12th September 2024
Share

  ಕೇಂದ್ರ ಸರ್ಕಾರ ರಚಿಸಿರುವ ತುಮಕೂರು ಜಿಲ್ಲಾ ದಿಶಾ ಸಮಿತಿಯ ತಂಡ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿ ಅಭಿವೃದ್ಧಿ ಪ್ರತಿಜ್ಞೆ ಮಾಡಲು ದಿಶಾ ಸಮಿತಿಯ ಅಧ್ಯಕ್ಷ ಹಾಗೂ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರಿಗೆ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ಶಾಲಿನಿರಜನೀಶ್ ರವರಿಗೆ, ಜಿಲ್ಲಾಧಿಕಾರಿ ಶ್ರೀ ರಾಕೇಶ್‌ಕುಮಾರ್‌ರವರಿಗೆ, ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಪಂ ಸಿಇಓ ಶ್ರೀಮತಿ ಶುಭಕಲ್ಯಾಣ್ ಮತ್ತು ತುಮಕೂರು ಸ್ಮಾರ್ಟ್ ಸಿಟಿ ಎಂಡಿ ಶ್ರೀ ಭೂಬಾಲನ್‌ರವರಿಗೆ ತುಮಕೂರಿನ ಶಕ್ತಿಪೀಠ ಫೌಂಡೇಷನ್ ಡಿಜಿಟಲ್ ಮನವಿ ಸಲ್ಲಿಸಿದೆ.

  ಮೋದಿಜಿಯವರು 2022 ರೊಳಗೆ ನವಭಾರತ ನಿರ್ಮಾಣದ ಕನಸು ಹೊತ್ತಿದ್ದಾರೆ. ಬಿಎಸ್‌ವೈರವರು ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ಸಮಗ್ರ ಅಭಿವೃದ್ಧಿ ಪಡಿಸುವುದಾಗಿ ಘೋಶಿಸಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಟಿ.ಎಂ.ವಿಜಯಭಾಸ್ಕರ್‌ರವರು ಡಿಜಿಟಲ್ ಕರ್ನಾಟಕ ಮಾಡಲು ವ್ಯಾಪಕ ಯೋಜನೆಗಳನ್ನು ಹಮ್ಮಿ ಕೊಂಡಿದ್ದಾರೆ. ಪೂರಕವಾಗಿ ಸಸ್ಟನಬಲ್ ಡೆವಲಪ್‌ಮೆಂಟ್ ಗೋಲ್ ಸೇರಿದಂತೆ  ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರತಿಯೊಂದು ಯೋಜನೆಗಳನ್ನು ಫೈಲಟ್ ಯೋಜನೆಗಳಾಗಿ ಕೈಗೊಂಡು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

   ತುಮಕೂರು ದಿಶಾ ಸಮಿತಿ ಮಹತ್ತರವಾದ ನಿರ್ಧಾರ ಕೈಗೊಂಡಿದ್ದು ಅಧಿಕಾರದಲ್ಲಿರುವ ಚುನಾಯಿತ ಜನಪ್ರತಿನಿಧಿಗಳಲ್ಲದೆ ಅಭಿವೃದ್ಧಿ ವಿಚಾರದಲ್ಲಿ ಮಾಜಿ ಚುನಾಯಿತ ಜನಪ್ರತಿನಿಧಿಗಳಾದ ಮಾಜಿ ಲೋಕಸಭಾ ಸದಸ್ಯರು, ಮಾಜಿ ರಾಜ್ಯಸಭಾ ಸದಸ್ಯರು, ಮಾಜಿ ವಿಧಾನಸಭಾ ಸದಸ್ಯರು ಮತ್ತು ಮಾಜಿ ವಿಧಾನಪರಿಷತ್ ಸದಸ್ಯರನ್ನು ಒಳಗೊಂಡ ಅಭಿವೃದ್ಧಿ ಸಲಹಾ ಸಮಿತಿ ರಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

   ಜಿಲ್ಲೆಯ ವ್ಯಾಪ್ತಿಯಲ್ಲಿರುವ 11 ವಿಧಾನಸಭಾ ಕ್ಷೇತ್ರಗಳ ಅಧ್ಯಯನ ಕೇಂದ್ರಗಳನ್ನು ಆಯಾ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿ ಪ್ರತಿ ಗ್ರಾಮವಾರು ಏನು ಅಭಿವೃದ್ಧಿ  ಆಗಿದೆ ಮತ್ತು ಇನ್ನೂ ಏನೇನು ಆಗಬೇಕು ಎಂಬ ಡಿಜಿಟಲ್ ಇತಿಹಾಸ ಸಹಿತ ಜಿಐಎಸ್ ಆಧಾರಿತ ಲೇಯರ್ ಮಾಡುವ ಕೆಲಸವನ್ನು ಭರದಿಂದ ಕೈಗೊಂಡಿದೆ.

  ಇಡೀ ದೇಶದಲ್ಲಿಯೇ ಯಾವ ಜಿಲ್ಲೆಯ ದಿಶಾ ಸಮಿತಿ ಕೈಗೊಳ್ಳದ ನಿರ್ಣಯವನ್ನು ಕೈಗೊಂಡು ಕೇಂದ್ರ ಸರ್ಕಾರದಿಂದ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಡಿಯಲ್ಲಿರುವ ನಿಗಮ, ಮಂಡಳಿ, ಕಾರ್ಪೋರೇಷನ್ ವತಿಯಿಂದ ಕೈಗೊಂಡಿರುವ ಪ್ರತಿಯೊಂದು ಕಾಮಗಾರಿಗಳ ಮಾಹಿತಿಗಳನ್ನು ಒಂದೇ ಕಡೆ ತರಲು ಶ್ರಮಿಸುತ್ತಿದೆ.

   ಈಗಾಗಲೇ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನಿರ್ಧೇಶನದಂತೆ ಪ್ರತಿಹಳ್ಳಿಯ ಜಲಗ್ರಾಮ ಕ್ಯಾಲೆಂಡರ್ ರಚನೆ, ಸ್ಥಳೀಯ ಸಂಸ್ಥೆವಾರು ವೃಕ್ಷಪ್ರಾಧಿಕಾರ ರಚಿಸಿ ಗಿಡ ಹಾಲಿ ಜಿಯೋ ಟ್ಯಾಗಿಂಗ್ ಮಾಡುವುದು. ತುಮಕೂರು ಜಿಲ್ಲೆಯಲ್ಲಿ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿಯಲ್ಲಿ ಕೆರೆಗಳಿಗೆ ನದಿ ನೀರು ತುಂಬಿಸಲು ಇರುವ ನದಿ ಮೂಲದ ಸೌಲಭ್ಯಗಳನ್ನು ಬಳಸಿಕೊಂಡು ಅಗತ್ಯವಿರುವ ೨೭ ಟಿಎಂಸಿ ಅಡಿ ನೀರಿನ ಯೋಜನೆಗೆ ಕೇವಲ ರೂ 2000 ಕೋಟಿ ಪರಿಕಲ್ಪನೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

  ದಿಶಾ ಸಮಿತಿಯ ನಿರ್ಣಯದ ಮೇರೆಗೆ  ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ಕುಡಿಯುವ ನೀರು ಮತ್ತು ಕೆರೆಗಳಿಗೆ ನದಿ ನೀರು ತುಂಬಿಸಲು ಅಗತ್ಯವಿರುವ ನೀರಿನ ಮಾಹಿತಿಯನ್ನು ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಕೇಶ್‌ಸಿಂಗ್ ಮತ್ತು ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮತಿ ಶಾಲಿನಿರಜನೀಶ್‌ರವರನ್ನು ಒಳಗೊಂಡಂತೆ ಅಧಿಕಾರಿಗಳು ಮತ್ತು ವಿಷಯ ಪರಿಣಿತರ ಸಭೆ ನಡೆಸಿ ರಾಜ್ಯದ ನದಿ ಜೋಡಣೆ ಯೋಜನೆಯಾಗಿ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಎನ್.ಪಿ.ಪಿ. ಯೋಜನೆಯಡಿಯಲ್ಲಿ ಪ್ರಸ್ತಾವನೆ ಸಲ್ಲಿಸಲು ಅಂತಿಮವಾಗಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಸಭೆ ನಡೆಸಲು ಎಲ್ಲಾ ಸಿದ್ಧತೆ ನಡೆಸಿದೆ.

   ಜೊತೆಗೆ 2022 ರೊಳಗೆ ರೈತರ ಅದಾಯ ದುಪ್ಪಟ್ಟು ಮಾಡಲು ರೂಪಿಸಿರುವ ಮೋದಿಜಿಯವರ ಕನಸಿನ ಯೋಜನೆಗೆ ಚಾಲನೆ ನೀಡಿ, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಸ್ಕಿಲ್ ಸಿಟಿ ನಿರ್ಮಿಸಿ, ಜಿಲ್ಲೆಯಲ್ಲಿರುವ 331  ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ 342 ರೈತರ ಉತ್ಪನ್ನಗಳವಾರು ಕ್ಲಸ್ಟರ್ ಸ್ಥಾಪಿಸಿ, ನಂತರ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಲ್ಲಿ ಬೆಳೆಯುವ ರೈತರ ಉತ್ಪನ್ನಗಳವಾರು ಕ್ಲಸ್ಟರ್/ಮೆಗಾಪುಢ್ ಪಾರ್ಕ್ ಸ್ಥಾಪಿಸಲು ಅಧ್ಯಯನ ಆರಂಭವಾಗಿದೆ.

  ರಾಜ್ಯದ 28 ಲೋಕಸಭಾ ಸದಸ್ಯರು, 12  ಜನ ರಾಜ್ಯಸಭಾ ಸದಸ್ಯರು, 225 ವಿಧಾನಸಭಾ ಸದಸ್ಯರು, 75 ಜನ ವಿಧಾನ ಪರಿಷತ್ ಸದಸ್ಯರು ಹಾಗೂ 2 ದೆಹಲಿ ಪ್ರತಿನಿಧಿಗಳು ಸೇರಿದಂತೆ 342 ಜನ ಚುನಾಯಿತ ಮತ್ತು ನಾಮ ನಿರ್ಧೇಶನ ಸದಸ್ಯರುಗಳು ಸಹ ಒಂದೊಂದು ಉತ್ಪನ್ನವಾರು ಮೆಗಾಫುಡ್ ಪಾರ್ಕ್ ಹೊಣೆಗಾರಿಕೆ ಹೊತ್ತು ಸಚಿವ ಸಂಪುಟದ ಸ್ಥಾನಮಾನ ಪಡೆದು ರೈತರ ಆದಾಯ ದುಪ್ಪಟ್ಟು ಮಾಡಲು ಕಾಂಪಿಟೇಷನ್ ಆಗಿ ಶ್ರಮಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಹಲವಾರು ಸಭೆಗಳು ನಡೆದಿವೆ.

 ನಂದಿನಿ ಉತ್ಪನ್ನಗಳ ಮಾದರಿಯಲ್ಲಿ  ರಾಜ್ಯ ಸರ್ಕಾರವೂ ರೈತರ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳ ಫಾರ್‌ವಾರ್ಡ್ ಮತ್ತು ಬ್ಯಾಕ್‌ವಾರ್ಡ್ ಲಿಂಕೇಜ್‌ಗೆ ಎಂಎಸ್‌ಎಂಇ ಸಾರ್ಥಕ್ ಯೋಜನೆ ಆರಂಭಿಸುತ್ತಿದ್ದು ಈ ಯೋಜನೆಗೂ ತುಮಕೂರು ಜಿಲ್ಲೆಯನ್ನು ಆಯ್ಕೆಮಾಡಿಕೊಳ್ಳಲು ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ  ಸೂಚಿಸಿದ್ದಾರೆ.

  ತುಮಕೂರು ಸ್ಮಾರ್ಟ್ ಸಿಟಿ ದೇಶದ ನೂರು ಸ್ಮಾರ್ಟ್ ಸಿಟಿಗಳಿಗೂ ವಿಭಿನ್ನವಾಗಿ ತಾನು ಕೈಗೊಂಡಿರುವ 119  ಯೋಜನೆಗಳ ಪ್ರತಿಯೊಂದು ದಾಖಲೆಗಳನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ಪ್ರಕಟಿಸಲು ಬೆಂಗಳೂರಿನ ಐಸಿಎಸ್‌ಟಿ ಸಂಸ್ಥೆಯೊಂದಿಗೆ ಎಂಓಯು ಮಾಡಿಕೊಂಡು ಲೋಕಾರ್ಪಾಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

  ಇದರಿಂದ ತುಮಕೂರು ಸ್ಮಾರ್ಟ್ ಸಿಟಿಗೆ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿಗಾಗಿ ಯಾರು ಅರ್ಜಿ ಸಲ್ಲಿಸುವ ಹಾಗಿಲ್ಲ, ಎಲ್ಲವೂ ಆನ್ ಲೈನ್‌ನಲ್ಲಿ ಎಲ್ಲಾ ಮಾಹಿತಿ ದೊರೆಯಲಿದೆ, ಇದಕ್ಕೆ ಸರ್ಕಾರಗಳ ಅನುಮತಿ ಪಡೆಯ ಬೇಕಷ್ಟೆ.

  ಜಿಲ್ಲೆಯ ಪ್ರತಿ ಗ್ರಾಮಗಳ ಮತ್ತು ನಗರ ಪ್ರದೇಶಗಳ ಬಡಾವಾಣೆವಾರು ಡಿಜಿಟಲ್ ಮಾಹಿತಿ ಸಂಗ್ರಹಿಸಲು ಎಐಸಿಟಿ ಮಾರ್ಗದರ್ಶೀ ಸೂತ್ರದ ಅನ್ವಯ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಆಕ್ಟವಿಟಿ ಪಾಯಿಂಟ್‌ಗಳಿಗೆ ಯೋಜನೆ ರೂಪಿಸಲು ಇಂಜಿನಿಯರಿಂಗ್ ಕಾಲೇಜುಗಳ ಪ್ರಮುಖರ ಸಭೆ ನಡೆಸಲು ಸಹ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಂಡಿದ್ದು ಎಲ್ಲರೂ ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.

   ಇಂತಹ ಮಹತ್ವವಾದ ಯೋಜನೆಗಳಿಗೆ ಚಾಲನೆ ನೀಡಿದ ದಿಶಾ ಸಮಿತಿ ಜನವರಿ 2 ಅಥವಾ 3 ನೇ ತಾರೀಖು ತುಮಕೂರಿಗೆ ಬರುವ ವೇಳೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಸಮ್ಮುಖದಲ್ಲಿ ದಿಶಾ ಟೀಮ್ ಪ್ರತಿಜ್ಞೆ ಮಾಡಿ ನಮ್ಮ ಜಿಲ್ಲೆ 2022 ರೊಳಗೆ ನಿಮ್ಮ ಕನಸಿನ ಎಲ್ಲಾ ಯೋಜನೆಗಳಿಗೆ ಶ್ರಮಿಸುವ ಪ್ರಥಮ ಜಿಲ್ಲೆಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಪ್ರತಿಜ್ಞೆ ಮಾಡುವುದು ಉತ್ತಮ.