12th September 2024
Share

TUMAKURU:SHAKTHI PEETA FOUNDATION

ಒಂದು ಮನೆಯನ್ನು ಬಿಡದಂತೆ, ಕೇಂದ್ರ ಸರಕಾರ ದೇಶದ ಪ್ರತಿಯೊಂದು ಮನೆಗೂ ನಲ್ಲಿ ನೀರನ್ನು 2024 ರೊಳಗೆ ಸರಬರಾಜು ಮಾಡಲೇ ಬೇಕಂತೆ. ನಮ್ಮ ರಾಜ್ಯದಲ್ಲಿ 2023 ರೊಳಗೆ ಯೋಜನೆ ಮುಕ್ತಾಯ ಗೊಳಿಸಬೇಕಂತೆ. ನಾವು ಶೇ 50 ಹಣ ಕೊಡುತ್ತೇವೆ, ಉಳಿದ ಹಣವನ್ನು ರಾಜ್ಯ ಸರಕಾರಗಳು ಹಾಕಿ ಯೋಜನೆ ಮುಗಿಸಿ ಎಂಬುದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸು. 2019 ಆಗಸ್ಟ್‌ 15 ರಂದು ಕೆಂಪುಕೋಟೆಯಲ್ಲಿ ಪ್ರಧಾನಿಯವರು ಈ ಘೋಷಣೆ ಮಾಡಿದ್ದಾರೆ. ಕೇಂದ್ರದ ಪಾಲಿನ ಹಣವನ್ನು ಮುಡುಪಾಗಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ರಾಜ್ಯ ಸರಕಾರಗಳು ಯಾವ ರೀತಿ ಸ್ಪಂಧಿಸುತ್ತವೆ ಎಂಬುದು ಒಂದು ಯಕ್ಷ ಪ್ರಶ್ನೆಯಾಗಿದೆ. ದೇಶದ ಗೋವಾ ಮತ್ತು ತೆಲಂಗಾಣ ರಾಜ್ಯಗಳು ʼಹರ್‌ ಘರ್‌ ಜಲ್‌ ರಾಜ್ಯʼ ಎಂದು ಘೋಷಣೆ ಮಾಡಿವೆ. ಹಾಗೆಯೇ ದೇಶದ 52 ಜಿಲ್ಲೆಗಳು, ʼಹರ್‌ ಘರ್‌ ಜಲ್‌ ಜಿಲ್ಲೆʼ  663 ಬ್ಲಾಕ್‌ಗಳು ʼಹರ್‌ ಘರ್‌ ಜಲ್‌ ಬ್ಲಾಕ್ʼ , 40030 ಗ್ರಾಮ ಪಂಚಾಯಿತಿಗಳು ʼಹರ್‌ ಘರ್‌ ಜಲ್‌ ಗ್ರಾಮ ಪಂಚಾಯಿತಿʼ ಮತ್ತು 76013 ಗ್ರಾಮಗಳು ʼಹರ್‌ ಘರ್‌ ಜಲ್‌ ಗ್ರಾಮʼ ಗಳಾಗಿ ಘೋಷಣೆ ಮಾಡಿವೆ.

ಗೋವಾದಲ್ಲಿ 2 ಜಿಲ್ಲೆಗಳು, ಗುಜರಾತ್‌ನಲ್ಲಿ 5 ಜಿಲ್ಲೆಗಳು, ಹರಿಯಾಣದಲ್ಲಿ 5 ಜಿಲ್ಲೆಗಳು, ಹೀಮಾಚಲ ಪ್ರದೇಶದಲ್ಲಿ 3 ಜಿಲ್ಲೆಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ 2 ಜಿಲ್ಲೆಗಳು, ಪಂಜಾಬ್‌ ನಲ್ಲಿ 3 ಜಿಲ್ಲೆಗಳು ಮತ್ತು ತೆಲಂಗಾಣದಲ್ಲಿ 32 ಜಿಲ್ಲೆಗಳು ʼಹರ್‌ ಘರ್‌ ಜಲ್‌ ಜಿಲ್ಲೆʼ ಎಂದು ಘೋಷಣೆ ಮಾಡಿದ್ದರೆ ನಮ್ಮ ರಾಜ್ಯದಲ್ಲಿ ಶೂನ್ಯ ? ನಮಗೆ ನಾಚಿಕೆಯಾಗಬೇಕಲ್ಲವೇ? ಕೇಂದ್ರದ ಯೋಜನೆ ಬರೀ ಘೋಷಣೆ ಆಗಿರಬೇಕೆ? ರಾಜ್ಯದಲ್ಲಿ ದುಡ್ಡಿಲ್ಲದೇ ಇದ್ದರೆ ಸಾಲ ಪಡೆದಾದರೂ ಯೋಜನೆ ಮುಗಿಸಿ ಎಂದಿದೆ ಕೇಂದ್ರ..

ಆಯಾ  ಜಿಲ್ಲೆಯ ಪ್ರತಿಯೊಂದು ಗ್ರಾಮದ ವಿಲೇಜ್‌ ಡೆವಲಪ್‌ ಮೆಂಟ್‌ ಪ್ಲಾನ್‌ (ವಿಎಪಿ) ಮಾಡ ಬೇಕಿದೆ. ಲೋಕಸಭಾ ಸದಸ್ಯರುಗಳ ಪಾತ್ರ ಮಹತ್ತರವಾಗಿದೆ. ಒಂದು ವೇಳೆ 15 ದಿವಸದೊಳಗೆ ಸಂಸದರು ಸ್ಪಂಧಿಸದಿದ್ದರೆ ಗೇಟ್‌ ಪಾಸ್‌ ನೀಡಿ, ಅಧಿಕಾರಿಗಳೇ ಫೈನಲ್‌ ಮಾಡಿ  ಎಂದು ಕೇಂದ್ರ ಹೇಳಿದೆ. ದಿಶಾ ಸಮಿತಿಗಳಿಗೆ ಪ್ರಗತಿ ಪರಿಶೀಲನೆ ಮಾಡಲು ಅಧಿಕಾರ ನೀಡಿದೆ.

ತುಮಕೂರು ಜಿಲ್ಲೆಯ ವಿಚಾರಕ್ಕೆ ಬಂದರೆ 2023 ರೊಳಗೆ ಯೋಜನೆ ಮುಗಿಸಲೇ ಬೇಕು ಎಂಬುದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ ಅವರದ್ದು. ತುಮಕೂರಿನಲ್ಲಿ ಅಧಿಕಾರಿಗಳು  ಹರಿಕಥೆ ಮಾಡುತ್ತಿದ್ದಾರೆ. ಇಡೀ ತುಮಕೂರು ಜಿಲ್ಲೆಗೆ ಯೋಜನೆ ಕೈಗೊಳ್ಳಲು ಬಸವರಾಜ್‌ ರವರು ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ಆದೇಶ ನೀಡಿಸಿದ್ದರೂ, ಮೋದಿಯವರ-ಬಸವರಾಜ್‌ ರವರ ಸ್ಪೀಡ್‌ ಗೆ ಕೆಲಸ ಆಗುತ್ತಿಲ್ಲ. ಕೇಂದ್ರ ಸರಕಾರ 15 ದಿವಸದೊಳಗೆ ಸ್ಪಂಧಿಸದಿದ್ದರೆ ಎಂಪಿ ಗಳಿಗೆ ಗೇಟ್‌ ಪಾಸ್‌ ನೀಡಲು ಸೊತ್ತೋಲೆ ಹೊರಡಿಸಿದ್ದರೆ, ತುಮಕೂರು ಜಿಲ್ಲೆಯಲ್ಲಿ ಅಧಿಕಾರಿಗಳು ಕೆಲಸ ಮಾಡಿ ಇಲ್ಲ, ಅಂದರೆ ಇಲ್ಲಿಂದ ಹೊರಡಿ ಎಂಬ ಘೋಷಣೆ ಮಾಡಬೇಕಾಗುವುದು ಎಂಬ ಎಚ್ಚರಿಕೆಯನ್ನು ಈಗಾಗಲೇ ಸಂಸದರು ನೀಡಿಯಾಗಿದೆ.  ಬಹುತೇಕ ಎಲ್ಲಾ ದಿಶಾ ಸಭೆಗಳಲ್ಲಿ ಸಭೆ ನಡವಳಿಕೆಯೂ ಆಗಿದೆ. ಇನ್ನೂ ನಿಯಮ ಪ್ರಕಾರ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುವುದು ಒಂದೇ ಬಾಕಿ?

ತುಮಕೂರು ಜಿಲ್ಲಾ ಪಂಚಾಯತ್‌ ಸಿಇಓ  ಮತ್ತು ಕುಡಿಯುವ ನೀರು ಸರಬರಾಜು ಇಇ ಇಬ್ಬರು  ಹೊಸಬರು ಬಂದಿದ್ದಾರೆ. ಸಿಇಓ ಶ್ರೀ ಗಂಗಾಧರ್‌ ಸ್ವಾಮಿಯವರು ಸಮರೋಪಾದಿಯಲ್ಲಿ ಯೋಜನೆ ಆರಂಭಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಇಇ ಶ್ರೀ ಮುದ್ದಪ್ಪನವರೊಂದಿಗೆ ಶ್ರೀ ಬಸವರಾಜ್‌ ರವರು ಸಭೆ ನಡೆಸಿ, ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಯಾವ ಕೆರೆಯಿಂದ ನೀರು ಪಡೆಯಬಹುದು, ಯಾವ ಕೆರೆಗೆ ಯಾವ ಯೋಜನೆ ನದಿ ನೀರು ಬರಲಿದೆ ಎಂಬ ಬಗ್ಗೆ ಕರಡು ನಕ್ಷೆಯನ್ನು ಗ್ರಾಮ ಪಂಚಾಯಿತಿ ಪಿಡಿಓ ರವರೊಂದಿಗೆ ಸಭೆ ನಡೆಸಿ ಅಂತಿಮಗೊಳಿಸಲು ಸೂಚಿಸಿದ್ದಾರೆ. ಈಗಾಗಲೇ ಜಿಲ್ಲೆಯ ಕೆರೆಗಳು ಮತ್ತು ನದಿ ನೀರಿನ ಮಾಹಿತಿಯನ್ನು ಸಣ್ಣ ನೀರಾವರಿ ಇಲಾಖೆ ಸಿದ್ಧಪಡಿಸಿದೆ. ಕಾದು ನೋಡೋಣ.

ಜಿಲ್ಲೆಯ ಹೆಣ್ಣು ಮಕ್ಕಳು   ಪೊರಕೆ ಹಿಡಿದು ಬೀದಿಗೆ ಬರುವ ಮುನ್ನ ʼಜಲಜೀವನ್‌ ಜನಾಂದೋಲನʼ  ಅರಂಭಿಸಿ, ನಮ್ಮ ಮಹಿಳೆಯರ ಕಷ್ಟಕ್ಕೆ ಶಾಶ್ವತ ಪರಿಹಾರ ನೀಡಿ ಎಂಬುದು ಶಕ್ತಿಪೀಠ ಫೌಂಡೇಷನ್‌ ಕಳಕಳಿಯ ಮನವಿ.