16th September 2024
Share

TUMAKURU: SHAKTHIPEETA FOUNDATION

  ತುಮಕೂರು ಎಸ್.ಪಿ. ಶ್ರೀ ವಂಶಿಕೃಷ್ಣರವರು ಬಹುಷಃ ವಿಶ್ವದಲ್ಲಿಯೇ ಮೊದಲು ಎಂಬಂತೆ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಸುಮಾರು 750 ಪೋಲೀಸ್ ಬೀಟ್ ವ್ಯಾಪ್ತಿಯ ‘ಜಿಐಎಸ್ ಆಧಾರಿತ ಜಿಯೋಫೆನ್ಸ್’ ಮಾಡುವ ಮೂಲಕ ಕೊರೊನಾ ರೋಗಿಗಳ ನಿಖರವಾದ ವಾಸಸ್ಥಳ ಮಾಹಿತಿಗಾಗಿ ವಿಶೇಷ ಯೋಜನೆ ರೂಪಿಸಲು ಮುಂದಾಗಿದ್ದಾರೆ.

  ಇನ್ನೂ ಮುಂದೆ ತುಮಕೂರು ನಗರದ ಜನತೆಗೆ ಯಾವುದೇ ರೋಗಗಳು ಬಂದರೂ ಯಾರ ಮನೆಯಲ್ಲಿ ಯಾರಿಗೆ ಯಾವ ರೋಗವಿದೆ ಎಂಬ ಜಿಐಎಸ್ ಆಧಾರಿತ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಾಗಲಿದೆ.

   ತುಮಕೂರು ಜಿಲ್ಲೆಯ ಎಲ್ಲಾ ವಿಧವಾದ ಪೋಲೀಸ್ ಸ್ಟೇಷನ್‌ಗಳಿಗೆ ‘ವಿಡಿಯೋ ಕಾನ್ಪರೆನ್ಸ್’ ವ್ಯವಸ್ಥೆ ಮಾಡುವ ಮೂಲಕ ರಾಜ್ಯದಲ್ಲಿಯೇ ಮಾದರಿಯಾಗಿರುವ ಎಸ್‌ಪಿ ರವರಿಗೆ ಇಂದು(21.03.2020)  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ತುಮಕೂರು ನಗರದ ಸ್ಮಾರ್ಟ್ ರಸ್ತೆಗಳು ಸೇರಿದಂತೆ ಪಾಲಿಕೆ ವ್ಯಾಪ್ತಿಯ ಸುಮಾರು 850 ಕೀಮೀ ರಸ್ತೆಯಲ್ಲಿ ಟ್ರಾಫಿಕ್ ವ್ಯವಸ್ಥೆ, ನಗರದ ತುಂಬ ಅವೈಜ್ಞಾನಿಕವಾಗಿ ಇರುವ ಯುಜಿಡಿ ಮ್ಯಾನ್ ಹೋಲ್, ಡಕ್ಟ್, ವಿದ್ಯುತ್ ಚೇಂಬರ್, ಮೀಡಿಯನ್  ಹೀಗೆ ಜನತೆಗೆ ತೊಂದರೆಯಾಗುವ ಎಲ್ಲಾ ಸಮಸ್ಯೆಗಳ ಬಗ್ಗೆ ಜಿಐಎಸ್ ಆಧಾರಿತ ವರದಿ ನೀಡಲು ಅಧಿಕಾರ ನೀಡಲಾಯಿತು.

  ಜಿಐಎಸ್ ಆಧಾರಿತ ವ್ಯವಸ್ಥೆಯ ಬಗ್ಗೆ ಎಲ್ಲಾ ಇಲಾಖೆಗಳ ಕೋಆರ್ಡಿನೇಟ್ ಮಾಡಿ ಮಾಹಿತಿ ನೀಡಲು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಕುಂದರನಹಳ್ಳಿ ರಮೇಶ್‌ರವರಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಸಭೆ ಮುಗಿದ ತಕ್ಷಣವೇ ಎಸ್.ಪಿ ಅವರ ಕಚೇರಿಯಲ್ಲಿ ಭೇಟಿಯಾಗಿ ಸಮಾಲೋಚನಾ ಸಭೆ ನಡೆಸಿ, ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ದಿಶಾ ಸಮಿತಿಯ ನಿರ್ಣಯದಂತೆ ತುಮಕೂರು ಹೇಮಾವತಿ ನಾಲಾ ವಲಯದ ಕಾಮಗಾರಿಗಳಿಗೆ ಮಾಡಿರುವ ಜಿಐಎಸ್ ಆಧಾರಿತ ಮಾಹಿತಿಯನ್ನು ಎಸ್.ಪಿ ರವರಿಗೆ ಶ್ರೀ ಸತ್ಯಾನಂದ್ ಮತ್ತು ಶ್ರೀ ಗಂಗಣ್ಣನವರು ಪ್ರದರ್ಶನ ಮಾಡಿದರು. ಎಸ್.ಪಿ.ರವರು ಈ ಮಾಹಿತಿ ನನಗೂ ‘ಹೇಮಾವತಿ ನೀರು ಬೀಡುವ ಸಮಯದಲ್ಲಿ ಬೇಕಾಗಲಿದೆ ‘ಎಂದು ಹರ್ಷ ವ್ಯಕ್ತಪಡಿಸಿದರು.

 ಇದೇ ರೀತಿ ಟ್ರಾಫಿಕ್ ವ್ಯವಸ್ಥೆಗೆ ಪೂರಕವಾಗಿ ನಗರದ ರಸ್ತೆಗಳ ಮೂಲಭೂತ ಸೌಕರ್ಯಗಳ ಸಮಗ್ರ ಮಾಹಿತಿ, ಪೋಲೀಸ್ ಬೀಟ್ ವ್ಯಾಪ್ತಿಯಲ್ಲಿನ ಕಳ್ಳತನಗಳ, ಕ್ರಿಮಿನಲ್ ಪ್ರಕರಣಗಳ, ಮಹಿಳೆಯರ ಚೈನ್ ಕದಿಯುವ ಪ್ರಕರಣಗಳ, ಎಲ್ಲೆಲ್ಲಿ ರಸ್ತೆ ಬದಿ ಮಿನಿ ಮಾರ್ಕೆಟ್ ವ್ಯವಸ್ಥೆ, ಬೀದಿ ವ್ಯಾಪಾರಿಗಳ, ಹೀಗೆ ಸಮಗ್ರವಾಗಿ ಮಾಹಿತಿ  ಸಂಗ್ರಹಿಸುವ ಮೂಲಕ ಅಪರಾಧಗಳ ಉತ್ತಮವಾದ ಡಿಜಿಟಲ್ ವರದಿ ತಯಾರಿಸಬಹುದು ಎಂಬ ನಿರ್ಣಯಕ್ಕೆ ಬರಲಾಯಿತು.

 ದಿನಾಂಕ:24.03.2020 ರಂದು ಬೆಳಿಗ್ಗೆ 10 ಘಂಟೆಗೆ ತುಮಕೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಎಸ್.ಪಿ.ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪಾಲಿಕೆಯವರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಾಡಿರುವ ಡ್ರೋನ್ ಸರ್ವೇ ಮಾಹಿತಿ, ಎಲ್ಲಾ ವಿಧವಾದ ಕಟ್ಟಡಗಳ ಮಾಹಿತಿ, ತುಮಕೂರು ಸ್ಮಾರ್ಟ್ ಸಿಟಿಯವರು ಮಾಡಿರುವ ಡ್ರೋನ್ ಸರ್ವೇ ಮಾಹಿತಿ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದವರು ತಯಾರಿಸುತ್ತಿರುವ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಮಾಹಿತಿ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‌ರವರು ನೀಡಿರುವ ಜಿಐಎಸ್ ಆಧಾರಿತ ಬೇಸ್ ಮ್ಯಾಪ್ ಹಾಗೂ ಈಗಾಗಲೇ ತಯಾರಿಸಿರುವ ಜಿಐಎಸ್ ಆಧಾರಿತ ಲೇಯರ್‍ಗಳ  ಮಾಹಿತಿ ಪಡೆಯಲು ಎಲ್ಲಾ ಯೋಜನೆಗಳ  ಸಲಹಾಗಾರರ ಸಭೆ ಕರೆದು ಸಮಾಲೋಚನೆ ನಡೆಸಲು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಎಸ್.ಪಿ.ರವರು ಸೂಚಿಸಿದ್ದಾರೆ.

  ಪಾಲಿಕೆಯ ಇಂಜಿನಿಯರ್‌ಗಳ, ಕರವಸೂಲಿಗಾರರ, ಪೌರ ಕಾರ್ಮಿಕರ, ಹೆಲ್ತ್ ಇನ್‌ಸ್ಪೆಕ್ಟರ್‌ಗಳ, ವಾಟರ್ ಮ್ಯಾನ್‌ಗಳ ಜೊತೆಗೆ ಅಭಿವೃದ್ಧಿಯಲ್ಲಿ ಪೋಲೀಸ್ ಇಲಾಖೆ ಪಾಲ್ಗೊಳ್ಳಲು ಮುಂದಾಗಿರುವುದು ಪೋಲೀಸ್ ಜನಸ್ನೇಹಿ ವ್ಯವಸ್ಥೆಯಾಗಲಿದೆ.