23rd June 2024
Share

TUMAKURU:SHAKTHIPEETA FOUNDATION

‘ಮನುಷ್ಯನಿಗೆ ಆಸೆ ಇರಬೇಕು, ದುರಾಸೆ ಇರಬಾರದು. ನಿಮ್ಮ ಊರು ಎಲ್ಲಿ? ಹೆಚ್.ಎ.ಎಲ್ ಎಲ್ಲಿ ಅದಕ್ಕೂ ಒಂದು ಮಿತಿ ಇರಬೇಕಲ್ಲವೇ? ಮಾತು ಹೇಳಿದ್ದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು’.

ನಾನು ಆಗ ಅವರಿಗೆ ಹೇಳಿದ ಮಾತು ಸಾರ್ ಇದು ವರ್ಗಾವಣೆ ಪತ್ರವಲ್ಲ, ಗುತ್ತಿಗೆದಾರರಿಗೆ ಬಿಲ್ ನೀಡುವ ಪತ್ರ ಅಲ್ಲ, ಅಭಿವೃದ್ಧಿ ಯೋಜನೆಗೆ ಒಂದು ಸಣ್ಣ ಪ್ರಯತ್ನ ಅಂದಾಗ, ಅವರು ತಕ್ಷಣ ನೀನು ಹೇಳುವುದು ಸರಿ, ರಾಜನನ್ನು ಯಾವಾಗಲೂ ಕೀರಿಟವನ್ನೇ ಕೇಳಬೇಕು. ಆಗ ಕನಿಷ್ಠ ಕಾಲುಂಗರವನ್ನಾದರೂ ಕೊಡುತ್ತಾರೆ ಎಂದು ಜೋಕ್ ಮಾಡಿ ಸಹಿ ಹಾಕಿದ್ದು ಇತಿಹಾಸ.

1988 ರಿಂದಲೂ ತುಮಕೂರು ಜಿಲ್ಲೆ ಬಿದರೆಹಳ್ಳ ಕಾವಲ್‍ನಲ್ಲಿರುವ ಸರ್ಕಾರಿ ಜಮೀನಿನನ್ಲ್ಲಿ ಎನಾದರೊಂದು ಬೃಹತ್ ಉದ್ಯಮ ಸ್ಥಾಪನೆ ಮಾಡಲೇ ಬೇಕು ಎಂಬ ಹಠ ಮತ್ತು ಛಲ ಹೊತ್ತು ಕೇಂದ್ರ ಸರ್ಕಾರದ ಯೋಜನೆಗೆ ಬಲೆ ಬೀಸಲು ನಾನು ಮತ್ತು ನಮ್ಮ ಶ್ರೀ ಟಿ.ಆರ್.ರಘೋತ್ತಮ್ ರಾವ್ ರವರು(2000 ರಿಂದ ನನ್ನ ಸಂಪರ್ಕ) ನಿರಂತರ ಪ್ರಯತ್ನ ಮಾಡುತ್ತಿದ್ದೆವು.

 1984 ರಲ್ಲಿ ಪ್ರಥಮಭಾರಿ ಲೋಕಸಭಾ ಸದಸ್ಯರಾಗಿದ್ದಾಗಲೇ ಜಮೀನನಲ್ಲಿ ತೆಂಗು ಸಂಶೋಧನಾ ಕೇಂದ್ರ ಆರಂಭಿಸಲು ಬಸವರಾಜ್ ರವರು ಪ್ರಯತ್ನ ಮಾಡಿದ್ದರಂತೆ.

ಅದೇ ವೇಳೆಯಲ್ಲಿ ರಕ್ಷಣಾ ಇಲಾಖೆ ನೂತನವಾಗಿ ದೇಶದಲ್ಲಿ ಹೆಚ್.ಎ.ಎಲ್ ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಆರಂಭಿಸುತ್ತಾರೆ ಎಂಬ ಸುದ್ಧಿ ನಮ್ಮ ಕಿವಿಗೆ ಬಿತ್ತು. ಆಗ ನಾವು ಏಕೆ ರಕ್ಷಣಾ ಇಲಾಖೆಗೆ ಪತ್ರ ಬರೆಸಬಾರದು ಎಂಬ ಅಲೋಚನೆ ಮಾಡಿ, ಪತ್ರವನ್ನು ಸಿದ್ಧಪಡಿಸಿಕೊಂಡು ಶ್ರೀ ಜಿ.ಎಸ್.ಬಸವರಾಜ್ ರವರ ಸಹಿಗೆ ಹೋದಾಗ ಅವರು ಹೇಳಿದ ಮಾತು.

ನಂತರ ಅವರು ಜಿಗಣಿ ಹಿಡಿದ ಹಾಗೆ ಯೋಜನೆಯ ಕಡತದ ಹಿಂದೆ ಬಿದ್ದು ಯೋಜನೆ ಮಂಜೂರಾತಿಗೆ ಶ್ರಮಿಸಿದ ಪುಣ್ಯಾತ್ಮ ಅವರು.

ತುಮಕೂರು ಉಪವಿಭಾಗಾಧಿಕಾರಿಗಳಾದ ಶ್ರೀ ಅಜಯ್‍ರವರು ಮತ್ತು ನಾನು ಮಾತನಾಡುತ್ತಿರುವಾಗ ಅವರು ನನಗೆ ಸಲಹೆ ನೀಡಿದ್ದು, ಹೆಚ್.ಎ.ಎಲ್ ನಿಮ್ಮೂರಿಗೆ ಹೇಗೆ ಬಂತು ಎಂಬ ಬಗ್ಗೆ ಒಂದು ಮ್ಯೂಸಿಯಂ ಏಕೆ ಆರಂಭಿಸಬಾರದು ಎಂಬ ಹುಳು’ ಬಿಟ್ಟು ಸುಮ್ಮನಾದರು.

ನನ್ನ ತಲೆಯಲ್ಲಿ ಕೊರೆಯಲು ಆರಂಭಿಸಿತು. ದಿನಾಂಕ:03.09.2022 ರಂದು ಈ ವಿಚಾರವನ್ನು ಕುಂದರನಹಳ್ಳಿಯ ನನ್ನ ಆತ್ಮೀಯರೊಂದಿಗೆ ಸಮಾಲೋಚನೆ ನಡೆಸಿದೆ. ಇದು ಒಳ್ಳೆಯ ನಿರ್ಧಾರ ಮೊದಲು ಈ ಕೆಲಸ ಮಾಡಿಸಲು ಪ್ರಯತ್ನ ಮಾಡಿ ಎಂಬ ಸಕಾರಾತ್ಮಕ ನಿಲುವು ವ್ಕಕ್ತ ಪಡಿಸಿದರು.

ನಂತರ ತುಮಕೂರಿಗೆ ಬಂದಾಗ ಶ್ರೀ ಜಿ.ಎಸ್.ಬಸವರಾಜ್ ರವರು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರ ಬಳಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ ಮಾಡುತ್ತಿದ್ದಾರೆ, ತಾವು ಬರಬೇಕಂತೆ ಎಂಬ ದೂರವಾಣೆ ಕರೆ ಬಂದಾಗ ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಹೋದೆ.

ಅಲ್ಲಿ ಶಕ್ತಿಪೀಠ ಫೌಂಡೇಷನ್ ಗೆ ಜಮೀನು ಖರೀದಿ ಅನುಮತಿ ಬಗ್ಗೆ  ಅನೌಪಚಾರಿಕವಾಗಿ ಚರ್ಚೆ ಆರಂಭಿಸಿ, ಜಿಲ್ಲಾಧಿಕಾರಿಗಳ ಸಲಹೆ ಕೇಳಿದಾಗ ಜಿಲ್ಲಾಧಿಕಾರಿಗಳು ಕಾನೂನು ಮತ್ತು ನಿಯಮಗಳ ಬಗ್ಗೆ ಮನವರಿಕೆ ಮಾಡಿದರು.

ಅಲ್ಲಿಂದ ಸಾಯಿಬಾಬಾ ದೇವಾಲಯಕ್ಕೆ ಬರುವಾಗ ಬಸವರಾಜ್‍ರವರು ಏನಪ್ಪಾ ಕುಂದರನಹಳ್ಳಿಯಲ್ಲೂ ಶಕ್ತಿಪೀಠದ ದೇವಾಲಯ ಕಟ್ಟುತ್ತೀಯಾ ಎಂದು ಮಾತು ಆರಂಭಿಸಿದರು.

ಇಲ್ಲ ಸಾರ್ ಹೆಚ್.ಎ.ಎಲ್ ಮ್ಯೂಸಿಯಂ ಆರಂಭಿಸಿದರೆ ಹೇಗೆ ಎಂಬ ವಿಚಾರದ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಆರಂಭವಾಗಿದೆ, ಎಂಬ ವಿಚಾರ ಮಾತನಾಡಿದಾಗ ಅವರು ಒಳ್ಳೆಯ ಕೆಲಸ ವಿಧ್ಯಾರ್ಥಿಗಳಿಗೂ ಅನೂಕೂಲವಾಗಲಿದೆ , ಇತಿಹಾಸವೂ ಇತರರಿಗೆ ಪ್ರೇರಣೆಯಾಗಲಿದೆ. ನಿಮ್ಮ ಊರಿನಲ್ಲಿಯೇ ಮಾಡು ಎಂಬ ಸಲಹೆ ನೀಡಿದರು.

 ನಾನು ಮತ್ತೆ ಅವರಿಗೆ ಕೇಳಿದ ಮಾತು, ಸಾರ್ ನಿಮ್ಮ ಜೊತೆ ಸೇರಿ ಸುಮಾರು 32 ವರ್ಷ ಆಯಿತು. ಅಂದರೆ ಸುಮಾರು 384 ತಿಂಗಳು, ತಿಂಗಳಿಗೆ ಒಂದು ಲಕ್ಷ ಲೆಕ್ಕ ಹಾಕಿದರೆ ಸುಮಾರು ನಾಲ್ಕು ಕೋಟಿಯಾಗಲಿದೆ.ಕೇಂದ್ರ ಸರ್ಕಾರದಲ್ಲಿ ಅನುದಾನ ಅಥವಾ ಸಿ.ಎಸ್.ಆರ್ ಫಂಡ್ ಕೊಡಿಸಿದರೆ ಪ್ರಯತ್ನ ಮಾಡುತ್ಥೆನೆ ಎಂದು ಜೋಕ್ ಮಾಡಿದೆ.

ನೋಡಪ್ಪಾ ಸರ್ಕಾರಿ ಯೋಜನೆಗಳ ಬಗ್ಗೆ ನಿನಗೆ ಹೆಚ್ಚಿನ ಮಾಹಿತಿ ಇದೆ. ಸರ್ಕಾರದಲ್ಲಿನ ಕಾನೂನು ಮತ್ತು ನಿಯಮದ ಪ್ರಕಾರ ಮುಂದುವರಿಯಿರಿ, ನಾನು ಎಲ್ಲಿಗೆ ಯಾರ ಬಳಿ ಬೇಕಾದರೂ ಬಂದು ಮಾತನಾಡುತ್ತೇನೆ ಎಂಬ ಸಲಹೆ ನೀಡಿದರು.

ಆತ್ಮೀಯ ಓದುಗರೇ

ನಾನು 1999 ರಲ್ಲಿ ಕುಂದರನಹಳ್ಳಿಯಲ್ಲಿ ಚಿಂತನಾ-ಕಾರ್ಯಾಗಾರ-ಅನುಷ್ಠಾನ’ ಘೋಷಣೆಯಡಿಯಲ್ಲಿ ತುಮಕೂರು ಲೋಕಸಭಾ ಕೇತ್ರದ ಕಾರ್ಯಾಗಾರ ಆರಂಭಿಸಿದೆ. ಈ ಕಟ್ಟಡದ ಜಮೀನು ವಿವಾದದಿಂದ, ನನ್ನ ನೀರಿಕ್ಷೆಗೆ ತಕ್ಕಂತೆ ಆ ಜಾಗದಲ್ಲಿ ಮುಂದುವರೆಯಲು ಸಾಧ್ಯಾವಾಗಲಿಲ್ಲ.

 ಈಗ ನನ್ನ ಹಲವಾರು ಸ್ನೇಹಿತರು, ಈ ಜಮೀನನಲ್ಲಿ ಏನಾದರೂ ಮಾಡು, ನೀನು ಚಿತ್ರದುರ್ಗದ ಜಿಲ್ಲೆಯ ಹಿರಿಯೂರಿನಲ್ಲಿ ಶಕ್ತಿಪೀಠ ಕ್ಯಾಂಪಸ್ ಆರಂಭಿಸುವುದರ ಜೊತೆಯಲ್ಲಿ, ಹುಟ್ಟೂರಿನಲ್ಲಿ ಮೊದಲು ಮಾಡು ಎಂಬ ಸಲಹೆ ನೀಡುತ್ತಿದ್ದಾರೆ. ಇದು ಅಷ್ಟು ಸುಲಭದ ಕೆಲಸವಲ್ಲದಿದ್ದರೂ ಒಂದು ಪ್ರಯತ್ನ ಮಾಡಲು ನನಗೂ ಆಲೋಚನೆ ಮೊಳಕೆಯೊಡೆದಿದೆ.

ಶ್ರೀ ಟಿ.ಆರ್.ರಘೋತ್ತಮರಾವ್ ರವರು ಸುದ್ದಿ ಓದಿದ ತಕ್ಷಣ, ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಸಚಿವರಾದ ಶ್ರೀ ರಾಜನಾಥ್ ಸಿಂಗ್ ರವರಿಗೆ, ಶ್ರೀ ಜಿ.ಎಸ್.ಬಸವರಾಜ್ ರಿಂದ ಪತ್ರ ಬರೆಸಲು ಡ್ರಾಪ್ಟ್ ಕಳುಹಿಸುತ್ತಾರೆ ಎಂಬ ನಂಬಿಕೆ ಇದೆ.

ನೀವೇನಂತೀರಾ?