22nd December 2024
Share

TUMAKURU:SHAKTHIPEETA FOUNDATION

ಹೇಮಾವತಿ ಡ್ಯಾಂ ನಿರ್ಮಾಣ ಮಾಡಿದ್ದು ಮೊದಲು ಹಾಸನ ಜಿಲ್ಲೆಗಂತೆ. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಹಠದಿಂದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ರವರು ತುಮಕೂರು ಜಿಲ್ಲೆಗೂ ಹೇಮಾವತಿ ಯೋಜನೆ ಮಂಜೂರು ಮಾಡಿದ್ದು ಇತಿಹಾಸ.

ನಂತರ ತುಮಕೂರು ಜಿಲ್ಲೆಗೆ ನಿಗದಿಯಾಗಿದ್ದ ಹೇಮಾವತಿ ನದಿ ನೀರನ್ನು ಕುಡಿಯುವ ನೀರಿಗಾಗಿ ಶಿರಾ, ರಾಮನಗರ ಮತ್ತು ಚಿಕ್ಕನಾಯಕನಹಳ್ಳಿ  ತಾಲ್ಲೂಕುಗಳಿಗೆ ಹಂಚಲು ಕಿತ್ತಾಡಿದರೆ ಹೊರತು ಮೂಲ ನದಿ ನೀರನ್ನು ಜಾಸ್ತಿ ಮಾಡಿಕೊಳ್ಳಲು ಯಾವೊಬ್ಬ ರಾಜಕಾರಣಿಯು ಶ್ರಮಿಸಲಿಲ್ಲ.

ಕಾವೇರಿ ನದಿ ಕೊಳ್ಳದಲ್ಲಿ ನ್ಯಾಯಾಧಿಕರಣ ಹೆಚ್ಚಿಗೆ ನೀಡಿದ್ದ ಸುಮಾರು 13 ಟಿ.ಎಂ.ಸಿ ಅಡಿ ನೀರನ್ನು ಎಲ್ಲಿ ಬಳಸಿಕೊಳ್ಳಲಾಗಿದೆ ಎಂಬುದೇ ರಹಸ್ಯ.

ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಕೆರೆಗಳಿಗೆ ನದೀ ನೀರು ಅಲೋಕೇಷನ್ ಮಾಡದೇ ಇರುವುದು ನಾಚಿಕೆ ಗೇಡಿನ ಸಂಗತಿ. ಕಾವೇರಿ ಆಥಾರಿಟಿ ಕೈಗೆ ಹೇಮಾವತಿ ಜುಟ್ಟು ಸಿಕ್ಕಿದೆ.

ಜಲಜೀವನ್ ಮಿಷನ್ ಯೋಜನೆಯಡಿ ಹೇಮಾವತಿ ನದಿ ಅಚ್ಚುಕಟ್ಟು ವ್ಯಾಪ್ತಿಯ ಮನೆ ಮನೆಗೆ ನಲ್ಲಿ ನೀರು ನೀಡಬೇಕಾದಲ್ಲಿ ಕೆರೆಗಳಿಗೆ ನೀರಿನ ಅಲೋಕೇಷನ್ ಬೇಕೆ ಬೇಕು. ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮೈಕ್ರೋ ಇರ್ರಿಗೇಷನ್ ಮಾಡಿದರೆ ಉಳಿಯುವ ನೀರನ್ನು ಕೆರೆಗಳಿಗೆ ಅಲೋಕೇಷನ್ ಮಾಡಬೇಕು.

ಇದಕ್ಕೆ ಕೇಂದ್ರ ಸರ್ಕಾರ ಹಣ ನೀಡಿದರೆ ಮಾತ್ರ ಸಾದ್ಯಾ.ಇಂಥದೊಂದು ಸರ್ಕಸ್ ಆರಂಭವಾಗಿದೆ. ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯ ಕೆರೆಗಳಿಗೆ ಬೇರೆ ಯಾವುದಾದರೂ ನದಿ ಮೂಲದ ನೀರನ್ನು ತರುವ ಚಿಂತನೆಯೂ ನಡೆಯಬೇಕಾಗಿದೆ.

ತುಮಕೂರು ಜಿಲ್ಲೆಯ ಹಾಲಿ ಇರುವ ಕೆರೆಗಳನ್ನು ಶೇ 100 ರಷ್ಟು ತುಂಬಲು ಸುಮಾರು 27 ಟಿ.ಎಂ.ಸಿ ಅಡಿ ನೀರು ಬೇಕಂತೆ. ಕೆರೆ-ಕಟ್ಟೆಗಳಿಲ್ಲದ ಗ್ರಾಮಗಳಲ್ಲಿ ಹೊಸ ಜಲಸಂಗ್ರಹಾಗಾರ ನಿರ್ಮಾಣ ಮಾಡಿದರೆ ಇನ್ನೂ ಹೆಚ್ಚಿಗೆ 5 ಟಿ.ಎಂ.ಸಿ ಅಡಿ ನೀರು ಬೇಕಾಗಲಿದೆಯಂತೆ.ನಿಖರವಾದ ಅಧ್ಯಯನ ನಡೆಯುತ್ತಿದೆ.

ಹಾಲಿ ಅಲೋಕೇಷನ್ ಇರುವ ಹೇಮಾವತಿ, ಎತ್ತಿನಹೊಳೆ, ಭಧ್ರಾಮೇಲ್ದಂಡೆ ಮತ್ತು ತುಂಗಾಭಧ್ರಾ ನೀರು ಸೇರಿದಂತೆ ಇನ್ನೂ ಎಷ್ಟು ನೀರು ಕಡಿಮೆಯಾಗಲಿದೆ. ಆ ನೀರನ್ನು ಯಾವ ಯೋಜನೆಯಿಂದ ಭರಿಸಿಕೊಳ್ಳಬೇಕು ಎಂಬ ಪ್ರಸ್ತಾವನೆಯನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಚಿಂತನೆ ಆರಂಭಿಸಿದ್ದಾರೆ.

ಆರಂಭದಲ್ಲಿ ಶೇ 40 ರಷ್ಟು ಕೆರೆಗಳಿಗೆ ನದಿ ನೀರು ಅಲೋಕೇಷನ್ ಮಾಡಿ, ಶೇ 100 ರಷ್ಟು ತುಂಬಲು ಅಗತ್ಯವಿರುವ ಪೈಪ್ ಸಿಸ್ಟಂ ಹಾಕಿ ನಂತರ ಹೆಚ್ಚಿನ ನದಿ ನೀರು ಪಡೆದರೆ ಮಾತ್ರ ಯೋಜನೆ ಯಶಸ್ವಿಯಾಗಲಿದೆ.

ಮೇಕೆದಾಟು ಯೋಜನೆಯಂತೆ, ತುಮಕೂರು ಜಿಲ್ಲೆಯಲ್ಲೂ ಒಂದು ವಾಟರ್ ಬ್ಯಾಂಕ್ ನಿರ್ಮಾಣ ಮಾಡುವುದು ಒಳ್ಳೆಯದು. ಒಂದೇ ಕಡೆ 57 ಟಿ.ಎಂ.ಸಿ ಅಡಿ ನೀರು ನಿಲ್ಲಿಸುವ ಬದಲು ಎರಡು ಕಡೆ ಏಕೆ ಡ್ಯಾಂ ನಿರ್ಮಾಣ ಮಾಡಬಾರದು ಎಂಬ ಚಿಂತನೆಯೂ ಇದೆಯಂತೆ.

ಹೇಮಾವತಿಯಲ್ಲಿ ವಾರ್ಷಿಕ ಕನಿಷ್ಠ 15 ಟಿ.ಎಂ.ಸಿ.ಅಡಿ ನೀರು ನಿಂದ 80  ಟಿ.ಎಂ.ಸಿ.ಅಡಿ ನೀರು ಪ್ರವಾಹ ಕಾಲದಲ್ಲಿ ಹರಿದಿದೆ. ಇಂಥಹ ಸಂದರ್ಭದಲ್ಲಿ ನೀರು ನಿಲ್ಲಿಸಲು ತುಮಕೂರು ಜಿಲ್ಲೆಯಲ್ಲೂ ಒಂದು ಡ್ಯಾಂ ಅಗತ್ಯವಿದೆ ಎನ್ನುತ್ತಾರೆ ತಜ್ಞರು.