22nd December 2024
Share

TUMAKURU:SHAKTHIPEETA FOUNDATION

 1998 ರ ಆಸುಪಾಸಿನಲ್ಲಿ ತುಮಕೂರು ನಗರದ ಸೋಮೇಶ್ವರ ಬಡಾವಾಣಿ ಮೂಲಕ ಹಾದು ಹೋಗಿ ತುಮಕೂರು ಅಮಾನಿಕರೆಗೆ ಸೇರುವ ಬೃಹತ್ ಚರಂಡಿಯ ಅಭಿವೃದ್ಧಿ ಮಾಡಬೇಕು ಎಂದು ಅಂದಿನ ಪ್ರಜಾವಾಣಿ ವರದಿಗಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು ನಗರ ಸಂಚಾರದಲ್ಲಿ ವರದಿ ಮಾಡಿದ್ದರು. ನಾನು ಅಂದಿನಿಂದ ಈ ಯೋಜನೆ ಗಮನಿಸುತ್ತಿದ್ದೇನೆ, ಇಂದಿಗೂ ಸಹ ಶಾಶ್ವತ ಪರಿಹಾರ ಸಿಕ್ಕಿಲ್ಲ.

  ಅಂದಿನಿಂದ ತುಮಕೂರು ನಗರದ ಶಾಸಕರುಗಳಾದ ಪ್ರತಿಯೊಬ್ಬರೂ ಮಳೆಬಂದಾಗ, ಚರಂಡಿಯಲ್ಲಿ ನೀರು ನುಗ್ಗಿದಾಗ ಸ್ಥಳ ತನಿಖೆ ಮಾಡಿ ಮಾಧ್ಯಮಗಳಲ್ಲಿ ಫೋಟೋ ಹಾಕಿರುವುದನ್ನು ಬಿಟ್ಟರೇ ಯಾವುದೇ ಪ್ರಯೋಜನವಾಗಿಲ್ಲ.

  ತುಮಕೂರು ಅಮಾನಿಕೆರೆ ಅಭಿವೃದ್ಧಿಗಾಗಿ ಕೋಟ್ಯಾನುಕೋಟಿ ಅನಗತ್ಯವಾಗಿ ವೆಚ್ಚಮಾಡಿ ಅದರ ಸೌಂದರ್ಯವನ್ನೇ ಹಾಳುಮಾಡಿದ್ದಾರೆ. ತುಮಕೂರು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಎರಡು ಭಾರಿ ಕರಾಬುಹಳ್ಳಗಳನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ಬಿಲ್ ಮಾಡಿದ್ದಾರೆ.

 ಸುಮಾರು ಬಾರಿ ಸಮೀಕ್ಷೆ ಮಾಡಿದ್ದಾರೆ, ಒತ್ತುವರಿ ಗುರುತಿಸಲಾಗಿದೆ ಎಂದು ಹೇಳುತ್ತಾರೆ, ಡ್ರೋನ್ ಸರ್ವೆಮಾಡಿ ಒಂದು ಇಂಚಿನವರೆಗೂ ಕರಾರುವಕ್ಕಾದ ಒತ್ತುವರಿ ಡೇಟಾ ನೀಡುತ್ತೇವೆ ಎಂದು ಎಂಓಯುಗಳಲ್ಲಿ ಬರೆದುಕೊಂಡಿದ್ದಾರೆ.

 ಕಡೇ ಪಕ್ಷ ಈ ಕರಾಬುಹಳ್ಳ ಎಷ್ಷು ಕೀಮೀ ದೂರ ಹರಿಯಲಿದೆ, ವಿಲೇಜ್ ಮ್ಯಾಪ್ ಪ್ರಕಾರ, ಯಾವಾಗ ಎಷ್ಟೆಷ್ಟು ಅಗಲ ಇತ್ತು, ಎಷ್ಟು ವಿಸ್ಥೀರ್ಣ ಒತ್ತುವರಿ ಆಗಿದೆ, ಕ್ಯಾಚ್ ಮೆಂಟ್ ಏರಿಯಾ ಎಷ್ಟಿದೆ, ಎಷ್ಟು ಕ್ಯುಸೆಕ್ಸ್ ನೀರು ಹರಿಯಲಿದೆ, ಈ ಹಳ್ಳದ ನೀರು ಹರಿದು ಅಮಾನಿಕೆರೆ ಸೇರುವ ಮುನ್ನ ಸುಮಾರು ಮೂರು ಕಟ್ಟೆಗಳಿದ್ದವು, ವಿಶ್ವವಿದ್ಯಾನಿಲಯದ ಎದುರು ಗಡೆ ಒಂದು ಕಟ್ಟೆ, ಸೋಮೇಶ್ವರ ದೇವಾಲಯದ ಬಳಿ ಎರಡು ಕಟ್ಟೆಗಳು, ಈ ಕಟ್ಟೆಗಳನ್ನು ಸ್ವಾಹ ಮಾಡಲಾಗಿದೆ.

 ಈ   ಎಲ್ಲಾ ಕಟ್ಟೆಗಳ ನೀರು ಇದೇ ಚರಂಡಿಯಲ್ಲಿ ಹರಿಯುವ ಸಾಮಾರ್ಥ್ಯ ಇದೆಯಾ ಎಂಬ ಕನಿಷ್ಟ ಮಾಹಿತಿ ಯಾರ ಬಳಿಯೂ ಇಲ್ಲದೆ ಇರುವುದು ಒಂದು ಧೌರ್ಬಾಗ್ಯ. ಇದಕ್ಕೆ ಪ್ರಮುಖ ಕಾರಣ ಇಂಜಿನಿಯರ್‌ಗಳಿಗೆ ಬಿಲ್ ಬರೆಯುವುದನ್ನು ಬಿಟ್ಟರೇ ಬೇರೆ ಏನೂ ಗೊತ್ತಿಲ್ಲ. ಒಂದು ಸಣ್ಣ ಕೆಲಸವನ್ನು ಸಹ ಹೊರಗುತ್ತಿಗೆ ಕೊಟ್ಟು ಸಮೀಕ್ಷೆ ಮಾಡಿಸುತ್ತಾರೆ.

 ತುಮಕೂರು ನಗರದಲ್ಲಿ ಬೆಂಚ್ ಮಾರ್ಕ್ ಎಲ್ಲಿದೆ ಎಂದು ಕೇಳಿದರೆ ಇಂನಿಜಿಯರ್‌ಗಳಿಂದ ಉತ್ತರ ಸಿಗಲ್ಲ. ಯಾರೋ ಸಮಿಕ್ಷೆ ಮಾಡುತ್ತಾರೆ, ಯಾವುದೋ ಲೆವೆಲ್ ತೆಗೆದುಕೊಂಡಿರುತ್ತಾರೆ, ಇನ್ಯಾರೋ ಕೆಲಸ ಮಾಡುತ್ತಾರೆ.

 ಯಾವುದೇ ಕೆಲಸವನ್ನು ಅನುಷ್ಠಾನ ಮಾಡುವಾಗ ಲೇಬರ್‌ಗಳೇ ಜೂನಿಯರ್ ಇಂಜಿನಿಯರ್ನಿಂದ ಆರಂಬಿಸಿ ಮುಖ್ಯ ಇಂಜಿನಿಯರ್‌ವರೆಗೂ ಅವನೇ ರಾಜ, ಎಲ್ಲವನ್ನು ಅವನೇ ಮಾಡುತ್ತೇನೆ, ಪಾಪ ಅವನಿಗೆ ಲೆವೆಲ್ ಕಟ್ಟಿಕೊಂಡು ಏನಾಗಬೇಕು ಬಿಲ್ ಪಡೆಯಲು ಮಾತ್ರ ಅವರ ಕಾಳಜಿ ಇರುತ್ತದೆ. ಆಸಕ್ತಿ ಇರುವ ಗುತ್ತಿಗೆದಾರರು ಮಾತ್ರ ಪಕ್ಕಾ ಕೆಲಸ ಮಾಡುತ್ತಾರೆ ಹಾಗೂ ಕೆಲವು ಇಂಜಿನಿಯರ್‌ಗಳು ಮುಂದೆ ನಿಂತು ಕೆಲಸ ಮಾಡಿಸುತ್ತಾರೆ.

 ಈ ಬೃಹತ್ ಚರಂಡಿ ಒತ್ತುವರಿ ಮಾಡಿ ಕೊಂಡಿರುವವರು ಎಲ್ಲಾ ಪ್ರಭಾವಿಗಳೇ, ಇವರನ್ನು ತೆಗೆಸುವ ತಾಕತ್ತು ಯಾರಿಗಿದೆ? ಒತ್ತುವರಿ ಮಾಡಿರುವವರಿಗೆ ನೋಟೀಸ್ ಕೊಟ್ಟ ಉದಾಹರಣೆ ಇದೆಯಾ? ಇದಕ್ಕೆ ಉತ್ತರಹೇಳುವವರು ಯಾರು?

 ಇನ್ನೂ ಎಷ್ಟು ವರ್ಷ ಇದೇ ರೀತಿ ನಡೆಯಬೇಕು ಎಂಬ ಬಗ್ಗೆ ವಿವರವಾದ ಚರ್ಚೆ ಇಂದು (24.07.2020) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಪ್ರತಿ ಶುಕ್ರವಾರ ನಡೆಯುವ ತುಮಕೂರು ಸ್ಮಾರ್ಟ್ ಸಿಟಿ ಸಭೆಯಲ್ಲಿ ನಡೆಯಿತು, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಭಾಗವಹಿಸಿದ್ದರು.

 ‘ಮುಂದಿನ ವಾರದೊಳಗೆ ಚರಂಡಿಯ ತುರ್ತು ಪರಿಹಾರ ಏನು ಮತ್ತು ಶಾಶ್ವತ ಪರಿಹಾರ ಏನು ಎಂಬ ಸ್ಪಷ್ಟ ಮಾಹಿತಿ ನೀಡಬೇಕೆಂಬ ಖಡಕ್ ಸಂದೇಶವನ್ನು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನೀಡಿದ್ದಾರೆ. ಶಾಸಕರು ಮತ್ತು ಸಂಸದರು ಸಹ ಅವರದೇ ಧಾಟಿಯಲ್ಲಿ ಸೂಚನೆ ನೀಡಿದ್ದಾರೆ.’

 ಮಹಾನಗರ ಪಾಲಿಕೆ ಆಯುಕ್ತರು, ತುಮಕೂರು ಸ್ಮಾರ್ಟ್ ಸಿಟಿ ಎಂಡಿ, ಟೂಡಾ ಆಯುಕ್ತರು  ಮತ್ತು ತಹಶೀಲ್ಧಾರ್‌ರವರು ಒಂದು ವಾರದೊಳಗೆ ಪಕ್ಕಾ ದಾಖಲೆ ಸಹಿತ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಈ ಚರಂಡಿ ವಾಸನೆಯನ್ನು ತುಮಕೂರಿನ ತಹಶೀಲ್ದಾರ್‌ರವರು ಬಹಳ ವರ್ಷಗಳಿಂದ ಕುಡಿಯುತ್ತಿದ್ದಾರೆ, ನನಗೆ ತಿಳಿದ ಪ್ರಕಾರ ಅವರ ಮನೆಯೂ ಇದೇ ಚರಂಡಿಯ ಅಕ್ಕಪಕ್ಕವಿತ್ತು. ಅವರ ಮನೆ ಪಕ್ಕದ ಚರಂಡಿ ಬಗ್ಗೆ ನಿಖರವರಾದ ಮಾಹಿತಿ ನೀಡುತ್ತಾರೋ ಇಲ್ಲ ಅಡಗಲ ಅಜ್ಜಿ ಕಥೆ ಹೇಳುತ್ತಾರೋ ಕಾದು ನೋಡೋಣ.

  ಅಂದೇ ಅಧ್ಯಯನ ವರದಿ ಮಾಡಿದ್ದ ಶ್ರೀ ದಿನೇಶ್ ಅಮೀನ್ ಮಟ್ಟುರವರು ನನ್ನ ವರದಿ ನೋಡಿ ನಗುತ್ತಿರಬಹುದು? ಶಾಸಕರು  ವರದಿ ಪ್ರತಿ ಇದ್ದರೆ ಕೊಡಿ ಎಂದು ಕೇಳಿದರು, ರಾತ್ರಿ ಎಲ್ಲಾ ಹುಡುಕಿದೆ ಇನ್ನೂ ಸಿಕ್ಕಿಲ್ಲ. ಬಹುಷಃ ಅವರು ಬರೆದ ನಗರ ಸಂಚಾರದ ವರದಿಗಳ ಪುಸ್ತಕವನ್ನು  ಮಾಡಿದ್ದರು ಅದರಲ್ಲಿ ಇರಬಹುದು.

 ಈ ಚರಂಡಿ ಅಭಿವೃದ್ಧಿ ಬಗ್ಗೆ ಇನ್ನೂ ಎಷ್ಟು ವರ್ಷ ಇದೇ ರೀತಿ ಸಭೆಗಳು ನಡೆಯುತ್ತವೋ? ಬಲ್ಲವರು ಯಾರು? ಪಾಲಿಕೆ ಆಯುಕ್ತರು ದಿಟ್ಟ ನಿರ್ಧಾರ ಕೈಗೊಂಡರೇ ಜಿಲ್ಲಾಧಿಕಾರಿಗಳು ಸಂಪೂರ್ಣ ಸಹಕರಿಸುವ ಭರವಸೆ ಇದೆ. ಇದಕ್ಕೆ ಮುಕ್ತಿ ನೀಡಲೇ ಬೇಕು ಎರಡು ಮಾತಿಲ್ಲ.

  ಬಾ.ಹ.ರಮಾಕುಮಾರಿಯವರು ದೂರವಾಣಿ ಕರೆ ಮಾಡಿ, ತುಮಕೂರಿನ ಚರಂಡಿ ನೀರು ನಮ್ಮ ಕನ್ನಡ ಸಾಹಿತ್ಯಭವನದ ಒಳಗಡೆ ಬಂದಿದೆ, ಚರಂಡಿಗಳ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ, ಇದನ್ನು ಸರಿ ಪಡಿಸದಿದ್ದರೆ, ನಮ್ಮ ಶಾಪ ನಿಮಗೂ ತಟ್ಟಲಿದೆ ಎಂದು ಎಚ್ಚರಿಸಿದ್ದಾರೆ.

 ಈ ಚರಂಡಿ ಅಭಿವೃದ್ಧಿ ಬಗ್ಗೆ ಹಲವು ವರ್ಷಗಳ ಕಾಲ ಹೋರಾಟ ಮಾಡಿದ ವಕೀಲರಾದ ಶ್ರೀ ನಿರಂಜನ್ ರವರು ಮತ್ತು ಅವರ ತಂಡ ರೋಸಿ ಹೋಗಿ ಮೌನವಾಗಿದ್ದಾರೆ. ಮಾಜಿ ಶಾಸಕರಾದ ಶ್ರೀ ರಫಿಕ್ ಅಹಮ್ಮದ್ ಈಗ ಗುಡುಗಿದ್ದಾರೆ, ಅವರು ಶಾಸಕರಾದಾಗ ಈ ಸಮಸ್ಯೆಗಳಿಗೆ ಏಕೆ ಪರಿಹಾರ ನೀಡಲಿಲ್ಲ ಎಂಬುದು ನನಗೆ ಅರ್ಥವಾಗಿಲ್ಲ. ರಚನಾತ್ಮಕ ಸಲಹೆಗಳನ್ನು ನಗರಾಡಳಿತಕ್ಕೆ ನೀಡಿದಲ್ಲಿ ಸಹಕಾರಿಯಾಗಲಿದೆ.