21st November 2024
Share

TUMAKURU:SHAKTHI PEETA FOUNDATION

ಕೇಂದ್ರ ಜಲಶಕ್ತಿ ಸಚಿವಾಲಯ ದೇಶಾಧ್ಯಂತ ಜಲಶಕ್ತಿ ಅಭಿಯಾನ ಕೈಗೊಂಡಿದೆ. ಜಲಶಕ್ತಿ ಅಭಿಯಾನ ಅಂದರೆ ಸಭೆ ಮಾಡಿ, ಅಬ್ಬರದ ಭಾಷಣ ಮಾಡಿ, ತಿಂದುಂಡು ಬಿಲ್, ಪೋಟೋ, ಪತ್ರಿಕಾ ಹೇಳಿಕೆ ನೀಡುವ ಚಟವಾಗಬಾರದು.

ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ಸಹ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಕರಾಬುಹಳ್ಳುಗಳು ಇವೆ, ಇವುಗಳ ಉದ್ದ ಎಷ್ಟು, ಎಷ್ಟು ಎಕರೆ ಒತ್ತುವರಿ ಆಗಿದೆ, ಇವುಗಳಲ್ಲಿ  ಮಾಸಿಕ ಎಷ್ಟು ಕೀಮೀ ಉದ್ದದ ಹಳ್ಳವನ್ನು ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿ ಪಡಿಸಲಾಗಿದೆ ಎಂಬ ನಿಖರವಾದ ಮಾಹಿತಿಯನ್ನು ದಿಶಾ ಮಾನಿಟರಿಂಗ್ ಸೆಲ್ ನಲ್ಲಿ ಅಫ್ ಲೋಡ್ ಮಾಡಲು ಅಗತ್ಯ ಕ್ರಮಕೈಗೊಳ್ಳಲು ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದ್ದಾರೆ.

ದಿಶಾ ಸಮಿತಿಯಲ್ಲಿ ಈಗಾಗಲೇ ನಿರ್ಣಯ ಮಾಡಲಾಗಿದೆ. ನರೇಗಾ ಹಣವನ್ನು ಉಪಯೋಗಿಸಿಕೊಂಡು ಕರಾಬು ಹಳ್ಳ ಅಭಿವೃದ್ಧಿ ಆಂದೋಲನವನ್ನು ಹಮ್ಮಿಕೊಳ್ಳಲು ಸೂಚಿಸಿದ್ದಾರೆ. ಮುಂದಿನ ದಿಶಾ ಸಭೆಯಲ್ಲಿ 341 ಸ್ಥಳೀಯ ಸಂಸ್ಥೆಗಳ ಮಾಹಿತಿಯೊಂದಿಗೆ ಸಂಭಂಧಿಸಿದ ಅಧಿಕಾರಿಗಳು ಸಭೆಗೆ ಬರಬೇಕು.

ಅಟಲ್ ಭೂಜಲ್ ಮತ್ತು ಜಲಾಮೃತ ಯೋಜನೆಯ ಕೆಲಸ ಇದು. ಜೀವ ವೈವಿದ್ಯ ದಾಖಲಾತಿ ಸಮಿತಿ ಕರ್ತವ್ಯವೂ ಇದು. ತಿಳಿದಿರಲಿ. ಜೀವ ವೈವಿದ್ಯ ದಾಖಲಾತಿ ವರದಿ ಸಿದ್ಧಪಡಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ರೂ 25000 ಹಣವನ್ನು ಕೇಂದ್ರ ಸರ್ಕಾರ ನೀಡಿದೆ.ಇದರಲ್ಲಿ ಜಲಸಂಗ್ರಹಾಗಾರಗಳ ವರದಿ ದಾಖಲಿಸುವುದು ಇದೆ.ಇದನ್ನು ಕೇಳುವವರು ಯಾರು?

ಇಲ್ಲವಾದರೆ ನಾವು ಒತ್ತುವರಿ ತೆರವುಗೊಳಿಸಲ್ಲ, ನಿಮ್ಮ ದಿಶಾ ಸಮಿತಿ ನಿರ್ಣಯ, ನ್ಯಾಯಾಲಯದ ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ ಎಂದು ಲಿಖಿತ ಹೇಳಿಕೆಯನ್ನಾದರೂ ಅಧಿಕಾರಿಗಳು ನೀಡಬಹುದಾಗಿದೆ ಎಂದು ನಾಗರೀಕರು ವ್ಯಂಗ್ಯವಾಡುತ್ತಿದ್ದಾರೆ.

ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿದೆ. ಈಗಾಗಲೇ ಪಂಚಾಯಿತಿಯ ಒಂದು ನಕ್ಷೆ ಗುರುತಿಸಿ ಪಿಡಿಓ ರವರಿಗೆ ನೀಡಲಾಗಿದೆ.ಪಿಡಿಓ ರವರು ಸಭೆಯಲ್ಲಿ ನಿರ್ಣಯ ಮಾಡಿ, ಯಾವ ಗ್ರಾಮದಲ್ಲಿ ಯಾವ ಹೆಸರಿನ ಕರಾಬುಹಳ್ಳ ಎಷ್ಟಿದೆ ಎಂಬ ಮಾಹಿತಿಯನ್ನು ಪ್ರಕಟಿಸಲು ಸಂಸದರು ಸೂಚಿಸಿದ್ದಾರೆ.

ಇದೇ ಮಾದರಿಯನ್ನು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಆರಂಭಿಸಲಿ, ಅಧಿಕಾರಿಗಳಿಗೆ ದೇವರು ಒಳ್ಳೆಯ ಬುದ್ದಿಕೊಡಲಿ.

ಪಾಲಿಕೆ ಆಯುಕ್ತರು, ನಗರಸಭೆ ಆಯುಕ್ತರು, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಚೀಪ್ ಆಫೀಸರ್ ಮತ್ತು ಗ್ರಾಮಪಂಚಾಯಿತಿಗಳ ಪಿಡಿಓರವರ ಪಾತ್ರ ಬಹಳ ಮಹತ್ತರವಾಗಿದೆ.

ಜಿಲ್ಲಾ ಪಂಚಾಯತ್ ಪಿಡಿ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಪಿಡಿ ರವರು ದಿಶಾ ನಿರ್ಣಯದ ಮೇರೆಗೆ ಏನು ಕ್ರಮಕೈಗೊಂಡಿದ್ದಾರೆ ಎಂಬ ಬಗ್ಗೆ ಅವರೊಂದಿಗೆ ಚರ್ಚಿಸಿ ವರದಿ ಮಾಡಲಿದ್ದೇನೆ.

ತುಮಕೂರು ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಊರಿಗೊಬ್ಬ ಕೆರೆ-ಕಟ್ಟೆ ಸೈನಿಕ ಸೃಷ್ಠಿಯಾದರೇ ಮಾತ್ರ ಈ ಅಭಿಯಾನ ಫಲನೀಡಲಿದೆ.

ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ನರಸಿಂಹರಾಜುರವರು ನಮ್ಮ ಜಿಲ್ಲೆಯಲ್ಲಿ ಸುಮಾರು 42000 ಜನ ಸರ್ಕಾರಿ ನೌಕರರು ಇದ್ದಾರೆ ಎಂದು ಹೇಳುತ್ತಿದ್ದರು. ಸ್ವಾಮಿ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮಗಳ ಜಲಶಕ್ತಿ ಅಭಿಯಾನಕ್ಕೆ ಒಂದೊಂದು ಗ್ರಾಮಕ್ಕೂ ಒಬ್ಬೊಬ್ಬ ನೌಕರರನ್ನು ಜಲಶಕ್ತಿ ಅಭಿಯಾನದ ಸಂಚಾಲಕರನ್ನಾಗಿ ಮಾಡಿ ಈ ಆಂದೋಲನಕ್ಕೆ ಸಹಕರಿಸುವಿರಾ?

ಆಗ ಮಾತ್ರ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಗೆ ಒಂದು ತಿರುವು ಬರಲಿದೆ.