22nd December 2024
Share

TUMAKURU:SHAKTHI PEETA FOUNDATION

ನಾನು ಗಮನಿಸಿದ ಹಾಗೆ ನಮ್ಮ ರಾಜ್ಯದ ಸಣ್ಣ ನೀರಾವರಿ ಇಲಾಖೆ  ಇಷ್ಟು ಬಹುದೊಡ್ಡ ಪ್ರಮಾಣದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಉದಾಹರಣೆ ಇಲ್ಲ. ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಮತ್ತು ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯಸ್ವಾಮಿರವರು ಒಳ್ಳೆಯ ಸರ್ಕಸ್ ಮಾಡಿದ್ದಾರೆ.

ಸುಮಾರು ರೂ 11851.74 ಕೋಟಿ ವೆಚ್ಚದ ಯೋಜನೆ ಅನುಷ್ಠಾನಕ್ಕೆ ಭಧ್ರಾ ಬುನಾಧಿ ಹಾಕಿದ್ದಾರೆ. ಇದು ಹೆಚ್ಚು ಕಡಿಮೆ ಆಗಬಹುದು. ಪ್ರಸ್ತಾವನೆ ಸಲ್ಲಿಸಿದ ನಂತರ ಕಡತದ ಅನುಸರಣೆ ಮಾಡುತ್ತಿರುವ ವಿಧಾನ ನಿಜಕ್ಕೂ ಮೆಚ್ಚವಂತದ್ದು. ಒಂದು ಯುವ ತಂಡ ಪ್ರತಿನಿತ್ಯ ಕಡತದ ಅನುಸರಣೆ ಮಾಡುತ್ತಿದೆ.

ನಮ್ಮ ಹಳ್ಳಿಯ ಗಾದೆಯಂತೆ ಕೇಂದ್ರ ಸರ್ಕಾರದಲ್ಲಿ ‘ಹುಚ್ಚು ಮುಂಡೆ ಮದವೆಯಲ್ಲಿ ಉಂಡವನೇ ಜಾಣ’ ಎಂಬ ಹಾಗೆ ಇರುತ್ತದೆ. ಯಾವ ರಾಜ್ಯ ಸರ್ಕಾರ ಸೂಕ್ತ ಪ್ರಸ್ತಾವನೆ ಸಲ್ಲಿಸಿ, ಅವರ ಮಾನದಂಡಂತೆ ದಾಖಲೆ ಸಲ್ಲಿಸಿದರೇ ಖಂಡಿತಾ ಯೋಜನೆ ಮಂಜೂರು ಮಾಡುತ್ತಾರೆ.

ಇಲ್ಲಿ ಮಲತಾಯಿ ದೋರಣೆ ಬರುವುದೇ ಇಲ್ಲಾ. ರಾಜಕಾರಣಿಗಳು ರಾಜಕೀಯ ಮಾಡಲು ಮಲತಾಯಿ ಧೋರಣೆ ಎನ್ನುತ್ತಾರೆ. ಕಡತದ ಅನುಸರಣೆ ಮಾತ್ರ ವಿಶಿಷ್ಠವಾಗಿರಲಿದೆ. ಪ್ರಸ್ತಾವನೆ ಸಲ್ಲಿಸುವುದೇ ಒಂದು ದೊಡ್ಡ ಸಾಧನೆ. ಏಕೆಂದರೆ ನಮ್ಮ ಹಲವಾರು ಇಲಾಖೆಯ ಅಧಿಕಾರಿಗಳು ಮೈಗಳ್ಳರು. ಪ್ರಸ್ತಾವನೆ ಸಲ್ಲಿಸುವ ಗೋಜಿಗೂ ಹೋಗುವುದಿಲ್ಲ.

ಅಟಲ್ ಭೂಜಲ್ ಯೋಜನೆಗೆ ಈ ಹಿಂದೆ ಕೇಂದ್ರ ಸರ್ಕಾರವೇ ಕೇಳಿದ್ದರೂ, ಇದೇ ಸಣ್ಣ ನೀರಾವರಿ ಇಲಾಖೆ ಪ್ರಸ್ತಾವನೆಯನ್ನೆ ಕಳುಹಿಸದೆ ದೊಡ್ಡ ದ್ರೋಹ ಮಾಡಿತ್ತು. ಆದರೂ ಜಲಸಂಪನ್ಮೂಲ ಇಲಾಖೆ ಪ್ರಸ್ತಾವನೆ ಕಳುಹಿಸುವ ಮೂಲಕ ರಾಜ್ಯಕ್ಕೆ ಯೋಜನೆ ಮಂಜೂರಾಗುವಂತೆ ಮಾಡಿದ್ದು ಇತಿಹಾಸ. ಈ ಶ್ರಮ ನಿಜಕ್ಕೂ ಐಎಎಸ್ ಅಧಿಕಾರಿಗಳಾದ ಶ್ರೀ ರಾಕೇಶ್ ಸಿಂಗ್ ಮತ್ತು ಶ್ರೀಮತಿ ಅಮಿತಾ ಪ್ರಸಾದ್ ರವರಿಗೆ ಮತ್ತು IWARM ಅಧಿಕಾರಿಗಳಿಗೆ ಸಲ್ಲಬೇಕು. ಈಗ ಎತ್ತಿನಹೊಳೆ ಚೀಫ್ ಇಂಜಿನಿಯರ್ ಆಗಿರುವ ಶ್ರೀ ಮಾಧವರವರು ಸಹ ಈ ತಂಡದ ಜೊತೆ ಕಾರ್ಯನಿರ್ವಹಿಸಿದ್ದಾರೆ.

ಈಗ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಇಡೀ ರಾಜ್ಯದ್ಯಾಂತ ಯೋಜನೆಗಳು ಇವೆ. ತುಮಕೂರು ಜಿಲ್ಲೆಗೂ ಯೋಜನೆಗಳು ಇವೆ. ತುಮಕೂರು ಜಿಲ್ಲೆಯ ಎ;ಲ್ಲಾ ಭಾಗಕ್ಕೂ ಪರಿಷ್ಕøತ ಯೋಜನೆ ಸಲ್ಲಿಸುವಂತೆ ಕಾರ್ಯದರ್ಶಿಯವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದರು.

ದಿನಾಂಕ:17.09.2021 ರೊಳಗೆ ಸಲ್ಲಿಸುವ ಭರವಸೆಯನ್ನು ನೀಡಿದ್ದರೂ, ಅಧಿಕಾರಿಗಳು ಇನ್ನೂ ಮೂರು ನಾಲ್ಕು ದಿವಸ ವಿಳಂಭವಾಗಲಿದೆ ಎನ್ನುತ್ತಿದ್ದಾರೆ. ಇದು ಸಹಜ ಆದರೂ ಪರವಾಗಿಲ್ಲ ಎಂದು ದಿನಾಂಕ:19.09.2021 ರ ಸಂಸದರ ದೆಹಲಿ ಪ್ರವಾಸವನ್ನೂ ದಿನಾಂಕ:25.09.2021 ಕ್ಕೆ ಮುಂದೂಡಿದ್ದಾರೆ. ಈಗಾಗಲೇ ಈ ಯೋಜನೆಯ ಬಗ್ಗೆ ದೆಹಲಿಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.

 ಈ ಯೋಜನೆ ಮಂಜೂರಾದರೆ ಒಂದು ದಾಖಲೆಯನ್ನೆ ನಿರ್ಮಿಸಲಿದೆ ರಾಜ್ಯದ ಸಣ್ಣ ನೀರಾವರಿ ಇಲಾಖೆ. ಕೇಂದ್ರ ಜಲಶಕ್ತಿ ಸದಸ್ಯರಾದ ತುಮಕೂರು ಲೋಕಸಭಾ ಸದಸ್ಯರಾದ  ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಹಾವೇರಿ ಲೋಕಸಭಾ ಸದಸ್ಯರಾದ ಶ್ರೀ ಶಿವಕುಮಾರ್ ಉದಾಸಿರವರು ಒಂದು ಸರ್ಕಸ್ ಮಾಡಲೇ ಬೇಕು.

ಜೊತೆಗೆ ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯ ಸಚಿವರುಗಳಾದ ಶ್ರೀ ನಿರ್ಮಲಾ ಸೀತಾರಾಂ ರವರು, ಶ್ರೀ ಪ್ರಹ್ಲಾದ್ ಜೋಷಿರವರು, ಶ್ರೀ ನಾರಾಯಣ ಸ್ವಾಮಿರವರು, ಶ್ರೀಮತಿ ಶೋಭಾ ಕರಂದ್ಲಾಜೆ ರವರು, ಶ್ರೀ ರಾಜೀವ್ ಚಂದ್ರಶೇಖರ್ ವರು, ಶ್ರೀ ಭಗವಂತ ಖೂಬರವರು ಸಹ ಕೈಜೋಡಿಸಬೇಕಿದೆ.

 ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯವುದು ಸೂಕ್ತವಾಗಿದೆ. ನೀರಾವರಿ ತಜ್ಞರಾದ ಮಾನ್ಯ ಮುಖ್ಯ ಮಂತ್ರಿಯವರಿಗೂ ಇದೊಂದು ಖುಷಿಯಾಗುವ ಯೋಜನೆ ಆಗಲಿದೆ.