21st December 2024
Share

ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಯ ದರ್ಶನ ಮಾಡಿದ ಮೋದಿಯವರು ಮಠದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಹಲವಾರು ವಿಷಯಗಳಲ್ಲಿ ಮಹತ್ವ ಪಡೆದಿರುವ ವಿಚಾರ ಸಾಧು-ಸಂತರು ಜಲ ಸಂರಕ್ಷಣೆಯಲ್ಲಿ  ಮಹತ್ತರ ಪಾತ್ರವಹಿಸಲು ಕರೆ ನೀಡಿರುವುದು.

ಸಿದ್ಧಗಂಗಾ ಶ್ರೀಗಳಿಗೆ ತ್ರಿವಿಧ ದಾಸೋಹಿಗಳು ಎಂದು ಕರೆಯುವುದು ವಾಡಿಕೆ. ಶ್ರೀಗಳ ಸಂಸ್ಥಾನದಲ್ಲಿ ಹೊಸದಾಗಿ ಜಲ ಧೀಕ್ಷೆ ಎಂಬ ಹೊಸ ಚಿಂತನೆಯನ್ನು ಮೋದಿಯವರು ಹುಟ್ಟು ಹಾಕಿದ್ದಾರೆ.

ಇದರ ಹೊಣೆಗಾರಿಕೆಯನ್ನು ಈಗಿನ ಸಿದ್ಧಗಂಗಾ ಶ್ರೀಗಳ ಪಡೆಯ ಬೇಕೋ ಅಥವಾ ನಾಡಿನ ಎಲ್ಲಾ ಮಠಾಧಿಶರು ಪಡೆಯಬೇಕೋ ಅದು ದೇವರ ಇಚ್ಚೆ. ಆದರೂ ಇಂದು ಜಲ-ಗುರುಗಳ ಅಗತ್ಯವಂತೂ ಇದೆ.

ಕರ್ನಾಟಕ ರಾಜ್ಯದಲ್ಲಿರುವ ೬೦೨೨ ಗ್ರಾಮ ಪಂಚಾಯಿತಿಗಳು ಮತ್ತು ೩೧೮ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೊಣೆಗಾರಿಕೆಯನ್ನು ಹಾಲಿ ಇರುವ ಎಲ್ಲಾ ಧರ್ಮದ ಮಠಾಧಿಪತಿಗಳು ಒಬ್ಬೊಬ್ಬರು ಒಂದು ಸ್ಥಳೀಯ ಸಂಸ್ಥೆವ್ಯಾಪ್ತಿ ಪಡೆಯುವುದು. ಅಗತ್ಯವಾಗಿದೆ.

ಎಲ್ಲಿ ಮಠಾಧೀಶರು ಇಲ್ಲವೋ ಅಂಥಹ ಕಡೆ ಹೊಸದಾಗಿ ಜಲಧೀಕ್ಷೇ ನೀಡಲು ಸಲ ಚಿಂತನೆ ಮಾಡುವ ಕಾಲ ಬಂದೊದಗಿದೆ, ಇದು ಪ್ರಧಾನಿಯವರ ಅನಿಸಿಕೆಯೂ ಆಗಿದೆ.

ಸಿದ್ಧಗಂಗಾ ಮಠಕ್ಕೂ ನೀರಿಗೂ ಅವಿನಾಭಾವ ಸಂಬಂಧ, ಹೆಸರೇ ಸಿದ್ಧಗಂಗೆ,  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಸಮಾಧಿಯೂ ಮಠದ ಜಮೀನಿನಲ್ಲಿ ಇದೆ.

ಶ್ರೀ ಜಗದೀಶ್ ಶೆಟ್ಟರ್ ರವರು ಮುಖ್ಯ ಮಂತ್ರಿಗಳಾಗಿದ್ದಾಗ ಸಿದ್ಧಗಂಗಾ ಶ್ರೀಗಳು ಮುಖ್ಯ ಮಂತ್ರಿಗಳಿಗೆ   ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ರಾಜ್ಯದ ಕೆರೆಗಳಿಗೆ ನದಿ ನೀರು ತುಂಬಿಸಲು ಸೂಚಿಸಿದ ಪತ್ರವನ್ನು ನೋಡಿದ ಮುಖ್ಯಮಂತ್ರಿಗಳ ಶ್ರೀಮತಿಯವರಾದ ಶಿಲ್ಪ ಶೆಟ್ಟರ್ ರವರು ಪೂರಕ ಮುಂಗಡ ಪತ್ರದಲ್ಲಿ ವಿಷಯ ಸೇರ್ಪಡೆ ಆಗುವವರೆಗೂ ಅಜ್ಜಯ್ಯನವರು ನೀಡಿದ ಪತ್ರ ನಮಗೆ ಅದೇಶ ಎಂದು ಪಟ್ಟು ಹಿಡಿದು ಸೇರಿಸಿದ್ದು ಇತಿಹಾಸ.

  ಮುಖ್ಯ ಮಂತ್ರಿಗಳು ಪೂರಕ ಮುಂಗಡ ಪತ್ರ ಸಿದ್ಧಪಡಿಸಲು ಯಾವೊದೋ ಗೆಸ್ಟ್‌ಹೌಸ್‌ನಲ್ಲಿ ರಹಸ್ಯ ಸಭೆ ನಡೆಸುತ್ತಿದ್ದರು. ತುಮಕೂರು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ರಾತ್ರಿ ೧೨ ಗಂಟೆವರೆಗೂ ಅವರ ಮನೆಯಲ್ಲಿಯೇ ಕುಳಿತು ಮುಂಗಡ ಪತ್ರದಲ್ಲಿ ಸೇರ್ಪಡೆ ಮಾಡಿಸಲೇ ಬೇಕು ಎಂದು ಕಾಯುತ್ತಾ ಕುಳಿತಿದ್ದರು. ನಾನು ಮತ್ತು ಶ್ರೀ ಕೊಪ್ಪಳ್ ನಾಗರಾಜ್‌ರವರು ಜೊತೆಯಲ್ಲಿದ್ದೆವು, ಶ್ರೀಮತಿ ಶಿಲ್ಪರವರು ಹುಬ್ಭಳ್ಳಿಯಲ್ಲಿದ್ದರು ಅವರು ಮುಖ್ಯ ಮಂತ್ರಿಗಳ ಜೊತೆ ಮಾತನಾಡಿ ವಿಷಯ ಸೇರ್ಪಡೆ ಆಗಿದೆ, ತಾವು ನಿದ್ದೆಗೆಡಬೇಡಿ ಹೋಗಿ ಸಾರ್ ಎಂದು ಬಸವರಾಜ್ ರವರಿಗೆ ತಿಳಿಸಿದರು, ಬೆಳಿಗ್ಗೆ ಮಂಡಿಸಿದ ಪೂರಕ ಮುಂಗಡಪತ್ರದಲ್ಲಿ ನಾವು ಬರೆದು ಕೊಟ್ಟಿದ್ದ ವಿಷಯ ಯಥಾವತ್ತಾಗಿತ್ತು, ಅದು ಶ್ರೀಗಳ ಆಶಯವಾಗಿತ್ತು.

ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ವಿರೋಧ ಪಕ್ದ ನಾಯಕರಾಗಿದ್ದಾದ ಶ್ರೀಗಳ ಗದ್ದುಗೆಯ ಮುಂದೆ ಶ್ರೀ ಬಸವರಾಜ್ ರವರು ನೀಡಿದ ಪತ್ರದಲ್ಲಿ ಸಿದ್ಧಗಂಗಾ ಜಲಘೋಷಣೆ ಮಾಡಿಸಲು ಮನವಿ ಮಾಡಿದ್ದರು.

ಈಗ ಬಿಎಸ್‌ವೈ ಮುಖ್ಯ ಮಂತ್ರಿಗಳು, ಗುರುಗಳು  ಜಲ ಸಂರಕ್ಷಣೆ ಜವಾಬ್ಧಾರಿ ಹೊರಲು ಪ್ರಧಾನಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಠದ ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ಭಕ್ತರು ಮತ್ತು ವಿದ್ಯಾರ್ಥಿಗಳು ಗಂಭೀರವಾಗಿ ಚಿಂತನೆ ನಡೆಸಲು ಮೋದಿಯವರು ಬೀಜ ಹಾಕಿ ಹೋಗಿದ್ದಾರೆ.

ಮೋದಿ ತುಮಕೂರಿಗೆ ಬಂದು ಏನು ಕೊಡುಗೆ ನೀಡಿದ್ದಾರೆ ಎಂದು ಟೀಕಿಸುವವರು ಈ ವಿಚಾರವನ್ನು ಗಂಭೀರವಾಗಿ ತೆಗೆದು ಕೊಂಡು ಕೆರೆಗಳಿಗೆ ನದಿ ನೀರಿಗಾಗಿ ನಮ್ಮ ರಾಜ್ಯದ  ನದಿ ಜೋಡಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ ಖಂಡಿತ ವಿಶೇಷ ಪ್ಯಾಕೇಜ್ ದೊರೆಯಲಿದೆ. ಇದು ಶ್ರೀಗಳ ಆದೇಶ ಎಂದು ಭಾವಿಸಿ ಮುಖ್ಯ ಮಂತ್ರಿಗಳ ಸೂಚನೆ ಮೇರೆಗೆ ಶ್ರೀ ಜಿ.ಎಸ್.ಬಸವರಾಜ್ ರವರು ಹೆಜ್ಜೆ ಹಾಕಿದ್ದಾರೆ ಎಲ್ಲರೂ ಕೈಜೋಡಿಸಬೇಕಷ್ಟೆ.

ಶೀಘ್ರದಲ್ಲಿಯೇ ಒಂದು ಸ್ಪಷ್ಟ ರೂಪುರೇಷೆ ಆಗಲೇ ಬೇಕು.