22nd December 2024
Share

TUMAKURU: SHAKTHIPEETA FOUNDATION

  ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಡ್ಡಾಯವಾಗಿ ಮನೆಗಳಿಗೆ ಡೋರ್ ನಂಬರ್ ನೀಡಲೇ ಬೇಕು ಎಂದು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಮುಖ್ಯ ರಸ್ತೆ, ಅಡ್ಡರಸ್ತೆ, ಲಿಂಕ್‌ರಸ್ತೆವಾರು ಮನೆಗಳಿಗೆ ನಂಬರ್ ನೀಡಿ ಆ ವಿಳಾಸದ ಎಲ್ಲಾ ಮತದಾರರಪಟ್ಟಿ ಒಂದೇ ಕಡೆ ಲಭ್ಯವಾಗಬೇಕು ಎಂದು ಪ್ರತಿಪಾದಿಸಿದ್ದರು.

 ಪ್ರಸ್ತುತ ಒಂದೇ ಮನೆಯ ಮತಗಳು ಹಲವಾರು ಬೂತ್‌ಗಳಲ್ಲಿ ಹಂಚಿ ಹೋಗಿ ಮತದಾರರು ಹುಡುಕಲು ಆಗುತ್ತಿಲ್ಲ ಇದರಿಂದ ಮತದಾನದ ಹಕ್ಕು ಕಸಿದಂತಾಗುತ್ತದೆ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಆಗಿನ ಜಿಲ್ಲಾಧಿಕಾರಿ ಶ್ರೀ ಕೆ.ಪಿ.ಮೋಹನ್ ರಾಜ್‌ರವರು  ಮನೆ ನಂಬರ್ ಹಾಕಲು ಕಸರತ್ತು ನಡೆಸಿ ನಗರದ ಎಲ್ಲಾ ಮನೆಗಳಿಗೆ ನಂಬರ್ ಹಾಕಿಸಿದ್ದರು. ಜಿಲ್ಲಾಧಿಕಾರಿಗಳ ವರ್ಗಾವಣೆಯಾದ ನಂತರ ತುಮಕೂರಿನ ಮನೆ ನಂಬರ್‌ಗಳು ನಾಪತ್ತೆಯಾಗಿವೆಯಂತೆ’

 ಅಂದು ಮನೆ ನಂಬರ್ ಹಾಕಿದ್ದವರಿಗೆ ಪಾಲಿಕೆ ಹಣ ಪಾವತಿಸಿಲ್ಲವಂತೆ, ಪ್ರಸ್ತುತ ಅವರನ್ನೆ ಕರೆದು ಮನೆನಂಬರ್ ಹಾಕಿಸಿ ಬಾಕಿ ಹಣ ನೀಡಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

 ತುಮಕೂರಿನಲ್ಲಿ ಈಗಿರುವ ಪಾಲಿಕೆ ದಾಖಲೆಗಳ ಪ್ರಕಾರ 107272  ಸ್ವತ್ತುಗಳಿವೆ, 24/7 ನೀರಿನ ಯೋಜನೆಯ ಪ್ರಕಾರ  57522  ಮನೆಗಳಿಗೆ ನೀರಿನ ಸಂಪರ್ಕ ಪಡೆಯಲು ಮಾಹಿತಿ ಸಂಗ್ರಹಿಸಲಾಗಿದೆ. ಡ್ರೋನ್ ಸಮೀಕ್ಷೆಯ ಪ್ರಕಾರ ಎಷ್ಟು ಸ್ವತ್ತುಗಳಿವೆ ಎಂಬ ಮಾಹಿತಿ ಸಂಗ್ರಹಿಸಲು ನಗರದ ವ್ಯಾಪ್ತಿಯಲ್ಲಿನ 18 ಜನ ಬಿಲ್ ಕಲೆಕ್ಟರ್‌ಗಳಿಗೆ ಹಂಚಿಕೆ ಮಾಡಿ ಎಂಐಎಸ್ ಪ್ರಕಾರ ಎಷ್ಟಿತ್ತು, ಪ್ರಸ್ತುತ ಡ್ರೋನ್ ಸಮೀಕ್ಷೆಯ ಪ್ರಕಾರ ಎಷ್ಟಿವೆ ಎಂಬ ಕರಾರುವಕ್ಕಾದ ಮಾಹಿತಿ ಸಂಗ್ರಹ ‘ಅಂದೋಲನದ ‘ ರೀತಿಯಲ್ಲಿ ನಡೆಯುತ್ತಿದೆ.

 ಪಾಲಿಕೆಗೆ ಮೂರು ಜನ ಸರ್ವೆಯರ್‌ಗಳು ನೇಮಕವಾಗಿದ್ದಾರೆ, ಅವರು ಪಾಲಿಕೆ ವ್ಯಾಪ್ತಿಯ ಗ್ರಾಮಗಳು, ಪ್ರತಿ ಗ್ರಾಮದಲ್ಲಿನ ಸರ್ವೇನಂಬರ್‌ಗಳು, ಸರ್ವೆನಂಬರ್‌ವಾರು ಲೇಔಟ್‌ಗಳು, ಲೇಔಟ್‌ಗಳವಾರು ಸ್ವತ್ತುಗಳು, ಭೂ ಬದಲಾವಣೆಯಾಗದೆ ಇರುವ ಸರ್ವೆನಂಬರ್‌ಗಳ ಮಾಹಿತಿ ಸಂಗ್ರಹಿಸಿ ಟೂಡಾದ ಸಹಭಾಗಿತ್ವದಲ್ಲಿ ಜಿಐಎಸ್ ಲೇಯರ್ ಮಾಡಲು ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು ಆದೇಶ ಮಾಡುವ ಭರವಸೆಯನ್ನು ಅಭಿವೃದ್ಧಿ ರೆವೂಲ್ಯೂಷನ್ ಫೋರಂಗೆ ನೀಡಿದ್ದಾರೆ.

 ಮನೆ ನಂಬರ್, ಸೈಟ್ ನಂಬರ್ ಮತ್ತು ಭೂ ಬದಲಾವಣೆಯಾಗದ ಸರ್ವೆನಂಬರ್, ಸರ್ಕಾರಿ ಸ್ವತ್ತುಗಳು ಹೀಗೆ ಒಂದು ರಸ್ತೆಯಲ್ಲಿರುವ ಎಲ್ಲಾ ಸ್ವತ್ತುಗಳಿಗೂ ಕಂಟ್ಯೂನಿಯಸ್ ಆಗಿ ಒಂದೇ ಮಾದರಿಯ ನಂಬರ್ ನೀಡಲು  ಪಾಲಿಕೆಯ ಅಧಿಕಾರಿಗಳಿಗೆ ಪ್ರತಿ ಶುಕ್ರವಾರ ನಡೆಯುವ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ರಾಕೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ. ಇದರ ಹೊಣೆಗಾರಿಯನ್ನು ಪಾಲಿಕೆ ಆಯುಕ್ತರು ಯಾವ ವಿಭಾಗಕ್ಕೆ ನೀಡುತ್ತಾರೆ ಕಾದು ನೋಡಬೇಕು.