15th January 2025
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅವಧಿಯ’ 2001 ರಲ್ಲಿ ಹಸಿರು ತುಮಕೂರು-1 ‘ ಮತ್ತು ‘2012 ರಲ್ಲಿ ಹಸಿರು ತುಮಕೂರು-2’ ಆಂದೋಲನ  ಕೈಗೊಳ್ಳುವ ಮೂಲಕ ತುಮಕೂರು ನಗರದಲ್ಲಿ  ‘ಸಿದ್ಧಗಂಗಾ ಶ್ರೀಗಳ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಜೀವನದ ಒಂದೊಂದು ದಿನದ ನೆನಪಿಗೆ ಒಂದೊಂದು ಗಿಡದಂತೆ ಸುಮಾರು 36500 ಗಿಡಗಳನ್ನು ಹಾಕುವ ಆಂದೋಲನ ‘ ನಡೆಸಲಾಗಿತ್ತು.

 ಎಷ್ಟು ಗಿಡಗಳು  ಬದುಕಿ ಉಳಿದೆವೆ ಎಂಬ ಕರಾರು ಮಾಹಿತಿ ಇಲ್ಲದಿದ್ದರೂ, ತುಮಕೂರು ನಗರದ ವಿವಿಧ ಭಾಗಗಳಲ್ಲಿ ಬೆಳೆದಿರುವ ಹೊಂಗೆ ಮರಗಳು ಹಸಿರು ತುಮಕೂರು ಆಂದೋಲನಕ್ಕೆ ಸಾಕ್ಷಿಯಾಗಿವೆ.  ಮತ್ತೆ ಪುನಃ ‘2021 ರಲ್ಲಿ ಹಸಿರು ತುಮಕೂರು-3 ‘ಆಂದೋಲನಕ್ಕೆ ದಿನಾಂಕ:30.03.2021  ರಂದು ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ತುಮಕೂರು ನಗರದಲ್ಲಿ ವೈಜ್ಞಾನಿಕವಾಗಿ ಎಲ್ಲೆಲ್ಲಿ ಎಷ್ಟು ಗಿಡಹಾಕಬೇಕೋ ಅಷ್ಟು ಗಿಡ ಹಾಕಲು ಯೋಜನೆ ರೂಪಿಸಿ, ಎಷ್ಟೇ ಹಣವಾದರೂ ಭರಿಸೊಣ ಎಂಬ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ನಗರದ ಎಲ್ಲಾ ನಾಗರೀಕ ಸಮಿತಿಗಳ ಸಹಭಾಗಿತ್ವದಲ್ಲಿ ಗಿಡ ಹಾಕಲು ಸಲಹೆ ನೀಡಿದ್ದಾರೆ.

ಸಂಸದ ಶ್ರೀ ಜಿಎಸ್.ಬಸವರಾಜ್ ರವರು ಮಾತನಾಡಿ ಅವರ ಕನಸಿನ ಹಸಿರು ತುಮಕೂರು-3 ಆಂದೋಲನ ಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಪರಿಸರ ದಿನಾಚರಣೆಯ ದಿನ ಬಂದು ಒಂದು ಗಿಡ ಹಾಕಿ ಪೋಟೋ ಹೊಡೆಸಿಕೊಂಡು ಹೋಗುವವರನ್ನು ದೂರವಿಟ್ಟು ಗಿಡ ಹಾಕಲು ಆಸಕ್ತಿ ಇರುವವರ ಒಂದು ಹಸಿರು ಪಡೆ ಸಿದ್ಧಪಡಿಸಲು ಸೂಚಿಸಿದ್ದಾರೆ.

ತುಮಕೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಕೃಷ್ಣಪ್ಪನವರು  ಎಲ್ಲಾ ಕಾರ್ಪೋರೇಟರ್‌ರವರ ವ್ಯಾಪ್ತಿಯಲ್ಲಿ ಯಾವ ಜಾತಿಯ ಗಿಡಗಳನ್ನು ಎಷ್ಟೆಟ್ಟು ಹಾಕಲು ಆಸಕ್ತರಿದ್ದಾರೆ ಎಂಬ ಬಗ್ಗೆ  ಪಟ್ಟಿ ಮಾಡುವ ಮೂಲಕ ನಾವೂ ಹಸಿರು ಆಂದೋಲನ-3 ಕ್ಕೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ.

ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಮತಿ ರೇಣುಕರವರು ಸಂಸದರು ಮತ್ತು ಶಾಸಕರ  ಪರಿಕಲ್ಪನೆಯ ಹಸಿರು ತುಮಕೂರು-3 ಆಂದೋಲನಕ್ಕೆ, ಮಹಾಪೌರರ ಸಲಹೆ ಮೇರೆಗೆ ಒಂದು ತಿಂಗಳಿನಲ್ಲಿ, ಒಂದು ಸ್ಪಷ್ಟ ರೂಪುರೇಷೆ ಸಿದ್ಧಪಡಿಸಿ ಜಿಐಎಸ್ ಆಧಾರಿತ ಎಲ್ಲಿ ಯಾವ ಜಾತಿಯ ಗಿಡಗಳನ್ನು ಹಾಕಬೇಕು, ಯಾರು ನಿರ್ವಹಣೆ ಮಾಡಲು ಮುಂದೆ ಬಂದಿದ್ದಾರೆ ಎಂಬ ಮಾಹಿತಿಯನ್ನು ಸಿದ್ಧಪಡಿಸುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ.

 ಅಂದಿನ ಎರಡು ಹಂತದ  ಹಸಿರು ಆಂದೋಲನಕ್ಕೆ ಸ್ಥಳೀಯ ಶಾಸಕರ ವಿರೋಧವಿತ್ತು. ಶಾಸಕರಿಗೆ ಹೆದರಿ ಅಂದಿನ ಜಿಲ್ಲಾಧಿಕಾರಿಗಳು ಬಹಿರಂಗವಾಗಿ ಕೈಜೋಡಿಸಿರಲಿಲ್ಲ. ಹಸಿರು ತುಮಕೂರು-3 ಆಂದೋಲನಕ್ಕೆ ಈ ಬಾರಿ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ಅವರೇ ಅಖಾಡಕ್ಕೆ ಇಳಿಯಲಿದ್ದಾರೆ. ಇಲ್ಲಿ ಮಾತು ಪ್ರಮುಖವಲ್ಲ ಕಾರ್ಯಸಾಧನೆ ಮುಖ್ಯ. ಸ್ಪಷ್ಟ ಗುರಿ ಇಟ್ಟುಕೊಂಡು ಆರಂಭಿಸಿ, ನಾನೂ ಸದಾ ನಿಮ್ಮ ಜೊತೆಯಲ್ಲಿರುತ್ತೇನೆ ಎಂಬ ಖಡಕ್ ಸೂಚನೆ ಜೊತೆಗೆ ಯಾವ ರೀತಿ ರೂಪು ರೇಷೆ ಸಿದ್ಧಪಡಿಸ ಬೇಕೆಂಬ ಸಲಹೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದಂತೆ ಆಕ್ಟಿವಿಟಿ ಪಾಯಿಂಟ್‌ನ ಅಡಿಯಲ್ಲಿ ನಗರದ ಇಂಜಿನಿಯರ್ ಕಾಲೇಜುಗಳ ಸಹಭಾಗಿತ್ವ ಪಡೆಯಲು ನಿರ್ಧರಿಸಲಾಗಿದೆ. ಈ ಭಾರಿ ನಗರದ ಬಡಾವಣೆವಾರು ಸುಮಾರು 350 ಕ್ಕೂ ಹೆಚ್ಚು ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ಶಾಲಾ ಕಾಲೇಜುಗಳ ಉಪನ್ಯಾಸಕರು ಹಸಿರು ತುಮಕೂರು-3 ಆಂದೋಲನದಲ್ಲಿ ಕೈಜೋಡಿಸುವ ಭರವಸೆ ನೀಡಿದ್ದಾರೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪನೆಯಾದ 2001 ರಲ್ಲಿ ಆರಂಭವಾದ ಹಸಿರು ತುಮಕೂರು-1 ಅಂದೋಲನದಿಂದ ಪ್ರಾರಂಭಿಸಿ ಈಗ ಫೋರಂ 20 ನೇ ವರ್ಷ ಪೋರೈಸುವ 2021 ರ ಸಂದರ್ಭದಲ್ಲಿ ಹಸಿರು ತುಮಕೂರು-3 ಆಂದೋಲನದಲ್ಲಿಯೂ ಸಕ್ರೀಯವಾಗಿ ಪಾಲ್ಗೊಳ್ಳಲು ನಿರ್ಧರಿಸಲಾಗಿದೆ. ಅಂದಿನ ಎರಡು ಆಂದೋಲನದಲ್ಲಿ ಯಾವುದೇ ಸರ್ಕಾರಿ ಯೋಜನೆಯ ಸಭೆಯಲ್ಲಿ ಭಾಗವಹಿಸಲು ಅವಕಾಶವಿಲ್ಲದಿದ್ದರೂ ಯೋಜನೆಗೆ ಫೋರಂ ನಿರಂತರವಾಗಿ ಶ್ರಮಿಸಿತ್ತು.

ಪ್ರಸ್ತುತ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯನಾಗಿ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ತುಮಕೂರು ತುಂಬಾ ಹಸಿರು ಮಯ ಮಾಡಲು ಸಂಸದರು, ಶಾಸಕರು ಮತ್ತು ಮಹಾಪೌರರ ನೇತ್ರತ್ವದಲ್ಲಿ ಹಾಗೂ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಟೂಡಾ ಆಯುಕ್ತರು, ತುಮಕೂರು ಸ್ಮಾರ್ಟ್ ಸಿಟಿ ಎಂಡಿಯವರ ಮತ್ತು ಅರಣ್ಯ ಅಧಿಕಾರಿಗಳ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ಮೂಲಕ ಯೋಜನೆ ಯಶಸ್ವಿಗೆ ಶ್ರಮಿಸಲಾಗುವುದು.

ಶಕ್ತಿಪೀಠ ಫೌಂಡೇಷನ್ ವತಿಯಿಂದ ನಗರಾಧ್ಯಾಂತ ಸುಮಾರು 108 ಕುಟುಂಬಗಳ ಗುಂಪು ಹಸಿರು ತುಮಕೂರು ಆಂದೋಲನದಲ್ಲಿ ಸಕ್ರೀಯವಾಗಿ ಭಾಗವಹಿಸಲಿವೆ. ಯಾರು ಬೇಕಾದರೂ ಈ ಆಂದೋಲನದಲ್ಲಿ ಭಾಗವಹಿಸ ಬಹುದಾಗಿದೆ.

ಮೋದಿ ಟೀಂ, ಸೋನಿಯಾ ಟೀಂ, ಗೌಡ ಟೀಂ, ಬಿಎಸ್‌ವೈ ಟೀಂ, ಕೃಷ್ಣ ಟೀಂ, ಮೊಯ್ಲಿ ಟೀಂ, ಶೆಟ್ಟರ್ ಟೀಂ, ಸದಾನಂದ್ ಟೀಂ, ಸಿದ್ದಾರಾಮಯ್ಯ ಟೀಂ, ಕುಮಾರಸ್ವಾಮಿ ಟೀಂ, ಕೇಜ್ರಿವಾಲ್ ಟೀಂ, ಷಫೀ ಟೀಂ, ಸೊಗಡು ಟೀಂ, ರಫೀಕ್ ಟೀಂ ಜೊತೆಗೆ ಎಲ್ಲಾ ಪಕ್ಷದವರು ಭಾಗವಹಿಸ ಬಹುದು. ಇದೊಂದು ಜಾತಿ ರಹಿತ ಮತ್ತು ಪಕ್ಷ ರಹಿತ ಹಸಿರು ಆಂದೋಲನ.

ನಗರದ ಪರಿಸರ ಪ್ರೇಮಿಗಳು, ಪರಿಸರ ಹೋರಾಟಗಾರರು ನೀಡುವ ಸಲಹೆಗಳ ಆಧಾರದಲ್ಲಿ ಯೋಜನೆ ರೂಪುರೇಷೆ ಸಿದ್ಧಪಡಿಸಲಾಗುವುದು, ಈಗ ನಿಮಗೊಂದು ಸುವರ್ಣ ಅವಕಾಶ, ದಯವಿಟ್ಟು ಹಸಿರು ಆಂದೋಲನದಲ್ಲಿ ಸ್ವಯಂ ಆಗಿ ಭಾಗವಹಿಸುವ ಮೂಲಕ ನಗರವನ್ನು ಹಸಿರು ಮಯ ಮಾಡೋಣ.

 ಯೋಜನೆಯ ಟೀಕಾಕಾರರೇ ನಮ್ಮ ಹಸಿರು ಗುರುಗಳು?