದರೂ ಅವರು ಏನು ಮಾಡಲು ಸಾಧ್ಯಾವಾಗಿವಿಲ್ಲ.ಇದೊಂದು ದುರಂತ

ಶ್ರೀ ಜಿ.ಎಸ್.ಬಸವರಾಜ್ ರವರು ಡೇಟಾ ಡಿಸ್ಟ್ರಿಕ್ ಮಾಡಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇದು ಸಾಧ್ಯಾವಿಲ್ಲ, ಅಧಿಕಾರಿಗಳು ಮಾಡುವುದಿಲ್ಲ. ಮೋದಿಯವರು ಮಾತ್ರ  ಡಿಜಿಟಲ್ ಇಂಡಿಯಾ ಅಬ್ಬರ ಮಾಡಬೇಕು ಅಷ್ಟೆ ಎಂಬಂತಾಗಿದೆ.

ಬೇರೆ ಇಲಾಖೆ ಮಾಹಿತಿ ಬೇಡ ಸ್ವಾಮಿ, ಮಾಧುಸ್ವಾಮಿಯವರ ಸಣ್ಣ ನೀರಾವರಿ ಇಲಾಖೆ, ಸುಮಾರು 5 ಲಕ್ಷ ಹಣ ಟೆಂಡರ್  ನೀಡಿ, ತುಮಕೂರು ಜಿಲ್ಲೆಯ ಯಾವ ಕೆರೆಗಳಿಗೆ ಯಾವ ನದಿ ನೀರು ಅಲೋಕೇಷನ್ ಆಗಿದೆ, ಉಳಿದ ಎಷ್ಟು ಕೆರೆಗಳಿಗೆ ನದಿ ನೀರು ಅಲೋಕೇಷನ್ ಮಾಡಿಸ ಬೇಕು, ಯಾವ ಗ್ರಾಮದಲ್ಲಿ ಯಾವುದೇ ವಿಧವಾದ ಜಲಸಂಗ್ರಹಾಗಾರ ಇಲ್ಲದೆ ಇದ್ದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ನಕ್ಷೆ ಸಿದ್ಧಪಡಿಸಿದ್ದಾರೆ.

ಇದನ್ನು ಗ್ರಾಮ ಪಂಚಾಯಿತಿವಾರು , ಈಗಾಗಲೇ ರವಾನಿಸಿದ್ದಾರೆ ,ತಪಾಸಣೆ ಮಾಡಿ ಮಾಹಿತಿ ನೀಡಲು ಇದೂವರೆಗೂ ಅಧಿಕಾರಿಗಳಿಗೆ ಸಾದ್ಯಾವಾಗಿಲ್ಲ. ನೋಡಿ ಎಂಪಿಯವರ ಪತ್ರ ಇಲ್ಲಿ ಹಾಕಿದ್ದೇನೆ. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ರವರಾದ ಶ್ರೀ ಮತಿ ತನುಜರವರು ಒಂದೆರಡು ದಿವಸದಲ್ಲಿ ಅರೆಬರೆ ಮಾಹಿತಿಯನ್ನು ಮಾದರಿಯಾಗಿ ಮಾಡಿಕಳುಹಿಸಿದ್ದಾರೆ. ಉಳಿದವರು ಏನು ಮಾಡಿದ್ದಾರೆ ? ಜಿಲ್ಲಾ ಪಂಚಾಯತ್ ಸಿಇಓ ರವರು ಎಂಪಿಯವರು ಬರೆದ ಪತ್ರವನ್ನು ಅಂದೇ ಅವರ ಗ್ರೂಪ್ ಗಳಿಗೆ ಹಾಕಿ ಮಾಹಿತಿ ನೀಡಿ ಎಂದರೂ ನೀಡಿಲ್ಲ. ಅವರ ಮಾತು ಕೇಳುವವರೂ ಇಲ್ಲವೇ ?

ಮಾಹಿತಿ ಪಡೆಯಲು ಮೋದಿಯವರು ಇಲ್ಲಿಗೆ ಬರಬೇಕಾ? ಬೊಮ್ಮಾಯಿರವರು ಇಲ್ಲಿಗೆ ಬರಬೇಕಾ? ಮಾಧುಸ್ವಾಮಿಯವರು ಮೀಟಿಂಗ್ ನಲ್ಲಿ ಇವರಿಗೆಲ್ಲಾ ಸನ್ಮಾನ ಮಾಡಬೇಕಾ?

ನಾಚಿಕೆ ಆಗಬೇಕು, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇಷ್ಟು ಸಣ್ಣ ಮಾಹಿತಿ ನೀಡಲು ಸಾಧ್ಯಾವಾಗಿಲ್ಲ. ಡಿಜಿಟಲ್ ಇಂಡಿಯಾ ಬಂದು 7 ವರ್ಷಗಳಾದರೂ ಜಿಐಎಸ್ ಬರೀ ಬಾಷಣಕ್ಕೆ ಸೀಮೀತವಾಗ ಬೇಕಾ?

ತಾಕತ್ತು ಇರುವವರು ಮೊದಲು ಗ್ರಾಮ ಪಂಚಾಯಿತಿವಾರು, ಗ್ರಾಮವಾರು ಕೆರೆ-ಕಟ್ಟೆಗಳ, ಪಿಕ್ ಅಪ್ ಗಳ ಮಾಹಿತಿಯನ್ನು ಪಡೆಯಿರಿ. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ರೀತಿಯಲ್ಲಿ ಹಂಚಿಕೆ ಮಾಡಲು ಚಿಂತನೆ ನಡೆಸಿ. ಇದೂವರೆಗೂ ಜಿಲ್ಲೆಯಲ್ಲಿ ಮಾಡದ ಕೆಲಸವನ್ನು ಮಾಧುಸ್ವಾಮಿಯವರು ಮತ್ತು ಬಸವರಾಜ್ ರವರು ಮಾಡಲು ಹೊರಟಿದ್ದಾರೆ.

ಆದರೇ ಇಬ್ಬರಿಗೂ ಅಧಿಕಾರಿಗಳು ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ನಾನಂತೂ ಪ್ರತಿ ಯೋಜನೆಯ ಅಧ್ಯಯನ ಮಾಡಿ, ಸತ್ಯಾಂಶ ವನ್ನು ಜನಕ್ಕೆ ಹೇಳುವ ಕೆಲಸ ಮಾಡುತ್ತೇನೆ. ಮರ್ಯಾದೆ ಹೋಗುವುದು ಯಾರದ್ದು?

ರಾಜಕಾರಣದ ಯೋಜನೆಗೆ ಇತಿಶ್ರೀ ಹಾಡಿ. ಪೊಲಿಟಿಕಲ್ ಅಧಿಕಾರಿಗಳಿಗೆ ಧಿಕ್ಕಾರ ಹಾಕಿ, ಅಂದರೆ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯದೆ ಇಂಜಿನಿಯರಿಂಗ್ ಹೇಳುವ ರೀತಿಯಲ್ಲಿ ಯೋಜನೆ ರೂಪಿಸಿ, ಜನರ ಮುಂದೆ ನಾಟಕ ನಿಲ್ಲಿಸಿ. ವಾಸ್ತವವಾಗಿ ಸಮಸ್ಯೆ ಬಗೆ ಹರಿಸಿ. ನಿಮ್ಮ ಚರ್ಚೆಗಳು ವಾಸ್ತವಕ್ಕೆ ಹತ್ತಿರ ವಿರಲಿ.

ಅಟಲ್ ಭೂಜಲ್ ಯೋಜನೆ ನಾಮಕವಾಸ್ಥೆ ಎಂಬಂತಾಗಿದೆ. ಈ ಯೋಜನೆ ಅಡಿಯಲ್ಲಿ ಈ ಎಲ್ಲಾ ಮಾಹಿತಿಯನ್ನು ಸಂಗ್ರಹ ಮಾಡಬೇಕು. ಕನಿಷ್ಠ 6 ತಾಲೋಕಿನಲ್ಲಾದರೂ ಈ ಮಾಹಿತಿ ಇರಬೇಕು. ನಾನು ಕೇಳಿ, ಕೇಳಿ ಸಾಕಾಗಿದೆ. ಗ್ರಾಮೀಣ ಮಾತಿನಂತೆ ತಿಪ್ಪೂರಲಾಗ ಹಾಕಿದರೂ ಊಹೂಂ.

ಯಾವ ವೇದಿಕೆಯಲ್ಲಾದರೂ ಚರ್ಚೆ ನಡೆಸಿ,ನಿಯಾಮನುಸಾರ ನಾನು ಕೇಳುವ ಮಾಹಿತಿ ನೀಡದೇ ಇದ್ದಲ್ಲಿ, ಆ ಮಾಹಿತಿ ಸಂಗ್ರಹ ಮಾಡಲು ಕೋಟಿಗಟ್ಟಲೇ ಹಣ ವ್ಯಯ ಮಾಡಿರುವವರಿಗೆ ಏನು ಮಾಡುತ್ತೀರಿ? ಏನೂ ಮಾಡಲು ಸಾದ್ಯಾವಿಲ್ಲ!

ಇವ ನಮ್ಮ ಜಾತಿಯವ, ನಮ್ಮ ಪಕ್ಷದ ನಾಯಕರ ಸಂಭಂಧಿ ಅಥವಾ ನನಗೆ ಸಹಾಯ ಮಾಡಿದ್ದಾರೆ ಎಂದು ತಿಪ್ಪೆ ಸಾರಿಸುತ್ತೀರಿ? ಇದೇ ವಾಸ್ತವ, ಸತ್ಯ ಯಾವಾಗಲೂ ಕಹಿ ಇರುತ್ತದೆ.

ತುಮಕೂರು ಜಿಲ್ಲಾ ದಿಶಾ ಸಮಿತಿಯ ಸದಸ್ಯನಾಗಿ ಇಂದಿಗೆ ದಿನಾಂಕ:21.10.2019 ರಿಂದ 21.10.2021 ರವರೆಗೆ ಸುಮಾರು ಎರಡು ವರ್ಷ ಆಯಿತು. ಇಲ್ಲಿಯವರೆಗೂ ತುಮಕೂರು ಜಿಐಎಸ್, ಡಿಜಿಟಲ್ ಡಾಟಾ ಬಗ್ಗೆ ಪ್ರತಿ ಸಭೆಯಲ್ಲೂ ಪಾಠ ಮಾಡಿದ್ದೇವೆ. ಉಳಿದ ಅವಧಿಯಲ್ಲಿ ಇಲಾಖಾವಾರು ಅಧಿಕಾರಿಗಳ ವೈಫಲ್ಯಗಳ ಬಗ್ಗೆ  ಜನ ಜಾಗೃತಿ ಮಾಡುವ ಕೆಲಸ ಇಂದಿನಿಂದ ಆರಂಭವಾಗಿದೆ.

ಚಿನ್ನಾಗಿ ಕೆಲಸ ಮಾಡಿರುವವರಿಗೆ ದಿಶಾ ಅವಾರ್ಡ್ ನೀಡುತ್ತೇವೆ. ಗೌರಮ್ಮನವರ ಹಾಗೆ ಸಭೆಗೆ ಬಂದು ಹೋಗುವವರಿಗೆ  ಗೋವಿಂದಾ! ಗೋವಿಂದಾ!! ಗೋವಿಂದಾ!!!

ನೋಡೋಣ ಎಲ್ಲಿಗೆ ನಿಲ್ಲುತ್ತೆ ನಮ್ಮ ಮಾಹಿತಿ ಆಂದೋಲನ !