27th July 2024
Share

 ದಿನಾಂಕ:21.02.2020  ರಂದು ಮಹಾಶಿವರಾತ್ರಿಯ ಜಾಗರಣೆಯ ಅಂಗವಾಗಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠದ ಯೋಜನಾ ಮತ್ತು ಅನುಷ್ಠಾನ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರ ಗೃಹಕಚೇರಿಯಲ್ಲಿ   ನಡೆದ ಸಮಾಲೋಚನಾ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಭಾಗಿತ್ವದಲ್ಲಿ ತುಮಕೂರು ಜಿಲ್ಲೆಯ ಪ್ರತಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್ ಸಿದ್ಧಪಡಿಸಲು  ಶ್ರಮಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

  ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ.ಜೈಪ್ರಕಾಶ್ ಮಾತನಾಡಿ ಭಾರತ ದೇಶದಲ್ಲಿಯೇ ಮಾದರಿ ಎನ್ನುವ ರೀತಿಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ವರ್ಗದ ಜನರ ಸಹಕಾರದಿಂದ ವಾಟರ್ ಆಡಿಟ್, ವಾಟರ್ ಬಡ್ಜೆಟ್, ವಾಟರ್ ಸ್ಟ್ರಾಟಜಿ ಮಾಡಲು ಜಲಗ್ರಾಮ ಕ್ಯಾಲೆಂಡರ್ ಸಿದ್ಧಪಡಿಸಲು ವ್ಯಾಪಕ ಜನಜಾಗೃತಿ ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

  ಕೇಂದ್ರ ಸರ್ಕಾರ ಅಟಲ್ ಭೂಜಲ್ ಯೋಜನೆ ಜಾರಿ ಮಾಡುವ ಮೊದಲೇ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿ ಜಲಗ್ರಾಮ ಕ್ಯಾಲೆಂಡರ್ ರಚನೆ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

  ಕುಂದರನಹಳ್ಳಿ ರಮೇಶ್ ಮಾತನಾಡಿ ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲಿ ಪಿಪಿಪಿ ಮಾದರಿಯಲ್ಲಿ ಡೇಟಾ ಪಾರ್ಕ್ ಸ್ಥಾಪಿಸಲು ಪ್ರಕಟಿಸಲಾಗಿದೆ. ಅಧ್ಯಯನ ಪೀಠ ನೀರಾವರಿ ಡೇಟಾ ಪಾರ್ಕ್ ಪ್ರಸ್ತಾವನೆ ಸಿದ್ಧಪಡಿಸಿ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿಟ್ಟು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಲಹೆ ನೀಡಿದರು.

  ಮಲ್ಲೇಶ್ ಮಾತನಾಡಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನಾ ಸಮಿತಿಯು ಜಲಗ್ರಾಮ ಕ್ಯಾಲೆಂಡರ್ ಸಿದ್ಧಪಡಿಸಲು ಸರ್ಕಾರದಿಂದ ಆದೇಶ ಹೊರಡಿಸುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದರು.

  ಗೋವಿಂದಪ್ಪ ಬೆಸ್ಕಾಂ ಇಲಾಖೆಯಲ್ಲಿ ಜಿಲ್ಲೆಯಲ್ಲಿರುವ ಖಾಸಗಿ ಮತ್ತು ಸರ್ಕಾರದ ಪ್ರತಿ ಬೋರ್‌ವೆಲ್ ಮಾಹಿತಿ ಸಂಗ್ರಹಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಸಂಗ್ರಹ ಮಾಡಲು ಶ್ರಮಿಸುವುದಾಗಿ ತಿಳಿಸಿದರು.

  ಡಿ.ಎಸ್.ಹರೀಶ್ ಮಾತನಾಡಿ ಜನಗಣತಿ ಮಾದರಿಯಲ್ಲಿ ಜಲಗಣತಿ ನಡೆಸುವುದು ಸೂಕ್ತವಾಗಿದೆ. ಡಿಜಿಟಲ್ ಇಂಡಿಯಾ ಎಂದು ಕರೆದರು ಕರಾರುವಕ್ಕಾದ ಮಾಹಿತಿ ಒಂದೇ ಕಡೆ ಲಭ್ಯವಿಲ್ಲದೇ ಇರುವುದು ದುರಂತ. ಇದೇ ರೀತಿ ಮುಂದುವರೆಸದೇ ಕರಾರು ವಕ್ಕಾದ ಡೇಟಾ ಸಂಗ್ರಹ ಮಾಡುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

   ಕೃಷ್ಣಮೂರ್ತಿ ನನ್ನ ಅನುಭವದ ಪ್ರಕಾರ ಯಾವುದೇ ಇಲಾಖೆಯಲ್ಲಿ ಕರಾರುವಕ್ಕಾದ ಡೇಟಾ ಇರುವುದಿಲ್ಲ, ರಿಮೋಟ್ ಸೆನ್ಸಿಂಗ್ ಲೇಯರ್ ಪಡೆದು ಎಲ್ಲಾ ಇಲಾಖೆಗಳು ಡೇಟಾ ತುಂಬಿದಲ್ಲಿ ಮಾತ್ರ ಯೋಜನೆ ಫಲಪ್ರದವಾಗಲಿದೆ ಎಂದು ಸಲಹೆ ನೀಡಿದರು.

  ಸತ್ಯಾನಂದ್ ಮಾತನಾಡಿ ಕುಂದರನಹಳ್ಳಿ ರಮೇಶ್ ರವರ ಸಲಹೆ ಮೇರೆಗೆ ನಾವು ಸ್ವಾಂದೇನಹಳ್ಳಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್ ತಯಾರಿಸಿದೆವು. ಲೋಕಸಭಾ ಸದಸ್ಯಾರಾದ ಶ್ರೀ ಜಿ.ಎಸ್.ಬಸವರಾಜ್ ರವರು  ದೆಹಲಿಯಲ್ಲಿ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್‌ರವರ ಸಭೆಯಲ್ಲಿ ಮಂಡಿಸಿ ದೇಶದ ಗಮನ ಸೆಳೆದಿರುವುದು ಜಿಲ್ಲೆಗೆ ಕೀರ್ತಿ ತಂದಿದೆ ಎಂದರು.

  ರಂಗನಾಥ್, ಪುಟ್ಟರಾಜು, ದೇವರಾಜು, ತಿಪ್ಪೆಸ್ವಾಮಿ ಭಾಗವಹಿಸಿ ಹಲವಾರು ಅಭಿಪ್ರಾಯ ಹಂಚಿಕೊಂಡರು