22nd November 2024
Share

ತುಮಕೂರು ನಿಮ್ಜ್ ಅಥವಾ ತುಮಕೂರು ಇಂಡಸ್ಟ್ರಿಯಲ್ ನೋಡ್ ಅಥವಾ ಚನ್ನೈ-ಬೆಂಗಳೂರು- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್, ವಸಂತನರಸಾಪುರದ ಕೈಗಾರಿಕಾ ಪ್ರದೇಶ ಎಂಬ ಹಲವಾರು  ಹೆಸರಿನಲ್ಲಿ ಕರೆಯುತ್ತಿರುವ ಸುಮಾರು 12500 ಎಕರೆ ಭೂಮಿ ಮುಂದೊಂದು ದಿನ ತುಮಕೂರಿನ ಬರಡು ಭೂಮಿಯಾಗಲಿದೆ.

  ಬೋರ್‌ವೆಲ್ ಹಾವಳಿಗೆ ತತ್ತರಿಸಿ ಸುತ್ತ-ಮುತ್ತಲ ರೈತರ ಗೋಳು ಮುಗಿಲು ಮುಟ್ಟಲಿದೆ, ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬರಲಿವೆ ತಕ್ಷಣ ಮುನ್ನೆಚ್ಚರಿಕೆ ಕ್ರಮಗಳು ಜಾರಿಯಾಗಲೇ ಬೇಕು.

  ಹಣ ದೋಚಲು ಎಲ್ಲರೂ ಇಲ್ಲಿ ಯಜಮಾನರು, ಲೂಟಿ ಕೋರರಿಗೆ ಇದೊಂದು ಕಾಮದೇನು, ಅಲ್ಲಿನ ಉದ್ದೀಮೆದಾರರ ಗೋಳು, ರೈತರ ಗೋಳು ಕೇಳಿದರೆ ನಿಜಕ್ಕೂ ಒಂದು ಹೊಸ ಪ್ರಪಂಚದ ಅರಿವು ಆಗಲಿದೆ.

  ಈ ಯೋಜನೆ ಜಾರಿ ಮಾಡುವ ಮುನ್ನ ಹೇಮಾವತಿ ನೀರು, ಎತ್ತಿನಹೊಳೆ ನೀರು, ತುಮಕೂರಿನ ಕೊಳಚೆ ನೀರು, ಮಳೆ ಕೊಯ್ಲು. ಹಸಿರು- ನಿಮ್ಜ್ ಹೀಗೆ ಬಣ್ಣ ಬಣ್ಣದ ಮಾತುಗಳಿಗೆ ಬರವಿರಲಿಲ್ಲ.

   ಈ ಕೈಗಾರಿಕಾ ಪ್ರದೇಶಕ್ಕೆ ನೀರು ನೀಡುವ ವಿಚಾರ ಗಂಭೀರವಾಗಿ ಚರ್ಚೆಯಾಗಿಯೇ ಇಲ್ಲ, ಎಲ್ಲವೂ ಸಭೆಗಳಲ್ಲಿ ಭಾಷಣಕ್ಕೆ ಸೀಮಿತವಾಗಿದೆ ಎಂದರೆ ತಪ್ಪಾಗಲಾರದು.

  ಹೇಮಾವತಿ ನೀರಿನ ಮೂಲ ಯೋಜನೆಯಲ್ಲಿ ಅಲೋಕೇಷನ್ ಇಲ್ಲದಿದ್ದರೂ, ರಾಜಕಾರಣಿಗಳ ಶಕ್ತಿವಾರು ಹಲವಾರು ಯೋಜನೆಗಳಿಗೆ ನೀರು ಕಬಳಿಸಿದ್ದಾರೆ. ಎತ್ತಿನಹೊಳೆ ಯೋಜನೆಯಲ್ಲಿ ಕೈಗಾರಿಕೆಗಳಿಗೆ ಮತ್ತು ದೇವನಹಳ್ಳಿಗೆ ಕುಡಿಯುವ ನೀರು ಎಂದು ಒಂದು ಟಿಎಂಸಿ ಅಡಿ ನೀರು ಕಾಯ್ದಿರಿಸಲಾಗಿದ್ದರೂ, ಈ ನೀರಿನ ಬಳಕೆ ಬಗ್ಗೆ ಕೈಗಾರಿಕಾ ಇಲಾಖೆ ಏನು ಮಾಡಿದೆ ಎಂಬುದನ್ನು ಬಹಿರಂಗ ಪಡಿಲಿ.

  ಇತ್ತೀಚೆಗೆ ನಡೆದ ದಿಶಾ ಸಮಿತಿ ಸಭೆಯಲ್ಲಿ ಈ ಕೈಗಾರಿಕೆಗಳಿಗೆ ಸಂಬಂದಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕುಡಿಯುವ ನೀರು ಪಡೆಯಲು ಮಾನ್ಯ ಮುಖ್ಯ ಮಂತ್ರಿಗಳ ಬಳಿ ನೀಯೋಗ ಹೋಗಲು ನಿರ್ಣಯ ಕೈಗೊಳ್ಳಲಾಯಿತು.

  ಈ ನೀರಿನ ಅಲೋಕೇಷನ್ ಪಡೆಯುವ ಯೋಜನೆ ಜೊತೆಗೆ, ಕೈಗಾರಿಕಾ ಪ್ರದೇಶದಲ್ಲಿ ಹೇರಳ ಮರ ಗಿಡ ಬೆಳೆಸಲು, ಮಳೆ ಕೊಯ್ಲು, ಕೊಳಚೆ ನೀರಿನ ಪುನರ್ ಬಳಕೆ ಸೇರಿದಂತೆ ಶಾಶ್ವತ ನೀರಿನ ಯೋಜನೆ ರೂಪಿಸಲು ಮುಂದಾಗ ಬೇಕು. ಬಹುತೇಕ ಕೈಗರಿಕೆಗಳು ಅವರ ಜಾಗದಲ್ಲಿ ಹಾಗೂ ರಸ್ತೆಗಳಲ್ಲಿ ಮರಗಿಡ ಬೆಳಸುವ ಕಡೆ ಗಮನ ಹರಿಸಿದಂತೆ ಕಾಣಲಿಲ್ಲ, ಈ ಬಗ್ಗೆಯೂ ಅಧ್ಯಯನ ನಡೆಯಲಿದೆ.

 ಈ ಕೈಗಾರಿಕಾ ಪ್ರದೇಶದಲ್ಲಿ ತುಮಕೂರು ಜಿಲ್ಲೆಯ ಉದ್ದಿಮೆದಾರರು ಎಷ್ಟು ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ, ತುಮಕೂರು ಜಿಲ್ಲೆಯ ಎಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಿದೆ, ಲೆಕ್ಕಕೊಡಿಸಿ ಎಂದು ಸಭೆ ನಡೆಯುವಾಗ ಒಂದು ನಿರುದ್ಯೋಗಿಗಳ ತಂಡವೇ ಬಂದು ಜಮಾಯಿಸಿತ್ತು.

  ನಾನು ಅವರನ್ನು ಒಂದು ಕಡೆ ಕರೆದುಕೊಂಡು ಹೋಗಿ ಸಮಾಧಾನ ಪಡಿಸಿ ಮುಂದಿನ ಸಭೆ ವೇಳೆಗೆ ಮಾಹಿತಿ ನೀಡಲಾಗುವುದು ಎಂದು ಮನವರಿಕೆ ಮಾಡಿದ್ದಾಯಿತು.

ಈ ಮಾಹಿತಿಯನ್ನು ಕರಾರುವಕ್ಕಾಗಿ ನೀಡುವರು ಯಾರು ಎಂಬ ಹೊಸ ಪ್ರಶ್ನೆ ಉದ್ಭವಿಸಿದೆ.

ಆಡಳಿತ ಪಕ್ಷಗಳು ಮಾಡುವ ಈ ರೀತಿಯ ಅನ್ಯಾಯವನ್ನು ಬಹಿರಂಗ ಪಡಿಸುವ ವಿರೋಧ ಪಕ್ಷಗಳ ಕೆಲಸ ಏನು? ವಿರೋಧ ಪಕ್ಷಗಳು ಏಕೆ ಇರಬೇಕು?

  ಸುಮಾರು ಏಳು ವರ್ಷದ ಈ ಯೋಜನೆ ಇನ್ನೂ ಬಹಳಷ್ಟು ವಿಚಾರದಲ್ಲಿ ಹಿಂದೆ ಬಿದ್ದಿದೆ, ಗ್ರೇಟರ್ ನೊಯ್ಡ ನಂತರ ಬೃಹತ್ ಕೈಗಾರಿಕಾ ಪ್ರದೇಶವಾಗುವ ಈ ಜಾಗ ಪರಿಸರ ಸ್ನೇಹಿ ಯೋಜನೆ ಜಾರಿಯಾಗುವತ್ತಾ ಗಮನ ಹರಿಸುವುದು ಅಗತ್ಯ.