22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಸುಮಾರು 2.5  ಲಕ್ಷ ವಿದ್ಯಾರ್ಥಿಗಳು   ತಮ್ಮ ಶಾಲೆಯ ಆವರಣದಲ್ಲಿ ಅಥವಾ ತಮ್ಮ ಗ್ರಾಮದಲ್ಲಿ ಅಥವಾ ತಮ್ಮ ಜಮೀನಿನಲ್ಲಿ  ’ಮಗುವಿಗೊಂದು ಮರ- ಶಾಲೆಗೊಂದು ವನ’ ಯೋಜನೆಯಡಿಯಲ್ಲಿ  ಕನಿಷ್ಟ ಪಕ್ಷ ಒಂದೊಂದು ಗಿಡಹಾಕುವ ಯೋಜನೆಗೆ ಜಿಲ್ಲಾದ್ಯಾಂತ ಸಾಮೂಹಿಕ ಹಸಿರು ಆಂದೋಲನ ಆರಂಭಿಸಲು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ಸಮಿತಿ ಮಹತ್ವದ ನಿರ್ಣಯ ಕೈಗೊಂಡಿದೆ.

ಅನಿವಾರ್ಯ ಕಾರಣಗಳಿಂದ ದಿನಾಂಕ:26.03.2021  ರಂದು ನಡೆದ ಸಭೆಗೆ ಅರಣ್ಯ ಇಲಾಖೆಯ ಅಧಿಕಾರಿ ಶ್ರೀ ಗಿರೀಶ್ ಸಭೆಗೆ ಹಾಜರಾಗಿರಲಿಲ್ಲ. ಅವರನ್ನು ಸಭೆಗೆ ಕರೆಸಿ ಈ ಮಹತ್ವದ ಯೋಜನೆಯ ಸಾಧಕ-ಭಾಧಕಗಳ ಬಗ್ಗೆ ಚರ್ಚಿಸಲಾಯಿತು. 

ಈ ಮಹತ್ವದ ಯೋಜನೆಗೆ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪೆಸ್ವಾಮಿರವರು, ಶ್ರೀ ಚಿದಾನಂದ್ ರವರು, ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು, ಸಿಇಓ ಹಾಗೂ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಶ್ರೀ ಗಂಗಾಧರ್ ಸ್ವಾಮಿರವರು, ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರು, ಶ್ರೀ ಟಿ.ಆರ್ ರಘೋತ್ತಮರಾವ್  ರವರು, ಶ್ರೀ ಲೋಕೇಶ್ವರಿ ರವರು, ಶ್ರೀಮತಿ ಪ್ರೇಮಹೆಗ್ಗಡೆರವರು ಸೇರಿದಂತೆ ಬಹುತೇಕ ಸದಸ್ಯರು ಒಕ್ಕೊರಲಿನ ಬೇಡಿಕೆ ನೋಡಿದ ಶ್ರೀ ಗೀರೀಶ್‌ರವರು ಎಷ್ಟೆ ಕಷ್ಟ ಆಗಲಿ ಸುಮಾರು 2.5  ಲಕ್ಷ ಗಿಡ ನೀಡುವುದಾಗಿ ಘೋಶಿಸಿದರು.

 ಮಧುಗಿರಿ ಮತ್ತು ತುಮಕೂರು ಡಿಡಿಪಿಐ ಶ್ರೀ ನಂಜಪ್ಪನವರು ನಾವೇನು ಕಮ್ಮಿ ಎನ್ನುವ ರೀತಿಯಲ್ಲಿ ಜಿಲ್ಲೆಯ ಪ್ರತಿ ಶಾಲೆಯ ವಿದ್ಯಾರ್ಥಿಗಳ ಡಿಮ್ಯಾಂಡ್ ಸರ್ವೆ ಮಾಡಿಸಿ, ಅವರು ಯಾವ ಗಿಡವನ್ನು ಹಾಕಿ ಬೆಳೆಸಲು ಇಚ್ಚಿಸುತ್ತಾರೋ ಆ ಗಿಡಗಳ ಪಟ್ಟಿಯನ್ನು ಶಾಲಾವಾರು ಮಾಡಿ ಸಲ್ಲಿಸುವ ಮೂಲಕ ಯೋಜನೆಗೆ ಚಾಲನೆ ನೀಡುವುದಾಗಿ ಪ್ರಕಟಿಸಿದರು. ಒಂದು ವೇಳೆ ಶಾಲಾ ಆವರಣದಲ್ಲಿ ಗಿಡ ಹಾಕಲು ಜಾಗ ಇಲ್ಲದಿದ್ದಲ್ಲಿ, ಗ್ರಾಮದ ಸಾರ್ವಜನಿಕ ಸ್ಥಳ ಅಥವಾ ಅವರ ಪೋಷಕರ ಮನೆ ಮುಂದೆ ಅಥವಾ  ಸ್ವಂತ ಜಮೀನಿನಲ್ಲಾಗಲಿ ಗಿಡ ಹಾಕಿಸೋಣ ಎಂಬ ‘ಹಸಿರು ಪ್ರತಿಜ್ಞೆ ‘ ಮಾಡಿದಂತೆ ಇತ್ತು.

ಸಿಇಓ ಹಾಗೂ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಶ್ರೀ ಗಂಗಾಧರ್ ಸ್ವಾಮಿರವರು ಗಿಡ ಹಾಕುವ ಜೊತೆಗೆ ಶಾಲೆಗಳ ’ಸ್ವತ್ತಿನ ಡಿಜಿಟಲ್ ದಾಖಲೆ’ ನೀಡಲು ಸಹ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದೆ . ಜಿಲ್ಲೆಯ ಪ್ರತಿಯೊಂದು ಶಾಲೆಯ ದಾಖಲೆ ಪಕ್ಕ ಮಾಡುವುದಾಗಿ ತಿಳಿಸಿದಾಗ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಪ್ರತಿ ವಾರ ತಹಶೀಲ್ದಾರ್ ರವರ ಸಭೆ ನಡೆಸುವ ಮೂಲಕ ’ಸರ್ಕಾರಿ ಯೋಜನೆಗಳಿಗೆ – ಸರ್ಕಾರಿ ಜಾಗ’ ಮಂಜೂರು ಮಾಡುವ ಯೋಜನೆಗೆ ಸದ್ದು- ಗದ್ದಲವಿಲ್ಲದೆ ಚಾಲನೆ ನೀಡಲಾಗಿದೆ ಎಂದು ಪ್ರಕಟಿಸಿದರು.

ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದ ನೂರು ದಿನಗಳ ಕಾರ್ಯಕ್ರಮದಡಿಯಲ್ಲಿ ಪ್ರತಿ ಶಾಲೆಗೆ ನಲ್ಲಿ ಸಂಪರ್ಕ ಹಾಕುವ ಯೋಜನೆಯಡಿಯಲ್ಲಿ ಮಾರ್ಚ್ 31 ರೊಳಗೆ ಪೂರ್ಣಗೊಳಿಸಲು ಸಂಸದರು ಸೂಚಿಸಿದರು. ವಿದ್ಯಾರ್ಥಿಗಳು ತಟ್ಟೆ ತೊಳೆಯುವ ನೀರನ್ನು ಗಿಡಕ್ಕೆ ಹಾಕಿದರೆ ಅಷ್ಟೆ ನೀರು ಸಾಕು ಎಂಬ ಸಲಹೆ ನೀಡಿದರು. 

ತುಮಕೂರು ಸ್ಮಾರ್ಟ್ ಸಿಟಿ ವ್ಯಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿರವರು ತುಮಕೂರು ಸ್ಮಾರ್ಟ್ ಸಿಟಿ ಇ- ಲೈಬ್ರರಿಯಲ್ಲಿ ವಿದ್ಯಾರ್ಥಿಗಳ ಭಾವ ಚಿತ್ರ ಮತ್ತು ಹಾಕಿದ ಗಿಡದ ಪೋಟೊ ಸಹಿತ ಮಾಹಿತಿ ಅಫ್ ಲೋಡ್ ಮಾಡಲು ಅವಕಾಶ ನೀಡಲು ಯೋಚಿಸುವುದಾಗಿ  ತಿಳಿಸಿದರು.

ಎನ್.ಐ.ಸಿ ಅಧಿಕಾರಿ ಶ್ರೀ ಅಜಯ್ ರವರು ತುಮಕೂರು ದಿಶಾ ವೆಬ್ ಸೈಟ್‌ಗೆ ಲಿಂಕ್ ಮಾಡುವ ಮೂಲಕ ವಿಶ್ವಾದ್ಯಾಂತ ಈ  ಮಹತ್ವದ ಯೋಜನೆಗೆ ‘ಡಿಜಿಟಲ್  ಮೆರಗು ‘ ನೀಡುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಮತ್ತು ಸಿಇಓ ಈ ಯೋಜನೆ ಒಂದು ದಾಖಲೆ ‘ನಿರ್ಮಿಸುವ ರೀತಿಯಲ್ಲಿ ರೂಪುರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪೆಸ್ವಾಮಿರವರು, ಶ್ರೀ ಚಿದಾನಂದ್ ರವರು ಮತ್ತು ದಿಶಾ ಸಮಿತಿ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರು,  ಈ ಯೋಜನೆ ಯಶಶ್ವಿಗೆ ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇವೆ, ಈ ಸಂಬಂಧ ನಡೆಸುವ ಪ್ರತಿಯೊಂದು ಸಭೆಗೆ ನಮ್ಮನ್ನು ಕರೆಯಿರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಡಿಸಿಎಫ್ ಶ್ರೀ ಗೀರಿಶ್‌ರವರು ಜಿಲ್ಲಾಧ್ಯಾಂತ ಒಂದೇ ದಿನ ಗಿಡ ಹಾಕುವ ಮೂಲಕ ಯೋಜನೆಗೆ ಹಸಿರು ಮೆರಗು ನೀಡುವುದಾಗಿ ಸಭೆಗೆ ತಿಳಿಸಿದರು. ನಿಜಕ್ಕೂ ಸಭೆಗೆ ಭಾಗವಹಿಸಿದ್ದ ಎಲ್ಲರ ಭಾವನೆ ಇದೇ ಆಗಿತ್ತು. ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು ಬೆಂಬಲ ಮತ್ತು ಸಹಮತ ವ್ಯಕ್ತ ಪಡಿಸಿದರು.

ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳ ಹಸಿರು ಬೆಂಬಲ ಯಾವ ರೀತಿ ಇರಲಿದೆ ಕಾದು ನೋಡೋಣ. ಟೀಚರ್, ಟೀಚರ್ ನನಗೊಂದು ಗಿಡ ಕೊಡಿ ಎಂಬ ಹಸಿರು ಕೂಗು ಎಷ್ಟು ಸೊಗಸು ಅಲ್ಲವೇ?