22nd November 2024
Share

ನದಿ ನೀರಿನಿಂದ ಕೆರೆಗಳನ್ನು ತುಂಬಿಸಿದ ಶಿಕಾರಿಪುರದ ವೀರ:ಬಿಎಸ್ವೈ

TUMAKURU:SHAKTHIPEETA FOUNDATION

ಕಳೆದವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸುಮಾರು 250 ಕೆರೆಗಳಿಗೆ ನದಿ ನೀರನ್ನು ತುಂಬಿಸುವ ಕಾರ್ಯಕ್ರಮವೊಂದು ನಡೆಯಿತು,

ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಪ್ರತಿನಿಧಿಸುವ ಕ್ಷೇತ್ರವದು. ಹಾಲಿ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು, ಜಲಸಂಪನ್ಮೂಲ ಸಚಿವರಾದ ಶ್ರೀ ಗೋಂವಿಂದ ಕಾರಜೋಳರವರು ಇದ್ದರಂತೆ, ನಾನು ಪೂರ್ಣ ಕಾರ್ಯಕ್ರಮ ವೀಕ್ಷಣೆ ಮಾಡಲಿಲ್ಲ. ಯೋಜನೆಯ ಬಗ್ಗೆ ಪೂರ್ಣವಾದ ಮಾಹಿತಿಯನ್ನು ನಂತರ ನೀಡುತ್ತೇನೆ.

ನಾನು ಇಲ್ಲಿ ಹೇಳಲು ಹೊರಟಿರುವುದು ಅಂದಿನ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾದ, ಜನತೆಗೆ ಅಗತ್ಯವಾದ ಯೋಜನೆಯ ಕಾರ್ಯಕ್ರಮವಾಗಿತ್ತು.

ಈ ಯೋಜನೆಯನ್ನು ಇಡೀ ರಾಜ್ಯದ ತುಂಬ ಮಾಡಬಹುದಾಗಿದೆ. ಆದರೇ ಕೆಲವೇ ಕೆಲವು ರಾಜಕಾರಣಿಗಳು ಮಾತ್ರ ಅವರವರ ಕ್ಷೇತ್ರಗಳ ಕೆರೆಗಳನ್ನಾದರೂ ನದಿ ನೀರಿನಿಂದ ತುಂಬಿಸಿದ್ದಾರೆ. ಅಂಥಹ ವೀರರ ಪಟ್ಟಿ ಮಾಡಿ ಇತರೆ ಚುನಾಯಿತ ಜನಪ್ರತಿನಿಧಿಗಳಿಗೆ ನೀಡುವುದು ಅಗತ್ಯವಾಗಿದೆ.

ಜೊತೆಗೆ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯ ಮಟ್ಟದ ಪ್ರವಾಸ ಮಾಡುತ್ತೇನೆಂದು ಪದೇ, ಪದೇ ಹೇಳುತ್ತಿದ್ದಾರೆ, ಅವರ ಪ್ರವಾಸ ಊರಿಗೊಂದು ಕೆರೆ ಕೆರೆಗೆ ನದಿ ನೀರು ತುಂಬಿಸುವ ಆಂದೋಲನ ಏಕೆ ಆಗಬಾರದು ಎಂದು ಅವರ ಅಭಿಮಾನಿಗಳ ಚಿಂತನೆಯಾಗಿದೆ.

ಅವರು ಮುಖ್ಯಮಂತ್ರಿಯವರಾಗಿದ್ದಾಗ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಯ ‘ಕಾರ್ಯಸಾಧ್ಯಾತಾ ವರದಿ ತಯಾರಿಸಲು ಆದೇಶ’ ಮಾಡಿದ್ದಾರೆ.

ನನ್ನ ಜೀವಮಾನದ ಕನಸು ಕೆರೆಗಳನ್ನು ನದಿ ನೀರಿನಿಂದ ತುಂಬಿಸುವುದಾಗಿತ್ತು ಎಂಬ ಮಾತನ್ನು ಶಿಕಾರಿಪುರದಲ್ಲಿ ಅವರೇ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಮಾನ್ಯ ಮುಖ್ಯ ಮಂತ್ರಿಯವರು ಮೇಕೆದಾಟು ಯೋಜನೆಗಾಗಿ ಸರ್ವ ಪಕ್ಷಗಳ ಸಭೆ ಕರೆಯುವಾಗ ಈ ಯೋಜನೆಯ ಬಗ್ಗೆಯೂ ಚರ್ಚೆ ಮಾಡಬಹುದಾಗಿದೆ.

‘ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಯೋಜನೆ ಜಾರಿ ಎಂಬ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದೆ, ಇನ್ನೂ ಒಂದು ವರ್ಷ ಅವರಿಗೆ ಅಧಿಕಾರ ಇದೆ, ಸಮೀಕ್ಷೆ ಮಾಡಿಸಿ, ಪ್ರತಿ ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಿ, ಮುಂದಿನ ಚುನಾವಣೆಯಲ್ಲಿ ಗೆದ್ದು ಯೋಜನೆ ಜಾರಿ ಮಾಡುತ್ತೇವೆ ಎಂದು ಏಕೆ ಹೇಳಬಾರದು ಎಂಬುದು ಬಿಜೆಪಿ ಕಾರ್ಯಕರ್ತರ ಭಾವನೆಯಾಗಿದೆ.

ಜಲತಜ್ಞರಾದ ಮುಖ್ಯ ಮಂತ್ರಿಗಳು ಏನು ಮಾಡುತ್ತಾರೆ, ಕಾದು ನೋಡೋಣ ?