9th October 2024
Share

 ಉದ್ದೇಶಿತ ನಮ್ಮ ಶಕ್ತಿಪೀಠ ಕ್ಯಾಂಪಸ್‌ನ ಪಕ್ಕದಲ್ಲಿ ಶ್ರೀ ಅಶೋಕ್ ಎನ್ನುವ ಒಬ್ಬ ಅರ್ಚಕರು ವಾಸವಾಗಿದ್ದಾರೆ. ನಾನು ಅಕ್ಕ ಪಕ್ಕದ ಯಾರ ಜೊತೆಯೂ ಅಷ್ಟೊಂದು ಸಂಪರ್ಕವನ್ನು ಇಟ್ಟುಕೊಳ್ಳುವುದಿಲ್ಲಾ. ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಕೆಲಸ ಮಾಡಿಸುತ್ತಿದ್ದೆ. ಅವರು ಬಂದರು ನಾನು ಸಾಮಾನ್ಯವಾಗಿ ಯಾರು ಬಂದರೂ ಒಂದೈದು ನಿಮಿಷ ಮಾತನಾಡಿ ಕಳುಹಿಸುವುದು ವಾಡಿಕೆ.

ನಾನು:- ಏನ್ ಸ್ವಾಮಿ ಅಶೋಕ್‌ರವರೇ ಬಂದ್ರಿ

ಅಶೋಕ್:- ಸಾರ್ ನಿಮ್ಮ ಬಸವರಾಜ್ ರವರು ಏನೂ ಹೇಳಲಿಲ್ವಾ, (ನಮ್ಮ ಜಮೀನಿನನ್ನು ನೋಡಿಕೊಳ್ಳುತಿರುವ ಬಸವರಾಜ್)

ನಾನು:- ಇಲ್ಲಪ್ಪ ಏನ್ ಸಮಾಚಾರ.

ಅಶೋಕ್:- ಸಾರ್ ನೀವು ಕೆಲಸ ಮಾಡೋಕೆ ಬಂದಾಗಲೆಲ್ಲಾ ಇಲ್ಲಿ ಒಂದು ಗರುಡ ಬರುತ್ತೆ, ಸುತ್ತ ಪ್ರದಕ್ಷಿಣೆ ಹಾಕುತ್ತೆ. ಸ್ವಲ್ಪ ಹೊತ್ತು ಮರದ ಮೇಲೆ ಕೂರುತ್ತೆ, ಆ ಮೇಲೆ ಹೋಗುತ್ತೆ. ಈ ವಿಚಾರವನ್ನು ನಾನು ಬಸಣ್ಣನಿಗೆ ಹೇಳಿದ್ದೆ ಎಂದರು.

ನಾನು:- ಆತ ನಾನು ಬೈತಿನಿ ಅಂತ ಹೇಳಿಲ್ಲ ಎನ್ನುತ್ತಿದ್ದೆ. ಆ ವೇಳೆಗೆ 8-10 ಜನ ಗ್ರಾಮಸ್ಥರು ಕಾಮಗಾರಿ ವೀಕ್ಷಿಸಲು ಬಂದರು.

 ಅವರಿಗೆಲ್ಲಾ ಈ ವಿಷಯ ತಿಳಿಸಿದೆ. ಬಹುಷಃ ಅವರು ಯಾರು ಸಹ ಗರುಡ ಬರುವುದನ್ನು ನೋಡಿರಲಿಲ್ಲ. ಅವರಲ್ಲಿ ಒಬ್ಬರು ಅಶೋಕ್ ಗರುಡ ಬಂದಾಗ ಹೇಳು ನೋಡೋಣ ಎಂದು ಹಾಸ್ಯ ಮಾಡಿದರು.

ಅಶೋಕ್ :- ಆಯಿತು ಸಾರ್ ಎಂದು ಹೇಳಿ ಅವರ ಮನೆಗೆ ಹೋದರು. ಜನರ ಮಾತು ಅವರಿಗೆ ಸ್ವಲ್ಪ ಬೇಸರವಾದಂತಿತ್ತು.

ನಾವೆಲ್ಲಾ ಮಾತನಾಡುತ್ತಾ ಕುಳಿತುಕೊಂಡಿದ್ದೆವು ಇನ್ನೂ 10 ನಿಮಿಷವೂ ಆಗಿರಲಿಲ್ಲ.

ಅಶೋಕ್:- ಓಡೋಡಿ ಬಂದು ಸಾರ್ ಗರುಡ ಬಂತು ಗರುಡ ಎಂದು ಕೂಗಿ ಹೇಳಿದರು. ಅವರಿಗೆ ಆದ ಪರಮಾನಂದಾ ಅಷ್ಟಿಷ್ಟಲ್ಲ.

ನಾವೆಲ್ಲರೂ ಎಲ್ಲಿ? ಎಲ್ಲಿ?  ಎಂದು ಹೋಗಿ ನೋಡುತ್ತಿರುವಾಗಲೇ ಕ್ಯಾಂಪಸ್‌ನ ಒಂದೆರಡು ಭಾರಿ ಪ್ರದಕ್ಷಿಣೆ ಮಾಡಿ ಬಂದು, ಒಂದು ತೆಂಗಿನ ಮರದ ಮೇಲೆ ಗರುಡ ಕುಳಿತಾಗ ತೆಗೆದ ಫೋಟೋ.