21st January 2025 9:15:15 PM
Share

TUMAKURU:SHAKTHIPEETA FOUNDATION

  ಒಂದು ಕಾಲದಲ್ಲಿ ಉತ್ತರ ಕರ್ನಾಟಕದವರು ಜಲಸಂಪನ್ಮೂಲ ಸಚಿವಾರಾಗುತ್ತಾರೆ, ಹಳೇ ಮೈಸೂರಿಗೆ ನೀರಾವರಿಯಲ್ಲಿ ಅನ್ಯಾಯಮಾಡುತ್ತಾರೆ ಎಂದು ಬೊಬ್ಬೆ ಇಡುತ್ತಿದ್ದರು.

  ಈಗ ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು, ಜಲಸಂಪನ್ಮೂಲ ಸಚಿವರು ಎಲ್ಲರೂ ಹಳೇ ಮೈಸೂರಿನವರಾದರೂ ಕಡೇ ಪಕ್ಷ ಬ್ರ್ಯಾಂಡ್ ಬೆಂಗಳೂರಿಗೂ ನೀರಿನ ಯೋಜನೆ ರೂಪಿಸಲು ಹಿಂದೆ ಬಿದ್ದಿದ್ದಾರೆ ಎಂದರೆ ತಪ್ಪಾಗಲಾರದು.

ಮೋದಿಯವರ ಗ್ಯಾರಂಟಿ, ಸಿದ್ಧರಾಮಯ್ಯನವರ ಗ್ಯಾರಂಟಿ ನೋಡಿ, ಕೇಳಿ ಸಾಕಾಗಿದೆ. ಸಮಾದಾನವೂ ಇದೆ.  ಆದರೇ ನದಿ ಜೋಡಣೆ ಗ್ಯಾರಂಟಿ ಯಾರಿಗೂ ಬೇಡವೇ? ತಾತ್ಕಾಲಿಕ ಗ್ಯಾರಂಟಿಗಳಿಂದಲೇ ಜನರ ಬಾಳು ಹಸನಾಗುತ್ತದಯೇ? ಹೌದು ಅರ್ಹರಿಗಂತೂ ಖಂಡಿತ ಗ್ಯಾರಂಟಿಗಳು ಅಗತ್ಯ,

2047 ರ ವೇಳೆಗೆ, ಪ್ರಧಾನಿಯವರ ‘ವಿಕಸಿತ ಭಾರತ@ 2047’, ಮುಖ್ಯಮಂತ್ರಿಯವರ ‘ಕರ್ನಾಟಕ ಅಭಿವೃದ್ಧಿ ಮಾದರಿ’, ಉಪಮುಖ್ಯಮಂತ್ರಿಯವರ ‘ಬ್ರ್ಯಾಂಡ್ ಬೆಂಗಳೂರು’, ಈ ಘೋಷಣೆಗಳಲ್ಲಿ  ‘ದೇಶದ/ ರಾಜ್ಯದ ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ರೈತನಿಗೆ, ಕನಿಷ್ಠ ಒಂದು ಎಕರೆಗೆ ನದಿ ನೀರಿನ ಗ್ಯಾರಂಟಿ ಕೊಡುವ ಆಲೋಚನೆ ಯಾರಿಗಾದರೂ ಇದೆಯಾ?’ ಎಂಬ ಭ್ರಮೆ ನಮ್ಮದಾಗಿದೆ.

ಹಲೋ ಮೋದಿಯವರೇ? ಹಲೋ ಸಿದ್ದ್ದುರವರೇ? ಹಲೋ ಡಿಕೆಯವರೇ? ಯಾರಾದರೂ ರೈತರಿಗೆ ಗ್ಯಾರಂಟಿ ಕೊಡುವಿರಾ? ಇಲ್ಲ ಜಲನಾಟಕ ಆಡುವಿರಾ?

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್,ಬಸವರಾಜ್ ರವರ ಮನವಿ ಮೇರೆಗೆ, ಆಗಿನ ಮುಖ್ಯಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆ ಜಾರಿಗೊಳಿಸಲು, ರಾಜ್ಯದ ನದಿಜೋಡಣೆ ಸಾಧ್ಯತೆ ಬಗ್ಗೆ ವರದಿ ಸಿದ್ಧಪಡಿಸಲು ಆದೇಶ ನೀಡಿದ್ದರು.

ಕುಂದರನಹಳ್ಳಿ ರಮೇಶ್ ರವರು ರಾಜ್ಯದ ಎಲ್ಲಾ ನೀರಾವರಿ ತಜ್ಞರು, ನೀಡಿರುವ, ಸುಮಾರು 600 ಟಿ.ಎಂ.ಸಿ. ಅಡಿ ನೀರಿನ ಯೋಜನೆಗಳ  ಸಲಹೆಗಳನ್ನು ಒಗ್ಗೂಡಿಸಿ, ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿಯೇ ನಿರ್ಣಯ ಮಾಡಿಸಿ, ನಿಯಮ ಪ್ರಕಾರ ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಯೋಜನಾ ಇಲಾಖೆಯಿಂದ ಕೇಂದ್ರ ಸರ್ಕಾರದ ರಾಷ್ಟ್ರೀಯ ಮೂಲಭೂತ ಸೌಕರ್ಯ ಪೈಪ್ ಲೈನ್ ಯೋಜನೆಯಡಿಯಲ್ಲಿ ಸೇರ್ಪಡೆ ಮಾಡಿಸಿದ್ದು ಇತಿಹಾಸ.

ಈ ವಿಚಾರವಾಗಿ,Áಗಿನ ಮುಖ್ಯಮಂತ್ರಿಯವರು ದೇಶದ ಪ್ರಧಾನ ಮಂತ್ರಿಯವರಿಗೂ ಪತ್ರ ಬರೆದಿದ್ದೂ ಉಂಟು, ಅಲ್ಲದೇ ಅಧ್ಯಯನ ಮಾಡಿ ವರದಿ ನೀಡಲು, ಕಾವೇರಿ ನೀರಾವರಿ ನಿಗಮದ ಎಂಡಿಯವರಿಗೆ ಸೂಚಿಸಿದ್ದರು. ಮೂರು ಜನ ಎಂಡಿಯವರು ಹಳೇ ಮೈಸೂರಿನವರಾದರೂ, ಒಬ್ಬ ಮುಖ್ಯಮಂತ್ರಿಯವರು ಮಾಡಿದ ಆದೇಶವನ್ನೇ ಕಾವೇರಿ ನೀರಾವರಿ ನಿಗಮದ ಎಂಡಿಯವರು ಮರೆತಿದ್ದಾರಾ ಅಥವಾ ಉದಾಸೀನ ಮಾಡಿದ್ದಾರಾ?

ಹೌದು ಈ ಅಧ್ಯಯನ ರಾಜ್ಯದ ಪ್ರತಿಹಳ್ಳಿಗೂ ನದಿ ನೀರಿನ ಅಲೋಕೇಷನ್ ಮಾಡುವ ಜಲಗ್ರಂಥ, ಕಾವೇರಿ ನೀರಾವರಿ ನಿಗಮದ ಎಂ.ಡಿ.ಯವರಿಗೆ ವರದಿ ನೀಡಲು ಸಾಧ್ಯಾವಾಗದಿದ್ದರೆ ಬೇರೆ ನಿಗಮದ ಎಂಡಿ.ಯವರಿಗೆ ವಹಿಸಬಹುದಲ್ಲಾ.

ಇದನ್ನು ಪ್ರಗತಿಪರಿಶೀಲನೆ ಸಭೆಯಲ್ಲಿ ಕೇಳುವ ತಾಕತ್ತು ಯಾರಿಗೂ ಇಲ್ಲವೇ?

ಶ್ರೀ ಜಿ.ಎಸ್.ಬಸವರಾಜ್ ರವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ನೂ ಮುಂದೆ ಈ ಯೋಜನೆಯ ಜಾರಿಗೆ ನಿರಂತರವಾಗಿ ಶ್ರಮಿಸಲು ವೇದಿಕೆ ನಿರ್ಮಾಣ ಮಾಡಲು ಚಿಂತನೆ ಆರಂಭವಾಗಿದೆ.

ಜಲಪೀಠ ದ ಪ್ರಮುಖ ಉದ್ದೇಶವೇ ಇದಾಗಿದೆ. ಜಲಯುದ್ಧ ಘೋಷಣೆಗೆ ಮಹೂರ್ತ ನಿಗದಿಯೊಂದೇ ಬಾಕಿ ಇದೆ.

–      ಆಗೋಚರ ಶಕ್ತಿ