22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ,ಗುಬ್ಬಿ ತಾಲ್ಲೋಕಿನ ನನ್ನ ಹುಟ್ಟೂರು ಕುಂದರನಹಳ್ಳಿಯಲ್ಲೊಂದು ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ತಪೋವನ 2000 ನೇ ಇಸವಿಯಲ್ಲಿ ಆರಂಭವಾಗಿದೆ. ಈಗ ಈ ತಪೋವನವನ್ನು ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಪವಿತ್ರ ವನ ಎಂದು ಮರುನಾಮಕರಣ ಮಾಡಿ, ರಾಜ್ಯ ಸರ್ಕಾರದ ಪವಿತ್ರ ನ ಯೋಜನೆಯಾಗಿ ಪರಿವರ್ತಿಸಲು ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ಮಹತ್ವದ ನಿರ್ಣಯ ಕೈಗೊಂಡಿದೆ.

ಅಂದಿನ ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರ ಲೋಕಸಭಾ ಸದಸ್ಯರ ಅನುದಾನದಲ್ಲಿ ಸುಮಾರು 5 ಎಕರೆ ಗಿಂತಲೂ ಹೆಚ್ಚು ಸರ್ಕಾರಿ ಗೋಮಾಳದಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಒಂದು ತೆಂಗಿನ ತೋಟ ನಿರ್ಮಾಣ ಮಾಡಿ, ಬೋರ್ ವೆಲ್ ಕೊರೆಸಿ, ಹನಿ ನೀರಾವರಿ ಅಳವಡಿಸಿ, ಮುಳ್ಳುತಂತಿ ಹಾಕಲಾಗಿತ್ತು.

ಬರುವ ಆದಾಯವನ್ನು ಕುಂದರನಹಳ್ಳಿ ಗ್ರಾಮದ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದೊಂದು ನನ್ನ ಕನಸಿನ ವಿನೂತನ ಯೋಜನೆ, ಈಗ ಸ್ವಲ್ಪ ಖಾಲಿ ಇದ್ದ ಜಾಗ ಮತ್ತು ತೋಟದ ಅಗತ್ಯವಿರುವ ಭಾಗದಲ್ಲಿ ಔಷಧಿ ಗಿಡಗಳನ್ನು ಹಾಕುವ ಮೂಲಕ ಮಾದರಿ ಪವಿತ್ರ ವನ ಮಾಡಲು ದಿನಾಂಕ:31.03.2022 ರಂದು ಟ್ರಸ್ಟ್ ಸದಸ್ಯರು ನಿರ್ಣಯ ಮಾಡಿದ್ದಾರೆ.

ಈ ಸಭೆ ನಡೆಯುವಾಗ ಒಂದು ವಿಚಿತ್ರವಾದ ಮಾಹಿತಿ ನನ್ನ ಕಿವಿಗೆ ಬಿತ್ತು. ಈ ವನದಲ್ಲಿನ ಟಿ.ಸಿ.ಯನ್ನು ಬೆಸ್ಕಾಂ ಅಧಿಕಾರಿಗಳು ಕದ್ದು ಬೇರೆ ಕಡೆ ಹಾಕಿ ಮೂರು ತಿಂಗಳಾಗಿದೆ. ಈಗಾಗಲೇ ಟ್ರಸ್ಟ್ ವತಿಯಿಂದ ಮೂರು ಸಾವಿರ ಹಣಗಳನ್ನು ನೀಡಲಾಗಿದೆಯಂತೆ (ಲಂಚವೋ ಏನೋ ಗೊತ್ತಿಲ್ಲ), ತೋಟ ಒಣಗುತ್ತಿದೆ ಟಿಸಿ ಕೊಡಿಸಿ ಎಂದು ಹೇಳಿದಾಗ ನನಗೆ ಮೈಯೆಲ್ಲಾ ಬೆಂಕಿಯಾಯಿತು.

ಅಲ್ಲಿಂದಲೇ ಫೋನ್ ಮೂಲಕ ತುಮಕೂರು ಬೆಸ್ಕಾಂ ವಿಭಾಗದ ಇಇ ಶ್ರೀ ಜಗದೀಶ್ ರವರಿಗೆ ಮಾತನಾಡಿದಾಗ, ಸಾರ್ ನನಗೆ ಈ ವಿಷಯ ಗೊತ್ತಿಲ್ಲ, ಸಂಜೆ ವೇಳೆಗೆ ಟಿಸಿ ಅಳವಡಿಸುತ್ತೇವೆ ಎಂದು ಹೇಳಿದರು. ಸಂಜೆ ಅವರೇ ಈ ಪೋಟೋ ಹಾಕಿದ್ದು ವಿಶೇಷ. ನೋಡಿ ಕೆಳಹಂತದ ಅಧಿಕಾರಿಗಳ ಕರಾಮತ್ತು.

ನಾನು ಈ ಬಗ್ಗೆ ಇಂಧನ ಸಚಿವರಿಗೆ ದೂರು ನೀಡಲು ಬಯಸಿದ್ದೆ, ಆದರೇ ಇಇ ರವರ ಕಾರ್ಯ ವೈಖರಿಯಿಂದ ದೂರು ನೀಡುವುದು ಬೇಡ ಎಂಬ ತೀರ್ಮಾನ ಮಾಡಿದ್ದೇನೆ. ಈ ಟ್ರಸ್ಟ್ ನವರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.ಸಾಧ್ಯಾವಾದರೆ ಸನ್ಮಾನ ಮಾಡಬೇಕು ಎನಿಸುತ್ತಿದೆ.

ಈ ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಶ್ರೀ ಬಸವಲಿಂಗಯ್ಯ ಟ್ರಸ್ಟಿಗಳು ಮತ್ತು ಗ್ರಾಮಸ್ಥರಾದ ಶ್ರೀ ಶಿವಣ್ಣ, ಶ್ರೀ ಪಾಲಾಕ್ಷ, ಶ್ರೀ ಸಿದ್ಧರಾಮಣ್ಣ, ಶ್ರೀ ಮಹೇಶ್, ಶ್ರೀ ಸುರೇಶ್, ಶ್ರೀ ವಿಶ್ವನಾಥ್, ಶ್ರೀ ಗುಬ್ಬಣ್ಣ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀ ವಿಶ್ವನಾಥ್, ಶ್ರೀ ಕೆ.ಆರ್.ಮಹೇಶ್, ಶ್ರೀ ಶಿವಣ್ಣ ಇದ್ದರು, ಟಿಸಿ ಬಗ್ಗೆ ವಿಚಾರಿಸಿದಾಗ ಎಲ್ಲರೂ ಮುಸಿ ಮುಸಿ ನಗುತ್ತಿದ್ದರು.ಇದರ ಮರ್ಮ ನನಗೆ ದೊರೆತಿಲ್ಲ .