15th September 2024
Share

ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಧ್ಯಯನ ಮಾಡಲು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸ್ಥಾಪಿಸಿದೆ.

ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಶ್ರೀ ವೈ.ಎಸ್.ಸಿದ್ದೇಗೌಡರೊಂದಿಗೆ ನಮ್ಮ ಇ ಪೇಪರ್ ಸಂಪಾದಕ ನಡೆಸಿದ ಸಂವಾದದ ಸಾರಾಂಶ.

ಸಂಪಾದಕ: ಒಂದು ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಒಂದು ಅಧ್ಯಯನ ಪೀಠ ಸ್ಥಾಪಿಸಲು ಯಾರ ಅನುಮತಿ ಪಡೆಯಬೇಕು?

ಉಪ ಕುಲಪತಿ: ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ನಿರ್ಣಯವೇ ಅಂತಿಮ. ಬೇರೆ ಯಾವುದೇ ಇಲಾಖೆ ಅನುಮತಿ ಅಗತ್ಯವಿಲ್ಲ. ಅನುದಾನ ಪಡೆಯಲು ವಿವಿದ ಇಲಾಖೆಗಳಿಗೆ ಮನವಿ ಸಲ್ಲಿಸಬಹುದು.

ಸಂಪಾದಕ: ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಧ್ಯಯನ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿದೆ. ಅದಕ್ಕೆ ಮುಖ್ಯ ಇಂಜಿನಿಯರ್ ಹುದ್ದೆಯ ನಿರ್ಧೇಶಕರನ್ನು ನೇಮಕ ಮಾಡುವುದು ಸೂಕ್ತವಲ್ಲವೇ.

ಉಪ ಕುಲಪತಿ: ಹೌದು ಈ ಉದ್ದೇಶದಿಂದಲೇ ಶ್ರೀ ಕೆ.ಜೈಪ್ರಕಾಶ್‌ರವರನ್ನು ಯೋಜನೆ ಮತ್ತು ಇಂಪ್ಲಿಮೆಂಟೇಷನ್ ನಿರ್ಧೇಶಕರನ್ನಾಗಿ ನೇಮಕ ಮಾಡಲಾಗಿದೆ.

ಸಂಪಾದಕ: ಅಧ್ಯಯನ ಪೀಠದ ಕಾರ್ಯಕ್ರಮದ ಕರಾರುವಕ್ಕಾದ ನಿಯಮಗಳನ್ನು ಏನಾದರೂ ಮಾಡಬಹುದೇ?

ಉಪ ಕುಲಪತಿ: ಯೋಜನೆ ಮತ್ತು ಇಂಪ್ಲಿಮೆಂಟೇಷನ್ ನಿರ್ಧೇಶಕರು ಒಂದು ರೂಪುರೇಷೆ ಸಿದ್ಧಪಡಿಸಿ ವರದಿ ನೀಡಲಿ, ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್‌ನಲ್ಲಿಟ್ಟು ನಿಯಮಾನುಸಾರ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.

ಸಂಪಾದಕ: ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲು ಸೂಚಿಸಿದ್ದಾರೆ. ಈ ರೀತಿ ಮಾಡಲು ಅವಕಾಶವಿದೆಯೇ?

ಉಪ ಕುಲಪತಿ: ಹೌದು ಈ ರೀತಿ ಮಾಡಲು ಅವಕಾಶವಿದೆ. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಇದೇ ಮೊದಲು. ಈ ಬಗ್ಗೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್‌ನಲ್ಲಿಟ್ಟು ನಿಯಮಾನುಸಾರ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.

ಸಂಪಾದಕ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಅಗತ್ಯವಿದೆಯೇ?

ಉಪ ಕುಲಪತಿ: ಪೀಠದ ಉದ್ದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಅಗತ್ಯವಿಲ್ಲ. ಅನುದಾನ ನೀಡುವ ಇಲಾಖೆಯ ಷರತ್ತುಗಳನ್ನು ವಿಧಿಸಿದಲ್ಲಿ ಚಿಂತನೆ ನಡೆಸಬೇಕಾಗುವುದು. ಇದು ಸಹ ನಿಯಾಮನುಸಾರ. 

ಸಂಪಾದಕ: ಅಧ್ಯಯನ ಪೀಠಗಳಿಗೆ ಏನಾದರೂ ಮಾನದಂಡವಿದೆಯೇ?

ಉಪ ಕುಲಪತಿ: ಇದೂವರೆಗೂ ಆ ರೀತಿ ಇಲ್ಲ, ವಿಶ್ವವಿದ್ಯಾನಿಲಯದ ಮಾರ್ಗದರ್ಶೀ ಸೂತ್ರದ ಪ್ರಕಾರ ಪೀಠ ಸ್ಥಾಪನೆ ಮಾಡುವಾಗ ನಾವು ಉದ್ದೇಶಗಳನ್ನು ಗುರುತು ಮಾಡುತ್ತೇವೆ, ಆ ಪ್ರಕಾರ ಕಾರ್ಯನಿರ್ವಹಿಸುವುದು ರೂಢಿಯಲ್ಲಿದೆ.

ಸಂಪಾದಕ: ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿ ತುಮಕೂರು ಜಿಲ್ಲೆಯಾಗಿದೆ. ಪೀಠ ಕರ್ನಾಟಕ ರಾಜ್ಯಾದ್ಯಾಂತ ಕಾರ್ಯನಿರ್ವಹಿಸಬಹುದೇ?

ಉಪ ಕುಲಪತಿ: ಯೋಜನೆ ಮತ್ತು ಇಂಪ್ಲಿಮೆಂಟೇಷನ್ ನಿರ್ಧೇಶಕರು ನೀಡಿದ ರೂಪುರೇಷೆ ನಂತರ ಈ ಬಗ್ಗೆ ನಿರ್ಧಾರ ಮಾಡುವುದು ಸೂಕ್ತವಾಗಿದೆ.

 ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಚೆಂಡು ಈಗ ಯೋಜನೆ ಮತ್ತು ಇಂಪ್ಲಿಮೆಂಟೇಷನ್ ನಿರ್ಧೇಶಕರ ಅಂಗಳದಲ್ಲಿದೆ.

 ಕರ್ನಾಟಕ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಶ್ರೀ ವಾಜುಬಾಯಿವಾಲ ರವರ  ಅಂಕಿತವನ್ನು ರೂಪುರೇಷೆಗೆ ಪಡೆಯುವುದು ಸೂಕ್ತವಾಗಿದೆ.