ಲೋಕಸಭಾ ಸದಸ್ಯರ ಅಧ್ಯಕ್ಷತೆಯ 30 ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಕೇಂದ್ರ ಸರ್ಕಾರದ ಮುಂಗಡ ಪತ್ರ 2020 ರ ನಂತರ ಹಾಗೂ ರಾಜ್ಯ ಮುಂಗಡ ಪತ್ರ 2020 ರೊಳಗೆ ಸಭೆಗಳನ್ನು ನಡೆಸಿ ಕೇಂದ್ರದಿಂದ ಯಾವ ಜಿಲ್ಲೆಗೆ ಯಾವ ಇಲಾಖೆಯಿಂದ, ಯಾವ ಯೋಜನೆಯನ್ನು ಮಂಜೂರು ಮಾಡಿಸಬಹುದು ಎಂಬ ಪಟ್ಟಿ ಮಾಡಿ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಗೆ ಸಲ್ಲಿಸುವುದು ಅಗತ್ಯವಾಗಿದೆ.
ರಾಜ್ಯ ಮಟ್ಟದ ದಿಶಾ ಸಮಿತಿ ಕೇಂದ್ರದ ಮುಂಗಡ ಪತ್ರದ ಅನುದಾನ ಬಳಸಲು ರಾಜ್ಯದ ಪಾಲೆಷ್ಟು ಎಂಬ ಅಧ್ಯಯನ ಮಾಡಿ, ರಾಜ್ಯ ಸರ್ಕಾರದ ಮುಂಗಡ ಪತ್ರದಲ್ಲಿ ಪ್ರಕಟಿಸುವುದು ಒಳ್ಳೆಯ ಬೆಳವಣಿಗೆ. ಇದರಿಂದ ಆಯಾ ಜಿಲ್ಲೆಯ ಅಧಿಕಾರಿಗಳಿಗೆ ಒಂದು ಮಾರ್ಗದರ್ಶಿ ಸೂತ್ರದಂತೆ ಕಾರ್ಯ ನಿರ್ವಹಿಸಬಹುದಾಗಿದೆ.
ಮುಂಗಡ ಪತ್ರ ಅಧ್ಯಯನ ಮಾಡುವ ಪರಿಪಾಠ ರೂಡಿಯಾಗ ಬೇಕು. ಪ್ರತಿಯೊಂದು ಇಲಾಖೆಯಲ್ಲಿ ನಮ್ಮ ರಾಜ್ಯದ ಯಾವ ಭಾಗಕ್ಕೆ ಯಾವ ಯೋಜನೆ ಪಡೆಯಬಹುದು ಎಂಬ ವರದಿಗಳನ್ನು ಆಯಾ ಇಲಾಖೆಗಳು ಸಿದ್ಧಪಡಿಸಬೇಕು. ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರದ ಮುಂಗಡ ಪತ್ರ ಮಂಡಿಸಲು ಸಲಹೆ ನೀಡುವುದು ನಿಯಮವಾಗಬೇಕು.
ವರ್ಷದ ಕೊನೆಯ ತಿಂಗಳು ಬಿಲ್ ಮಾಡುವ ಸಮಯ, ನಮಗೆ ಎಂದೋ ಬರುವ ಹಣದ ಬಗ್ಗೆ ಚಿಂತನೆ ಮಾಡಲು ಸಮಯವಿಲ್ಲ, ಇರುವ ದುಡ್ಡು ಖಾಲಿ ಮಾಡಬೇಕು, ಏಫ್ರಿಲ್ ನಂತರ ಸಭೆ ನಡೆಸಿ ಎಂದು ಸಲಹೆ ನೀಡುವ ಅಧಿಕಾರಿಗಳು ಇದ್ದಾರೆ. ಇಷ್ಟು ಹೇಳಿದ ನಂತರ ಹಾಗೇಯೇ ಆಗಲಿ ಎನ್ನುವ ಸಂಸದರಿಗೇನು ಕೊರತೆಯಿಲ್ಲ. ರಾಜ್ಯ ಮಟ್ಟದ ದಿಶಾ ಸಮಿತಿ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಖಡಕ್ ಪತ್ರ ಬರೆದು ಸೂಚಿಸಬೇಕು. ಕಾಟಚಾರಕ್ಕೆ ಯಾವುದೂ ಆಗಬಾರದು.
ವರ್ಷದ ಕೊನೆಯಲ್ಲಿ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಖರ್ಚಾದ ಹಣದ ಬಗ್ಗೆ ದಿಶಾ ಸಮಿತಿಗಳಲ್ಲಿ ರೆಕಾರ್ಡ್ ಆಗಬೇಕು. ಮಂಜೂರಾದ ಹಣ, ಬಿಡುಗಡೆಯಾದ ಹಣ, ಯಾವ ದಿನಾಂಕದೊಳಗೆ ಶೇಕಡವಾರು ಎಷ್ಟು ಕಾಮಗಾರಿ ಪೂರ್ಣಗೊಂಡಿದೆ, ಶೇಕಡವಾರು ಎಷ್ಟು ಹಣ ಯಾವ ದಿನದಂದು ಬಿಡುಗಡೆಯಾಗಿದೆ ಎಂಬ ಮಾಹಿತಿ ದಾಖಲೆಯಾಗ ಬೇಕು.
ಇದೂವರೆಗೂ ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಯಾವ ಬ್ಯಾಂಕಿನಲ್ಲಿ, ಯಾವ ಅಕೌಂಟ್‌ನಲ್ಲಿ ಇಡಲಾಗಿದೆ ಎಂಬುದು ಸಹ ರೆಕಾರ್ಡ್ ಮಾಡುವ ಕಾಲ ಬಂದಿದೆ. ಕಳ್ಳಗಂಟು ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಲೋಕಸಭಾ ಸದಸ್ಯರ ಅಧ್ಯಕ್ಷತೆಯ 30 ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಸಭೆ ನಡವಳಿಕೆ ಪಡೆದು ರಾಜ್ಯ ಮಟ್ಟದ ವಿರೋಧ ಪಕ್ಷಗಳು ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದ ವಿರೋಧ ಪಕ್ಷಗಳು ಜಿಲ್ಲಾ ಮಟ್ಟದಲ್ಲಿ ಪತ್ರಿಕಾ ಘೋಷ್ಠಿ ನಡೆಸುವ ಪರಿಪಾಠ ಬರಬೇಕು. ಮುಂಗಡ ಪತ್ರ ಮಂಡಿಸಿದ ದಿನ ವಿರೋಧ ಮಾಡಿ ಮತ್ತೆ ಸುಮ್ಮನಾಗುವ ವಿರೋಧ ಪಕ್ಷಗಳಿಗೆ ಜನ ಧಿಕ್ಕಾರ ಹಾಕುವ ಕಾಲ ಬರಲಿದೆ.