22nd November 2024
Share

ಮರ ಕಡಿದರೆ ಕೈಕೊಳ ಹಾಕಿ ಮೆರವಣಿಗೆ ಮಾಡಿ: ಜಿ.ಎಸ್.ಬಸವರಾಜ್

TUMAKURU:SHAKTHIPEETA FOUNDATION

ಅನಧಿಕೃತಕವಾಗಿ ಮರ ಕಡಿದವರಿಗೆ ಕೈಕೊಳ ಹಾಕಿ ಮೆರವಣಿಗೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಅಧಿಕಾರಿಗಳಿಗೆ ಖಡಕ್  ಆಗಿ ಸೂಚಿಸಿದರು. 

ನಗರದಲ್ಲಿ ರಾತ್ರೋರಾತ್ರಿ ಬಿ.ಹೆಚ್.ರಸ್ತೆಯ ಡಿವೈಡರ್‍ನಲ್ಲಿ ಹಾಕಿದ್ದ ಬೇವಿನ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಂಸದರು, ಕೂಡಲೇ ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

 ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆಯ ಆಯುಕ್ತರಾದ ರೇಣುಕಾ ಮತ್ತು ಡಿ.ಎಫ.ಓ ರಮೇಶ್ ಅವರುಗಳು, ಈಗಾಗಲೇ ಆತನ ವಿರುದ್ದ ಎಫ್.ಐ.ಆರ್. ದಾಖಲಾಗಿದೆ.ಆದರೆ ಮರ ಕಡಿದ ದಿನ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.

  ಅಧಿಕಾರಿಗಳ ಈ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ನಗರದಲ್ಲಿ ಮರಗಳನ್ನು ಕಡಿದು ಸಾಗಿಸಲೆಂದೇ ಕೆಲವರಿದ್ದಾರೆ. ಅಂತಹವರ ಕೈಗೆ ಕೊಳ ತೊಡಿಸದಿದ್ದರೆ ಒಂದು ಮರಗಳನ್ನು ಉಳಿಯಲು ಬಿಡುವುದಿಲ್ಲ. ಒಂದು ಮರ ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದು, ಅದರ ನೆಪದಲ್ಲಿ 20 ಮರಗಳನ್ನು ಕಡಿಯುತ್ತಾರೆ.ಹಾಗಾಗಿ ಇನ್ನು ಮುಂದಿನ ಮರಗಳನ್ನು ಕಡಿಯುವ ಅನಿವಾರ್ಯತೆ ಬಂದರೆ ಜನತಾ ವೈವಿಧ್ಯ ಸಮಿತಿ ಮುಂದಿಟ್ಟು, ಅನುಮತಿ ಪಡೆದ ನಂತರವೇ ಕಡಿಯಲ ಅನುಮತಿ ನೀಡುವಂತೆ ಡಿಎಫ್‍ಓಗೆ ಸೂಚಿಸಿದರು.

ತುಮಕೂರು:ನಗರದಲ್ಲಿರುವ ಈಗಾಗಲೇ ಗುರುತಿಸಿರುವ ಪಾರ್ಕುಗಳನ್ನು ಶೀಘ್ರದಲ್ಲಿಯೇ ಹದ್ದುಬಸ್ತು ಮಾಡಿಸಿ,ಬೇಲಿ ನಿರ್ಮಿಸುವಂತೆ ನಗರಪಾಲಿಕೆ ಮತ್ತು ಟೂಡಾ ಆಯುಕ್ತರಿಗೆ ಸಂಸದ ಜಿ.ಎಸ್.ಬಸವರಾಜು ತಾಕೀತು ಮಾಡಿದ್ದಾರೆ.

ಟೌನ್‍ಹಾಲ್ ಕಟ್ಟಡದಲ್ಲಿ ನಡೆದ ಜನತಾ ಜೀವ ವೈವಿದ್ಯ ದಾಖಲಾತಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಈ ಹಿಂದಿನ ಕೆಲ ಅಧಿಕಾರಗಳು ಪಾರ್ಕುಗಳನ್ನು ಕೆಲವರಿಗೆ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ.ಅವುಗಳನ್ನು ಪತ್ತೆ ಮಾಡುವುದರ ಜೊತೆಗೆ,ಹಾಲಿ ಗುರುತಿಸಿರುವ ಪಾರ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜಿಯೋಟ್ಯಾಗ್ ಮಾಡುವ ಕೆಲಸವನ್ನು ಆರಂಭಿಸುವಂತೆ ಸಭೆಯಲ್ಲಿ ಹಾಜರಿದ್ದ ನಗರಪಾಲಿಕೆಯ ಆಯುಕ್ತರಾದ ರೇಣುಕಾ,ಟೂಡಾ ಆಯುಕ್ತರಾದ ಯೋಗಾನಂದ ಕುಮಾರ್ ಅವರಿಗೆ ಸೂಚಿಸಿದ ಸಂಸದರು,ಮುಂದಿನ ಸಭೆಯಲ್ಲಿ ಅವುಗಳ ಅಂಕಿ ಅಂಶದೊಂದಿಗೆ ಹಾಜರಾಗಬೇಕೆಂದರು.

ಸಭೆಗೆ ಈ ಕುರಿತು ಮಾಹಿತಿ ನೀಡಿದ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ನಗರದಲ್ಲಿ ಸುಮಾರು 521 ಪಾರ್ಕುಗಳಿದ್ದು, ಇವುಗಳಲ್ಲಿ 370 ಪಾರ್ಕುಗಳನ್ನು ಈಗಾಗಲೇ ಗುರುತಿಸಿ, ಹದ್ದುಬಸ್ತು ಮಾಡಿಸಿ,ಜಿಪಿಎಸ್‍ಗೆ ಅಳವಡಿಸಲಾಗಿದೆ.ಉಳಿದವುಗಳ ಒತ್ತುವರಿ ತೆರೆವು,ಗಡಿ ಗುರುತಿಸುವ ಕಾರ್ಯ ಚಾಲನೆಯಲ್ಲಿದೆ. ಕೆಲ ದಿನಗಳಿಂದ ಸರ್ವೆಯರ್‍ಗಳ ಮುಷ್ಕರ ವಿದ್ದ ಪರಿಣಾಮ ಕುಂಠಿತವಾಗಿತ್ತು. ಮುಂದಿನ ನಾಲ್ಕು ತಿಂಗಳಲ್ಲಿ ನಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಪಾರ್ಕುಗಳನ್ನು ವಶಕ್ಕೆ ಪಡೆದು,ಪೆನ್ಸಿಂಗ್ ಮಾಡಿಸುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದರು.

ಪ್ರಸ್ತುತ ನಗರದಲ್ಲಿರುವ ಪಾರ್ಕುಗಳ ಒತ್ತುವರಿ ಸೇರಿದಂತೆ ಇನ್ನಿತರ ವಿಚಾರಗಳಿಗಾಗಿ 330 ಜಾಗಗಳ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ,125 ಜಾಗಗಳ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ,80 ಜಾಗಗಳ ಬಗ್ಗೆ ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ ವ್ಯಾಜ್ಯ ನಡೆಯುತ್ತಿದೆ.ಇವುಗಳನ್ನು 150ಕ್ಕೂ ಹೆಚ್ಚು ಪ್ರಕರಣಗಳು ಖುಲ್ಲಾ ಆಗಿವೆ.ಈ ಬಗ್ಗೆ 22ರ ಮಂಗಳವಾರದ ವಿಶೇಷ ಸಭೆಯನ್ನು ಪಾಲಿಕೆಯ ಪರ ವಕೀಲರೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆಯುಕ್ತರು ವಿವರ ನೀಡಿದರು.

ನಗರ ಪಾಲಿಕೆಯ 15ನೇ ವಾರ್ಡಿನ ಸದಸ್ಯೆ ಶ್ರೀಮತಿ ಗಿರಿಜಾಧನಿಯಕುಮಾರ್ ಮಾತನಾಡಿ,ನಮ್ಮ ವಾರ್ಡಿನಲ್ಲಿ ಎರಡು ಪಾರ್ಕುಗಳನ್ನು ಸ್ಮಾರ್ಟಿಸಿಟಿ ಅನುದಾನದಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಅಭಿವೃದ್ದಿ ಪಡಿಸಲಾಗಿದೆ.ಆದರೆ ನಿರ್ವಹಣೆಗೆ ಅನುದಾನ ನೀಡದ ಕಾರಣ,ಪಾರ್ಕುಗಳು ಹಾಳಾಗಿವೆ.ಸರಕಾರಿ ಜೂನಿಯರ್ ಕಾಲೇಜಿನ ಆಲದ ಮರದ ಪಾರ್ಕು, ಎನ್.ಇ.ಪಿ.ಎಸ್.ಪೊಲೀಸ್ ಠಾಣೆ ಹಿಂದಿನ ಅಜಾದ್ ಪಾರ್ಕುಗಳು ಹಾಳು ಸುರಿಯುತ್ತಿದ್ದು,ಜನರು ಹಿಡಿಶಾಪ ಹಾಕುತ್ತಿದ್ದಾರೆ. ಹಾಗಾಗಿ ನಿರ್ವಹಣೆಗೆ ಪಾಲಿಕೆವತಿಯಿಂದ ಅನುದಾನ ನೀಡುವಂತೆ ಒತ್ತಾಯಿಸಿದರು.

  ಇದಕ್ಕೆ ದ್ವನಿಗೂಡಿಸಿದ ಸಂಸದರು,ಬೆಂಗಳೂರು ಸೇರಿದಂತೆ ಎಲ್ಲಾ ಪಾಲಿಕೆಗಳಲ್ಲಿಯೂ ಪಾರ್ಕುಗಳ ನಿರ್ವಹಣೆಗೆ ಅನುದಾನ ನೀಡಲಾಗುತ್ತಿದೆ. ಹಾಗಾಗಿ ತುಮಕೂರು ಪಾಲಿಕೆಯಲ್ಲಿಯೂ ಅನುದಾನ ಮೀಸಲಿಡುವಂತೆ ಸಲಹೆ ನೀಡಿದ ಸಂಸದರು,ಜನರ ತೆರಿಗೆ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ತುಮಕೂರು ಹೊರವಲಯದ ಮಲ್ಲಸಂದ್ರ ಸಮೀಪ ರಾಷ್ಟ್ರೀಯ ಹೆದ್ದಾರಿ 206ರ ನಾಲ್ಕುಪಥದ ರಸ್ತೆಗೆ ಅಭಿವೃದ್ದಿಗೆ ಅಡ್ಡಲಾಗಿರುವ ಬಿ.ಎಸ್.ಎನ್.ಎಲ್.ಟವರ್‍ನ್ನು ಸ್ಥಳಾಂತರಿಸುವ ಕುರಿತು ಎನ್.ಹೆಚ್.ಎ.ಐನ ಅಧಿಕಾರಿ ಹಾಗೂ ಬಿ.ಎಸ್.ಎನ್.ಎಲ್ ಪ್ರಭಂಧಕರೊಂದಿಗೆ ಮಾತುಕತೆ ನಡೆಸಿದ ಸಂಸದ ಜಿ.ಎಸ್.ಬಸವರಾಜು, ರಸ್ತೆ ಅಭಿವೃದ್ದಿಗೆ ಅಡ್ಡವಾಗಿರುವ ಮೊಬೈಲ್‍ಟವರ್ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು ನಗರದಲ್ಲಿ ರಾಜಗಾಲುವೆ ಒತ್ತುವರಿ ಕುರಿತಂತೆ ಚರ್ಚೆಯಲ್ಲಿ ಮಾಹಿತಿ ನೀಡಿದ ಪಾಲಿಕೆ ಆಯುಕ್ತರು,ರಾಜಗಾಲುವೆ ಒತ್ತುವರಿ ತೆರೆವಿಗೆ ಸಂಬಂಧಿಸಿದಂತೆ ಇನ್ನೂ 25 ಕಿ.ಮಿ. ಮಾತ್ರ ಸರ್ವೆಗೆ ಬಾಕಿ ಇದೆ. ಉಳಿದವುಗಳನ್ನು ಈಗಾಗಲೇ ಅಳತೆ ಮಾಡಿ, ತೆರವು ಮಾಡಲು ಆದೇಶ ನೀಡಲಾಗಿದೆ.ನಗರದಲ್ಲಿ ಒಂದೇ ಬಾರಿ, ರಾಜಗಾಲುವೆ,ಪಾರ್ಕು ಒತ್ತುವರಿ, ಸರಕಾರಿ ಜಾಗಗಳ ಗುರುತಿಸುವ ನಡೆಯುತ್ತಿದ್ದು, ಇರುವ ನಾಲ್ವರು ಸರ್ವೆಯರ್‍ಗಳನ್ನೇ ಎಲ್ಲದಕ್ಕೂ ಬಳಸಿಕೊಳ್ಳಲಾಗುತ್ತಿದೆ.ಮುಂದಿನ ಮೂರು ತಿಂಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ, ತೆರವಿಗೆ ಚಾಲನೆ ನೀಡಲಾಗುವುದು ಎಂದರು.

ನಗರದಲ್ಲಿ ಕುಡಿಯುವ ನೀರು,ಯುಜಿಡಿ,ಮರ,ಗಿಡಗಳನ್ನು ನೆಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.ಸಭೆಯಲ್ಲ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್.ನಾಗಣ್ಣ,ಪಾಲಿಕೆಯ ವೈದ್ಯಾಧಿಕಾರಿ ಡಾ.ರಕ್ಷಿತ್,ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್,ಅರಣ್ಯ ಇಲಾಖೆ,ಆಯುಷ್ಮಾನ್,ಟೂಡಾ,ಪಾಲಿಕೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.