15th September 2024
Share

ದೇಶದ ನಾಲ್ಕನೇ ವ್ಯಕ್ತಿಯಾಗಿದ್ದ ದಿ.ಎಸ್.ಮಲ್ಲಿಕಾರ್ಜುನಯ್ಯನವರು ರಾಜಕೀಯದಲ್ಲಿ ಬಹಳ ಅದೃಷ್ಠದ ರಾಜಕಾರಣಿ ಎಂದರೆ ತಪ್ಪಾಗಲಾರದು. ತುಮಕೂರು ಜಿಲ್ಲೆಯವರಾಗಿದ್ದು ಅಷ್ಟೊಂದು ಉನ್ನತ ಸ್ಥಾನದಲ್ಲಿದ್ದರೂ ಎಂದೂ ‘ಅಹಂಕಾರ ಪಟ್ಟವರಲ್ಲ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ಅಭಾವ ಪೀಡಿತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ(ಅಪ್ನಾಸ್) ಯನ್ನು ಸ್ಥಾಪಿಸಿ, ನೀರಾವರಿ ಅಧ್ಯಯನ ಮತ್ತು ಹೋರಾಟ ಆರಂಭಿಸಿದಾಗ, ದಿನಾಂಕ:07.01.1997 ರಂದು ತುಮಕೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಮೊದಲನೇ ಸಭೆಗೆ ಹಾಜರಾಗಿ ಬೆಂಬಲ ನೀಡಿದವರಲ್ಲಿ ಅವರು ಒಬ್ಬರು.

ನೀರಾವರಿ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು ಎಂದರೆ ತಪ್ಪಾಗಲಾರದು. ಅಧಿಕಾರಿಗಳು ಅವರ ಒಳ್ಳೆಯ ತನ ದುರು¥ಯೋಗ ಮಾಡಿಕೊಂಡು ಅದು ಆಗುವುದಿಲ್ಲ ಸಾರ್ ಎಂದು ನುಣುಚಿಕೊಳ್ಳುವ ಮೂಲಕ ಅವರ ಆಲೋಚನೆಗಳಿಗೆ ಹುಳಿ ಹಿಂಡಿದರು ಎಂದು ನೇರವಾಗಿ ಹೇಳಬಹುದು. ನಾನು ಪ್ರತ್ಯಕ್ಷದರ್ಶಿಯೂ ಹೌದು.

ಹತ್ತಾರು ನಿವೃತ್ತ ತಜ್ಞರನ್ನು ಸೇರಿಸಿ ದಿ.ಎಸ್.ಮಲ್ಲಿಕಾರ್ಜುನಯ್ಯನವರ ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ ಹಲವಾರು ಸಭೆಗಳನ್ನು ನಡೆಸುವ ಅವಕಾಶ ನನಗೆ ದೊರಕಿದ್ದು ನನಗೆ ‘ಹೆಮ್ಮೆ’ ಎನಿಸಿದೆ.

ನಮ್ಮ ತಂದೆಯವರಿಂದ ಮೊದಲ ಸಂಪರ್ಕ: ನಮ್ಮ ತಂದೆ ದಿ.ಕೆ.ಎಸ್.ರಾಮಲಿಂಗಯ್ಯನವರ ಮೂಲಕ ನನಗೆ ಅವರ ಮೊದಲ ಭೇಟಿಯಾಗಿತ್ತು. ನನಗೆ ಆಗಿನ್ನು ರಾಜಕಾರಣದ ಮಹತ್ವ ತಿಳಿದಿರಲಿಲ್ಲ. ಅಂದಿನಿಂದ ಕೊನೆಯವರಿಗೂ ಅವರ ಒಡನಾಟವಿತ್ತು.

ಅಫಿಕ್ಸ್ ತರಭೇತಿ ಕೇಂದ್ರದ ಉದ್ಟಾಟನೆ: ನಿಟ್ಟೂರಿನಲ್ಲಿ ಶ್ರೀ.ಡಾ.ಚಂದ್ರಶೇಖರಾಚರ್ಯರವರ ಮತ್ತು ಅವರ ತಂಡದ ಅಫಿಕ್ಸ್ ತರಬೇತಿ ಕೇಂದ್ರದ ಜನಜಾಗೃತಿ ಉದ್ಘಾಟನೆ ವೇಳೆಗೆ ನನಗೆ ಅವರ ಬಗ್ಗೆ ಆತ್ಮೀಯವಾಗಿ ಸಂಪರ್ಕ ಇತ್ತು.

ಕುಂದರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ: ನನ್ನ ಹುಟ್ಟೂರು ಕುಂದರನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಲು ಮೂರು ನಾಲ್ಕು ವರ್ಷದ ನಿರಂತರ ಹೋರಾಟ ನಡೆದಿತ್ತು. ಶ್ರೀ ಜೆ.ಸಿ.ಮಾಧುಸ್ವಾಮಿಯವರಿಗೆ ಮಲ್ಲಕಾರ್ಜುನಯ್ಯನವರು ಫೋನ್ ಮಾಡಿ ಹೇಳಿದರು ಅನುಮತಿ ದೊರೆಯಲಿಲ್ಲ. ನಮ್ಮೂರಿನ ಶ್ರೀ ಗುರುಮಲ್ಲಯ್ಯನವರು ಮತ್ತು ನಾನು ಹಲವಾರು ಭಾರಿ ಭೇಟಿಯಾಗಿ ಮನವಿ ಮಾಡಿದ್ದೆವು.

ನಂತರ ಆಗಿನ ಮಾಜಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರನ್ನು ಭೇಟಿಯಾಗಿ, ಮಲ್ಲಸಂದ್ರ ಡೈರಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಿಮ್ಮ ಕೆಲಸ ಆಗಬಹುದು ಎಂದು ತುಮಕೂರು ಡೈರಿಯ ಅಧಿಕಾರಿ ಒಬ್ಬರು ಹೇಳಿದ್ದರು. ಆಗ ನಾನು ಶ್ರೀ ಜಿ.ಎಸ್.ಬಸವರಾಜ್ ರವರ ಸಂಪರ್ಕ ಮಾಡಿದ ನಂತರ ಎಸ್.ಮಲ್ಲಿಕಾರ್ಜುನಯ್ಯನವರ ಸಂಪರ್ಕ ಬಹಳ ಕಡಿಮೆ ಆಯಿತು.

ವಜ್ರಕ್ಕೆ ಅನುದಾನ: ಅವರು ಲೋಕಸಭಾ ಸದಸ್ಯರಾಗಿದ್ದರು, ಚಿಕ್ಕನಾಯಕನಹಳ್ಳಿ ತಾಲ್ಲೋಕು ಶ್ರೀ ತೀರ್ಥರಾಮೇಶ್ವರ ವಜ್ರಕ್ಕೆ ರೂ ಐವತ್ತು ಸಾವಿರ ಅನುದಾನ ಕೇಳಲು, ಅವರು ಸಿದ್ಧಗಂಗಾ ಮಠದಲ್ಲಿ ಒಂದು ಸಭೆಯಲ್ಲಿದ್ದಾಗ, ಅಲ್ಲಿಗೆ ನಿಯೋಗ ಹೋಗಿ ಕೇಳಿದೆವು. ಅವರ ಜೊತೆಯಲ್ಲಿಯೇ ಇದ್ದ, ಆವರ ಆಪ್ತ ಸಿಬ್ಬಂಧಿಯನ್ನು ಅವರು ಅನುದಾನದ ಬಗ್ಗೆ ಕೇಳಿದಾಗ, ಅನುದಾನ ಇಲ್ಲ ಎಂದು ಹೇಳಿದಾಗ, ಮುಂದೆ ಅನುದಾನ ಬಂದಾಗ ಖಂಡಿತ ನೀಡುತ್ತೇನೆ ಎಂದು ಹೇಳಿದರು.

 1999 ರಲ್ಲಿ ಬೈ ಎಲೆಕ್ಷನ್ ಬಂದಾಗ ಶ್ರೀ ಜಿ.ಎಸ್.ಬಸವರಾಜ್ ರವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ನಂತರ  ಎಸ್.ಮಲ್ಲಿಕಾರ್ಜುನಯ್ಯನವರ ಅವಧಿಯ  ಮೂರು ಕೋಟಿ ಹತ್ತು ಲಕ್ಷ ರೂ ಅನುದಾನ ಉಳಿದಿತ್ತು. ಅದನ್ನು ಹಂಚಲು ಪಟ್ಟಿ ಮಾಡಿದÀ ಕೆಲಸ ನನ್ನದಾಗಿತ್ತು. ವಜ್ರಕ್ಕೆ ರೂ ಐವತ್ತು ಸಾವಿರ ಅನುದಾನವನ್ನು ಅವರ ಅವಧಿಯ ಅನುದಾನ ದೊರಕಿತು.

ನಂತರ ನಾನು ಒಂದು ದಿವಸ ಎಸ್.ಮಲ್ಲಿಕಾರ್ಜುನಯ್ಯನವರನ್ನು ಕೇಳಿದೆ, ಸಾರ್ ನಿಮ್ಮ ಅವಧಿಯ ಇನ್ನೂ ಮೂರು ಕೋಟಿ ಹತ್ತು ಲಕ್ಷ ರೂ ಅನುದಾನ ಇತ್ತು, ಆ ದಿನ ನೀವು ಅನುದಾನ ಇಲ್ಲ ಇಂದು ಹೇಳಿದ ವಿಚಾರ ನನಗೆ ಇನ್ನೂ ಕೊರೆಯುತ್ತಿದೆ.

  ಅವರು ಹೇಳಿದ ಮಾತು ನೋಡಿ ಕುಂದರನಹಳ್ಳಿ ನಮ್ಮ ಜೊತೆ ಕೆಲಸ ಮಾಡುವವರಿಗೆ ಎಲ್ಲ ತಿಳಿದರಬೇಕು. ನಮಗೆ ಅಷ್ಟು ಸಮಯ ಇರುವುದಿಲ್ಲ, ಅವರು ಹೇಳಿದ್ದನ್ನೆ ನಾನು ಹೇಳಿದೆ ಆಲ್ ರೈಟ್ ಬಸವರಾಜ್ ಗೆ ಹೇಳುತ್ತೇನೆ, ನಾನು ಹೇಳಿದ ಕೆಲಸಕ್ಕೆ ಸ್ವಲ್ಪ ಅನುದಾನ ಬೇಕು ಎಂದು ಹೇಳಿದ ಮಾತು, ಅವರ ವ್ಯಕ್ತಿತ್ವಕ್ಕೆ ಕೀರೀಟ’ ಇಟ್ಟಂತೆ ಇತ್ತು.

 ಅವರು ಎಂದೂ ಬಸವರಾಜ್ ಮತ್ತು ಅವರು ರಾಜಕೀಯ ವಿರೋಧಿಗಳು ಅಂದು ಕೊಂಡವರಲ್ಲ. ಬಸವರಾಜ್ ನಮ್ಮ ಹುಡುಗ ಎಂಬ ಭಾವನೆ ಅವರಲ್ಲಿ  ಅಚ್ಚಳಿಯದೇ ಉಳಿದಿತ್ತು. ಅವರ ಸ್ಥಾನವನ್ನೇ ಬಿಜೆಪಿಯವರು ಬಸವರಾಜ್ ರವರಿಗೆ ನೀಡಿದಾಗಲೂ, ಪ್ರಾಮಾಣಿಕವಾಗಿ ಕೆಲಸ ಮಾಡಿದ ಪುಣ್ಯಾತ್ಮ ಅವರು.

ಗ್ಯಾಸ್ ಮತ್ತು ನನ್ನ ಹೆಂಡತಿ: ನನ್ನ ಧರ್ಮಪತ್ನಿ ಶ್ರೀಮತಿ ಬಿ.ಸುಜಾತ ಕುಮಾರಿ ಮತ್ತು ಅವರ ಮಗಳು ಶ್ರೀಮತಿ ನಾಗವೇಣಿರವರು ಸಹಪಾಟಿಗಳು, ಅಂದು ಗ್ಯಾಸ್ ಸಂಪರ್ಕಕ್ಕೆ ಬಹಳ ಡಿಮ್ಯಾಂಡ್ ಇತ್ತು. ನಾನು ಕೇಳುವುದಿಲ್ಲಾ ನೀನೇ ಕೇಳು ಎಂದು ನನ್ನ ಪತ್ನಿಗೆ ಹೇಳಿದ್ದೆ. ನಂತರ ಒಂದು ದಿವಸ ಸಿಕ್ಕಿದ ದಿ.ಎಸ್.ಮಲ್ಲಿಕಾರ್ಜುನಯ್ಯನವರು ನಿನಗೆ ಗ್ಯಾಸ್ ಬೇಡವಾ, ನಿಮ್ಮ ಮನೆಯರವರು ಮಾತ್ರ ಗ್ಯಾಸ್‍ನಲ್ಲಿ ಮಾಡಿದ ಊಟ ಮಾಡುತ್ತಾರಾ, ಎಂದಾಗ ನಿಜಕ್ಕೂ ಆಶ್ಚರ್ಯವಾಗಿತ್ತು. ಅಂದರೆ ಅಷ್ಟು ಸಣ್ಣ ವಿಷಯದ ಕಡೆಯು ಅವರ ಗಮನ ಇರುತ್ತಿತ್ತು ಎಂದರೆ ಅತಿಶಯೋಕ್ತಿ ಅಲ್ಲ.

ಸಿದ್ಧರಾಮೇಶ್ವರ ಜಯಂತಿ ಮತ್ತು ಫೋನ್ ಕಟ್: ಸಿದ್ದರಾಮೇಶ್ವರ ಜಯಂತಿ ಬಗ್ಗೆ ಮಾತನಾಡಲು ಅವರ ಬಳಿ ನಿಯೋಗ ಹೋಗಿದ್ದೆವು. ನಿಯೋಗದÀ ಜೊತೆಯಲ್ಲಿ ಇದ್ದವರು ಮದನಘಟ್ಟದ ದಿ.ಮಹಾಲಿಂಗಪ್ಪನವರಿಗೆ, ಅವರ ಮನೆಯಿಂದ ಫೋನ್ ಬುಕ್ ಮಾಡಿದ್ದರು. ಆಗ ಎಕ್ಸ್‍ಚೆಂಜ್‍ನಲ್ಲಿ ಬುಕ್ ಮಾಡಿ ಪೋನ್ ಸಂಪರ್ಕ ಪಡೆಯುವ ಕಾಲ ಆದಾಗಿತ್ತು.

ಯಾರೊ ಒಬ್ಬರು ಬಂದು ಯಾರನ್ನು ಕೇಳಿ ಫೋನ್ ಬುಕ್ ಮಾಡಿದ್ದೀರಿ ಎಂದು ಬೈದರು, ಅದನ್ನು ಗಮನಿಸಿದ್ದ ದಿ.ಎಸ್.ಮಲ್ಲಿಕಾರ್ಜುನಯ್ಯನವರು, ಘಟನೆ ನಡೆದ ಬಹಳ ದಿವಸಗಳ ನಂತರ ಒಂದು ದಿವಸ ಸಿಕ್ಕಿದಾU ಅಂದಿನ ಘಟನೆ ಹೇಳಿÀ ಸಾರಿ ಎಂದು ಮಲ್ಲಿಕ್‍ರವರು ಹೇಳಿದಾಗ ನಾನೇ ಸುಸ್ತಾದೆ. ಅವರ ಸ್ವಭಾವ ಎಷ್ಟು ಸರಳ ಮತ್ತು ಸೂಕ್ಷ್ಮತೆ ಇತ್ತು ಎಂಬುದನ್ನು ಸಾಬೀತು ಪಡಿಸುವಂತಿತ್ತು.

ಮಾಜಿ ಮುಖ್ಯ ಮಂತ್ರಿಯವರಾದ ದಿ.ಜೆ.ಹೆಚ್.ಪಟೇಲ್ ರವರ ಭೇಟಿ: ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರನ್ನು ಮತ್ತು ನನ್ನನ್ನು ಅಂದಿನ ಮುಖ್ಯ ಮಂತ್ರಿಯವರಾದ ಶ್ರೀ ಜೆ.ಹೆಚ್.ಪಟೇಲ್ ರವರೊಂದಿಗೆ  ನೇತ್ರಾವತಿ ಮತ್ತು ಭಧ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಚರ್ಚೆ ಮಾಡೋಣ ಅವರ ಮನೆಗೆ ಬನ್ನಿ ಎಂದು ಹೇಳಿದರು.

ಪರಮಶಿವಯ್ಯನವರು ಮತ್ತು ನಾನು ಬಸ್ಸಿನಲ್ಲಿ ಹೋದೆವು, ಅಂದು ಮುಖ್ಯ ಮಂತ್ರಿಯವರ ಮನೆಗೆ ಹೋಗಲು ಇಷ್ಟೊಂದು ಬಿಗಿ ಇರಲಿಲ್ಲ. ಹಾಲ್‍ನಲ್ಲಿ ಕುಳಿತಿದ್ದೆವು, ಎಸ್.ಮಲ್ಲಿಕಾರ್ಜುನಯ್ಯನವರು ಬಂದು ಒಳಗೆ ಮುಖ್ಯಮಂತ್ರಿಯವರ ಬಳಿ ಮಾತನಾಡಿ, ನಮ್ಮನ್ನು ಒಳಗೆ ಕರೆಯಲಿಲ್ಲ, ನಮಗೆ ಹೇಳದೆ ಹೊರಟು ಹೋಗಿದ್ದರು.

  ನಾವು ಕಾದು ಕಾದು ಸುಸ್ತಾಗಿ ಬಂದೆವು. ನಂತರ ಅವರು ಸಿಕ್ಕಿದಾಗ ಹೇಳಿದ ಮಾತು ಅಂದು ಒಳಗಡೆ ಇದ್ದ ಶ್ರೀ ಕೆ.ಎನ್.ನಾಗೇಗೌಡರು ಈಗ ಈ ವಿಚಾರ ಬೇಡ, ದೊಡ್ಡಗೌಡರಿಗೆ ಇಷ್ಟವಿಲ್ಲ ಎಂದು ಹೇಳಿದರು. ನಾನು ‘ನೀವೂ ಬೇಜಾರು ಕೊಳ್ಳುತ್ತೀರಾ ಎಂದು ನಿಮಗೆ ಹೇಳದೆ ಬರಬೇಕಾಯಿತು ಎಂದು ಹೇಳಿದ್ದು ‘ಅವರ ಮನಸ್ಸು ಮಕ್ಕಳಂತೆ ಇತ್ತು ಎಂಬ ಭಾವನೆ ನನಗೆ ಮೂಡಿತು.

ನೇತ್ರಾವತಿ ಮತ್ತು ಭಧ್ರಾ ಮೇಲ್ದಂಡೆ ಧರಣೆ: ಯಾರು ಏನೇ ಹೇಳಿದರೂ ನೇತ್ರಾವತಿ ಮತ್ತು ಭಧ್ರಾ ಮೇಲ್ದಂಡೆ ಯೋಜನೆಗೆ ತಿರುವು ದೊರಕಿದ್ದು ಎಸ್.ಮಲ್ಲಿಕಾರ್ಜುನಯ್ಯನವರು ಮಾಡಿದ ಉಪವಾಸ ಸತ್ಯಾಗ್ರಹ ಎಂದರೆ ಅತಿಶಯೋಕ್ತಿ ಆಗಲಾರದು.

ನಾನು ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ಬ್ರ್ಯಾಂಡ್ ಆಗಿದ್ದರೂ, ಎಸ್.ಮಲ್ಲಿಕಾರ್ಜುನಯ್ಯನವರು ಎಂದು ಸಹ ಉದಾಸೀನ ಮಾಡಿದ ಹಾಗೆ ಕಾಣಲಿಲ್ಲ, ನಾನು ಬೇಟಿಯಾದಾಗ ಅವರು ಮೊದಲು ಹೇಳುತ್ತಿದ್ದು ‘ಅಪ್ನಾಸ್ ಎಂದರೆ ನಮ್ಮದು ಎಂಬ ಅರ್ಥ ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲ.

ನಾನು ತುಮಕೂರಿನಲ್ಲಿ ‘ನೇತ್ರಾವತಿ ಮತ್ತು ಭಧ್ರಾ ಮೇಲ್ದಂಡೆ ಯೋಜನೆ’ ಅನುಷ್ಠಾನ ವಿಳಂಭದ ಬಗ್ಗೆ, ಪತ್ರಿಕಾ ಘೋಷ್ಠಿ ಕರೆದಿದ್ದೆ. ನಾನು ಆ ಸಮಯದಲ್ಲಿ ಇನ್ನೂ ಒರಟಾದ ಸ್ವಭಾವ. ಮಾಡು ಇಲ್ಲವೇ ಮಡಿ ಎಂಬ ಹೋರಾಟ ಮಾಡುತ್ತೇವೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಕೂರುತ್ತೇವೆ ಎಂದು ಘೋಷ್ಠಿಯಲ್ಲಿ ಪ್ರಕಟಿಸಿದಾಗ, ತುಮಕೂರು ವಾರ್ತೆ ಸಂಪಾದಕರಾಗಿದ್ದ ದಿ.ರಾಮಣ್ಣನವರು, ನಿಮ್ಮ ಹೋರಾಟಕ್ಕೆ ಎಸ್.ಮಲ್ಲಿಕಾರ್ಜುನಯ್ಯನವರು ಬೆಂಬಲ ಕೊಡುವುದಿಲ್ಲವಾ! ಅವರನ್ನು ಉಪವಾಸಕ್ಕೆ ಕರೆಯಬಹುದಲ್ಲಾ ಎಂದರು.

ನಾನು ಆಗ ಹೌದು ಎಸ್.ಮಲ್ಲಿಕಾರ್ಜುನಯ್ಯನವರು ನನಗೆ ಹೇಳಿದ್ದಾರೆ, ನೀವೂ ಕೈಗೊಳ್ಳುವ ತೀರ್ಮಾನಕ್ಕೆ ನಾನೂ ಬದ್ಧ ಎಂದಿದ್ದಾರೆ ಎಂದು ಹೇಳಿದೆ. ಹಾಗಾದರೆ ನಾವು ಬರೆಯಬಹುದಾ ಎಂದರು ರಾಮಣ್ಣನವರು.

ಅಲ್ಲಿಯೇ ಘೋಷ್ಠಿಯಲ್ಲಿದ್ದ ಅಂದಿನ ಪ್ರಜಾವಾಣಿ ವರದಿಗಾರಾರದ ಶ್ರೀ ದಿನೇಶ್ ಅಮೀನ್ ಮಟ್ಟುರವರು, ರಾಮಣ್ಣನವರೇ ಕುಂದರನಹಳ್ಳಿ ರಮೇಶ್ ರವರು ಒಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಘೋಷಣೆ ಮಾಡಿದ್ದಾರೆ, ಅವರು ಹೇಳಿದ್ದನ್ನು ಬರೆಯೋಣ, ಮಲ್ಲಿಕ್ ರವರು ನಾನು ಹಾಗೆ ಹೇಳಿಲ್ಲ ಎಂದು ಹೇಳಿದರೆ ಅದನ್ನು ಬರೆಯೋಣ,  ಎಂದಾಗ ಎಲ್ಲರೂ ಮೌನವಾದರು.

 ಬೆಳಿಗ್ಗೆ ಪತ್ರಿಕೆಗಳಲ್ಲಿ ಆದ ದೊಡ್ಡ ಸುದ್ಧಿ, ನೇತ್ರಾವತಿ ಮತ್ತು ಭಧ್ರಾ ಮೇಲ್ದಂಡೆ ಯೋಜನೆ’ ಅನುಷ್ಠಾ£ಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಲೋಕಸಭಾ ಉಪಸಭಾಪತಿಯವರಾದ ಶ್ರೀ ಎಸ್.ಮಲ್ಲಿಕಾರ್ಜುನಯ್ಯನವರ ಅಮರಣಾಂತ ಉಪವಾಸ ಎಂಬ ಹಣೆ ಬರಹ ಎದ್ದು ಕಾಣಿಸಿತು.

ನನಗೂ ಎದೆ ಢವ, ಢವ ಹೊಡೆಯುತ್ತಿತ್ತು. ಜಿ.ಎಸ್.ಬಸವರಾಜ್ ರವರು ಫೋನ್ ಮಾಡಿ, ಏಕಪ್ಪಾ ಈ ರೀತಿ ಹೇಳಿದ್ದೀಯ ಅವರ ಆರೋಗ್ಯ ಕೆಡುವುದಿಲ್ಲಾವಾ ಎಂದರು. ಬೆಟ್ಟದಹಳ್ಳಿ ಸಿದ್ಧನಂಜಪ್ಪನವರ ಮನೆಗೆ ಬರುತ್ತೇನೆ ಅಲ್ಲಿಗೆ ಬಾ ಮಾತನಾಡೋಣ ಎಂದರು. ಸೋಮೇಶ್ವರ ಪುರಂನಲ್ಲಿ ನನ್ನ ಕಚೇರಿಯ ಬಳಿಯೇ ಅವರ ಮನೆ ಇತ್ತು. ಮಲ್ಲಿಕಾರ್ಜುನಯ್ಯನವರನ್ನು ಕೇಳಿ ಉಪವಾಸ ಬೇಡ, ಧರಣೆ ಎಂದು ಹೇಳಿಕೆ ಕೊಡಿ ಎಂಬ ಸಲಹೆ ನೀಡಿದರು.

ನಾನು ಮಲ್ಲಿಕಾರ್ಜುನಯ್ಯವರನ್ನು ಕೇಳಿದಾಗ ಅವರು ಹೇಳಿದ ಮಾತು, ಕುಂದರನಹಳ್ಳಿ ನೀವೂ ಹೇಳಿಕೆ ಬದಲಾಯಿಸ ಬೇಡಿ, ನನ್ನ ಜನರ ಒಳಿತಿಗಾಗಿ ನಾನೂ ನಿನ್ನ ಮಾತು ಉಳಿಸುತ್ತೇನೆ. ನಿಜಕ್ಕೂ ನೀನೂ ಒಳ್ಳೆಯ ಹೇಳಿಕೆ ಕೊಟ್ಟಿದ್ದೀಯ ನಾನು ಆ ರೀತಿ ಹೇಳುತ್ತಿರಲಿಲ್ಲ ಎಂದು ದಿಟ್ಟತನದಿಂದ ಹೇಳಿದ ಮಾತು ನನಗೆ ಇನ್ನೂ ನೆನಪು ಇದೆ.

ನನಗೂ ಖುಷಿಯಾಯಿತು, ನನ್ನ ಬಳಿ ಧರಣೆಗೆ ದುಡ್ಡು ಇರಲಿಲ್ಲ, ಯಾರ ಬಳಿಯಾದರೂ ಕೇಳಲು ನನಗೆ ನಾಚಿಕೆ, ಏನು ಮಾಡುವುದು ಎಂದು ಯೋಚಿಸಿ, ನಿಟ್ಟೂರು ಸೊಸೈಟಿಯ ಕಾರ್ಯದರ್ಶಿಯಾಗಿದ್ದ ಶ್ರೀ ಹುಚ್ಚೇಗೌಡರನ್ನು ಬೆಳೆ ಸಾಲ ಯಾವಾಗ ಕೊಡುತ್ತೀರಿ ಎಂದಾU, ನಿಮ್ಮ ತಂದೆಯವರನ್ನು ಕಳುಹಿಸಿ ನಾಳೇಯೇ ಕೊಡುತ್ತೇನೆ ಎಂದಾಗ ನನಗೆ ಧೈರ್ಯ ಬಂತು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿಗೆ ಷಾಮಿಯಾನ ಹಾಕಿಸಿದಾಗ, ಹನ್ನೊಂದು ಘಂಟೆಯಾದರೂ  ಎಸ್.ಮಲ್ಲಿಕಾರ್ಜುನಯ್ಯನವರು ಬರಲಿಲ್ಲ, ದಿ.ರಾಮಣ್ಣನವರು ಮತ್ತೆ ಅವರ ಶೈಲಿಯಲ್ಲಿ ಶುರು ಮಾಡಿದರು, ಕಾಕತಾಳಿಯ, ಅಲ್ಲಿಯೇ ಇದ್ದ ಶ್ರೀ ದಿನೇಶ್ ಅಮೀನ್ ಮಟ್ಟುರವರು  ರಾಮಣ್ಣನವರೇ ನಾವು ಬರೆಯುವುದು ಬರುವುದು ನಾಳಿನ ಪತ್ರಿಕೆಯಲ್ಲಿ, ಇನ್ನೂ ಸಮಯವಿದೆ ನೋಡೋಣ ಎಂಬ ಸಮಾಧಾನದ ಉತ್ತರ ನೀಡಿದರು.

ನಾನು ದೇವಿಯ ಪ್ರಾರ್ಥನೆ ಮಾಡುತ್ತಾ ಧರಣೆ ಕುಳಿತೆ’. ಪರಮಶಿವಯ್ಯನವರು ಮಾತ್ರ, ನೋಡ್ರಿ ಮಲ್ಲಿಕ್ ಬಂದೇ ಬರುತ್ತಾರೆ ಎಂದು ಖಚಿತವಾಗಿ ಹೇಳುತ್ತಿದ್ದರು. ಸರ್ಕಾರಿ ಕಾರು ಬಂದು ನಿಂತಿತು. ನನಗೆ ಹೋದ ಜೀವ ಬಂದಂತಾಯಿತು.

ದೆಹಲಿಯಿಂದ ಬಂದವರು ತೋಟ ನೋಡಿಕೊಂಡು ಬರಲು ಹೋಗಿದ್ದೆ. ಬಹಳ ತಡವಾಯಿತಾ ಪರಮಶಿವಯ್ಯನವರೇ ಎಂದರು. ಇಲ್ಲಾ ಬನ್ನಿ ಸಾರ್ ನೀವೂ ಬಂದರಲ್ಲ ನಮಗೆ ಅದೇ ಖುಷಿ ಎಂದರು. ಎಸ್.ಮಲ್ಲಿಕಾರ್ಜುನಯ್ಯನವರು ನಾನು ರಮೇಶ್ ರವರಿಗೆ ಹೇಳಿದ್ದೆನಲ್ಲಾ ಎಂದು ಹೇಳಿ ಕುಳಿತುಕೊಂಡರು.

ಇಡೀ ಮಾಧ್ಯಮ ಮಿತ್ರರು ಮುತ್ತಿಕೊಂಡು ಪ್ರಶ್ನೆ ಕೇಳಲಾರಂಭಿಸಿದರು, ಇದೂ ಧರಣೆಯೋ, ಉಪವಾಸವೋ ಎಂಬ ಪ್ರಶ್ನೆ ಅವರದ್ದಾಗಿತ್ತು. ಮಲ್ಲಿಕ್ ರವರು ಹೇಳಿದ ಮಾತು, ಅದನ್ನು ಹೇಳುವುದು ರಮೇಶ್ ಕೆಲಸ, ನಾವು ಅವರು ಹೇಳಿದ್ದನ್ನು ಮಾಡುತ್ತೇನೆ ಎಂದಾಗ ಎಲ್ಲರೂ ಗಪ್ ಚುಪ್.

ನೋಡಿ ಪುಣ್ಯಾತ್ಮರು ಯಾವಾಗ ಬಂದು ಅಮರಾಣಂತ ಉಪವಾಸ  ಕುಳಿತರೋ’, ಸರ್ಕಾರದ ಗಮನ ಸೆಳೆಯಿತು. ಆಗಿನ ಸಚಿವರಾದ ಶ್ರೀ ಎಂ.ಪಿ.ಪ್ರಕಾಶ್‍ರವರು  ಸರ್ಕಾರದ ಪ್ರತಿನಿಧಿಯಾಗಿ ಬಂದು ಮನವೊಲಿಸಿದರು, ನೂರಾರು ಮಠಾಧಿಪತಿಗಳು ಧರಣಿಯಲ್ಲಿ ಪಾಲ್ಗೊಂಡರು, ಹಲವಾರು ರಾಜಕಾರಣಿಗಳು ಪಾಲ್ಗೊಂಡರು.

ಎಪಿಎಂಸಿಯಿಂದ ಉಚಿತವಾಗಿ ಧರಣಿಯಲ್ಲಿ ಪಾಲ್ಗೊಂಡವರಿಗೆ ಶ್ರೀ ಪಂಚಾಕ್ಷರಿ ಮತ್ತು ಅವರ ತಂಡದವರು ಉಚಿತ ಊಟದ ವ್ಯವಸ್ಥೆ ಮಾಡಿದರು, ತರಕಾರಿ ಅಂಗಡಿಯವರು ಉಚಿತವಾಗಿ ತರಕಾರಿ ಕಳುಹಿಸಿದರು.

ಪರಮಶಿವಯ್ಯನವರ ವರದಿ ವಿಚಾರ ದೆಹಲಿವರೆಗೂ ತಲುಪಿತು. ರಾಜ್ಯ ಸರ್ಕಾರ ನಡುಗಿತು. ಸಿದ್ಧಗಂಗಾ ಶ್ರೀಗಳು ಮಲ್ಲಿಕ್ ರವರ ಮನವೊಲಿಸಿ, ಆಸ್ಪತ್ರೆಗೆ ಸೇರಿಸಲು ಕಾರಣರಾದರು. ಆಸ್ಪತ್ರೆಯಲ್ಲೂ ಉಪವಾಸ ಮುಂದುವರೆದಾಗ ಆಗಿನ ಬೃಹತ್ ನೀರಾವರಿ ಸಚಿವರಾದ ದಿ.ಕೆ.ಎನ್.ನಾಗೇಗೌಡರವರು ಬಂದು ಯೋಜನೆಯ ಸಮೀಕ್ಷೆ ಮಾಡುವ ಭರವಸೆ ನೀಡಿದಾಗ ಉಪವಾಸ ಕೈಬಿಟ್ಟರು. ‘ಇದು ಇತಿಹಾಸ’.

ಹೇಳಿದ ಮಾತಿನಂತೆ ರಾಜ್ಯ ಸರ್ಕಾರ, ಈ ಬಗ್ಗೆ ಸಭೆ ಕರೆಯಿತು. ನಾಗೇಗೌಡರು ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಎಸ್.ಮಲ್ಲಿಕಾರ್ಜುನಯ್ಯನವರು, ಬಸವರಾಜ್‍ರವರು ಸೇರಿದಂತೆ ಜಿಲ್ಲೆಯ ನೂರಾರು ಜನರು ಭಾಗವಹಿಸಿದ್ದೆವು. ಭದ್ರಾ ಮೇಲ್ದಂಡೆ ಯೋಜನೆ ಮಾತ್ರ ಚರ್ಚೆ ನಡೆಸಿ, ನೇತ್ರಾವತಿ ವಿಚಾರ ಎತ್ತಲೇ ಇಲ್ಲ.

ನಾನು ಒಂದು ಕೈ ಸನ್ನೆ ಕೊಟ್ಟೆ, ನಂತರ ಅಲ್ಲಿ ಭಾಗವಹಿಸಿದ್ದ ಶ್ರೀ ಬಿ.ಎಸ್.ಕೈಲಾಸ್‍ರವರು ನೇತ್ರಾವತಿ ಎಂದು ಕೂಗು ಹಾಕಿದ್ದೆ ತಡ, ಎಲ್ಲರೂ ಜೋರಾಗಿ ಕೂಗಲಾರಂಭಿಸಿದರು. ಕೊನೆಗೆ ನಾಗೇಗೌಡರಿಗೆ ನನ್ನ ಮೇಲೆ ಸಿಟ್ಟು ಬಂದು, ನೀನೂ ಸಭೆಯಲ್ಲಿ ಕೈ ಆಡಿಸುವುದನ್ನು ಬಿಡು, ನಾನು ಮಂಡ್ಯ ಗೌಡ ಎಂದು ಜೋರು ಧ್ವನಿಯಲ್ಲಿಯೇ ಹೇಳಿದರು. ನಾನು ಅಷ್ಟೇ ಜೋರು ಧ್ವನಿಯಲ್ಲಿ ಬಿಡ ಬೇಕಾದರೇ ನೇತ್ರಾವತಿ ಬಗ್ಗೆಯೂ ಹೇಳಿ ಎಂದೆ.

ಮಲ್ಲಿಕ್ ರವರು ಮತ್ತು ಬಸವರಾಜ್ ರವರು ಸಹ ಧ್ವನಿಗೂಡಿಸಿದರು, ಮತ್ತೆ ಸಭೆ ಕರೆಯುವ ಭರವಸೆ ನೀಡಿದಾಗ, ಎಲ್ಲರೂ ಒಪ್ಪಿಗೆ ನೀಡಿದೆವು. ನಂತರ ಮೂರೇ ದಿವಸದಲ್ಲೇ ನಾಗೇಗೌಡgವರÀ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಜ್ಞರ ಸಮಿತಿ ರಚನೆ ಮಾಡುವುದಾಗಿ ಭರವಸೆ ನೀಡಿದರು.

ಒಂದು ತಿಂಗಳಾದರೂ ಸಮಿತಿ ರಚಿಸಲಿಲ್ಲ.ಮತ್ತೇ ನಾಗೇಗೌಡರ ಬಳಿ ಒಂದು ನಿಯೋಗ ಹೋದೆವು, ಅವರು ಏನೂ ಮಾತನಾಡದೆ ಎದ್ದು ಲಿಪ್ಟ್ ಕಡೆ ಇಳಿÀಯಲು ಹೊರಟಾU,À ನಾನು ಎದ್ದು ಹೋಗಿ ಅಡ್ಡ ನಿಂತೆ. ನೀವೂ ಸಮಿತಿ ರಚಿಸುವುದಾಗಿ ಹೇಳಿದಿರಿ, ಸಮಿತಿ ರಚಿಸಲಿಲ್ಲ ಏಕೆ ಎಂದಾಗ, ಜೋರು ಧ್ವನಿಯಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆಯಿತು. ವಿಧಾನ ಸೌಧದ ಪೋಲೀಸ್ ನನ್ನ ಮುತ್ತುವರೆದರು. ಆಗ ಜೊತೆಯಲ್ಲಿದ್ದ ಇಡಕನಹಳ್ಳಿ ಶ್ರೀ ಸಿದ್ಧರಾಮಣ್ಣವರು ಪಕ್ಕಕ್ಕೆ ಬಂದು ಅರೆಸ್ಟ್ ಮಾಡಲು ಮಾತನಾಡುತ್ತಿದ್ದಾರೆ’ ಎಂದು ಕಿವಿಯಲ್ಲಿ ಹೇಳಿದರು.

ನಾನು ಜೋರಾಗಿ ನಾಗೇಗೌಡರಿಗೆ ಜೈ’ ಎಂದೆ. ನಾಗೇಗೌಡರು ಬಂದು ನನ್ನ ಹೆಗಲ ಮೇಲೆ ಕೈ ಹಾಕಿ, ಬಾ ನಮ್ಮ ಮನೆಗೆ ಹೋಗೋಣ ಎಂದರು. ಸಮಿತಿ ಮಾಡುವವರೆಗೂ ನಾನು ಎಲ್ಲಿಗೂ ಬರುವುದಿಲ್ಲಾ ಎಂದಾಗ, ನಾಗೇಗೌಡರು ಮುಂದಿನ ವಾರ ಸಮಿತಿ ಆದೇಶ ಬರಲಿದೆ, ಎಂಬ ಖಚಿತ ಮಾತು ಹೇಳಿದರು.

ಹಾಗೆಯೇ ಮೈಸೂರಿನ ನಿವೃತ್ತ ಮುಖ್ಯ ಇಂಜಿನಿಯರ್ ಶ್ರೀ ಕೃಷ್ಣರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ, ಜಿ.ಎಸ್.ಪರಮಶಿವಯ್ಯನವರನ್ನು ಸದಸ್ಯರನ್ನಾಗಿ ಮಾಡಿದರು. ಸಮಿತಿ ಒಂದು ಸಭೆಯನ್ನೂ ನಡೆಸಲಿಲ್ಲ.

ನಂತರ ಬೈಎಲೆಕ್ಷನ್‍ನಲ್ಲಿ ಬಸವರಾಜ್‍ರವರು ಗೆದ್ದರು, ಆಗ ನೀರಾವರಿ ಸಚಿವರಾಗಿದ್ದ ಶ್ರೀ ಹೆಚ್.ಕೆ.ಪಾಟೀಲ್ ರವರು ಜಿ.ಎಸ್.ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದರು. ನಂತರದ ಹೋರಾಟದ ಮಾತು ಬೇರೆ.

ನೋಡಿ ಮಲ್ಲಿಕ್ ರವರ ಅಂದಿನ ಅಮgಣಾಂತ ಉಪವಾಸ ಸತ್ಯಾಗ್ರಹ, ಇಂದು ತುಮಕೂರು ಜಿಲ್ಲೆಗೆ ಭಧ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಯ ನೀರು ಬರಲು ಒಂದು ಮೆಟ್ಟಿಲು ಆಯಿತು. ನನ್ನ ಮಾತು ಉಳಿಸಿದ ಅತ್ಯಂತ ಮೇರು ವ್ಯಕ್ತಿತ್ವದವರು ಮಲ್ಲಿಕ್ ರವರು.

 ಗುಬ್ಬಿ ತಾಲ್ಲೋಕು ಬಿದರೆಹಳ್ಳ ಕಾವಲ್‍ನಲ್ಲಿದ್ದ ಸರ್ಕಾರಿ ಭೂಮಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಮಾಡಲು ನಾನು ಹೋರಾಟ ಆರಂಭಿಸಿದಾಗ, ಅವರೂ ಸಹ ಪತ್ರ ನೀಡಿದ್ದರು, ನಿಟ್ಟೂರಿನ ನಮ್ಮ ಬಿಜೆಪಿ ಶ್ರೀ ಶೆಟ್ರು ಪತ್ರದ ಪ್ರತಿಯನ್ನು ನನಗೆ ನಿಡಿದ್ದು ಇನ್ನೂ ನೆನಪಿದೆ. ಈಗ ಆ ಜಮೀನನಲ್ಲಿ ಹೆಚ್.ಎ.ಎಲ್ ಘಟಕ ತಲೆಯೆತ್ತಿದೆ.

 ರೊಟ್ಟಿ ಉಪ್ಪಿನಕಾಯಿ ಎಂದರೆ ಅವರಿಗೆ ಬಹಳ ಪ್ರೀತಿ ಇರಬಹುದು. ನೀರಾವರಿ ಸಭೆಗೆ ಬೆಂಗಳೂರಿಗೆ ಬಂದಾಗ ಅವರ ಜೊತೆಯಲ್ಲಿ ರೊಟ್ಟಿ ಉಪ್ಪಿನಕಾಯಿ ಗ್ಯಾರಂಟಿ ಇರುತ್ತಿತ್ತು.

ಕುಂದರನಹಳ್ಳಿ ರಮೇಶ್.

ಶ್ರೀ ನಿರಂಜನ್ ರವರ ಮನವಿ ಮೇರೆಗೆ, ದಿ.ಎಸ್.ಮಲ್ಲಿಕಾರ್ಜುನಯ್ಯನವರ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನ.