22nd November 2024
Share

TUMAKURU:SHAKTHIPEETA FOUNDATION

ದಿನಾಂಕ:30.06.2020 ರಂದು ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಮತ್ತು ರೈತರ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆ ದೊರಕಿಸಲು ಇನ್‌ವೆಸ್ಟ್ ತುಮಕೂರು ನಡೆಸಲು ಅಗತ್ಯವಿರುವ ಮಾಹಿತಿ ಸಂಗ್ರಹಿಸಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಅಧಿಕಾರಿಗಳು ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಲು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್‌ರವರು ಮತ್ತು ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ರಂಗಸ್ವಾಮಿರವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ನಿರ್ಣಯ ಈ ಕೆಳಕಂಡಂತಿದೆ.

ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‌ರವರು ಮಾತನಾಡಿ, ಕಳೆದ ಸಭೆಯ ಸೂಚನೆಯನ್ವಯ ಜಿಲ್ಲಾ ಕೈಗಾರಿಕಾ ವಿಭಾಗದ ಜಂಟಿ ನಿರ್ದೇಶಕರು ಇಂದಿನ ಸಭೆಗೆ ಪರಿಪೂರ್ಣ ಮಾಹಿತಿ ಒದಗಿಸಿಲ್ಲವೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಸಭೆಯಲ್ಲಿ ಈ ಬಗ್ಗೆ ಸೂಚಿಸಿದ್ದರು ಏಕೆ ಹೀಗೆ ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಪ್ರಶ್ನಿಸಿದರು.

 ಮಾನ್ಯ ಅಧ್ಯಕ್ಷರು ಮಾತನಾಡಿ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಮುದ್ರಾ ಹೀಗೆ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಯಡಿ ಜಿಲ್ಲೆಯ ಪ್ರತಿ ಬ್ಯಾಂಕುಗಳವಾರು ಬಂದಿರುವ ಅರ್ಜಿಗಳು ಮತ್ತು   ಎಷ್ಟು ಮಂದಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಶ್ನಿಸಿದರು. ಪ್ರತಿಯಾಗಿ ಜಂಟಿ ನಿರ್ದೇಶಕರು ಮಾತನಾಡಿ, ಲೀಡ್ ಬ್ಯಾಂಕ್ ಅಧಿಕಾರಿಗಳಿಂದ ತತ್ಸಂಬಂಧ ಮಾಹಿತಿ ಪಡೆದು ಮುಂದಿನ ಸಭೆಗೆ ಪರಿಪೂರ್ಣ ಮಾಹಿತಿ ಒದಗಿಸುವುದಾಗಿ ಸಭೆಗೆ ಭರವಸೆಯಿತ್ತರು.

ಇನ್ವೆಸ್ಟ್ ತುಮಕೂರು

ಮಾನ್ಯ ಅಧ್ಯಕ್ಷರು ಮಾತನಾಡಿ ಇನ್ವೆಸ್ಟ್ ತುಮಕೂರು ಬಗ್ಗೆ ನಿಮ್ಮ ಕನಸಿನ ಚಿಂತನೆಯನ್ನು ತಿಳಿಸಲು ಅಧಿಕಾರಿಗಳಿಗೆ ಸೂಚಿಸಿದಾಗ, ಜಿಲ್ಲಾ ಕೈಗಾರಿಕಾ ವಿಭಾಗದ ಜಂಟಿ ನಿರ್ದೇಶಕರು ಮಾತನಾಡುತ್ತಾ, ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು, ಇನ್ವೆಸ್ಟ್ ತುಮಕೂರು ಕಾರ್ಯಕ್ರಮದಡಿ ಸಂಬಂಧಿಸಿದ ಎಲ್ಲಾ ಇಲಾಖೆಗಳು ಜಿಲ್ಲೆಯ ಯಾವ ಭಾಗದಲ್ಲಿ ಯಾವ ಯೋಜನೆಗಳನ್ನು ಕೈಗೊಳ್ಳಬಹುದು ಎಂಬ ಮಾಹಿತಿಯನ್ನು ಸಂಗ್ರಹ ಮಾಡುವುದಾಗಿ ತಿಳಿಸಿದರು.

 ಮಾನ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ ತುಮಕೂರು ಸ್ಮಾರ್ಟ್ ಸಿಟಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿಸಲು ಆಧ್ಯತೆ ನೀಡಬೇಕು, ತುಮಕೂರು ನಗರದ ನಿರುದ್ಯೋಗಿಗಳು ಜಿಲ್ಲೆಯ ಯಾವುದೇ ಬಾಗದಲ್ಲಿ ಉದ್ದಿಮೆ ಆರಂಭಿಸಬಹುದು ಹಾಗೂ ಜಿಲ್ಲೆಯ ಯಾವುದೇ ಭಾಗದವರು ತುಮಕೂರು ನಗರದಲ್ಲಿ ಉದ್ದಿಮೆ ಆರಂಭಿಸಬಹುದು, ಈ ಹಿನ್ನೆಲೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಸಹಭಾಗಿತ್ವದಲ್ಲಿ ಜಿಐಎಸ್ ಆಧಾರಿತ ವರದಿ ತಯಾರಿಸಲು ಸೂಚಿಸಿದರು.

  ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರದ ಮುಂಗಡ ಪತ್ರಗಳ ಯೋಜನೆಗಳು, ಇಲಾಖಾವಾರು ವಿವಿಧ ಯೋಜನೆಗಳು, ಯೋಜನೆಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳು, ಸ್ಕಿಲ್, ನಿರುದ್ಯೋಗಿಗಳ ಮಾಹಿತಿ, ಎಂ.ಎಸ್.ಎಂ.ಇ ಮತ್ತು ವಿವಿಧ ಇಲಾಖೆಗಳ ಕಾರ್ಪೋರೇಷನ್, ಮಂಡಳಿ, ನಿಗಮಗಳ ಯೋಜನೆಗಳು ಸೇರಿದಂತೆ ಅತ್ಯುತ್ತಮ ಮಾಹಿತಿ ಪಡೆಯಲು ಮಾನ್ಯ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. ಇಲಾಖಾವಾರು, ಯೋಜನೆವಾರು, ಇಲಾಖಾ ನೋಡೆಲ್ ಅಧಿಕಾರಿಗಳ ನೇಮಕ ಮಾಡುವ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸಿದರು. ವರದಿ ತಯಾರಿಸಲು ಅಗತ್ಯವಿರುವ ಅನುದಾನವನ್ನು ತುಮಕೂರು ಸ್ಮಾರ್ಟ್ ಸಿಟಿ ಭರಿಸಲು ಸೂಚಿಸಿದರು. ಮಾನ್ಯ ಜಿಲ್ಲಾಧಿಕಾರಿಯವರು ಸಹಮತ ವ್ಯಕ್ತಪಡಿಸಿದರು.

 ಮಾನ್ಯ ವಿಧಾನಪರಿಷತ್ ಸದಸ್ಯರು ಮಾತನಾಡಿ, ಕೇಂದ್ರ ಸರ್ಕಾರ  ಕರ್ನಾಟಕ ಯೋಜನೆಗೆ ಒಟ್ಟಾರೆ ರೂ.17,೦೦೦/-ಕೋಟಿ ಅನುದಾನ ಒದಗಿಸಲಾಗಿದ್ದು, ಸದರಿ ಯೋಜನೆಯಡಿ(ಎಂ.ಎಸ್.ಎಂ.ಇ) ತುಮಕೂರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನೂ ಮಾಡಬಹುದು ಯಾವ ಉದ್ಯಮ ಪ್ರಾರಂಭಿಸಲು ಅವಕಾಶಗಳಿವೆ, ಏನನ್ನು ಉತ್ಪಾದಿಸಲಾಗುತ್ತಿದೆ? ಏನೇನು ಸೌಲಭ್ಯ ಪಡೆಯಬಹುದು ಎಂಬ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಪೂರ್ಣ ಮಾಹಿತಿ ಒದಗಿಸಬೇಕೆಂದು ಕೋರಿದರು.  ಈ ಮಾತಿಗೆ ಮಾನ್ಯ ಜಿಲ್ಲಾಧಿಕಾರಿಯವರು ಸಹಮತ ವ್ಯಕ್ತಪಡಿಸಿದರು.          

 ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‌ರವರು ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯಾದ ಕಾಯರ್ ಕ್ಲಸ್ಟರ್ ಯೋಜನೆಯ ಕುರಿತು ಮುಂದಿನ ಸಭೆಗೆ ಪರಿಪೂರ್ಣ ಮಾಹಿತಿ ಒದಗಿಸಬೇಕೆಂದು ಇಲಾಖಾಧಿಕಾರಿಯವರಿಗೆ ಸಲಹೆ ನೀಡಿದರು. 

[ಕ್ರಮ: ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ವಿಭಾಗ, ತುಮಕೂರು]