30th April 2024
Share
ಈ ಕಾರಿಡಾರ್ ಅಫೌಷ್ಠಿಕ ಮಕ್ಕಳ ವಾರ್ಡ್?

TUMAKURU:SHAKTHIPEETA FOUNDATION

 ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಮತ್ತು ಜಿಲ್ಲಾ ಪಂಚಾಯತ್ ಸಿಇಓ ಶ್ರೀ ಗಂಗಾಧರ್‌ಸ್ವಾಮಿರವರು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ತುಮಕೂರು ಜಿಲ್ಲೆಯ ಅಪೌಷ್ಠಿಕ ಮಕ್ಕಳ ಬಗ್ಗೆ ವಿಶೇಷ ಗಮನವನ್ನು ಸೆಳೆದರು.

ಸುಮಾರು 7 ದಿಶಾ ಸಮಿತಿ ನಡೆದರೂ ಈ ಬಗ್ಗೆ ಗಮನ ಹರಿಸದೇ ಇರುವ ನನಗೂ ನಾಚಿಕೆ ಆಯಿತು. ಚರ್ಚೆ ಬಹಳ ಸೌಹಾರ್ಧಯುತವಾಗಿ ನಡೆದಾಗ ನಾನು ಇಂದು (05.04.2021)  ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿರುವ ಅಪೌಷ್ಠಿಕ ಮಕ್ಕಳ ಘಟಕಕ್ಕೆ ಭೇಟಿ ನೀಡಿದೆ.

  ತುಮಕೂರು ಜಿಲ್ಲೆಯಲ್ಲಿ 730 MAM ಮಕ್ಕಳು ಮತ್ತು 170 SAM  ಮಕ್ಕಳು ಇದ್ದಾರೆ ಎಂಬ ಮಾಹಿತಿ ಇದ್ದ ನನಗೆ, ವಾರ್ಡ್‌ನಲ್ಲಿ ಕೇವಲ ಒಂದು ಮಗು ಮಾತ್ರ ದಾಖಾಲಾಗಿರುವುದು ಆಶ್ಚರ್ಯವಾಯಿತು. ಇಲ್ಲಿನ ವ್ಯವಸ್ಥೆ ಬಗ್ಗೆ ಬೇಸರವೂ ಆಯಿತು.

ಮಕ್ಕಳಿಗೆ ಕೊಡುವ ಆಹಾರದ ಚಾರ್ಟ್ ಕೇಳಿದೆ, ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸ ಬೇಕಿದೆ. ಒಬ್ಬರ ಮುಖವನ್ನು ಇನ್ನೊಬ್ಬರೂ ನೋಡಿ ಸಾರ್ ಚಾರ್ಟ್ ಹಾಕುತ್ತೇವೆ ಎಂಬ ಸಣ್ಣ ಉತ್ತರ ಬಂತು. ಅಡುಗೆ ಕೋಣೆಗೆ ಹೋಗಿ ನೋಡಿದರೆ ನನಗೆ ಆಶ್ಚರ್ಯ ಕಾದಿತ್ತು. ಎಷ್ಟು ಜನ ಮಕ್ಕಳಿಗೆ ಆಹಾರ ಮಾಡಿದ್ದೀರಿ, ತಿಂಗಳಿಗೆ ಎಷ್ಟು ಜನ ಮಕ್ಕಳು ಬರುತ್ತಾರೆ ಎಂಬ ಪ್ರಶ್ನೆಗೂ ಅವರ ಬಳಿ ಉತ್ತರವಿರಲಿಲ್ಲ.

 ಮಕ್ಕಳ ಹಾಜರಾತಿ ಬಗ್ಗೆ ಕೇಳಿದಾಗ ಅಲ್ಲೊಬ್ಬ ಮಹಾನ್ ವೈದ್ಯರ ಪ್ರಕಾರ ಎಷ್ಟು ಮಕ್ಕಳನ್ನು ಸೇರಿಸಿ ಕೊಳ್ಳಬೇಕು ಎಂಬುದು ನಮಗೆ ಸೇರಿದ್ದು ಎಂಬ ಉದ್ಧಟತನದ ಉತ್ತರ ಬಂತು. ನಿಜಕ್ಕೂ ಸರ್ಕಾರಿ ಆಸ್ಪತ್ರೆಗೆ ಹೋದ ಜನರು ಹೇಳುತ್ತಿದ್ದ ನೆನಪು ನನಗೆ ಬಂತು. ತಕ್ಷಣ ನಾನು ಜಿಲ್ಲಾ ಸರ್ಜನ್ ಶ್ರೀ ಡಾ.ರಮೇಶ್ ಬಾಬುರವರು ಮತ್ತು ಮಹಿಳಾ ಮತ್ತು ಮಕ್ಕಳ ಡಿಡಿಯವರಾದ ಶ್ರೀ ನಟರಾಜ್‌ರವರಿಗೆ  ಪೋನ್ ಮಾಡಿ ವಿಷಯ ತಿಳಿಸಿದಾಗ ಅವರೆಲ್ಲರೂ ಬಂದಾಗ ವಿವರವಾಗಿ ಸಮಾಲೋಚನೆ ನಡೆಸಿದೆವು.

ಈ ಯೋಜನೆ ಆರಂಭವಾದಗಿನಿಂದ ತುಮಕೂರು ಘಟಕದಲ್ಲಿ  ಎಷ್ಟು ಮಕ್ಕಳು ಹಾಜಾರಾಗಿದ್ದಾರೆ, ಎಷ್ಟೆಷ್ಟು ದಿವಸ ಇಲ್ಲಿ ತಂಗಿದ್ದಾರೆ, ನಿಯಮ ಏನು ಹೇಳುತ್ತದೆ, ಹೀಗೆ ಇತರೆ ಹಲವಾರು ವಿಷಯಗಳ  ಮಾಹಿತಿ ನೀಡಿ ಎಂದು ಕೇಳಿದಾಗ ಇನ್ನೂ ಮೂರು ದಿವಸದಲ್ಲಿ ಮಾಹಿತಿ ನೀಡುವುದಾಗಿ ಡಾ.ಸುರೇಶ್ ಬಾಬು, ಶ್ರೀಮತಿ ವೀಣಾ, ಶ್ರೀಮತಿ ಮುಕ್ತಾಂಭ ಮತ್ತು ಶ್ರೀ ನಟರಾಜು ತಿಳಿಸಿದರು.

 ನಾನು ಯೋಜನೆಯ ಗೈಡ್‌ಲೈನ್ಸ್ ಕೊಡಿ ಎಂದು ಕೇಳಿದಾಗ ಸಿಬ್ಬಂಧಿ ತೆಗೆದು ಕೊಟ್ಟರೂ, ನಾನು ಈ ಗೈಡ್‌ಲೈನ್ಸ್ ತೆಗೆದು ಕೊಂಡು ಹೋಗಲಾ ಎಂಬ ಪ್ರಶ್ನೆಗೆ, ಅದೇ ಡಾಕ್ಟರ್ ಮತ್ತೆ ಗೈಡ್‌ಲೈನ್ಸ್ ತೆಗೆದುಕೊಂಡು ನೀವೇನು ಮಾಡುತ್ತಿರಾ? ನಿಮಗೆ ಏನು ತಿಳಿಯುತ್ತದೆ ಎಂಬ ಉಢಾಫೆ ಮಾತನಾಡಿದಾಗ ಶ್ರೀಮತಿ ವೀಣಾರವರು ಅವರ ಬಗ್ಗೆ ನಿಮಗೆ ಗೊತ್ತಿಲ್ಲ ಸುಮ್ಮನಿರಿ. ನಿಮ್ಮ ತಂದೆಯವರನ್ನು ಕೇಳಿ ತಿಳಿದುಕೊಳ್ಳಿ, ಈ ರೀತಿ ಮಾತನಾಡಬಾರದು. ಇಂತಹ ನೂರಾರು ಗೈಡ್‌ಲೈನ್ಸ್ ಅಧ್ಯಯನ ಮಾಡಿದ್ದಾರೆ ಎಂದಾಗ ನನಗೂ ಆ ಡಾಕ್ಟರ್ ಮಾತು ಕೇಳಿ ನಗು ಬಂತು.

ಒಟ್ಟಾರೆ ನನ್ನ ಗಮನಕ್ಕೆ ಬಂದಿದ್ದೂ ಇಲ್ಲಿ ಮಕ್ಕಳ ಹಾಜಾರಾತಿ  ಬಗ್ಗೆ ಏನೋ ಒಂದು ಮಸಲತ್ತು ನಡೆಯುತ್ತಿದೆ. ಇದರ ಬಗ್ಗೆ ಬೆಳಕು ಚೆಲ್ಲಲೇ ಬೇಕು? ಇದರ ಹಿಂದೆ ಯಾರು ಇದ್ದಾರೆ ಎಂಬ ಮಾಹಿತಿ ತಿಳಿಯುವವರೆಗೂ ನೆಮ್ಮದಿಯಿಲ್ಲ ! ಮಕ್ಕಳ ಡಾಕ್ಟರ್ ಅಪೌಷ್ಠಿಕ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡುತ್ತಿಲ್ಲವೇನೋ? ಅಥವಾ ಅಂಗವಾಡಿಯವರು ಅಪೌಷ್ಠಿಕ ಮಕ್ಕಳ ಯೋಜನೆ ಬಗ್ಗೆ  ಮಾಹಿತಿ ನೀಡುತ್ತಿಲ್ಲವೇನೋ? ಎಂಬ ಅನುಮಾನ ನನಗೆ ಶುರುವಾಗಿದೆ. ಕಾದು ನೋಡೋಣ?