14th July 2024
Share
MOHANKUMAR, BALARAJ, KRISHNAMURTHY, RAMESH, SATHEESH, KUNDARAHALLI RAMESH & OTHERS

TUMAKURU:SHAKTHIPEETA FOUNDATION

ನನಗೆ ಗೊತ್ತಿರುವ ಮಾಹಿತಿ ಪ್ರಕಾರ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಅಭಿವೃದ್ಧಿ ವಾರ್‌ರೂಂ ಸ್ಥಾಪಿಸಿ, ವಿವಿಧ ಯೋಜನೆಗಳ ಪರಿಣಿತರ ಸೇವೆ ಮತ್ತು ಅನುಭವವನ್ನು ಬಳಸುತ್ತಿದ್ದಾರೆ ಎಂಬ ಮಾತು ಕೇಳಿದ್ದೇನೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಪ್ರಕಾರ ಇವರೆಲ್ಲಾ ಅಭಿವೃದ್ಧಿ ಸನ್ಯಾಸಿಗಳಂತೆ. ದೇಶದ ಸಮಗ್ರ ಅಭಿವೃದ್ಧಿಯೇ ಇವರ ಪ್ರಮುಖ ಗುರಿಯಾಗಿದೆ. ಕೆಲವು ನೈಜ ಸಂಘ ಸಂಸ್ಥೆಗಳು ಮತ್ತು ಪರಿಣಿತರು ಅವರು ಹೋರಾಟ ಮಾಡುತ್ತಿರುವ ಯೋಜನೆಗಳ ಬಗ್ಗೆ ಒಬ್ಬ ಪಿಹೆಚ್‌ಡಿ ಮಾಡಿರುವವರಿಗಿಂತ ಹೆಚ್ಚಿಗೆ ತಿಳಿದುಕೊಂಡಿರುತ್ತಾರೆ.

 ತುಮಕೂರು ಜಿಲ್ಲಾ ದಿಶಾ ಸಮಿತಿ ಮತ್ತು ತುಮಕೂರು ಜಿಐಎಸ್ ಪೋರ್ಟಲ್ ಇಡೀ ದೇಶದಲ್ಲಿಯೇ ಮುಂದೊಂದು ದಿನ ಸುದ್ಧಿ ಮಾಡಲಿದೆ. ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರು, ಶ್ರೀ ಮನಮೋಹನ್ ಸಿಂಗ್‌ರವರು ಡಿಜಿಟಲ್ ಯುಗ’ ಆರಂಭಿಸಿದ ಕೀರ್ತಿ ಪಡೆದವರು. ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಅಕ್ಷರಶಃ ಡಿಜಿಟಲ್ ಯುಗ ಜಾರಿಗೆ ತರಲು ಹರಸಾಹಸ’ ಮಾಡುತ್ತಿದ್ದಾರೆ. ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.

2022 ರೊಳಗೆ ತುಮಕೂರು ಜಿಲ್ಲಾ ದಿಶಾ ಸಮಿತಿ, ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡೇಟಾ ಜಿಲ್ಲೆ’ಯಾಗಿ ಘೋಷಣೆ ಮಾಡಲು ತುದಿಗಾಲಲ್ಲಿ ನಿಂತಿದೆ. ಜಿಲ್ಲಾ ಪಂಚಾಯಿತಿಯ ನಾಲ್ಕು ಆಧಾರ ಸ್ತಂಭಗಳಾದ ಪಿಡಿ, ಸಿಪಿಓ, ಡಿಎಸ್-1 ಮತ್ತು ಡಿಎಸ್-2 ಮತ್ತು ತುಮಕೂರು ಎನ್.ಆರ್.ಡಿ.ಎಂ.ಎಸ್ ತಂಡ ಟೊಂಕ ಕಟ್ಟಿ ನಿಂತಿದೆ. ನಿಲ್ಲಲೇ ಬೇಕಿದೆ, ಯಶಸ್ಸು ಬರೀ ಬಾಯಿ ಮಾತಲ್ಲಿ, ಭಾಷಣ ಮಾಡುವುದರಲ್ಲಿ ಬರುವುದಿಲ್ಲ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ 42000  ಜನ ನೌಕರರು ಸಮಪಾಲು ಹೊರಬೇಕು. ಹಾಗೇಯೇ ಅಭಿವೃದ್ಧಿ ಬಗ್ಗೆ ಶ್ರಮಿಸುವ ಪ್ರತಿಯೊಬ್ಬರೂ ತಮ್ಮ ಕೈಜೋಡಿಸಬೇಕು. ಚುನಾಯಿತ ಜನಪ್ರತಿನಿಧಿಗಳಾದ ಗ್ರಾಮ ಪಂಚಾಯಿತ್ ಸದಸ್ಯರಿಂದ ಆರಂಭಿಸಿ ಸಂಸದರವರಿಗೂ ಅಭಿವೃದ್ಧಿ ಮಂತ್ರ ಪಠಣ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಕ್ಯಾಪ್ಟನ್ ಆಗಬೇಕು.

ದಿನಾಂಕ:22.01.2021  ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದಂತೆ ಅಭಿವೃದ್ಧಿ ವಾರ್ ರೂಂ, ಅಭಿವೃದ್ಧಿ ಇ-ಗ್ರಂಥಾಲಯ, ಅಭಿವೃದ್ಧಿ ಗ್ರಂಥಾಲಯ, ಎನ್.ಐ.ಸಿ, ಎನ್.ಆರ್.ಡಿ.ಎಂ.ಎಸ್, ಅಭಿವೃದ್ಧಿ ವಿಷನ್ ಗ್ರೂಪ್ ಮತ್ತು ತುಮಕೂರು ಜಿಐಎಸ್ ಪೋರ್ಟಲ್ ಕಚೇರಿ ಎಲ್ಲಾ ಒಂದೇ ಕಡೆ ಇರುವಂತಹ ಕಟ್ಟಡವನ್ನು ದಿನಾಂಕ:01.02.2021  ರಂದು ಪರಿಶೀಲನೆ ನಡೆಸಿದರು.

ಕಟ್ಟಡ ನಿರ್ಮಾಣ ಮಾಡಿ 2-3  ವರ್ಷಗಳಾದರೂ ಬಳಕೆ ಮಾಡದೇ ಇದ್ದ ಜಿಲ್ಲಾ ಪಂಚಾಯತ್ ಮೇಲ್ಚಾವಣೆಯಲ್ಲಿದ್ದ, ಈ ಕಟ್ಟಡ ದೇಶದ ಗಮನ ಸೆಳೆಯುವ ಕಾರ್ಯಕ್ಕೆ ಬಳಕೆಯಾಗುತ್ತಿದೆ. ಅಭಿವೃದ್ಧಿಯ ದೇವಾಲಯದಂತೆ ಕಾರ್ಯನಿರ್ವಹಿಸಲಿದೆ. ಸಿಇಓ ರವರ ತಂಡದ ಈ ಕಾರ್ಯ ಯಶಸ್ಸು ಕಾಣಲಿ. ಆರಂಭಿಕ ವೆಚ್ಚಕ್ಕೆ ಸಂಸದರು ಮತ್ತು ಜಿಲ್ಲಾಧಿಕಾರಿಗಳು ಅನುದಾನ ನೀಡುವುದು ಅಗತ್ಯವಾಗಿದೆ.